ತಿಂಗಳಲ್ಲಿ ಇಬ್ಬರು ಯುವತಿಯರ ಹತ್ಯೆ: ಹುಬ್ಬಳ್ಳಿ ಪೊಲೀಸ್‌ ವೈಫಲ್ಯ ಕಾರಣವೇ?
x

ತಿಂಗಳಲ್ಲಿ ಇಬ್ಬರು ಯುವತಿಯರ ಹತ್ಯೆ: ಹುಬ್ಬಳ್ಳಿ ಪೊಲೀಸ್‌ ವೈಫಲ್ಯ ಕಾರಣವೇ?

ಎರಡೂ ಕೊಲೆಗಳ ಕುರಿತು ಸಂಬಂಧಿತ ಪೊಲೀಸ್‌ ಠಾಣೆಗಳಿಗೆ ನತದೃಷ್ಟ ಹೆಣ್ಣುಮಕ್ಕಳ ಮನೆಯವರು ಮಾಹಿತಿ ನೀಡಿದ್ದರು. ಅಂತಹ ದೂರು, ಮಾಹಿತಿಗಳ ಹೊರತಾಗಿಯೂ ಪೊಲೀಸರು ತಡೆಯಬಹುದಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾದರು ಎಂಬುದು ಮುಖ್ಯವಾಗಿ ಎರಡೂ ಪ್ರಕರಣಗಳಲ್ಲಿ ಕೇಳಿಬಂದಿರುವ ದೂರು.


ನೇಹಾ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿಯ ಹತ್ಯೆ ನಡೆದಿದೆ. ಪ್ರೀತಿಯ ನೆಪದಲ್ಲಿ ಯುವತಿಯನ್ನು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾದ ಮತ್ತೊಂದು ಭೀಕರ ಘಟನೆಗೆ ಹುಬ್ಬಳ್ಳಿ ನಗರ ಬೆಚ್ಚಿಬಿದ್ದಿದೆ. ತಿಂಗಳು ತುಂಬುವುದರೊಳಗೆ ಇಬ್ಬರು ಹೆಣ್ಣುಮಕ್ಕಳನ್ನು ಹಾಡಹಗಲೇ ಭೀಕರವಾಗಿ ಕೊಲೆ ಮಾಡಲಾಗಿದೆ. ಈ ಸರಣಿ ಹತ್ಯೆ ಪ್ರಕರಣಗಳು ಹುಬ್ಬಳ್ಳಿ ಪೊಲೀಸ್‌ ವ್ಯವಸ್ಥೆಯ ವೈಫಲ್ಯಗಳತ್ತ ನಾಗರಿಕರು ಬೊಟ್ಟು ಮಾಡುವಂತೆ ಮಾಡಿದೆ.

ಅದರಲ್ಲೂ ಎರಡೂ ಕೊಲೆಗಳ ಕುರಿತು ಸಂಬಂಧಿತ ಪೊಲೀಸ್‌ ಠಾಣೆಗಳಿಗೆ ನತದೃಷ್ಟ ಹೆಣ್ಣುಮಕ್ಕಳ ಮನೆಯವರು ಮಾಹಿತಿ ನೀಡಿದ್ದರು. ಅಂತಹ ದೂರು, ಮಾಹಿತಿಗಳ ಹೊರತಾಗಿಯೂ ಪೊಲೀಸರು ತಡೆಯಬಹುದಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾದರು ಎಂಬುದು ಮುಖ್ಯವಾಗಿ ಎರಡೂ ಪ್ರಕರಣಗಳಲ್ಲಿ ಕೇಳಿಬಂದಿರುವ ದೂರು.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೇಟರ್‌ ಆಗಿರುವ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಅವರನ್ನು ಕಳೆದ ತಿಂಗಳು; ಏ.18ರಂದು ಆಕೆಯ ಕಾಲೇಜು ಆವರಣದಲ್ಲೇ ಬರ್ಬರವಾಗಿ ಇರಿದು ಹತ್ಯೆ ಮಾಡಲಾಗಿತ್ತು. ಇದೀಗ ಕಾರ್ಪೊರೇಟರ್‌ ನಿರಂಜನ್‌ ಅವರ ವಾರ್ಡ್‌ನಲ್ಲಿಯೇ ನೇಹಾ ಹತ್ಯೆ ಮಾದರಿಯಲ್ಲೇ ಮತ್ತೊಬ್ಬ ಯುವತಿಯ ಭೀಕರ ಕೊಲೆ ನಡೆದಿದೆ.

ಹುಬ್ಬಳ್ಳಿಯ ನಾಗರಿಕರನ್ನು ಬೆಚ್ಚಿಬೀಳಿಸಿರುವ ಈ ಸರಣಿ ಹತ್ಯೆಗಳ ಕುರಿತು ʻದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ ನಿರಂಜನ ಹಿರೇಮಠ ಅವರು, ʻʻಕಳೆದ ತಿಂಗಳು ಏ.18 ರಂದು ನಾವು ನಮ್ಮ ಮಗಳನ್ನು ಇದೇ ರೀತಿ ಕಳೆದುಕೊಂಡಿದ್ದೇವೆ. ಆ ದುಃಖದಿಂದ ನಾವು ಇನ್ನೂ ಹೊರಗೆ ಬಂದಿಲ್ಲ, ಅದಾಗಲೇ ನಮ್ಮದೇ ವಾರ್ಡ್‌ನ ಮತ್ತೊಬ್ಬ ಮಗಳನ್ನು ಕಳೆದುಕೊಂಡಿದ್ದೇವೆ. ಈ ಘಟನೆಯಿಂದ ಇಡೀ ಹುಬ್ಬಳ್ಳಿ ಧಾರವಾಡ ಜನತೆ ಆತಂಕಕ್ಕೀಡಾಗಿದ್ದಾರೆ. ನಗರದಲ್ಲಿ ಪೊಲೀಸ್‌ ವ್ಯವಸ್ಥೆ ಇದ್ದರೂ, ಇಲ್ಲದಂತಾಗಿದೆʼʼ ಎಂದರು.

ʻʻರಾಜ್ಯದಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಕಳೆದ ತಿಂಗಳು ನನ್ನ ಮಗಳು, ಇಂದು ನಮ್ಮ ವಾರ್ಡ್‌ನ ಮಗಳು, ನಾಳೆ ಮತ್ತಿನ್ಯಾರೋ... ಹೀಗೆ ನಿಮಗೆ ಇನ್ನೂ ಎಷ್ಟು ಬಲಿಯಾಗಬೇಕು? ಇಲಾಖೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿʼʼ ಎಂದು ಗೃಹ ಸಚಿವ ಪರಮೇಶ್ವರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ʻʻನೇಹಾ ಕೊಲೆ ಮಾಡಿದ ಆರೋಪಿಯನ್ನು ಎನ್​ಕೌಂಟರ್ ಮಾಡಿದ್ದರೆ ಹೀಗೆ ಆಗುತ್ತಿರಲಿಲ್ಲ. ಈ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ. ಹುಬ್ಬಳ್ಳಿಗೆ ದಕ್ಷ ಪೊಲೀಸ್‌ ಅಧಿಕಾರಿಯ ಅವಶ್ಯಕತೆ ಇದೆ. ಈ ಕೊಲೆ ಮಾಡಿರುವ ಆರೋಪಿ ವಿಶ್ವ ಎನ್ನುವವನು ಒಂದು ವಾರದ ಹಿಂದೆಯೆ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದ. ನನ್ನ ಜೊತೆಗೆ ಬಾರದಿದ್ರೆ ನೇಹಾ ತರ ಕೊಲೆ ಮಾಡುವೆ ಎಂದು ನೇಹಾ ಹತ್ಯೆಯನ್ನು ಉಲ್ಲೇಖಿಸಿಯೇ ವಾರ್ನಿಂಗ್ ಮಾಡಿದ್ದ. ಆಗ ಅಂಜಲಿ ಕುಟುಂಬಸ್ಥರು ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಏನೂ ಆಗಲ್ಲ ಹೋಗಿ ಎಂದು ಕುಟುಂಬಸ್ಥರನ್ನು ಸಾಗಹಾಕಿದ್ದರು. ಇದನ್ನ ನೋಡಿದ್ರೆ ಹುಬ್ಬಳ್ಳಿಯಲ್ಲಿ ಪೊಲೀಸರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಎಂತವರಿಗಾದರೂ ಗೊತ್ತಾಗುತ್ತದೆʼʼ ಎಂದು ಪೊಲೀಸ್‌ ಅಧಿಕಾರಿಗಳ ವಿರುದ್ಧ ಅವರು ಕಿಡಿಕಾರಿದರು.

ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಶಾಸಕ ಮಹೇಶ್‌ ಟೆಂಗಿನಕಾಯಿ, "ಆರೋಪಿ ಒಂದು ವಾರದ ಹಿಂದೆಯೇ ಧಮ್ಕಿ ಹಾಕಿ, ಕೊಲೆ ಮಾಡಿದ್ದಾನೆ. ನೇಹಾ ಹತ್ಯೆಯ ರೀತಿಯಲ್ಲೇ ನಿನ್ನನ್ನೂ ಹತ್ಯೆ ಮಾಡುತ್ತೇನೆ ಎಂದು ಆರೋಪಿ ಧಮ್ಕಿ ಹಾಕಿದ್ದಾನೆ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರ ಗಮನಕ್ಕೆ ಬಂದಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ ಕೊಲೆ ಮಾಡಿರುವ ಆರೋಪಿಯಷ್ಟೆ ಮಾಹಿತಿ ತಿಳಿದರೂ ಕ್ರಮ ಕೈಗೊಳ್ಳದ ಅಧಿಕಾರಿಯದ್ದೂ ತಪ್ಪಾಗಿದೆ. ನೇಹಾ ಹತ್ಯೆಯಲ್ಲಿ ನಮ್ಮ ಬಿಜೆಪಿ ನಿಲುವು ಏನಾಗಿತ್ತು, ಈ ಕೊಲೆಯಲ್ಲೂ ನಿಲುವು ಅದೇ ಆಗಿರತ್ತದೆ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು. ಅವಳಿ ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪೊಲೀಸರ ವೈಫಲ್ಯಕ್ಕೆ ಇಬ್ಬರು ಯುವತಿಯರು ಬಲಿಯಾಗಿದ್ಧಾರೆ ಎಂದು ಆರೋಪಿಸಿದ್ದಾರೆ.

ಘಟನೆ ಹಿನ್ನೆಲೆ

ಹುಬ್ಬಳ್ಳಿ ವೀರಾಪುರ ಓಣಿಯ 21 ವರ್ಷ ಅಂಜಲಿ ಎಂಬ ಯುವತಿಯನ್ನು ಬುಧವಾರ (ಮೇ 15) ಬೆಳಗಿನ ಜಾವ ವಿಶ್ವ ಅಲಿಯಾಸ್ ಗೀರಿಶ್ ಎಂಬ ಯುವಕ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಹತ್ಯೆಯಾದ ಅಂಜಲಿ ಮತ್ತು ಆರೋಪಿ ವಿಶ್ವ ಸಹಪಾಠಿಗಳಾಗಿದ್ದು, ಅಂಜಲಿ ಜೊತೆಗೆ ಒಡನಾಟ ಹೊಂದಿದ್ದ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪವಾಗಿತ್ತು ಎನ್ನಲಾಗಿದೆ. ಆ ವಿಷಯದಲ್ಲೇ ಕಳೆದ ವಾರ ಆತ ಆಕೆಗೆ ಬೆದರಿಕೆ ಹಾಕಿದ್ದ. ತನ್ನ ಜೊತೆ ಬರದೇ ಇದ್ದರೆ ನೇಹಾ ಹತ್ಯೆಯ ರೀತಿಯೇ ಕೊಲೆ ಮಾಡುವುದಾಗಿ ಹೇಳಿದ್ದ ಎಂದು ಅಂಜಲಿ ಮನೆಯವರು ತಮ್ಮ ವ್ಯಾಪ್ತಿಯ ಬೆಂಡಿಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅವರನ್ನು ಸುಮ್ಮನೆ ನಿಮ್ಮ ಭ್ರಮೆ ಎಂದು ಸಾಗಹಾಕಿದ್ದರು ಎನ್ನಲಾಗಿದೆ.

ಬುಧವಾರ ಬೆಳಗಿನ ಜಾವ ಆರೋಪಿ ವಿಶ್ವ ಏಕಾಏಕಿ ಅಂಜಲಿ ಮನೆಯ ಬಾಗಿಲು ಬಡಿದ್ದಾನೆ. ಅಂಜಲಿಯೇ ಬಾಗಿಲು ತೆರೆದ್ದಾಳೆ. ಮೊದಲಿಗೆ ಅಂಜಲಿ ಅಜ್ಜಿ ಮತ್ತು ಸಹೋದರಿಯರ ಜೊತೆಗೆ ಮಾತನಾಡಿದ ವಿಶ್ವ, ಬಳಿಕ ಸ್ವಲ್ಪ ಪರ್ಸನಲ್ ಮಾತನಾಡಬೇಕು ಎಂದು ಅಂಜಲಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ಏಕಾಏಕಿ ಚಾಕು ಹಾಕಲು ಶುರು ಮಾಡಿದ್ದಾನೆ.

ಆರೋಪಿ ವಿಶ್ವನ ಈ ಕೃತ್ಯವನ್ನು ತಡೆಯಲು ಅಂಜಲಿ ಕುಟುಂಬಸ್ಥರು ಮುಂದಾದಾಗ, ಅಂಜಲಿಯನ್ನು ಮನೆಯ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾನೆ. ಅಂಜಲಿ ಸತ್ತ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

Read More
Next Story