
Today's live news Mar 17th: ಅಬುಧಾಬಿಯಲ್ಲಿ ಕ್ಷಿಪಣಿ ದಾಳಿ: ಪಾಕಿಸ್ತಾನಿ ಪ್ರಜೆ ಸಾವು?
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಮಂಗಳವಾರ ಮಾರ್ಚ್ 17, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 17 March 2026 3:38 PM IST
ಕಾಂಗ್ರೆಸ್ ಹಿರಿಯ ಶಾಸಕರಿಂದ ಸಿಎಂ ಭೇಟಿ, ಸಚಿವ ಸ್ಥಾನಕ್ಕೆ ಬೇಡಿಕೆ
ಸಚಿವ ಸಂಪುಟ ಪುನಾರಚನೆ ವೇಳೆ ನಮ್ಮನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್ ಹಿರಿಯ ಶಾಸಕರು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.
ಮಂಗಳವಾರ(ಮಾ.17) ಅಧಿವೇಶನದ ನಡುವೆಯೇ ಹಿರಿಯ ಶಾಸಕ ಅಶೋಕ್ ಪಟ್ಟಣ್ ನೇತೃತ್ವದಲ್ಲಿ ಶಾಸಕ ಹೆಚ್.ಸಿ ಬಾಲಕೃಷ್ಣ, ಎನ್.ಎ ಹ್ಯಾರಿಸ್, ಎಸ್. ಷಡಕ್ಷರಿ, ಮಹಾಂತೇಶ್ ಕೌಜಲಗಿ, ಹಂಪನಗೌಡ ಬಾದರ್ಲಿ, ಬಂಗಾರಪೇಟೆ ನಾರಾಯಣಸ್ವಾಮಿ, ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಹಲವು ಶಾಸಕರು ಸಿಎಂ ಕಚೇರಿಯಲ್ಲಿ ಭೇಟಿ ಮಾಡಿ ಮಾತನಾಡಿದ್ದು, ಮೂರು ಬಾರಿ ಗೆದ್ದಿರುವ ಶಾಸಕರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತೆ ತಿಳಿಸಿದ್ದಾರೆ.
- 17 March 2026 3:26 PM IST
ಎಸ್ಎಸ್ಎಲ್ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ, ಆರ್. ಅಶೋಕ್
ಮಾ.18 ರಿಂದ ಏಪ್ರಿಲ್ 2 ರವರೆಗೆ ರಾಜ್ಯಾದ್ಯಂತ ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.
ಈ ಕುರಿತು ಸದನದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿದೆ. ಒಟ್ಟು ಮೂರು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ವಿದ್ಯಾರ್ಥಿಗಳು ಯಾರೂ ಆತಂಕ ಪಡಬೇಕಿಲ್ಲ. ಒಂದಲ್ಲ ಇನ್ನೊಂದು ಪರೀಕ್ಷೆ ಬರೆಯಬಹುದು, ಆತಂಕ ಬೇಡ. ಎಲ್ಲರಿಗೂ ಒಳ್ಳೇದಾಗಲಿ, ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಲಿ ಎಂದು ತಿಳಿಸಿದರು.
ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ನಾವೆಲ್ಲರೂ ಒಂದನೇ ತರಗತಿಯಿಂದಲೇ ಓದಿ ಬಂದಿದ್ದೇವೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ 5ನೇ ತರಗತಿಗೆ ನೇರವಾಗಿ ಬಂದಿದ್ದಾರೆ. ಎಸ್ಎಸ್ಎಲ್ಸಿ ಎನ್ನುವುದು ವಿದ್ಯಾರ್ಥಿಗಳ ಪ್ರಮುಖ ಘಟ್ಟ, ಪೋಷಕರು ಪರೀಕ್ಷೆ ಹಿಂದಿನ ದಿನ ಮಕ್ಕಳಿಗೆ ಮಾನಸಿಕ ಹಿಂಸೆ ಕೊಡಬಾರದು. ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರ ನಿಗಾ ವಹಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸುವವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಎಲ್ಲಾ ವಿದ್ಯಾರ್ಥಿಗಳು ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಶುಭ ಕೋರಿದರು.
- 17 March 2026 1:11 PM IST
ಕುವೈತ್ನಲ್ಲಿ ಹಿಜ್ಬುಲ್ಲಾ ನಂಟು: 16 ಶಂಕಿತ ಉಗ್ರರ ಬಂಧನ, ಭಾರಿ ಸಂಚು ಭೇದಿಸಿದ ಭದ್ರತಾ ಪಡೆಗಳು
ಕುವೈತ್ನಲ್ಲಿ ಹಿಜ್ಬುಲ್ಲಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ 16 ಜನರನ್ನು ಬಂಧಿಸಲಾಗಿದೆ ಎಂದು ಕುವೈತ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್ ಬೆಂಬಲಿತ ಲೆಬನಾನ್ ಮೂಲದ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಜೊತೆ ಇವರು ನಂಟು ಹೊಂದಿದ್ದಾರೆ ಎಂದು ಕುವೈತ್ ಭದ್ರತಾ ಪಡೆಗಳು ತಿಳಿಸಿವೆ. ಈ ಕುರಿತು ಸೋಮವಾರ ತಡರಾತ್ರಿ ಹೇಳಿಕೆ ನೀಡಿರುವ ಅಲ್ಲಿನ ಗೃಹ ಸಚಿವಾಲಯವು, ಬಂಧಿತರಲ್ಲಿ 14 ಮಂದಿ ಕುವೈತ್ ಪ್ರಜೆಗಳು ಮತ್ತು ಇಬ್ಬರು ಲೆಬನಾನ್ ಪ್ರಜೆಗಳಾಗಿದ್ದಾರೆ ಎಂದು ಮಾಹಿತಿ ನೀಡಿದೆ. ಇವರು ಯುದ್ಧದ ಸಮಯದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಮತ್ತು ಅರಾಜಕತೆ ಸೃಷ್ಟಿಸಲು ಯೋಜಿಸಿದ್ದರು ಎಂದು ಸಚಿವಾಲಯ ಹೇಳಿದೆ.
- 17 March 2026 1:11 PM IST
ರಾಜ್ಯದ ನೀರಾವರಿ ಯೋಜನೆಗಳ ಅನುಮತಿ ಬಗ್ಗೆ ಸಂಸದರ ಜತೆ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್
ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮತಿ ಬಾಕಿ ಉಳಿಸಿಕೊಂಡಿದೆ ಆದ ಕಾರಣ ನಾನು, ಹೆಚ್.ಕೆ ಪಾಟೀಲ್ ಹಾಗೂ ಎಂ.ಬಿ ಪಾಟೀಲ್ ಅವರು ಕರ್ನಾಟಕದ ಎಲ್ಲಾ ಸಂಸದರನ್ನು ಭೇಟಿ ಮಾಡಿ ಚರ್ಚಿಸುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಮಂಗಳವಾರ (ಮಾ.17) ದೆಹಲಿಗೆ ತೆರಳುವ ಮುನ್ನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಚರ್ಚೆಯ ವಿಚಾರಗಳನ್ನು ಬಂದ ನಂತರ ತಿಳಿಸುತ್ತೇವೆ. ಎಲ್ಲರು ಒಟ್ಟಾಗಿ ನೀರಾವರಿ ವಿಚಾರಗಳ ಬಗ್ಗೆ ತೀರ್ಮಾನ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಾಯ ಮಾಡುತ್ತೇವೆ" ಎಂದು ಹೇಳಿದರು.
- 17 March 2026 1:06 PM IST
ಅಬುಧಾಬಿಯಲ್ಲಿ ಕ್ಷಿಪಣಿ ದಾಳಿ: ಪಾಕಿಸ್ತಾನಿ ಪ್ರಜೆ ಸಾವು?
ಯುಎಇ ರಾಜಧಾನಿ ಅಬುಧಾಬಿಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಂಗಳವಾರ ಖಚಿತಪಡಿಸಿದ್ದಾರೆ. ಅಬುಧಾಬಿ ಮಾಧ್ಯಮ ಕಚೇರಿಯ ಮಾಹಿತಿಯ ಪ್ರಕಾರ, ಬನಿ ಯಾಸ್ ಪ್ರದೇಶದಲ್ಲಿ ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿದಾಗ, ಅದರ ಚೂರುಗಳು ಕೆಳಗೆ ಬಿದ್ದ ಪರಿಣಾಮ ಈ ಸಾವು ಸಂಭವಿಸಿದೆ. ಪ್ರಾಂತೀಯ ಯುದ್ಧದ ಭೀತಿಯ ನಡುವೆ ಈ ದಾಳಿ ನಡೆದಿದ್ದು, ಯುಎಇಯ ಮೇಲೆ ಇತ್ತೀಚೆಗೆ ನಿರಂತರವಾಗಿ ಇಂತಹ ಬೆದರಿಕೆಗಳು ಎದುರಾಗುತ್ತಿವೆ. ಈ ಪ್ರಾದೇಶಿಕ ಸಂಘರ್ಷ ಆರಂಭವಾದಾಗಿನಿಂದ ಯುಎಇಯಲ್ಲಿ ಈವರೆಗೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಪೈಕಿ ಇಬ್ಬರು ಯೋಧರು ಸೇರಿದ್ದಾರೆ ಎಂದು ಅಂಕಿಅಂಶಗಳು ತಿಳಿಸಿವೆ. ಪ್ರಸ್ತುತ ಸ್ಥಳದಲ್ಲಿ ತುರ್ತು ಸೇವಾ ತಂಡಗಳು ಕಾರ್ಯಾಚರಣೆ ನಡೆಸುತ್ತಿದ್ದು, ಸುಳ್ಳು ಸುದ್ದಿಗಳನ್ನು ನಂಬದಂತೆ ಮತ್ತು ಅಧಿಕೃತ ಮೂಲಗಳಿಂದ ಬರುವ ಮಾಹಿತಿಯನ್ನು ಮಾತ್ರ ಪರಿಗಣಿಸುವಂತೆ ಸರ್ಕಾರವು ಸಾರ್ವಜನಿಕರಲ್ಲಿ ವಿನಂತಿಸಿದೆ.
- 17 March 2026 1:06 PM IST
ಸದನಕ್ಕೆ ಉತ್ತರ ನೀಡದ ಅಧಿಕಾರಿಗಳ ಅಮಾನತಿಗೆ ಸೂಚನೆ
ಬಜೆಟ್ ಅಧಿವೇಶನದಲ್ಲಿ ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡದ ಸಚಿವರು ಹಾಗೂ ಅಧಿಕಾರಿಗಳ ನಡೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಸರಿಯಾಗಿ ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ,
ಈ ಕುರಿತು ಸರ್ಕಾರದ ಪರವಾಗಿ ಸದನಕ್ಕೆ ಉತ್ತರಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್, ಸ್ಪೀಕರ್ ಯು.ಟಿ. ಖಾದರ್ ಹೇಳಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಿಎಂ ಸಿದ್ದರಾಮಯ್ಯ ಎಲ್ಲಾ ಸಚಿವರಿಗೂ ಈ ಕುರಿತು ಸೂಚನೆ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳಗೆ ಸೂಚನೆ ನೀಡಿದ್ದು, ಸದನಕ್ಕೆ ಸರಿಯಾಗಿ ಉತ್ತರ ಒದಗಿಸದ ಅಧಿಕಾರಿಗಳನ್ನು ಅಮಾನತು ಮಾಡಲು ಸೂಚನೆ ನೀಡಿದ್ದಾರೆ. ಬಹುಶಃ ನಾಳೆಯಿಂದ ಅದೆಲ್ಲವೂ ಸರಿಯಾಗಲಿದೆ ಎಂದರು.
ಈ ವೇಳೆ ಸ್ಪೀಕರ್ ಇಲಾಖಾವಾರು ಮಾಹಿತಿ ನೀಡಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ 23 ಪ್ರಶ್ನೆಗಳಿಗೆ 6 ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಟ್ಟಿದ್ದಾರೆ. ಆರ್ಥಿಕ ಇಲಾಖೆಯ 33 ಪ್ರಶ್ನೆಗಳಿಗೆ 6ಕ್ಕೆ ಉತ್ತರ ನೀಡಿದ್ದಾರೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ 9 ಪ್ರಶ್ನೆಗಳಿಗೆ ಉತ್ತರವನ್ನೇ ನೀಡಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ 10 ಪ್ರಶ್ನೆಗಳಿಗೆ ಒಂದು ಉತ್ತರ ಬಂದಿಲ್ಲ. ಸಹಕಾರಿ ಇಲಾಖೆಯ 12 ಪ್ರಶ್ನೆಗಳಿಗೆ ಯಾವುದಕ್ಕೂ ಉತ್ತರ ಬಂದಿಲ್ಲ. ವಾರ್ತಾ ಇಲಾಖೆಯಲ್ಲಿ ಒಂದು ಪ್ರಶ್ನೆಗೆ ಉತ್ತರ ಬಂದಿದೆ. ಜಲಸಂಪನ್ಮೂಲ ಇಲಾಖೆಯ 33 ಪ್ರಶ್ನೆಗಳಿಗೆ 4 ಉತ್ತರ ಬಂದಿವೆ. ನಗರಾಭಿವೃದ್ಧಿ ಇಲಾಖೆಯಲ್ಲಿ 21 ಪ್ರಶ್ನೆಗೆ 8 ಪ್ರಶ್ನೆಗಳಿಗೆ ಮಾತ್ರ ಉತ್ತರ ಕೊಟ್ಟಿದ್ದಾರೆ. ಒಳಾಡಿತ ಇಲಾಖೆಯಲ್ಲಿನ 35 ಪ್ರಶ್ನೆಗೆ 26 ಉತ್ತರ ಬಂದಿವೆ. ಕಾನೂನು ಇಲಾಖೆಯಲ್ಲಿನ 5 ಪ್ರಶ್ನೆಗೆ 3ಕ್ಕೆ ಉತ್ತರ ಕೊಟ್ಟಿದ್ದಾರೆ. ಪ್ರವಾಸೋದ್ಯಮ ಇಲಾಖೆಯಲ್ಲಿ 25 ಪ್ರಶ್ನೆಗೆ ಒಂದು ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ. ಸಣ್ಣ ನೀರಾವರಿ ಇಲಾಖೆಯ 19 ಪ್ರಶ್ನೆಗಳಿಗೆ 13 ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ 2 ಪ್ರಶ್ನೆಗೆ ಎರಡಕ್ಕೂ ಉತ್ತರ ಬಂದಿದೆ. ಸಿಎಂ ಕೂಡ ಸರಿಪಡಿಸುವುದಾಗಿ ಹೇಳಿದ್ದಾರೆ ಎಂದರು.
- 17 March 2026 12:42 PM IST
ಉತ್ತರ ಒದಗಿಸದ ಅಧಿಕಾರಿಗಳ ವಿರುದ್ಧ ಸ್ಪೀಕರ್ ಯು.ಟಿ. ಖಾದರ್ ಬೇಸರ
ವಿಧಾನಸಭೆಯಲ್ಲಿ ಉತ್ತರ ಕೊಡಬೇಕಾದ ಪ್ರಶ್ನೆಗಳಿಗೆ ಕೆಲವು ಇಲಾಖೆಗಳ ಅಧಿಕಾರಿಗಳು ಉತ್ತರ ಕೊಡುತ್ತಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಬೇಸರ ವ್ಯಕ್ತಪಡಿಸಿದರು.
ಮಂಗಳವಾರ(ಮಾ.17) ಸದನದಲ್ಲಿ ಮಾತನಾಡಿದ ಅವರು, ಶಾಸಕರು ಕೇಳಿರುವ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಒದಗಿಸಿಲ್ಲ. ಅವರಿಗೆ ಆಗಾಗ ನೆನಪು ಮಾಡಿಕೊಡಬೇಕು. ಸೋಮವಾರದ (ಮಾ.16) ಸದನದಲ್ಲಿಯೇ ಈ ಕುರಿತು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಆದಷ್ಟು ಬೇಗ ಪ್ರಶ್ನೆಗಳಿಗೆ ಉತ್ತರ ಒದಗಿಸಬೇಕು ಎಂದು ತಿಳಿಸಿದರು.
- 17 March 2026 12:32 PM IST
ಅಕ್ರಮ ಮದ್ಯ ಮಾರಟ ತಡೆಗೆ ಹೊಸ ತಂಡ ರಚನೆ: ಆರ್.ಬಿ.ತಿಮ್ಮಾಪುರ
ರಾಯಚೂರು ಜಿಲ್ಲೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಪಕ್ಕದ ರಾಜ್ಯದಿಂದಲೂ ಪೂರೈಕೆಯಾಗುತ್ತಿದೆ. ಆದರೆ ಇಷ್ಟು ಮಾಹಿತಿ ಇದ್ದರೂ ಯಾವದೇ ರೀತಿಯ ಕ್ರಮವಾಗಿಲ್ಲ ಎಂದು ಶಾಸಕ ಬಸನಗೌಡ ದದ್ದಲ್ ಸದನದಲ್ಲಿ ಸರ್ಕಾರದ ಗಮನ ಸೆಳೆದರು.
ಗ್ರಾಮೀಣ ವಿಧಾನಸಭಾ ಕ್ಷೇತ್ರ ಗಡಿ ಭಾಗವನ್ನು ಹಂಚಿಕೊಂಡಿದ್ದು, ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕ್ರಮವಾಗಬೇಕು. ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸದನಕ್ಕೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ಪಕ್ಕದ ಆಂದ್ರಪ್ರದೇಶದಿಂದ ಪೌಡರ್ ತಂದು ಸೇಂದಿ ಮಾಡಿ ಮಾರುತ್ತಾರೆ. ಈಗಾಗಲೇ ಅಂತವರ ವಿರುದ್ದ ಕ್ರಮ ತೆಗೆದುಕೊಳ್ಳುತ್ತಿದ್ದೆವೆ. ಎಂಟು ಜನರನ್ನು ಗಡಿಪಾರು ಮಾಡಲು ಹೇಳಿದ್ದಾರೆ. ಈಗಾಗಲೇ ಒಬ್ಬನನ್ನ ಗಡಿಪಾರು ಮಾಡಲಾಗಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ಹೊಸ ತಂಡ ಮಾಡುತ್ತೇವೆ ಎಂದರು.
- 17 March 2026 8:13 AM IST
ಇರಾನ್ ಮೇಲಿನ ದಾಳಿ ಬಗ್ಗೆ ಮತ್ತೆ ಹೆಮ್ಮೆಯಿಂದ ಮಾತನಾಡಿದ ಟ್ರಂಪ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರದಂದು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ತಮ್ಮ ಹಿಂದಿನ ಅಧ್ಯಕ್ಷರೊಬ್ಬರು ಇರಾನ್ ಮೇಲೆ ತಾವು ಈಗ ನಡೆಸುತ್ತಿರುವಂತೆ ದಾಳಿ ಮಾಡದಿದ್ದಕ್ಕಾಗಿ ತಮ್ಮ ಬಳಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 47 ವರ್ಷಗಳಿಂದ ಯಾವ ಅಧ್ಯಕ್ಷರೂ ಮಾಡದ ಸಾಹಸವನ್ನು ತಾನು ಮಾಡುತ್ತಿದ್ದೇನೆ ಎಂದು ಹೇಳಿಕೊಂಡ ಟ್ರಂಪ್, ತಾನು ಇಷ್ಟಪಡುವ ಮಾಜಿ ಅಧ್ಯಕ್ಷರೊಬ್ಬರು "ನಾನೂ ಇದನ್ನು ಮಾಡಬೇಕಿತ್ತು ಎಂದು ಈಗ ಅನ್ನಿಸುತ್ತಿದೆ" ಎಂದು ಖಾಸಗಿ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಆದರೆ, ಸದ್ಯ ಜೀವಂತವಾಗಿರುವ ನಾಲ್ವರು ಮಾಜಿ ಅಧ್ಯಕ್ಷರಾದ ಬಿಲ್ ಕ್ಲಿಂಟನ್, ಜಾರ್ಜ್ ಡಬ್ಲ್ಯೂ ಬುಷ್, ಬರಾಕ್ ಒಬಾಮಾ ಮತ್ತು ಜೋ ಬೈಡನ್ ಅವರ ಪ್ರತಿನಿಧಿಗಳು ಈ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವರಾರೂ ಟ್ರಂಪ್ ಅವರೊಂದಿಗೆ ಯಾವುದೇ ಸಂಪರ್ಕ ಅಥವಾ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2025ರ ಜನವರಿ 20ರಂದು ನಡೆದ ಟ್ರಂಪ್ ಪದಗ್ರಹಣ ಸಮಾರಂಭದ ನಂತರ ಈ ನಾಯಕರು ಒಂದೇ ವೇದಿಕೆಯಲ್ಲಿ ಅಥವಾ ಸಂಪರ್ಕದಲ್ಲಿ ಕಾಣಿಸಿಕೊಂಡಿಲ್ಲ ಎಂಬುದು ಇಲ್ಲಿ ಗಮನಾರ್ಹ.
- 17 March 2026 8:05 AM IST
ಇರಾನ್ ದಾಳಿಯ ಭೀತಿಯಿಂದಾಗಿ ವೈಮಾನಿಕ ವಲಯವನ್ನು ತಾತ್ಕಾಲಿಕವಾಗಿ ಮುಚ್ಚಿದ ಯುಎಇ
ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ, ಇರಾನ್ನಿಂದ ಸಂಭವನೀಯ ದಾಳಿಯನ್ನು ಎದುರಿಸುತ್ತಿರುವ ಯುಎಇ (ಯುನೈಟೆಡ್ ಅರಬ್ ಎಮಿರೇಟ್ಸ್) ಮಂಗಳವಾರ ತನ್ನ ವೈಮಾನಿಕ ವಲಯವನ್ನು (Airspace) ಅಲ್ಪಕಾಲದವರೆಗೆ ಮುಚ್ಚಿ ನಂತರ ಪುನಃ ತೆರೆದಿದೆ. ಈ ತಾತ್ಕಾಲಿಕ ನಿರ್ಧಾರದಿಂದಾಗಿ ಪ್ರಮುಖ ಜಾಗತಿಕ ಪ್ರಯಾಣದ ಹಬ್ ಆಗಿರುವ ಯುಎಇನಲ್ಲಿ ವಿಮಾನಗಳ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಮತ್ತೊಂದೆಡೆ, ಇಸ್ರೇಲ್ ಮಿಲಿಟರಿ ವರದಿಯ ಪ್ರಕಾರ ಇರಾನ್ ಕ್ಷಿಪಣಿಗಳ ಸುರಿಮಳೆಗೈದಿದ್ದು, ಗಲಿಲೀ ಸಮುದ್ರದ ದಕ್ಷಿಣ ಭಾಗದಲ್ಲಿ ಸೈರನ್ ಶಬ್ದಗಳು ಕೇಳಿಬಂದಿವೆ, ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಒಂದು ದಿನದ ಹಿಂದೆಯಷ್ಟೇ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ರಾಜಧಾನಿಯ ಮಿಲಿಟರಿ ನೆಲೆಗಳ ಮೇಲೆ ಭಾರಿ ದಾಳಿ ನಡೆಸಿದ್ದವು ಮತ್ತು ಲೆಬನಾನ್ನಲ್ಲಿರುವ ಇರಾನ್ ಬೆಂಬಲಿತ ಉಗ್ರರ ಮೇಲಿನ ಆಕ್ರಮಣವನ್ನು ಇಸ್ರೇಲ್ ಮತ್ತಷ್ಟು ತೀವ್ರಗೊಳಿಸಿದೆ.





