ರೈತರ ಪ್ರತಿಭಟನೆ:  ಘರ್ಷಣೆಯಲ್ಲಿ ಯುವಕ ಸಾವು
x

ರೈತರ ಪ್ರತಿಭಟನೆ: ಘರ್ಷಣೆಯಲ್ಲಿ ಯುವಕ ಸಾವು


ಚಂಡೀಗಢ, ಫೆಬ್ರವರಿ 21- ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖನೌರಿಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ರೈತರ ನಡುವೆ ನಡೆದ ಘರ್ಷಣೆಯಲ್ಲಿ ರೈತ(21)ರೊಬ್ಬರು ಸಾವಿಗೀಡಾಗಿದ್ದಾರೆ.

ಫೆಬ್ರವರಿ 13 ರಂದು 'ದೆಹಲಿ ಚಲೋ' ಪ್ರಾರಂಭವಾದ ಬಳಿಕ ಘರ್ಷಣೆಯಿಂದ ಸಂಭವಿಸಿದ ಮೊದಲ ಸಾವು ಇದು ಎಂದು ರೈತ ಮುಖಂಡರು ಹೇಳಿದ್ದಾರೆ.

ಪಂಜಾಬ್‌ನ ಬಟಿಂಡಾ ಜಿಲ್ಲೆ ಬಲೋಕೆ ಗ್ರಾಮದ ಸುಭಕರನ್ ಸಿಂಗ್ (21) ಮೃತರು ಎಂದು ರೈತ ಮುಖಂಡ ಬಲದೇವ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.

ಪಟಿಯಾಲದ ರಾಜೀಂದ್ರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಎಚ್‌.ಎಸ್. ರೇಖಿ ಸುದ್ದಿಗಾರರೊಂದಿಗೆ ಮಾತನಾಡಿ, ಮೂವರನ್ನು ಖನೌರಿ ಗಡಿ ಭಾಗದಿಂದ ಆಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಗಾಯಾಳುಗಳ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದರು.

ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖನೌರಿಯಲ್ಲಿ ರೈತರು, ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಶೆಲ್‌ಗಳ ಜೊತೆಗೆ ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದಾರೆ ಎಂದು ಹೇಳಿದ್ದಾರೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಸಾಲ ಮನ್ನಾ ಸೇರಿದಂತೆ ಇತರ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ನಾಲ್ಕನೇ ಸುತ್ತಿನ ಮಾತುಕತೆ ವಿಫಲವಾದ ಎರಡು ದಿನಗಳ ನಂತರ ಸಾವಿರಾರು ರೈತರು ಆಂದೋಲನವನ್ನು ಪುನರಾರಂಭಿಸಿದರು.

ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರ ಹೆಚ್ಚಳ, ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ, ಭೂಸ್ವಾಧೀನ ಕಾಯಿದೆಯ ಮರುಸ್ಥಾಪನೆಗಾಗಿ ರೈತರು ಒತ್ತಾಯಿಸುತ್ತಿದ್ದಾರೆ.

Read More
Next Story