Pahalgam Terror Attack | ಉಗ್ರರ ವಿರುದ್ಧ ಮೋದಿ ಕಟು ಮಾತು; ಆದರೆ ಸರ್ವ ಪಕ್ಷ ಸಭೆ ನಡೆಸಲಿದ್ದಾರೆ ರಾಜನಾಥ್‌ ಸಿಂಗ್
x
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಐಬಿ ಅಧಿಕಾರಿ ಮನೀಶ್ ರಂಜನ್ ಅವರ ಅಂತ್ಯಕ್ರಿಯೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಝಲ್ಡಾದಲ್ಲಿ ಗುರುವಾರ ನಡೆಯಿತು. ಅಲ್ಲಿ ಭಾಗವಹಿಸಿದ ಜನರು ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಾಗಿದರು.

Pahalgam Terror Attack | ಉಗ್ರರ ವಿರುದ್ಧ ಮೋದಿ ಕಟು ಮಾತು; ಆದರೆ ಸರ್ವ ಪಕ್ಷ ಸಭೆ ನಡೆಸಲಿದ್ದಾರೆ ರಾಜನಾಥ್‌ ಸಿಂಗ್

ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಥಮ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಕಿಸ್ತಾನದ ವಿರುದ್ದ ರಾಜತಾಂತ್ರಿಕ ಹಾಗೂ ಜಲ ಸಮರ ಸಾರಿದೆ.


ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಕೇಂದ್ರ ಸರ್ಕಾರ ಗುರುವಾರ (ಏಪ್ರಿಲ್ 24) ಸಂಜೆ ಸರ್ವಪಕ್ಷ ಸಭೆ ಕರೆದಿದ್ದು, ಅಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ದಾಳಿಯ ಕುರಿತು ಮಾಹಿತಿ ನೀಡಲಿದೆ ಮತ್ತು ಅವರ ಅಭಿಪ್ರಾಯಗಳನ್ನು ಕೇಳಲಿದೆ.

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ನಿರ್ಲಕ್ಷಿಸಿ, ಚುನಾವಣೆ ಸನ್ನಿಹಿತವಾಗಿರುವ ಬಿಹಾರದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ವಿರೋಧ ಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅವರು ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಯಕರಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.

ದಿಟ್ಟ ಕ್ರಮ

ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ನರಮೇಧಕ್ಕೆ ಭಾರತ ಪ್ರತೀಕಾರದ ದಿಟ್ಟ ಹೆಜ್ಜೆ ಇಟ್ಟಿದೆ.

ದಾಳಿಯ ಹೊಣೆ ಹೊತ್ತಿರುವ ಲಷ್ಕರ್-ಎ- ತೊಯಿಬಾ ಉಗ್ರ ಸಂಘಟನೆಯ ದಿ ರೆಸಿಸ್ಟೆನ್ಸ್ ಫ್ರಂಟ್ ಗೆ ಆಶ್ರಯ ನೀಡಿರುವ ಪಾಕಿಸ್ತಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ʼರಾಜತಾಂತ್ರಿಕ ಸರ್ಜಿಕಲ್ ಸ್ಟ್ರೈಕ್ʼ ನಡೆಸಿದೆ.

ಜತೆಗೆ, ಪಹಲ್ಗಾಮ್‌ ದಾಳಿಗೆ ಕಾರಣರಾದ ಉಗ್ರರನ್ನು ಹುಡುಕಿ ಹೊಡೆಯಲಿದ್ದೇವೆ. ಅವರು ನಿರೀಕ್ಷೆ ಮಾಡಿರದ ಸಾವು ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

ಪಾಕಿಸ್ತಾನದ ಜೊತೆ 1960ರಲ್ಲಿ ಮಾಡಿಕೊಂಡಿದ್ದ ಸಿಂಧೂ ನದಿ ಒಪ್ಪಂದಕ್ಕೆ ತಡೆ ಸೇರಿದಂತೆ ಉಭಯ ದೇಶಗಳ ನಡುವಿನ ಅಟ್ಟಾರಿ-ವಾಘ ಗಡಿ ಬಂದ್‌, ಸಾರ್ಕ್‌ ದೇಶಗಳ ಒಪ್ಪಂದದನ್ವಯ ಪಡೆದಿದ್ದ ವೀಸಾ ರದ್ದು, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳಿಗೆ ದೇಶ ತೊರೆಯಲು ಎರಡು ದಿನಗಳ ಗಡುವು, ಭಾರತದಲ್ಲಿರುವ ಪಾಕಿಸ್ತಾನ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬುಧವಾರ ರಾತ್ರಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಲು ತೀರ್ಮಾನಿಸಲಾಗಿದೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಸಹಕಾರ ನೀಡುವುದನ್ನು ನಿಲ್ಲಿಸುವವರೆಗೂ ಈ ತೀರ್ಮಾನ ಜಾರಿಯಲ್ಲಿಡಲು ನಿರ್ಧರಿಸಲಾಗಿದೆ.

ಮಂಗಳವಾರ ಜಮ್ಮು ಕಾಶ್ಮೀರದ ಪ್ರವಾಸಿತಾಣ ಪಹಲ್ಗಾಮ್‌ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಕರ್ನಾಟಕದ ಮೂವರು ಪ್ರವಾಸಿಗರು ಸೇರಿದಂತೆ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಜಮ್ಮು ಕಾಶ್ಮೀರ ಸರ್ಕಾರ ಮೃತರ ಕುಟುಂಬಗಳಿಗೆ ಹತ್ತು ಲಕ್ಷ ಪರಿಹಾರ ಘೋಷಿಸಿತ್ತು, ಕರ್ನಾಟಕ ಸರ್ಕಾರವೂ ಮೃತಪಟ್ಟ ಕನ್ನಡಿಗರಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿತ್ತು.

ತನ್ನ ಕೈವಾಡವಿಲ್ಲ ಎಂದ ಪಾಕ್

ಜಮ್ಮು ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿಯನ್ನು ಅಮೆರಿಕಾ, ರಷ್ಯಾ, ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳು ಖಂಡಿಸಿ, ಭಯೋತ್ಪಾದನೆ ನಿರ್ಮೂಲನೆಗೆ ಭಾರತಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಘೋಷಿಸುತ್ತಿದ್ದಂತೆ ಪಾಕಿಸ್ತಾನವು ಈ ಘಟನೆಯಲ್ಲಿ ತನ್ನ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ಉಗ್ರರ ದಾಳಿಯು ಭಾರತದಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ಒಂದಷ್ಟೇ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದರು.

ಸಿಂಧೂ ಜಲ ಒಪ್ಪಂದ ರದ್ದಾದರೆ ಸಮಸ್ಯೆ ಏನು?

ಪಾಕಿಸ್ತಾನದ ಜೊತೆಗಿನ 1960 ರಲ್ಲಿ ಮಾಡಿಕೊಂಡಿದ್ದ ಸಿಂಧೂ ಜಲ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನದಲ್ಲಿ ಜಲಕ್ಷಾಮ ಎದುರಾಗಲಿದೆ. ಪಾಕಿಸ್ತಾನದ ಕೃಷಿ ಕ್ಷೇತ್ರ ಸಿಂಧೂ ಹಾಗೂ ಅದರ ಉಪನದಿಗಳ ನೀರನ್ನೇ ಅವಲಂಬಿಸಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ಬಳಕೆ ಮತ್ತು ಹಂಚಿಕೆ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳನ್ನು ಒಳಗೊಂಡಿರುವ ಸಿಂಧೂ ನದಿಯ ಜಾಲವು ಪಾಕಿಸ್ತಾನದ ಲಕ್ಷಾಂತರ ಜನರಿಗೆ ನೀರಾವರಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಬೇಡಿಕೆ ಪೂರೈಸುತ್ತಿದೆ.

ಕೃಷಿ ವಲಯವು ಪಾಕಿಸ್ತಾನದ ರಾಷ್ಟ್ರೀಯ ಆದಾಯಕ್ಕೆ ಶೇ 23 ರಷ್ಟು ಆದಾಯ ನೀಡುತ್ತಿದೆ. ಕೃಷಿಯೇ ಗ್ರಾಮೀಣ ಭಾಗದ ಶೇ 68 ರಷ್ಟು ಜನರಿಗೆ ಆಧಾರವಾಗಿದೆ.

ಸಿಂಧೂ ನದಿಯ ನೀರಿನ ಹರಿವಿನಲ್ಲಿ ಅಡಚಣೆ ಉಂಟಾದರೆ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ.

Live Updates

  • 24 April 2025 6:18 PM IST

    ಭಾರತದ ಮೇಲೆ ಪ್ರತಿಕಾರದ ಕ್ರಮ ಘೋಷಿಸಿದ ಪಾಕಿಸ್ತಾನ; ತೀವ್ರಗೊಂಡ ಬಿಕ್ಕಟ್ಟು



    ಸಿಂಧೂ ನದಿ ಜಲ ಒಪ್ಪಂದ ಸ್ಥಗಿತಗೊಳಿಸುವ ಭಾರತದ ಕ್ರಮಕ್ಕೆ ಪಾಕಿಸ್ತಾನ ತಿರುಗೇಟು ನೀಡಿದೆ. ಸಿಂಧೂ ನದಿಯ ನೀರನ್ನು ಬೇರೆಡೆ ತಿರುಗಿಸುವ ಯಾವುದೇ ಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ವ್ಯಾಪಾರ ಒಪ್ಪಂದ, ಸಿಮ್ಲಾ ಒಪ್ಪಂದ ಸೇರಿದಂತೆ ದ್ವಿಪಕ್ಷೀಯ ಒಪ್ಪಂದಗಳ ಜೊತೆ ವಾಯುಪ್ರದೇಶ ಬಳಕೆಯನ್ನು ನಾವು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ರವಾನಿಸಿದೆ. 

    ಪಹಲ್ಗಾಮ್ ದಾಳಿಯ ನಂತರ ಭಾರತ ಸರ್ಕಾರ ಘೋಷಿಸಿದ ರಾಜತಾಂತ್ರಿಕ ನಿರ್ಧಾರಗಳ ಹಿನ್ನೆಲೆಯಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ ಪಾಕಿಸ್ತಾನ ಪ್ರತೀಕಾರದ ಕ್ರಮಗಳನ್ನು ಘೋಷಿಸಿದೆ. 

  • ಸರ್ವಪಕ್ಷ ಸಭೆಗೆ ಮೋದಿ ಗೈರು; ರಾಜನಾಥ್‌ ಸಿಂಗ್‌ ನೇತೃತ್ವ
    24 April 2025 5:47 PM IST

    ಸರ್ವಪಕ್ಷ ಸಭೆಗೆ ಮೋದಿ ಗೈರು; ರಾಜನಾಥ್‌ ಸಿಂಗ್‌ ನೇತೃತ್ವ

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಕೇಂದ್ರ ಸರ್ಕಾರ ಗುರುವಾರ (ಏಪ್ರಿಲ್ 24) ಸಂಜೆ ಸರ್ವಪಕ್ಷ ಸಭೆ ಕರೆದಿದ್ದು, ಅಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ದಾಳಿಯ ಕುರಿತು ಮಾಹಿತಿ ನೀಡಲಿದೆ ಮತ್ತು ಅವರ ಅಭಿಪ್ರಾಯಗಳನ್ನು ಕೇಳಲಿದೆ.

    ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ನಿರ್ಲಕ್ಷಿಸಿ, ಚುನಾವಣೆ ಸನ್ನಿಹಿತವಾಗಿರುವ ಬಿಹಾರದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ವಿರೋಧ ಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅವರು ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಯಕರಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.

  • 24 April 2025 4:41 PM IST

    ಮಂಜುನಾಥ್‌ ರಾವ್‌ ಅಂತಿಮಯಾತ್ರೆ: ಶಿವಮೊಗ್ಗ ಅರ್ಧ ದಿನ ಬಂದ್

    ಕಾಶ್ಮೀರದಲ್ಲಿ ನಡೆದ  ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಮಂಜುನಾಥ್‌ ರಾವ್‌ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಆಗಮಿಸಿದಾಗ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಅರ್ಧ ದಿನ  ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿದ್ದರು, ಬುಧವಾರ ರಾತ್ರಿಯಿಂದಲೇ ನಗರದಲ್ಲಿ ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಪೂರ್ವವಲಯ ಐಜಿ ರವಿಕಾಂತೇಗೌಡ ಅವರ ನೇತೃತ್ವದಲ್ಲಿ ಎಸ್‌ಪಿ ಮಿಥುನ್‌ ಕುಮಾರ್‌ ಅವರು, ಗುರುವಾರ ಮಂಜುನಾಥ್‌ ರಾವ್ ಅವರ ಅಂತಿಮ ಯಾತ್ರೆ ಸರಾಗವಾಗಿ ನಡೆಯಲು ವ್ಯವಸ್ಥೆ ಮಾಡಿದ್ದರು.

    ಗುಂಡಾಭಟ್‌ ಅವರ ಮಾರ್ಗದರ್ಶನದಲ್ಲಿ ಮೃತದೇಹಕ್ಕೆ ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಅಲಂಕೃತ ವಾಹನದಲ್ಲಿ ಮಂಜುನಾಥರಾವ್‌ ಅಂತಿಮ ಯಾತ್ರೆ ನಡೆಸಲಾಯಿತು.

  • 24 April 2025 4:33 PM IST

    ಪಹಲ್ಗಾಮ್‌ ಭಯೋತ್ಪಾದಕ ಕೃತ್ಯದ ವಿರುದ್ದ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ



    ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ಕೃತ್ಯದ ವಿರುದ್ದ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಖಂಡನಾ ನಿರ್ಣಯ ತೆಗೆದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಮುಗ್ಧ ನಾಗರಿಕರ ಮೇಲೆ ಉಗ್ರರು ನಡೆಸಿದ ದಾಳಿಯನ್ನು ರಾಜ್ಯ ಸರ್ಕಾರವು ತೀವ್ರವಾಗಿ ಖಂಡಿಸುತ್ತದೆ. ಎಲ್ಲ ಮೃತರಿಗೆ ರಾಜ್ಯದ ಜನರ ಪರವಾಗಿ ನೋವಿನ ಸಂತಾಪಗಳನ್ನು ಸಲ್ಲಿಸಲು ಸರ್ಕಾರ ತೀರ್ಮಾನಿಸಿದೆ. ಉಗ್ರರ ದಾಳಿ ಮನುಷ್ಯ ಕುಲದ ಮೇಲೆ ನಡೆಸುತ್ತಿರುವ ಭೀಬತ್ಸ ಕೃತ್ಯ ಎಂದು ತೀರ್ಮಾನಿಸಬೇಕು. ಎಲ್ಲ ರೀತಿಯ ಉಗ್ರವಾದವನ್ನು ಬುಡಸಮೇತ ಕಿತ್ತು ಹಾಕಲು ಇಡೀ ದೇಶ ಒಂದಾಗಿ ನಿಂತು ಶ್ರಮಿಸಬೇಕು ಎಂದು ನಿರ್ಣಯಿಸಲಾಗಿದೆ.

  • ಪಹಲ್ಗಾಮ್ ದಾಳಿ ಭಯೋತ್ಪಾದಕರ ಹೆಸರು ಬಿಡುಗಡೆ
    24 April 2025 2:17 PM IST

    ಪಹಲ್ಗಾಮ್ ದಾಳಿ ಭಯೋತ್ಪಾದಕರ ಹೆಸರು ಬಿಡುಗಡೆ

    ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ, ಜಮ್ಮು ಮತ್ತು ಕಾಶ್ಮೀರ ಪೊಲೀಸರು  ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರ ಹೆಸರನ್ನು ಬಹಿರಂಗಪಡಿಸಿದ್ದಾರೆ/

    , ಇದು 26 ಜನರನ್ನು ಬಲಿ ತೆಗೆದುಕೊಂಡಿತು. ಭಯೋತ್ಪಾದಕರನ್ನು ಆದಿಲ್ ಹುಸೇನ್ ಥೋಕರ್ (ಅನಂತ್‌ನಾಗ್ ನಿವಾಸಿ), ಹಾಶಿಮ್ ಮೂಸಾ ಅಲಿಯಾಸ್ ಸುಲೈಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದರೆ 20 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.

  • ಉಗ್ರರು ಯಾವುದೇ ರಾಜ್ಯದಲ್ಲಿರಲಿ, ಮಟ್ಟಹಾಕಬೇಕಾದ ಕೆಲಸ ಕೇಂದ್ರದಿಂದ ಆಗಬೇಕು: ಸಿದ್ದರಾಮಯ್ಯ
    24 April 2025 2:14 PM IST

    ಉಗ್ರರು ಯಾವುದೇ ರಾಜ್ಯದಲ್ಲಿರಲಿ, ಮಟ್ಟಹಾಕಬೇಕಾದ ಕೆಲಸ ಕೇಂದ್ರದಿಂದ ಆಗಬೇಕು: ಸಿದ್ದರಾಮಯ್ಯ

    ಕರ್ನಾಟಕದಲ್ಲಿ ಅವಧಿ ಮೀರಿ ನೆಲೆಸಿರುವ ವಿದೇಶಿಗರ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಗೃಹ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

    ಉಗ್ರರನ್ನು ಮಟ್ಟಹಾಕಬೇಕಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಇಲ್ಲಿ ನೆಲೆಸಿರುವ ವಿದೇಶದವರ ಬಗ್ಗೆ ಕಣ್ಗಾವಲು ಇರಿಸಲು ಕೇಂದ್ರ ಗೃಹ ಸಚಿವರು ಸೂಚಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಉಗ್ರರು ಯಾವುದೇ ರಾಜ್ಯದಲ್ಲಿರಲಿ ಅವರನ್ನು ಮಟ್ಟಹಾಕಬೇಕಾಗಿರುವುದು ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.

    ಉಗ್ರರ ಚಟುವಟಿಕೆಗಳಿಗೆ ಅವಕಾಶ ಕೊಡಕೂಡದು. ಪಹಲ್ಗಾಮ್ ಘಟನೆ ಅತ್ಯಂತ ಖಂಡನೀಯವಾದ ಹಾಗೂ ಅಮಾನುಷವಾದ ಘಟನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಪುಲ್ವಾಮಾ ಘಟನೆಯೂ ಇದೇ ಜಿಲ್ಲೆಯಲ್ಲಿ ನಡೆದಿದ್ದರಿಂದ ಎಚ್ಚರಿಕೆಯಿಂದ ಇರಬೇಕಾಗಿತ್ತು. ಬಂದೋಬಸ್ತು ಸಡಿಲಗೊಳಿಸಬಾರದಿತ್ತು. ಇಲ್ಲಿ ಗುಪ್ತಚರ ವ್ಯವಸ್ಥೆಯ ವೈಫಲ್ಯವಾಗಿದೆ ಎಂದರು.

    ಘಟನೆ ನಡೆದ ಬಳಿಕ ಕ್ರಮ ತೆಗೆದುಕೊಳ್ಳುವುದು ಬೇರೆ. ಘಟನೆಯಾಗದಂತೆ ತೆಗೆದುಕೊಳ್ಳುವ ಕ್ರಮಗಳು ಬೇರೆ. ಅದನ್ನು ಕೇಂದ್ರ ಸರ್ಕಾರ ಮಾಡಬೇಕಿತ್ತು. ಪುಲ್ವಾಮಾ 40 ಸೈನಿಕರು ಪ್ರಾಣತೆತ್ತರು. ಈ ಘಟನೆಯಲ್ಲಿ 28 ಜನ ನಾಗರಿಕರು ಮೃತರಾಗಿದ್ದಾರೆ. ಇದನ್ನು ತಪ್ಪಿಸಲು ಕ್ರಮ ವಹಿಸಬೇಕಿತ್ತು.ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು.ಉಗ್ರರು ಯಾವುದೇ ಧರ್ಮ ಜಾರಿಗೆ ಸೇರಿರಲಿ ಅವರೆಲ್ಲರನ್ನೂ ಮಟ್ಟ ಹಾಕಬೇಕಿರುವುದು ಸರ್ಕಾರದ ಜವಾಬ್ದಾರಿ ಅದಕ್ಕೆ ಬೇಕಾಗಿರುವ ಎಲ್ಲಾ ಸಹಕಾರ, ಬೆಂಬಲವನ್ನು ನಾವು, ನಮ್ಮ ಸರ್ಕಾರ ಪಕ್ಷ ಕೊಡುತ್ತದೆ ಎಂದರು. 

  • ಮೋದಿ ಕರೆದ ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ, ಖರ್ಗೆ ಬಾಗವಹಿಸಲು ನಿರ್ಧಾರ
    24 April 2025 1:58 PM IST

    ಮೋದಿ ಕರೆದ ಸರ್ವಪಕ್ಷ ಸಭೆಯಲ್ಲಿ ರಾಹುಲ್ ಗಾಂಧಿ, ಖರ್ಗೆ ಬಾಗವಹಿಸಲು ನಿರ್ಧಾರ

    ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಕೇಂದ್ರವು ಗುರುವಾರ ಸಂಜೆ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ರಾಜ್ಯಸಭೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ಎಂ. ಮಲ್ಲಿಕಾರ್ಜುನ ಖರ್ಗೆ ಮತ್ತು  ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಮತ್ತು ರಾಹುಲ್ ಗಾಂಧಿ ಈ ಹಿಂದೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಭಾಗವಹಿಸಿದ್ದರು, ಇದು 26 ಪ್ರವಾಸಿಗರನ್ನು ಬಲಿ ತೆಗೆದುಕೊಂಡ ದಾಳಿಯನ್ನು ಖಂಡಿಸಿದೆ. 

    ಪಕ್ಷದ 24, ಅಕ್ಬರ್ ರಸ್ತೆಯ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಪಿಪಿ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಇದಕ್ಕೂ ಮೊದಲು, ಸರ್ವಪಕ್ಷ ಸಭೆಯ ಅಧ್ಯಕ್ಷತೆ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಮೂಹಿಕ ನಿರ್ಣಯವನ್ನು ರೂಪಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿತು.

  • 24 April 2025 1:38 PM IST

    ಪಹಲ್ಗಾಮ್‌ ದಾಳಿಕೋರರನ್ನು ಹುಡುಕಿ ಹೊಡೆಯುತ್ತೇವೆ; ಪ್ರಧಾನಿ ಮೋದಿ ಎಚ್ಚರಿಕೆ



    ಪಹಲ್ಗಾಮ್‌ ದಾಳಿಗೆ ಕಾರಣರಾದ ಉಗ್ರರನ್ನು ಹುಡುಕಿ ಹೊಡೆಯಲಿದ್ದೇವೆ. ಅವರು ನಿರೀಕ್ಷೆ ಮಾಡಿರದ ಸಾವು ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

    ಬಿಹಾರದಲ್ಲಿ ಮಾತನಾಡಿದ ಅವರು, ಉಗ್ರರ ನಡೆಸಿದ ದಾಳಿ ಬರೀ ಜನರ ಮೇಲೆ ಅಲ್ಲ. ಭಾರತದ ಆತ್ಮದ ಮೇಲಿನ ದಾಳಿಯಾಗಿದೆ.  ಇಂತಹ ದುಸ್ಸಾಹಸಕ್ಕೆ ಕೈ ಹಾಕಿದವರು, ದಾಳಿಯ ಹಿಂದಿನ ಸೂತ್ರಧಾರರನ್ನು ಅವರ ಕಲ್ಪನೆಗೂ ಮೀರಿದ ಶಿಕ್ಷೆಗೆ ಗುರಿಪಡಿಸುತ್ತೇವೆ ಎಂದು ಗುಡುಗಿದ್ದಾರೆ.  

  • 24 April 2025 1:26 PM IST

    ಕಾಶ್ಮೀರದಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದ ಸಚಿವ ಸಂತೋಷ್‌ ಲಾಡ್‌



    ಕಾಶ್ಮೀರದ ಪಹಲ್ಗಾಮ್ ನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಸುರಕ್ಷಿತವಾಗಿ ಕರೆತಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಪಹಲ್ಗಾಮ್‌ಗೆ ತೆರಳಿದ್ದ ಲಾಡ್‌ ಅವರು, ಸುಮಾರು 180 ಕನ್ನಡಿಗರನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆತಂದಿದ್ದಾರೆ.

    ಬೆಳಗಿನ ಜಾವ 3.30ಕ್ಕೆ ಕನ್ನಡಿಗರನ್ನು ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತಂದರು.  

  • 24 April 2025 12:07 PM IST

    ಪಹಲ್ಗಾಮ್‌ ದಾಳಿ: ಭಾರತದ ಕ್ರಮದ ಬೆನ್ನಲ್ಲೇ ತುರ್ತು ಉನ್ನತ ಮಟ್ಟದ ಸಭೆ ಕರೆದ ಪಾಕಿಸ್ತಾನ



    ಭಾರತದ ರಾಜತಾಂತ್ರಿಕ ಸರ್ಜಿಕಲ್‌ ಸ್ಟ್ರೈಕ್‌ನಿಂದ ಬೆಚ್ಚಿಬಿದ್ದಿರುವ ಪಾಕಿಸ್ತಾನ ಇಂದು ತುರ್ತು ಉನ್ನತ ಮಟ್ಟದ ಸಭೆ ಕರೆದಿದೆ. ಪಾಕ್‌ ಪ್ರಧಾನಿ ಶಹಬಾಜ್‌ ಷರೀಫ್‌ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ನಡೆಯಲಿದೆ.

    ಭಾರತದ ದಿಢೀರ್‌ ಕ್ರಮಗಳಿಂದ ಆಗುವ ಪರಿಣಾಮಗಳು, ಪಹಲ್ಗಾಮ್‌ ದಾಳಿಯಲ್ಲಿ ತನ್ನ ಪಾತ್ರವಿಲ್ಲ ಎಂಬುದನ್ನು ವಿಶ್ವ ಸಮುದಾಯಕ್ಕೆ  ಮನವರಿಕೆ ಮಾಡಿಕೊಡಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಹತ್ವದ ಚರ್ಚೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.

Read More
Next Story