Save Tigers: Part-4| ಹುಲಿಗಳ ಸೆರೆ, ಸರಣಿ ಸಾವು; 2ನೇ ಸ್ಥಾನ ಉತ್ತರಾಖಾಂಡಕ್ಕೆ ಬಿಟ್ಟುಕೊಡಲಿದೆಯೇ ಕರ್ನಾಟಕ?
x
ಕರ್ನಾಟಕದಲ್ಲಿ ಮೃತಪಟ್ಟಿರುವ ಹುಲಿಗಳು ಚಿತ್ರ: ಜೋಸೆಫ್‌ ಹೂವರ್‌

Save Tigers: Part-4| ಹುಲಿಗಳ ಸೆರೆ, ಸರಣಿ ಸಾವು; 2ನೇ ಸ್ಥಾನ ಉತ್ತರಾಖಾಂಡಕ್ಕೆ ಬಿಟ್ಟುಕೊಡಲಿದೆಯೇ ಕರ್ನಾಟಕ?

2023ರಿಂದ 2026 ಫೆಬ್ರುವರಿವರೆಗೆ ಕರ್ನಾಟಕದಾದ್ಯಂತ 30 ಹುಲಿಗಳು ಮೃತಪಟ್ಟಿವೆ. ಇತ್ತೀಚೆಗೆ ಅರಣ್ಯ ಇಲಾಖೆ 27 ಹುಲಿಗಳನ್ನು ಸೆರೆ ಹಿಡಿದು ಬೇರೆ ಕಡೆ ಬಿಟ್ಟಿದೆ. ಈ ಅವೈಜ್ಞಾನಿಕ ಕ್ರಮದಿಂದಲೂ ಹುಲಿಗಳ ಸಂಖ್ಯೆ ಕಡಿಮೆಯಾಗುವ ಆತಂಕವಿದೆ.


Click the Play button to hear this message in audio format

ಹುಲಿಗಳ ಸರಣಿ ಸಾವಿನ ಪ್ರಕರಣಗಳು ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕದ ಸ್ಥಾನವನ್ನು ಅಭದ್ರಗೊಳಿಸುವ ಭೀತಿ ಸೃಷ್ಟಿಸಿದೆ. ಇಡೀ ದೇಶದಲ್ಲೇ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ಇತ್ತೀಚಿಗೆ ಹುಲಿಗಳ ಸರಣಿ ಸಾವು ಆ ಸ್ಥಾನವನ್ನು ತಪ್ಪಿಸುವ ಸಾಧ್ಯತೆಯತ್ತ ದೂಡಿದೆ.

ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ವಿವಿಧ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹೊರಭಾಗದಲ್ಲಿ ಸುಮಾರು 30 ಹುಲಿಗಳು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ಅರಣ್ಯ ಇಲಾಖೆ 27 ಹುಲಿಗಳನ್ನು ಸೆರೆ ಹಿಡಿದು ಬೇರೆ ಕಡೆ ಬಿಟ್ಟಿರುವುದು ಕೂಡ ನೇರವಾಗಿ ಹುಲಿಗಳ ಸಂತಾನೋತ್ಪತ್ತಿಗೆ ಅಡ್ಡಿಯಾಗುವ ಆತಂಕವಿದೆ. ಹೆಣ್ಣು ಹುಲಿಗಳನ್ನು ಮಿಲನ ಕಾಲದಲ್ಲೇ ಹಿಡಿದು ಅಜ್ಞಾತ ಸ್ಥಳಕ್ಕೆ ಬಿಟ್ಟಿರುವುದರಿಂದ ಖಿನ್ನತೆಗೆ ಒಳಗಾಗಿ, ವಂಶಾಭಿವೃದ್ಧಿಗೆ ಗಮನ ಹರಿಸದಿರಬಹುದು. ಇದು ಹುಲಿಗಳ ಸಂತತಿ ಕ್ಷೀಣಿಸಲು ಕಾರಣವಾಗಲಿದೆ ಎನ್ನಲಾಗಿದೆ.

2023 ರಲ್ಲಿ ರಾಜ್ಯದ ವಿವಿಧ ಕಾಡುಗಳ ಒಳಗೆ ಹಾಗೂ ಹೊರಗೆ ಒಟ್ಟು 12 ಹುಲಿಗಳು ಮೃತಪಟ್ಟಿವೆ. 2025 ರಲ್ಲಿ 14 ಹುಲಿಗಳು, 2026 ಫೆ. 15ರವರೆಗೆ ಒಟ್ಟು 4 ಹುಲಿಗಳು ಮೃತಪಟ್ಟಿವೆ. 2022 ರ ರಾಷ್ಟ್ರೀಯ ಹುಲಿ ಗಣತಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು 563 ಹುಲಿಗಳಿದ್ದು, ಎರಡನೇ ಸ್ಥಾನ ಕಾಯ್ದುಕೊಂಡಿದೆ. 560 ಹುಲಿಗಳೊಂದಿಗೆ ಉತ್ತರಾಖಂಡ ಮೂರನೇ ಸ್ಥಾನದಲ್ಲಿತ್ತು. ಆದರೆ, ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ 30 ಹುಲಿಗಳು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸ್ಥಾನಪಲ್ಲಟ ಆಗುವ ಲಕ್ಷಣಗಳು ಕಾಣುತ್ತಿವೆ.

ಹುಲಿಗಳ ಸಾವು, ಸಂರಕ್ಷಣೆ ಹೇಗಿದೆ?

ಕರ್ನಾಟಕದಲ್ಲಿ 2006ರಲ್ಲಿ 290 ಹುಲಿಗಳಿದ್ದವು. 2010ರಲ್ಲಿ ಆ ಸಂಖ್ಯೆ 300ಕ್ಕೆ ಏರಿದರೆ, 2014ರಲ್ಲಿ 406, 2018 ರಲ್ಲಿ 524 ಹಾಗೂ 2022ರಲ್ಲಿ 563 ಹುಲಿಗಳಿಗೆ ತಲುಪಿತು. 35 ಹುಲಿಗಳು ತಮಿಳುನಾಡಿನ ಮದುಮಲೈ ಹಾಗೂ ಸತ್ಯಮಂಗಲ ಅರಣ್ಯದೊಂದಿಗೆ ನಿರಂತರ ಒಡನಾಟ ಇಟ್ಟುಕೊಂಡಿರುವ ಸಂಗತಿ 2022 ರಲ್ಲಿ ನಡೆದ ಹುಲಿ ಸಮೀಕ್ಷೆಯಿಂದ ತಿಳಿದು ಬಂದಿತ್ತು.

2010ರಲ್ಲಿ ಕರ್ನಾಟಕ ಒಟ್ಟು 300 ಹುಲಿಗಳೊಂದಿಗೆ ಇಡೀ ದೇಶದಲ್ಲೇ ಪ್ರಥಮ ಸ್ಥಾನ ಕಾಯ್ದುಕೊಂಡಿತ್ತು. ಆಗ ಮಧ್ಯಪ್ರದೇಶ 257 ಹುಲಿಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. 2014ರಲ್ಲಿ ಕರ್ನಾಟಕ 406 ಹುಲಿಗಳೊಂದಿಗೆ ಮತ್ತೆ ಮೊದಲ ಸ್ಥಾನ ಭದ್ರಪಡಿಸಿಕೊಂಡಿತ್ತು. ಆಗ ಉತ್ತರಾಖಂಡ 340 ಹುಲಿಗಳೊಂದಿಗೆ ಎರಡನೇ ಸ್ಥಾನ, ಮಧ್ಯಪ್ರದೇಶ 308 ಹುಲಿಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು.

2018 ರಲ್ಲಿ ಮಧ್ಯಪ್ರದೇಶ 526 ಹುಲಿಗಳೊಂದಿಗೆ ಮೊದಲ ಸ್ಥಾನಕ್ಕೇರಿದಾಗ ಕರ್ನಾಟಕ 524 ಹುಲಿಗಳೊಂದಿಗೆ ಎರಡನೇ ಸ್ಥಾನಕ್ಕೆ ಕುಸಿಯಿತು. 2022ರಲ್ಲಿ ಮಧ್ಯಪ್ರದೇಶ 785 ಹುಲಿಗಳೊಂದಿಗೆ ಮೊದಲ ಸ್ಥಾನದಲ್ಲೇ ಮುಂದುವರಿಯಿತು. ಕರ್ನಾಟಕ 563 ಹುಲಿಗಳೊಂದಿಗೆ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇಲ್ಲಿ ಮಧ್ಯಪ್ರದೇಶ ಹಾಗೂ ಉತ್ತರಾಖಂಡದಲ್ಲಿ ವಾರ್ಷಿ ಸರಾಸರಿ 50-100 ರಷ್ಟು ಹುಲಿಗಳು ಏರಿಕೆಯಾದರೆ, ಕರ್ನಾಟಕದಲ್ಲಿ ಮಾತ್ರ ಹುಲಿಗಳ ಸಂಖ್ಯೆ ಅಂದುಕೊಂಡಷ್ಟು ಏರಿಕೆಯಾಗಿಲ್ಲ.

ಎರಡನೇ ಸ್ಥಾನ ಕೈ ಜಾರುವ ಆತಂಕ

2010 ಹಾಗೂ 2014 ರಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದ ಕರ್ನಾಟಕವು ಹುಲಿಗಳ ಸಂಖ್ಯೆಯಲ್ಲಿ ಸ್ಥಿರತೆ ಕಾಯ್ದುಕೊಂಡಿರುವುದು ಹುಲಿ ಸಂರಕ್ಷಣಾ ಕ್ರಮಗಳ ಕೊರತೆಗೆ ಕಾರಣವಾಗಿದೆ.

2018 ರಲ್ಲಿ ಉತ್ತರಾಖಂಡ 442 ಹುಲಿಗಳನ್ನು ಹೊಂದಿದ್ದು, 2022ರ ಸಮೀಕ್ಷೆ ವೇಳೆಗೆ 115ಕ್ಕೂ ಹೆಚ್ಚು ಹುಲಿಗಳನ್ನು ಹೆಚ್ಚಿಸಿಕೊಂಡು ಒಟ್ಟು 560 ಹುಲಿಗಳ ಮೂಲಕ ಮೂರನೇ ಸ್ಥಾನದಲ್ಲಿತ್ತು. ಆದರೆ, ಕರ್ನಾಟಕ 2018 ರಲ್ಲಿ 524 ಹುಲಿಗಳನ್ನು ಹೊಂದಿತ್ತು. 2022 ರ ವೇಳೆಗೆ ಕೇವಲ 39 ಹುಲಿಗಳನ್ನು ಹೆಚ್ಚಿಸಿಕೊಂಡಿದೆ. ಉತ್ತರಾಖಂಡ ರಾಜ್ಯಕ್ಕಿಂತ ಮೂರು ಹುಲಿಗಳಷ್ಟೇ ಹೆಚ್ಚು ಹೊಂದಿದೆ. ಆದರೆ, 2023ರಿಂದ 2026 ಫೆಬ್ರುವರಿವರೆಗೆ ಕರ್ನಾಟಕದಾದ್ಯಂತ ಅಂದಾಜು 30 ಹುಲಿಗಳು ಮೃತಪಟ್ಟಿವೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ ಕರ್ನಾಟಕವು ಎರಡನೇ ಸ್ಥಾನದಿಂದ ಜಾರುವ ಸಾಧ್ಯತೆಗಳು ದಟ್ಟವಾಗಿವೆ.

ಕರ್ನಾಟಕದಲ್ಲಿ ಹುಲಿಗಳ ಸರಣಿ ಸಾವಿನ ಪ್ರಕರಣಗಳನ್ನು ಅವಲೋಕಿಸಿದರೆ ಎರಡನೇ ಸ್ಥಾನವೂ ಕೈ ತಪ್ಪುವ ಭೀತಿಯಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸಂರಕ್ಷಣೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಇದರಿಂದ ತಿಳಿಯುತ್ತಿದೆ. ಪ್ರಸ್ತುತ, ಹುಲಿ ಗಣತಿ ನಡೆಯುತ್ತಿದ್ದು, ಹುಲಿಗಳ ಸಂಖ್ಯೆ ಏರಿಕೆಯಾಗಿದೆಯೋ, ಅಥವಾ ಇರುವ ಸ್ಥಾನವನ್ನೂ ಕಳೆದುಕೊಳ್ಳಲಿದೆಯೋ ಸಮೀಕ್ಷೆ ಪೂರ್ಣಗೊಂಡ ಬಳಿಕ ತಿಳಿಯಲಿದೆ” ಎಂದು ವನ್ಯಜೀವಿ ತಜ್ಞ ಜೋಸೆಫ್ ಹೂವರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಮಧ್ಯಪ್ರದೇಶದಲ್ಲಿ ಹುಲಿ ಸಂಖ್ಯೆ ಏರಿಕೆಗೆ ಕಾರಣವೇನು?

ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ, ಭದ್ರಾ ಹಾಗೂ ಕಾಳಿ ಹುಲಿ ಅಭಯಾರಣ್ಯಗಳಿವೆ. ಈ ಐದು ಹುಲಿ ಅಭಯಾರಣ್ಯಗಳಿಂತ ಮಧ್ಯಪ್ರದೇಶದಲ್ಲಿಅರಣ್ಯ ವ್ಯಾಪ್ತಿ ದೊಡ್ಡದಿದೆ. ಮಧ್ಯಪ್ರದೇಶದಲ್ಲಿ ಆರು ಹುಲಿ ಮೀಸಲು ಪ್ರದೇಶಗಳಿದ್ದು, ಮೂರು ವರ್ಷಗಳ ಹಿಂದೆ ಹೆಚ್ಚುವರಿಯಾಗಿ ಮೂರು ಹುಲಿ ಮೀಸಲು ಪ್ರದೇಶಗಳನ್ನು ಸೇರಿಸಲಾಗಿದೆ. ಹಾಗಾಗಿ, ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಕರ್ನಾಟಕದಲ್ಲಿ ತುಂಡು ಅರಣ್ಯವಿದೆ. ಇತ್ತೀಚೆಗೆ ಅರಣ್ಯ ಇಲಾಖೆಯ ಇಕೋ ಟೂರಿಸಂ ಒಳಗೊಂಡಂತೆ ಅನಗತ್ಯ ಹಸ್ತಕ್ಷೇಪವು ಹುಲಿಗಳ ಆವಾಸಕ್ಕೆ ಧಕ್ಕೆ ತರುತ್ತಿದೆ.

ಕರ್ನಾಟಕದಲ್ಲಿ ಕುದುರೆಮುಖ, ಎಂ.ಎಂ.ಹಿಲ್ಸ್ ಹುಲಿಗಳ ಆವಾಸಕ್ಕೆ ಸೂಕ್ತವಾಗಿವೆ. ಆದರೆ, ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಹೆಚ್ಚುವರಿ ಹುಲಿ ಸಂರಕ್ಷಿತ ಪ್ರದೇಶಗಳನ್ನು ಸೇರ್ಪಡೆ ಮಾಡಿಲ್ಲ. ಕರ್ನಾಟಕದಲ್ಲಿ 1000 ಹುಲಿಗಳು ಇರುವಷ್ಟು ಅರಣ್ಯ ಪ್ರದೇಶವಿದೆ ಎಂದು ಜೋಸೆಫ್‌ ಹೂವರ್‌ ತಿಳಿಸಿದರು.

ಟೈಗರ್ ಪ್ರಾಜೆಕ್ಟ್‌ನಿಂದಾದ ಅನುಕೂಲವೇನು?

1973 ರಲ್ಲಿ ಕೇಂದ್ರ ಸರ್ಕಾರ ಹುಲಿಗಳ ಸಂಖ್ಯೆ ಮತ್ತು ಜೀವವೈವಿಧ್ಯತೆ ಸಂರಕ್ಷಿಸುವ ಗುರಿಯೊಂದಿಗೆ ಹುಲಿ ಯೋಜನೆ(ಟೈಗರ್ ಪ್ರಾಜೆಕ್ಟ್) ಆರಂಭಿಸಿತು. ಅದರ ಪರಿಣಾಮ ಇಂದು ಭಾರತವು ವಿಶ್ವದಲ್ಲೇ ಶೇ 75 ರಷ್ಟು ಹುಲಿಗಳನ್ನು ಹೊಂದಲು ಸಾಧ್ಯವಾಯಿತು.

ಮೊದಲಿಗೆ 18,278 ಕಿ.ಮೀ.ವ್ಯಾಪ್ತಿಯ ಒಂಬತ್ತು ಹುಲಿ ಮೀಸಲು ಪ್ರದೇಶಗಳಲ್ಲಿ ಆರಂಭವಾದ ಯೋಜನೆ ಇದೀಗ 75,796 ಕಿ.ಮೀ. ಪ್ರದೇಶ ಒಳಗೊಂಡ 53 ಹುಲಿ ಮೀಸಲು ಪ್ರದೇಶಗಳನ್ನು ವ್ಯಾಪಿಸಿದೆ. ಭಾರತದ ಒಟ್ಟು ಭೂಪ್ರದೇಶದ ಶೇ 2.3 ರಷ್ಟು ಪ್ರದೇಶದ ಹುಲಿ ಸಂರಕ್ಷಣೆಯಲ್ಲಿದೆ.

1970 ರಲ್ಲಿ ಹುಲಿ ಸಂರಕ್ಷಣೆಯ ಮೊದಲ ಹಂತವಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ತಂದರೂ 1980 ರವರೆಗೆ ವ್ಯಾಪಕ ಬೇಟಿಯಿಂದ ಹುಲಿಗಳ ಸಂತತಿ ಕುಸಿದಿತ್ತು. 2005 ರಲ್ಲಿ ಹುಲಿ ಸಂರಕ್ಷಣೆಯ ಎರಡನೇ ಹೆಜ್ಜೆಯಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಲಾಯಿತು. ಅಲ್ಲದೇ ಹುಲಿ ಸಂರಕ್ಷಣೆ ಖಾತರಿಪಡಿಸಿಕೊಳ್ಳಲು ಆಧುನಿಕ ತಂತ್ರಜ್ಞಾನದೊಂದಿಗೆ ವೈಜ್ಞಾನಿಕ ಮೇಲ್ವಿಚಾರಣೆ ಬಳಸಲಾಯಿತು. ಇದರಿಂದ ಹುಲಿಗಳ ಸಂಖ್ಯೆ ಹೆಚ್ಚಾಯಿತು.

ನಿರ್ಣಾಯಕ ಕೋರ್ ಮತ್ತು ಬಫರ್ ಪ್ರದೇಶಗಳ ನಿಗದಿ, ಹೊಸ ಹುಲಿ ಮೀಸಲು ಪ್ರದೇಶಗಳ ಘೋಷಣೆ ಹಾಗೂ ಹುಲಿ ಕಾರಿಡಾರ್ಗಳ ಗುರುತಿಸುವಿಕೆಯಂತಹ ಪ್ರಮುಖ ನಿರ್ಣಯಗಳಿಂದ ಹುಲಿಗಳ ಸಂಖ್ಯೆ ಹೆಚ್ಚಾಯಿತು.

2018 ರಲ್ಲಿ 2461 ಇದ್ದ ಹುಲಿಗಳ ಸಂಖ್ಯೆ 2022 ರಲ್ಲಿ 3,080 ಕ್ಕೆ ಏರಿಕೆಯಾದವು. 2022 ಏ.9 ರಂದು ಪ್ರಾಜೆಕ್ಟ್ ಟೈಗರ್ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ದೇಶದಲ್ಲಿ 3,167 ಹುಲಿಗಳಿವೆ ಎಂದು ಅಧಿಕೃತವಾಗಿ ಘೋಷಿಸಿದ್ದರು.

ಮಧ್ಯ ಭಾರತ, ಶಿವಾಲಿಕ್ ಬೆಟ್ಟಗಳು ಹಾಗೂ ಗಂಗಾನದಿಯ ಬಯಲು ಪ್ರದೇಶಗಳಾದ ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರದಲ್ಲಿ ಹುಲಿಗಳ ಸಂಖ್ಯೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿದೆ. ಆದರೆ, ಪಶ್ಚಿಮ ಘಟ್ಟಗಳಂತಹ ಕೆಲವು ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ. ಈ ಪ್ರದೇಶಗಳಲ್ಲಿ ಸೂಕ್ತ ಮೇಲ್ವಿಚಾರಣೆ ಮತ್ತು ಸಂರಕ್ಷಣಾ ಪ್ರಯತ್ನಗಳು ಆಗಬೇಕು ಎಂದು ಹೇಳಲಾಗಿತ್ತು. ಮಿಜೋರಾಂ, ನಾಗಾಲ್ಯಾಂಡ್, ಜಾರ್ಖಂಡ್, ಗೋವಾ, ಛತ್ತೀಸ್‌ಘಡ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಿದೆ.

ಎಲ್ಲೆಲ್ಲಿ ಎಷ್ಟು ಹುಲಿಗಳಿವೆ?

ದೇಶದಲ್ಲೇ ಅತಿ ಹೆಚ್ಚು ಹುಲಿಗಳನಕ್ನು ಹೊಂದಿರುವ ರಾಜ್ಯ ಮಧ್ಯಪ್ರದೇಶ. ಇಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಅರಣ್ಯ ವಿಸ್ತೀರ್ಣ ಹೆಚ್ಚಿರುವುದರಿಂದ 2022 ರ ಸಮೀಕ್ಷೆಯ ಪ್ರಕಾರ 785 ಹುಲಿಗಳಿವೆ. ಕರ್ನಾಟಕಲ್ಲಿ ಐದು ಹುಲಿ ಸಂರಕ್ಷಿತ ಪ್ರದೇಶಗಳಿದ್ದು, ಒಟ್ಟು 563 ಹುಲಿಗಳಿವೆ. ಮೂರನೇ ಸ್ಥಾನದಲ್ಲಿ ಉತ್ತರಾಖಂಡವಿದೆ, ಇಲ್ಲಿ 560 ಹುಲಿಗಳಿದ್ದರೆ, ನಾಲ್ಕನೇ ಸ್ಥಾನದಲ್ಲಿ ಮಹಾರಾಷ್ಟ್ರ 444 ಹುಲಿಗಳನ್ನು ಹೊಂದಿದೆ.

ಹುಲಿ ಮೀಸಲು ಪ್ರದೇಶವಾದ ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಪ್ರದೇಶ ಒಂದರಲ್ಲೇ 260 ಹುಲಿಗಳಿವೆ. ಕರ್ನಾಟಕದ ಬಂಡೀಪುರ 150, ನಾಗರಹೊಳೆ 141, ಬಾಂಧವಗಢ 135, ದುಧ್ವಾ 135, ಮುದುಮಲೈ 114, ಕನ್ಹಾ 105, ಕಾಜಿರಂಗ 104, ಸುಂದರಬನ್ಸ್ 100, ತಡೋಬಾ 97, ಸತ್ಯಮಂಗಲಂ 85 ಮತ್ತು ಪೆಂಚ್ ಉದ್ಯಾನದಲ್ಲಿ 77 ಹುಲಿಗಳಿವೆ.

ಹುಲಿ ಸಂರಕ್ಷಣೆಗೆ ಅಗತ್ಯ ಕ್ರಮಗಳೇನು?

ಹುಲಿಗಳ ಸಂಖ್ಯೆಯನ್ನು ವೃದ್ಧಿಸಲು ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಸೂಚಿ ಬಳಸಬೇಕು. ಗಣಿಗಾರಿಕೆ ನಿಯಂತ್ರಿಸುವ ಜತೆಗೆ ಗಣಿಬಾಧಿತ ಪ್ರದೇಶಗಳಲ್ಲಿ ಪುನರ್ಜ್ಜೀವನಗೊಳಿಸಬೇಕು. ಹುಲಿ ಸಂರಕ್ಷಿತ ಪ್ರದೇಶ ನಿರ್ವಹಣೆ ಬಲಪಡಿಸುವ ಜತೆಗೆ ಬೇಟೆ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕು. ಮಾನವ-ಪ್ರಾಣಿ ಸಂಘರ್ಷ ಪರಿಹರಿಸುವ ಮೂಲಕ ಹುಲಿಗಳ ಸಂತತಿಯನ್ನು ರಕ್ಷಿಸಬಹುದಾಗಿದೆ ಎಂಬುದು ವನ್ಯಜೀವಿ ಪ್ರಿಯರ ಆಗ್ರಹವಾಗಿದೆ.

ದೇಶದ ಎಲ್ಲಾ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಏಕರೂಪವಾಗಿಲ್ಲ. ಪಶ್ಚಿಮ ಘಟ್ಟಗಳಲ್ಲಿ ಹುಲಿಗಳ ಸಂಖ್ಯೆ ತುಲನಾತ್ಮಕವಾಗಿ ಸ್ಥಿರವಾದರೂ ವಯನಾಡು ಮತ್ತು ಕರ್ನಾಟಕದ ಉತ್ತರ ಭಾಗದ ನಿರ್ದಿಷ್ಟ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗಿದೆ.

2021 ರಿಂದ ಫೆಬ್ರವರಿ 2022 ರವರೆಗೆ ನಡೆಸಲಾದ ಕ್ಯಾಮೆರಾ ಟ್ರ್ಯಾಪಿಂಗ್ ನಲ್ಲಿ ಕರ್ನಾಟಕದ ಕಾಡುಗಳಲ್ಲಿ ಅಂದಾಜು 563 ಹುಲಿಗಳಿವೆ ಎಂಬುದನ್ನು ಪತ್ತೆ ಮಾಡಿತು. ಇದು 2018 ರ ಅಂದಾಜಿನ 524 ಹುಲಿಗಳಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಕರ್ನಾಟಕವು ಕೇರಳ , ತಮಿಳುನಾಡು ಮತ್ತು ಗೋವಾಗಳೊಂದಿಗೆ ಹುಲಿಗಳ ಸಂಖ್ಯೆಯನ್ನು ಹಂಚಿಕೊಂಡಿರುವುದರಿಂದ ವಲಸೆಯೂ ಕಡಿಮೆ ಸಂಖ್ಯೆಯ ಹುಲಿಗಳಿಗೆ ಕಾರಣವಾಗಿದೆ ಎನ್ನಲಾಗಿದೆ.

ನಾಗರಹೊಳೆ ಮತ್ತು ಬಂಡೀಪುರ ಹುಲಿ ಮೀಸಲು ಪ್ರದೇಶಗಳಲ್ಲಿ ಅತಿ ಹೆಚ್ಚು ಹುಲಿಗಳಿದ್ದು, ಬಿಆರ್ ಟಿ ಹಿಲ್ಸ್, ಭದ್ರಾ ಮತ್ತು ಕಾಳಿ ಹುಲಿ ಮೀಸಲು ಪ್ರದೇಶಗಳಿವೆ. ನಾಗರಹೊಳೆ-ಬಂಡಿಪುರದಲ್ಲಿ ಹುಲಿ ಸಾಂದ್ರತೆಯ ಹೆಚ್ಚಿದ ಹಿನ್ನೆಲೆಯಲ್ಲಿ ಉತ್ತರ ಭಾಗದಲ್ಲಿರುವ ಬರುವ ಕಾಳಿ ಮತ್ತು ಭದ್ರಾ ಅರಣ್ಯಗಳಿಗೆ ಸ್ಥಳಾಂತರಿಸಲಾಗಿದೆ.

Read More
Next Story