Pahalgam Terror Attack | ಉಗ್ರರ ವಿರುದ್ಧ ಮೋದಿ ಕಟು ಮಾತು; ಆದರೆ ಸರ್ವ ಪಕ್ಷ ಸಭೆ ನಡೆಸಲಿದ್ದಾರೆ ರಾಜನಾಥ್‌ ಸಿಂಗ್
x
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಐಬಿ ಅಧಿಕಾರಿ ಮನೀಶ್ ರಂಜನ್ ಅವರ ಅಂತ್ಯಕ್ರಿಯೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಝಲ್ಡಾದಲ್ಲಿ ಗುರುವಾರ ನಡೆಯಿತು. ಅಲ್ಲಿ ಭಾಗವಹಿಸಿದ ಜನರು ಬೃಹತ್ ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಾಗಿದರು.

Pahalgam Terror Attack | ಉಗ್ರರ ವಿರುದ್ಧ ಮೋದಿ ಕಟು ಮಾತು; ಆದರೆ ಸರ್ವ ಪಕ್ಷ ಸಭೆ ನಡೆಸಲಿದ್ದಾರೆ ರಾಜನಾಥ್‌ ಸಿಂಗ್

ಭಯೋತ್ಪಾದನೆಯನ್ನು ಹತ್ತಿಕ್ಕುವಲ್ಲಿ ಪ್ರಥಮ ಹೆಜ್ಜೆ ಇಟ್ಟಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಾಕಿಸ್ತಾನದ ವಿರುದ್ದ ರಾಜತಾಂತ್ರಿಕ ಹಾಗೂ ಜಲ ಸಮರ ಸಾರಿದೆ.


ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಕೇಂದ್ರ ಸರ್ಕಾರ ಗುರುವಾರ (ಏಪ್ರಿಲ್ 24) ಸಂಜೆ ಸರ್ವಪಕ್ಷ ಸಭೆ ಕರೆದಿದ್ದು, ಅಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರಿಗೆ ದಾಳಿಯ ಕುರಿತು ಮಾಹಿತಿ ನೀಡಲಿದೆ ಮತ್ತು ಅವರ ಅಭಿಪ್ರಾಯಗಳನ್ನು ಕೇಳಲಿದೆ.

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ನಿರ್ಲಕ್ಷಿಸಿ, ಚುನಾವಣೆ ಸನ್ನಿಹಿತವಾಗಿರುವ ಬಿಹಾರದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದು ವಿರೋಧ ಪಕ್ಷಗಳ ಸಿಟ್ಟಿಗೆ ಕಾರಣವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಅವರು ಮತ್ತು ಗೃಹ ಸಚಿವ ಅಮಿತ್ ಶಾ ಅವರು ನಾಯಕರಿಗೆ ಮಾಹಿತಿ ನೀಡುವ ನಿರೀಕ್ಷೆಯಿದೆ.

ದಿಟ್ಟ ಕ್ರಮ

ಪಹಲ್ಗಾಮ್‌ನಲ್ಲಿ ಭಾರತೀಯ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ ನರಮೇಧಕ್ಕೆ ಭಾರತ ಪ್ರತೀಕಾರದ ದಿಟ್ಟ ಹೆಜ್ಜೆ ಇಟ್ಟಿದೆ.

ದಾಳಿಯ ಹೊಣೆ ಹೊತ್ತಿರುವ ಲಷ್ಕರ್-ಎ- ತೊಯಿಬಾ ಉಗ್ರ ಸಂಘಟನೆಯ ದಿ ರೆಸಿಸ್ಟೆನ್ಸ್ ಫ್ರಂಟ್ ಗೆ ಆಶ್ರಯ ನೀಡಿರುವ ಪಾಕಿಸ್ತಾನದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ʼರಾಜತಾಂತ್ರಿಕ ಸರ್ಜಿಕಲ್ ಸ್ಟ್ರೈಕ್ʼ ನಡೆಸಿದೆ.

ಜತೆಗೆ, ಪಹಲ್ಗಾಮ್‌ ದಾಳಿಗೆ ಕಾರಣರಾದ ಉಗ್ರರನ್ನು ಹುಡುಕಿ ಹೊಡೆಯಲಿದ್ದೇವೆ. ಅವರು ನಿರೀಕ್ಷೆ ಮಾಡಿರದ ಸಾವು ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಖಡಕ್‌ ಎಚ್ಚರಿಕೆ ರವಾನಿಸಿದ್ದಾರೆ.

ಪಾಕಿಸ್ತಾನದ ಜೊತೆ 1960ರಲ್ಲಿ ಮಾಡಿಕೊಂಡಿದ್ದ ಸಿಂಧೂ ನದಿ ಒಪ್ಪಂದಕ್ಕೆ ತಡೆ ಸೇರಿದಂತೆ ಉಭಯ ದೇಶಗಳ ನಡುವಿನ ಅಟ್ಟಾರಿ-ವಾಘ ಗಡಿ ಬಂದ್‌, ಸಾರ್ಕ್‌ ದೇಶಗಳ ಒಪ್ಪಂದದನ್ವಯ ಪಡೆದಿದ್ದ ವೀಸಾ ರದ್ದು, ಭಾರತದಲ್ಲಿರುವ ಪಾಕಿಸ್ತಾನದ ಪ್ರಜೆಗಳಿಗೆ ದೇಶ ತೊರೆಯಲು ಎರಡು ದಿನಗಳ ಗಡುವು, ಭಾರತದಲ್ಲಿರುವ ಪಾಕಿಸ್ತಾನ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಬುಧವಾರ ರಾತ್ರಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆಯಲ್ಲಿ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಳ್ಳಲು ತೀರ್ಮಾನಿಸಲಾಗಿದೆ.

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ಸಹಕಾರ ನೀಡುವುದನ್ನು ನಿಲ್ಲಿಸುವವರೆಗೂ ಈ ತೀರ್ಮಾನ ಜಾರಿಯಲ್ಲಿಡಲು ನಿರ್ಧರಿಸಲಾಗಿದೆ.

ಮಂಗಳವಾರ ಜಮ್ಮು ಕಾಶ್ಮೀರದ ಪ್ರವಾಸಿತಾಣ ಪಹಲ್ಗಾಮ್‌ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಕರ್ನಾಟಕದ ಮೂವರು ಪ್ರವಾಸಿಗರು ಸೇರಿದಂತೆ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.

ಜಮ್ಮು ಕಾಶ್ಮೀರ ಸರ್ಕಾರ ಮೃತರ ಕುಟುಂಬಗಳಿಗೆ ಹತ್ತು ಲಕ್ಷ ಪರಿಹಾರ ಘೋಷಿಸಿತ್ತು, ಕರ್ನಾಟಕ ಸರ್ಕಾರವೂ ಮೃತಪಟ್ಟ ಕನ್ನಡಿಗರಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿತ್ತು.

ತನ್ನ ಕೈವಾಡವಿಲ್ಲ ಎಂದ ಪಾಕ್

ಜಮ್ಮು ಕಾಶ್ಮೀರದ ಪಹಲ್ಗಾಮ್‌ ಉಗ್ರರ ದಾಳಿಯನ್ನು ಅಮೆರಿಕಾ, ರಷ್ಯಾ, ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳು ಖಂಡಿಸಿ, ಭಯೋತ್ಪಾದನೆ ನಿರ್ಮೂಲನೆಗೆ ಭಾರತಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಘೋಷಿಸುತ್ತಿದ್ದಂತೆ ಪಾಕಿಸ್ತಾನವು ಈ ಘಟನೆಯಲ್ಲಿ ತನ್ನ ಕೈವಾಡವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ಉಗ್ರರ ದಾಳಿಯು ಭಾರತದಲ್ಲಿ ನಡೆಯುತ್ತಿರುವ ಗಲಭೆಗಳಲ್ಲಿ ಒಂದಷ್ಟೇ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದರು.

ಸಿಂಧೂ ಜಲ ಒಪ್ಪಂದ ರದ್ದಾದರೆ ಸಮಸ್ಯೆ ಏನು?

ಪಾಕಿಸ್ತಾನದ ಜೊತೆಗಿನ 1960 ರಲ್ಲಿ ಮಾಡಿಕೊಂಡಿದ್ದ ಸಿಂಧೂ ಜಲ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನದಲ್ಲಿ ಜಲಕ್ಷಾಮ ಎದುರಾಗಲಿದೆ. ಪಾಕಿಸ್ತಾನದ ಕೃಷಿ ಕ್ಷೇತ್ರ ಸಿಂಧೂ ಹಾಗೂ ಅದರ ಉಪನದಿಗಳ ನೀರನ್ನೇ ಅವಲಂಬಿಸಿದೆ. ಸಿಂಧೂ ನದಿ ಮತ್ತು ಅದರ ಉಪನದಿಗಳ ನೀರಿನ ಬಳಕೆ ಮತ್ತು ಹಂಚಿಕೆ ಒಪ್ಪಂದ ಸ್ಥಗಿತದಿಂದ ಪಾಕಿಸ್ತಾನದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೆಜ್ ನದಿಗಳನ್ನು ಒಳಗೊಂಡಿರುವ ಸಿಂಧೂ ನದಿಯ ಜಾಲವು ಪಾಕಿಸ್ತಾನದ ಲಕ್ಷಾಂತರ ಜನರಿಗೆ ನೀರಾವರಿ, ಕೃಷಿ ಮತ್ತು ಕುಡಿಯುವ ನೀರಿಗಾಗಿ ಬೇಡಿಕೆ ಪೂರೈಸುತ್ತಿದೆ.

ಕೃಷಿ ವಲಯವು ಪಾಕಿಸ್ತಾನದ ರಾಷ್ಟ್ರೀಯ ಆದಾಯಕ್ಕೆ ಶೇ 23 ರಷ್ಟು ಆದಾಯ ನೀಡುತ್ತಿದೆ. ಕೃಷಿಯೇ ಗ್ರಾಮೀಣ ಭಾಗದ ಶೇ 68 ರಷ್ಟು ಜನರಿಗೆ ಆಧಾರವಾಗಿದೆ.

ಸಿಂಧೂ ನದಿಯ ನೀರಿನ ಹರಿವಿನಲ್ಲಿ ಅಡಚಣೆ ಉಂಟಾದರೆ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡಲಿದೆ.

Live Updates

  • ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ
    24 April 2025 11:57 AM IST

    ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ

    ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಉಗ್ರರ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು ಉಗ್ರರ ಸುಳಿವು ನೀಡಿದವರಿಗೆ ಜಮ್ಮು ಕಾಶ್ಮೀರ ಪೊಲೀಸರು 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ.

    ಬೇಸಿಗೆ ರಜೆ ಕಳೆಯಲು ಪ್ರವಾಸಿಗರು ಮಿನಿ ಸ್ವಿಜ್ಜರ್‌ಲ್ಯಾಂಡ್ ಎಂದೇ ಖ್ಯಾತಿಯಾಗಿರುವ ಜಮ್ಮುಕಾಶ್ಮೀರದ ಪಹಲ್ಗಾಮ್‌ಗೆ ತೆರಳಿದ್ದರು, ಈ ವೇಳೆ ಭಯೋತ್ಪದಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದರು, ಕರ್ನಾಟಕದ ಮೂವರು ಸೇರಿದಂತೆ ಮುವತ್ತಕ್ಕೂ ಅಧಿಕ ಮಂದಿ ಸಾವನ್ನಪಿದ್ದು ಹಲವು ಜನರು ಗಾಯಗಂಡಿದ್ದರು.

    ಲಷ್ಕರ್‌-ಎ-ತೊಯ್ಬ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಈ ದಾಳಿಯ ಹೊಣೆಗಾರಿಕೆ ಹೊತ್ತಿದೆ, ಉಗ್ರರ ಹೆಡೆಮುರಿಕಟ್ಟಲು ಜಮ್ಮು ಕಾಶ್ಮೀರದ ಪೊಲೀಸರು ಹಾಗೂ ಭಾರತೀಯ ಸೇನಾಪಡೆ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದು ಉಗ್ರರ ಸುಳಿವು ನೀಡಿದವರಿಗೆ ಬಹುಮಾನ ಕೂಡ ಘೋಷಿಸಿದೆ. 

Read More
Next Story