ರೋಚಕ ತಿರುವಿನಲ್ಲಿ ಅಧಿಕಾರ ಕಳೆದುಕೊಂಡ 5 ವರ್ಷಗಳ ನಂತರ ಸಿಎಂ ಹುದ್ದೆಯ ರೇಸ್‌ನಲ್ಲಿ ಫಡ್ನವಿಸ್
ಹೊಸ ಆಡಳಿತದಲ್ಲಿ "ದೊಡ್ಡಣ್ಣ" ಪಾತ್ರ ವಹಿಸುವುದು ಬಿಜೆಪಿಯ ಉದ್ದೇಶವಲ್ಲ ಎಂಬುದು 288 ಸ್ಥಾನಗಳಲ್ಲಿ 148 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾಗಲೇ ಸ್ಪಷ್ಟವಾಗಿತ್ತು. ಆದಾಗ್ಯೂ ನಾಯಕತ್ವ ವಹಿಸುವುದು ನಿಶ್ಚಿತ.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಪ್ರಮುಖ ನಾಯಕರಾದ ದೇವೇಂದ್ರ ಫಡ್ನವೀಸ್ ಮತ್ತೆ ಮುಖ್ಯಮಂತ್ರಿ ಹುದ್ದೆಗೇರುವ ಕಾಲ ಸನ್ನಿಹಿತವಾಗಿದೆ. ಐದು ವರ್ಷಗಳ ಹಿಂದೆ ಮಧ್ಯರಾತ್ರಿ ಬೃಹನ್ನಾಟಕದ ಬಳಿಕ ಸಿಎಂ ಗದ್ದುಗೆ ಕಳೆದುಕೊಂಡಿದ್ದ ಅವರು ಅವರೀಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹಿಂದಿನ ಬಾರಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸುವ ಯತ್ನಿಸಿ ವಿಫಲಗೊಂಡಿದ್ದ ಅವರು ಈ ಬಾರಿ ಅಧಿಕಾರಯುವಾಗಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆಗಳಿವೆ.
ಫಡ್ನವೀಸ್ ಅವರು ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಮುನ್ನಡೆಯಲಿದ್ದು, ಅವರ ಪಕ್ಷವು ರಾಜ್ಯದ 288 ಕ್ಷೇತ್ರಗಳಲ್ಲಿ 124 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಆಡಳಿತಾರೂಢ ಮಹಾಯುತಿಯ ಸಿಎಂ ಅಭ್ಯರ್ಥಿಯ ಬಗ್ಗೆ ಕೇಳಿದಾಗಲೆಲ್ಲಾ ಬಿಜೆಪಿ ಗೊಂದಲಕ್ಕೊಳಗಾಗಿತ್ತು, ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಾಯಕತ್ವದಲ್ಲಿ ಚುನಾವಣೆಯಲ್ಲಿ ಹೋರಾಡುತ್ತಿದ್ದೇವೆ ಎಂದೇ ಹೇಳಿದ್ದರು.
ಚುನಾವಣಾ ಫಲಿತಾಂಶಗಳು ಹೊರಬಂದ ನಂತರ ಮೈತ್ರಿಕೂಟದ ಸಿಎಂ ಅಭ್ಯರ್ಥಿಯನ್ನು ಮಹಾಯುತಿ ಪಾಲುದಾರರು ನಿರ್ಧರಿಸಬಹುದು. ಆದಾಗ್ಯೂ ಬಿಜೆಪಿಯ ಮುಖ್ಯ ಕಾರ್ಯತಂತ್ರಜ್ಞ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಫಡ್ನವೀಸ್ ಕಡೆಗೆ ಬೊಟ್ಟು ಮಾಡುವ ಎಲ್ಲ ಸಾಧ್ಯತೆಗಳಿವೆ. ಚುನಾವಣಾ ರ್ಯಾಲಿಯಲ್ಲಿ ಅವರು, "ನಾನು ಬಿಜೆಪಿ ಮತ್ತು ದೇವೇಂದ್ರ ಫಡ್ನವಿಸ್‌ಗೆ ಭಾರಿ ಬೆಂಬಲ ದೊರೆಯುವುದನ್ನು ನೋಡುತ್ತಿದ್ದೇನೆ" ಎಂದು ಹೇಳಿದ್ದರು.
ಶಿಂಧೆಗೆ ಉನ್ನತ ಹುದ್ದೆ
ಜೂನ್ 2022ರಲ್ಲಿ ಅವಿಭಜಿತ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯದ ಬಾವುಟ ಹಿಡಿದ ಏಕನಾಥ್ ಶಿಂಧೆಗೆ ಬಿಜೆಪಿ ಉನ್ನತ ಹುದ್ದೆಯನ್ನು ಬಿಟ್ಟುಕೊಟ್ಟಿತ್ತು. ಇದು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಆದರೆ ಹೊಸ ಆಡಳಿತದಲ್ಲಿ "ದೊಡ್ಡಣ್ಣ" ಪಾತ್ರವನ್ನು ವಹಿಸುವ ಉದ್ದೇಶವನ್ನು ಅದು ಬಹಿರಂಗಪಡಿಸಲಿಲ್ಲ. 288 ಸದಸ್ಯರ ವಿಧಾನಸಭೆಯ ಅರ್ಧಕ್ಕಿಂತ ಹೆಚ್ಚು ಸ್ಥಾನಗಳಾದ 148 ಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿ ನಿರ್ಧರಿಸಿದಾಗ ಸೀಟು ಹಂಚಿಕೆಯ ಸಮಯದಲ್ಲಿ ಇದು ಸ್ಪಷ್ಟವಾಯಿತು, ಉಳಿದ 140 ಸ್ಥಾನಗಳನ್ನು ಇತರ ಎರಡು ಮೈತ್ರಿ ಪಾಲುದಾರರಾದ ಶಿವಸೇನೆ (ಶಿಂಧೆ) ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ಬಿಟ್ಟುಕೊಟ್ಟಿತು.
2014 ರಿಂದ 2019ರವರೆಗೆ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಫಡ್ನವೀಸ್ ಅವರನ್ನು 2022ರಲ್ಲಿ ಸಿಎಂ ಶಿಂಧೆ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಸ್ವೀಕರಿಸಲು ಮೊದಲು ಒಪ್ಪಿರಲಿಲ್ಲ. ಹೈಕಮಾಂಡ್ ಕೊನೆಗೂ ಮನವೊಲಿಸಿತ್ತು. ಗೃಹ ಖಾತೆಯೊಂದಿಗೆ ಉಪಮುಖ್ಯಮಂತ್ರಿಯಾದ ನಂತರವೂ, ಮಹಾರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆ ವಿಷಯಗಳ ಬಗ್ಗೆ ಅವರು ಪ್ರತಿಪಕ್ಷಗಳಿಂದ ನಿರಂತರವಾಗಿ ಟೀಕೆಗೆ ಗುರಿಯಾಗಿದ್ದರು.
2024ರ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟವು 48 ಕ್ಷೇತ್ರಗಳಲ್ಲಿ ಕೇವಲ 17 ಸ್ಥಾನಗಳನ್ನು ಗೆದ್ದಾಗ ಫಡ್ನವೀಸ್ ಮತ್ತೊಂದು ಆಘಾತ ಅನುಭವಿಸಿದ್ದರು. ಪ್ರತಿಪಕ್ಷ ಎಂವಿಎ 30 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಬಲವಾಗಿ ಹೊರಹೊಮ್ಮಿತ್ತು. 2019ರಲ್ಲಿ ಬಿಜೆಪಿಯ ಸ್ವಂತ ಸಂಖ್ಯೆ 23 ರಿಂದ 2024 ರಲ್ಲಿ ಕೇವಲ 9 ಕ್ಕೆ ಇಳಿದಿದ್ದರಿಂದ ಸೋಲಿನ ಸಂಪೂರ್ಣ ಜವಾಬ್ದಾರಿ ಹೊತ್ತು ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆಗಲೂ ಹೈಕಮಾಂಡ್ ಒಪ್ಪಿರಲಿಲ್ಲ.