ಪಾಕ್ ದಾಳಿ ಹಿನ್ನೆಲೆ ವಿದ್ಯುತ್‌ ಸ್ಥಗಿತ; ರಾತ್ರಿಯಿಡೀ ಆತಂಕದಲ್ಲೇ ಕಳೆದ ಗಡಿ ನಿವಾಸಿಗಳು
x

ಪಂಜಾಬ್‌

ಪಾಕ್ ದಾಳಿ ಹಿನ್ನೆಲೆ ವಿದ್ಯುತ್‌ ಸ್ಥಗಿತ; ರಾತ್ರಿಯಿಡೀ ಆತಂಕದಲ್ಲೇ ಕಳೆದ ಗಡಿ ನಿವಾಸಿಗಳು

ಪಂಜಾಬ್, ಜಮ್ಮುಕಾಶ್ಮೀರ ಮತ್ತು ರಾಜಸ್ಥಾನದ ಹಲವು ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ನಡೆಸಿದ ಡ್ರೋಣ್‌ ಮತ್ತು ಕ್ಷಿಪಣಿ ದಾಳಿ ಹಿನ್ನೆಲೆ ಚಂಡೀಗಢದಲ್ಲಿ ಮಧ್ಯರಾತ್ರಿಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿತ್ತು.


ಭಾರತದ ಗಡಿ ಭಾಗಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ದಾಳಿ ಹಿನ್ನೆಲೆ ಪಂಜಾಬ್ ಮತ್ತು ಕಾಶ್ಮೀರ ಸೇರಿದಂತೆ ಗಡಿ ಪ್ರದೇಶಗಳಾಗಿರುವ ಅಮೃತಸರ, ಪಠಾಣ್‌ಕೋಟ್ ಮತ್ತು ಫಿರೋಜ್‌ಪುರದಲ್ಲಿ ಗುರುವಾರ ರಾತ್ರಿ ವಿದ್ಯುತ್‌ ಸ್ಥಗಿತಗೊಳಿಸಿದ್ದರಿಂದ ಜನರು ಆತಂಕದಲ್ಲಿಯೇ ರಾತ್ರಿ ಕಳೆಯಬೇಕಾಯಿತು.

ಜಮ್ಮು ಕಾಶ್ಮೀರ ಮತ್ತು ರಾಜಸ್ಥಾನದ ಕೆಲ ಭಾಗಗಳಲ್ಲಿ ಡ್ರೋಣ್‌ ದಾಳಿ ಬಳಿಕ ಕಾಶ್ಮೀರದ ಎಲ್ಲಾ ಜಿಲ್ಲೆಗಳಲ್ಲಿ ವಿದ್ಯುತ್ ಕಡಿತ ಮಾಡಲಾಯಿತು.

ಜಲಂಧರ್, ಗುರುದಾಸ್‌ಪುರ ಮತ್ತು ಹೋಶಿಯಾರ್‌ಪುರ ಜಿಲ್ಲೆಗಳಲ್ಲಿಯೂ ವಿದ್ಯುತ್ ಕಡಿತಗೊಳಿಸಲಾಯಿತು. ಪಂಜಾಬ್ ಮತ್ತು ಹರಿಯಾಣದ ರಾಜಧಾನಿ ಚಂಡೀಗಢದಲ್ಲಿ ಅಧಿಕಾರಿಗಳು ಮಧ್ಯರಾತ್ರಿಯವರೆಗೆ ಸುಮಾರು ಎರಡು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಿದ್ದರು.

ಡ್ರೋಣ್‌ ದಾಳಿ ವಿಫಲಗೊಳಿಸಿದ ಭಾರತ

ಜಮ್ಮು, ಪಠಾಣ್‌ಕೋಟ್ ಮತ್ತು ಉಧಾಮ್‌ಪುರ ಸೇರಿದಂತೆ ಮಿಲಿಟರಿ ನೆಲೆಗಳ ಮೇಲೆ ಡ್ರೋಣ್ ಮತ್ತು ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ ಪಾಕಿಸ್ತಾನದ ಪ್ರಯತ್ನವನ್ನು ಗುರುವಾರ ರಾತ್ರಿ ಭಾರತ ವಿಫಲಗೊಳಿಸಿದೆ. ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ 15 ನಗರಗಳಲ್ಲಿ ಮಿಲಿಟರಿ ನೆಲೆಗಳನ್ನು ಕ್ಷಿಪಣಿಗಳು ಮತ್ತು ಡ್ರೋಣ್‌ಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.

ಪಾಕಿಸ್ತಾನದ ದಾಳಿಯಿಂದ ಇದುವರೆಗೆ ಯಾವುದೇ ಸಾವು ನೋವು ಅಥವಾ ನಷ್ಟ ಸಂಭವಿಸಿಲ್ಲ. ಪಾಕಿಸ್ತಾನ ನಡೆಸಿದ ಎಲ್ಲಾ ದಾಳಿಗಳನ್ನು ʻತಟಸ್ಥʼಗೊಳಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಐಎಎಫ್‌ ತನ್ನ ಇಂಟಿಗ್ರೇಟೆಡ್ ಕೌಂಟರ್ UAS (ಮಾನವರಹಿತ ವೈಮಾನಿಕ ವ್ಯವಸ್ಥೆ) ಗ್ರಿಡ್ ಮತ್ತು S400 ಟ್ರಯಂಫ್, ಬರಾಕ್ 8 MRSAM (ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ) ಮತ್ತು ಸ್ಥಳೀಯ ಆಕಾಶ್ ಸೇರಿ ಇತರ ವಾಯುಪಡೆಯ ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸುವ ಮೂಲಕ ಎದುರಾಳಿಯ ಪ್ರಯತ್ನಗಳಿಗೆ ತಿರುಗೇಟು ನೀಡಿತು.

ಪಂಜಾಬ್‌ ಮೇಲೆ ದಾಳಿ ಪ್ರಯತ್ನ

ಗುರುವಾರ ರಾತ್ರಿ ಪಾಕಿಸ್ತಾನಿ ಸೇನೆಯು ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್‌ಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪ್ರಯತ್ನಿಸಿತು.

ಆಗ ಅಧಿಕಾರಿಗಳು ಜನರಿಗೆ ದೀಪಗಳನ್ನು ಆರಿಸಿ ಮನೆಯಲ್ಲಿಯೇ ಇರುವಂತೆ ಮನವಿ ಮಾಡಿದರು.

ಪಠಾಣ್‌ಕೋಟ್ ಉಪ ಆಯುಕ್ತ ಆದಿತ್ಯ ಉಪ್ಪಲ್ ಅವರು, ವಿದ್ಯುತ್ ಕಡಿತದ ಶಿಷ್ಟಾಚಾರ ಪಾಲಿಸುವಂತೆ ಸೂಚಿಸಿದರು. ನಾಗರಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮವಾಗಿ ರೂಪನಗರ, ಫಜಿಲ್ಕಾ, ಕಪುರ್ತಲಾ, ಲುಧಿಯಾನ, ಸಂಗ್ರೂರ್, ಬಟಿಂಡಾ, ಪಟಿಯಾಲ ಮತ್ತು ಹರಿಯಾಣದ ಪಂಚಕುಲಗಳಲ್ಲಿಯೂ ವಿದ್ಯುತ್ ಕಡಿತ ಮಾಡಲಾಯಿತು.

ಶಿಕ್ಷಣ ಸಂಸ್ಥೆಗಳಿಗೆ ರಜೆ

ಭಾರತ ಮತ್ತು ಪಾಕಿಸ್ತಾನ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ದಿನ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಪಂಜಾಬ್ ಸರ್ಕಾರ ಆದೇಶಿಸಿದೆ. ಚಂಡೀಗಢದಲ್ಲಿಯೂ ಅಧಿಕಾರಿಗಳು ಶನಿವಾರದವರೆಗೆ ಎಲ್ಲಾ ಶಾಲೆಗಳನ್ನು ಮುಚ್ಚಿಸಿದ್ದಾರೆ.

ಏ.22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ 'ಆಪರೇಷನ್ ಸಿಂದೂರ್' ಹೆಸರಿನಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಪಾಕಿಸ್ತಾನದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಪಾಕಿಸ್ತಾನ ಪ್ರತಿದಾಳಿ ಆರಂಭಿಸಿತ್ತು.

ಸೇನೆಯ ಬಗ್ಗೆ ಸ್ಥಳೀಯರಲ್ಲಿ ವಿಶ್ವಾಸ

ಗುರುವಾರ ರಾತ್ರಿ 8:30 ರ ಸುಮಾರಿಗೆ ನಿರ್ಬಂಧ ಹೇರಲಾಗಿದ್ದ ಗಡಿ ಪಟ್ಟಣದಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್‌ಗಳು ಸಕ್ರಿಯಗೊಂಡವು. ಈ ಬೆಳವಣಿಗೆಗಳ ಬಗ್ಗೆ ಆತಂಕವಿದ್ದರೂ, ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ಪ್ರಯತ್ನಗಳನ್ನು ತ್ವರಿತವಾಗಿ ವಿಫಲಗೊಳಿಸುತ್ತಿರುವುದರಿಂದ ಭಾರತೀಯ ಸಶಸ್ತ್ರ ಪಡೆಗಳಲ್ಲಿ ವಿಶ್ವಾಸ ಹೊಂದಿದ್ದೇವೆ ಎಂದು ಕೆಲವು ಸ್ಥಳೀಯರು ತಿಳಿಸಿದ್ದಾರೆ.

ಅಮೃತಸರ ಮತ್ತು ಫಿರೋಜ್‌ಪುರದ ಪ್ರಮುಖ ಗಡಿ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಿಗ್ಗೆ ಪರಿಸ್ಥಿತಿ ಸಹಜವಾಗಿತ್ತು. ಚಂಡೀಗಢದಲ್ಲಿ ಶುಕ್ರವಾರ ತನ್ನ ದಿನನಿತ್ಯದ ಬೆಳಗಿನ ನಡಿಗೆಗೆ ಹೋಗುತ್ತಿದ್ದ ವೃದ್ಧ ಬಲದೇವ್ ಚಂದ್, ಹಿಂದಿನ ರಾತ್ರಿ ಕೆಲವು ಆತಂಕದ ಕ್ಷಣಗಳು ಇದ್ದರೂ ಭಾರತೀಯ ಸೇನೆಯು ಭದ್ರತೆ ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಚಿಂತೆ ಮಾಡಲು ಏನೂ ಇಲ್ಲ ಎಂದು ಹೇಳಿದರು.

ಅಧಿಕಾರಿಗಳೊಂದಿಗೆ ಅಮಿತ್‌ ಶಾ ಮಾತುಕತೆ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಎಸ್‌ಎಸ್‌ಬಿ ಮಹಾನಿರ್ದೇಶಕರೊಂದಿಗೆ ಉದ್ವಿಗ್ನತೆ ಹಾಗೂ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು.

"ಗಡಿ ಸಂಪರ್ಕಿಸುವ ಪ್ರದೇಶಗಳ ಪರಿಸ್ಥಿತಿಯ ಮಾಹಿತಿ ಪಡೆಯಲಾಗಿದೆ. ಯಾವುದೇ ರೀತಿಯ ಸಂಭಾವ್ಯ ದಾಳಿಯನ್ನು ನಿಭಾಯಿಸಲು ಸ್ಥಳೀಯ ಪೊಲೀಸರು ಮತ್ತು ಆಡಳಿತದೊಂದಿಗೆ ಸಹಕರಿಸಲು ಸೂಚಿಸಿದ್ದಾರೆ. ವಿಮಾನ ನಿಲ್ದಾಣಗಳ ಪ್ರಸ್ತುತ ಸ್ಥಿತಿಯ ಕುರಿತು ಅಪ್‌ಡೇಟ್‌ ಪಡೆದಿದ್ದಾರೆʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Read More
Next Story