Missiles Fly, So Does Misinformation on Social Media
x

ಕ್ಷಿಪಣಿಗಿಂತಲೂ ವೇಗವಾಗಿ ಹಬ್ಬುತ್ತಿವೆ ಸುಳ್ಳು ಸುದ್ದಿಗಳು!

ಮೇ 8ರಂದು, ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) "ಪಾಕಿಸ್ತಾನ ಪ್ರಾಯೋಜಿತ ಪ್ರಚಾರ"ದ ವಿರುದ್ಧ ಎಚ್ಚರಿಕೆಯನ್ನು ಹೊರಡಿಸಿತು. "ಪ್ರತಿಯೊಂದು ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯ ಎಂದು ಹೇಳಿದೆ.


ಭಾರತೀಯ ಸೇನೆಯು ಮೇ 7ರ ರಾತ್ರಿ 'ಆಪರೇಷನ್ ಸಿಂದೂರ' ಹೆಸರಿನ ಕಾರ್ಯಾಚರಣೆಯನ್ನು ಆರಂಭಿಸಿದಾಗಿನಿಂದ ಸಾಮಾಜಿಕ ಜಾಲತಾಣಗಳು ತಪ್ಪು ಮಾಹಿತಿ ಮತ್ತು ದುರುದ್ದೇಶಪೂರಿತ ಸುಳ್ಳು ಸುದ್ದಿಗಳಿಂದಲೇ ತುಂಬಿ ತುಳುಕುತ್ತಿವೆ.

ಕಳೆದ ಎರಡು ದಿನಗಳಲ್ಲಿ, ತೀವ್ರ ರಾಷ್ಟ್ರೀಯವಾದಿ ಭಾವನೆಗಳು ಮತ್ತು ಪ್ರಸ್ತುತ ಘಟನೆಗಳ ಬಗೆಗಿನ ಅತ್ಯುತ್ಸಾಹದ ಕಾರಣದಿಂದಾಗಿ, ಪ್ರಸಾರ ಸಂಸ್ಥೆಗಳಷ್ಟೇ ಅಲ್ಲದೆ, ಗಡಿಯ ಎರಡೂ ಬದಿಗಳಲ್ಲಿರುವ ಸುದ್ದಿ ಮಾಧ್ಯಮಗಳು ಮತ್ತು ಸುದ್ದಿ ವರದಿಗಾರರೂ ಸಹ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಬಹುತೇಕ ಸುಳ್ಳುಗಳು ಎಕ್ಸ್​ ಎಂಬ ಜಾಲತಾಣದಲ್ಲಿ ನಡೆಯುತ್ತಿದ್ದು, ಸೈನಿಕ ಕಾರ್ಯಾಚರಣೆಗೆ ಸಂಬಂಧವಿಲ್ಲದ ದೃಶ್ಯಗಳು ಮತ್ತು ಛಾಯಾಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಅದನ್ನು ಲೈಕ್ ಮಾಡಲಾಗಿದೆ ಮತ್ತು ಮರು ಹಂಚಿಕೊಳ್ಳಲಾಗಿದೆ. ಇದರಿಂದ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯು ಮಸುಕಾಗಿವೆ.

"ಯಾವುದೇ ರಾಷ್ಟ್ರವು ಯುದ್ಧವನ್ನು ಒಳ್ಳೆಯದು ಎಂದು ಹೇಳುವುದಿಲ್ಲ. ಆದರೆ, ಪ್ರಸ್ತತ ಪರಿಸ್ಥಿತಿ ಹಿಂದಿನಂತಿಲ್ಲ. ಈ ಹಿಂದೆ ಉರಿ ಅಥವಾ ಪುಲ್ವಾಮಾ ದಾಳಿಗಳ ಸಂದರ್ಭಕ್ಕಿಂತ ಈಗ ನಾವು ಯುದ್ಧದಂತಹ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಏಕೆಂದರೆ, ಹಿಂದಿನ ಎರಡು ಘಟನೆಗಳಲ್ಲಿ ಸೈನಿಕರ ನೆಲೆಗಳ ಮೇಲೆ ದಾಳಿ ನಡೆದಿತ್ತು. ಈಗ ಮೊದಲ ಬಾರಿಗೆ ನಾಗರಿಕ ನೆಲೆಗಳ ಮೇಲೆ ದಾಳಿ ನಡೆದಿದೆ," ಎಂದು ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಪ್ರತೀಕ್ ಸಿನ್ಹಾ ಅವರು 'ದ ಫೆಡರಲ್' ಜತೆ ಮಾತನಾಡುತ್ತಾ ತಿಳಿಸಿದರು.

ಪತನಗೊಂಡ ವಿಮಾನಗಳ ನಕಲಿ ಚಿತ್ರಗಳು ಮತ್ತು ಪಾಕಿಸ್ತಾನಿ ಖಾತೆಗಳು

ಸತ್ಯ ಶೋಧಕರ ಪ್ರಕಾರ, ಮೇ 7ರಂದು ಹರಡಿದ ಬಹುತೇಕ ತಪ್ಪು ಮಾಹಿತಿಯು ಪಾಕಿಸ್ತಾನದ ಕಡೆಯಿಂದಲೇ ಆಗಿದೆ. ಪರಿಶೀಲನೆಗೊಂಡ ಮತ್ತು ಪರಿಶೀಲನೆಗೊಳ್ಳದ ಹಲವಾರು ಪಾಕಿಸ್ತಾನಿ ಸಾಮಾಜಿಕ ಜಾಲತಾಣ ಖಾತೆಗಳು, ಭಾರತಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂದು ಸಾಬೀತುಪಡಿಸಲು ಸುಳ್ಳು ಚಿತ್ರಗಳನ್ನು ಹರಡಿದ್ದವು.

ಇವುಗಳಲ್ಲಿ ಪಾಕಿಸ್ತಾನಿ ಸುದ್ದಿ ಸಂಸ್ಥೆಗಳಾದ ಎಆರ್‌ವೈ ನ್ಯೂಸ್ ಮತ್ತು ಪಾಕಿಸ್ತಾನ್ ಒಬ್ಸರ್ವರ್ ಸೇರಿದ್ದವು. ಇವುಗಳು ಹಳೆಯ ಚಿತ್ರಗಳನ್ನು ಪ್ರಕಟಿಸಿ, ಪಾಕಿಸ್ತಾನ ವಾಯುಪಡೆಯು ಭಾರತೀಯ ವಾಯುಪಡೆಯ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿದವು. ಎಆರ್‌ವೈ ನ್ಯೂಸ್ ಎರಡು ಚಿತ್ರಗಳನ್ನು "ಎಕ್ಸ್​ಕ್ಲೂಸಿವ್​" ಎಂದು ಪ್ರಕಟಿಸಿದರೆ, ಒಬ್ಸರ್ವರ್ ಐದು ಭಾರತೀಯ ವಿಮಾನಗಳನ್ನು ಉರುಳಿಸಲಾಗಿದೆ ಎಂದು ಬ್ರಹ್ಮಾಂಡ ಮಿಥ್ಯೆಯನ್ನು ಹೇಳಿತು. ಆಲ್ಟ್ ನ್ಯೂಸ್ ಈ ಹೇಳಿಕೆಗಳನ್ನು ನಿರಾಕರಿಸಿ, ಚಿತ್ರಗಳು ಹಳೆಯವು ಮತ್ತು ಪ್ರಸ್ತುತ ಘಟನೆಗೆ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿತು.

ಪರಿಶೀಲನೆಗೊಂಡ ಬ್ಲ್ಯೂ ಟಿಕ್ ಖಾತೆ ಹೊಂದಿರುವ ಪಾಕಿಸ್ತಾನಿ ವರದಿಗಾರ ಹಮೀದ್ ಮಿರ್ ಕೂಡ ಹಲವಾರು ತಪ್ಪು ಮಾಹಿತಿಗಳನ್ನು ಹರಡಿದ್ದಾರೆ. ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಇದನ್ನು ಖಂಡಿಸಿದ್ದಾರೆ. ಹಮೀದ್ ಮಿರ್, "ಪಾಕಿಸ್ತಾನ ವಾಯುಪಡೆ ಮತ್ತು ಭಾರತೀಯ ವಾಯುಪಡೆ ನಡುವಿನ ವಾಯು ಕದನದಲ್ಲಿ ಭಾರತ ಸೋತಿತು. ಪಾಕಿಸ್ತಾನ ವಾಯುಪಡೆಯು ಅಖ್ನೂರ್ ಪ್ರದೇಶದಲ್ಲಿ ಒಂದು ಭಾರತೀಯ ಯುದ್ಧ ವಿಮಾನವನ್ನು, ಬಠಿಂಡಾ ಬಳಿ ಒಂದು ವಿಮಾನವನ್ನು, ಮತ್ತು ಪುಲ್ವಾಮಾ ಬಳಿಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಸಮೀಪ ಒಂದು ಮಾನವರಹಿತ ವೈಮಾನಿಕ ವಾಹನವನ್ನು (ಯುಎವಿ) ನಾಶಪಡಿಸಿತು. ಭಾರತವು ನಾಗರಿಕರನ್ನು ಗುರಿಯಾಗಿಸಿತ್ತು. ಆದರೆ ಪಾಕಿಸ್ತಾನವು ಸೈನಿಕ ನೆಲೆಗಳನ್ನು ದಾಳಿ ಮಾಡಿತು," ಎಂದು ಬರೆದು 2021ರಲ್ಲಿ ಪಂಜಾಬ್‌ನಲ್ಲಿ ಪತನಗೊಂಡ ಮಿಗ್-21 ವಿಮಾನದ ಚಿತ್ರದೊಂದಿಗೆ ಟ್ವೀಟ್ ಮಾಡಿದರು.

ಸುಳ್ಳನ್ನು ಸ್ಥಾಪಿಸುವ ಅಗತ್ಯವೇನು?

ಹಮೀದ್ ಮಿರ್ ಅವರು ತೇಜಸ್ವಿ ಪ್ರಕಾಶ್ ಎಂಬ ಖಾತೆಯಿಂದ ಒಂದು ಪೋಸ್ಟ್ ಅನ್ನು ಪುನಃ ಟ್ವೀಟ್ ಮಾಡಿದ್ದರು. ಈ ಖಾತೆಯು ಕಾಂಗ್ರೆಸ್ ಬೆಂಬಲಿಗ ಎಂದು ಬಿಂಬಿಸಿಕೊಂಡಿದ್ದ ಪಾಕಿಸ್ತಾನದ ಖಾತೆಯಾಗಿತ್ತು ಮತ್ತು ಪಾಕಿಸ್ತಾನವು ಅಖ್ನೂರ್ ಬಳಿ ಒಂದು ರಫೇಲ್ ಮತ್ತು ಒಂದು ಸು-30 ವಿಮಾನವನ್ನು ಉರುಳಿಸಿದೆ ಎಂದು ಸುಳ್ಳು ಹೇಳಿಕೊಂಡಿತ್ತು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಇದನ್ನು ಸತ್ಯವೆಂದು ನಂಬಿ ಮರು ಪೋಸ್ಟ್ ಮಾಡಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದ್ದರು .

ಜುಬೈರ್ ಅವರು ಗುರುತಿಸಿದ ಎಂಟು ಪಾಕಿಸ್ತಾನಿ ಪ್ರಚಾರ ಖಾತೆಗಳಲ್ಲಿ ಪ್ರಕಾಶ್ ಎಂಬುವರ ಖಾತೆಯೂ ಒಂದಾಗಿತ್ತು. ಈ ಎಲ್ಲ ಅಕೌಂಟ್​ಗಳು ಭಾರತೀಯ ಸೇನೆಯ ಅಧಿಕೃತ ಖಾತೆಗಳಂತೆ ತೋರಿಕೊಳ್ಳುತ್ತಿದ್ದವು. ಮೇ 8 ರ ಸಂಜೆಯವರೆಗೆ, ಪ್ರಕಾಶ್ ಮತ್ತು ಮಿರ್ ಅವರ ಎಕ್ಸ್​ ಖಾತೆಗಳನ್ನು "ಕಾನೂನುಬದ್ಧ ಬೇಡಿಕೆಗೆ ಪ್ರತಿಕ್ರಿಯೆಯಾಗಿ" ನಿರ್ಬಂಧಿಸಲಾಗಿತ್ತು.

"ಇದು ಬದಲಾಗುತ್ತಿರುವ ಪರಿಸ್ಥಿತಿ. ನಿನ್ನೆಯ ಪ್ರವೃತ್ತಿಯು ಪಾಕಿಸ್ತಾನವು ಪರೋಕ್ಷ ಮಾರ್ಗಗಳ ಮೂಲಕ ಭಾರತಕ್ಕೆ ಉತ್ತರಿಸಿದೆ ಎಂದು ತೋರಿಸಲು ಪ್ರಯತ್ನಿಸುತ್ತಿತ್ತು. ತಮ್ಮ ಜನರಿಗೆ ಭಾರತಕ್ಕೆ ಪಾಠ ಕಲಿಸಿದೆವು ಎಂದು ತೋರಿಸಲು ಬಯಸಿದ್ದರಿಂದ, ಅವರ ಪ್ರತಿಕ್ರಿಯೆಯು ತಪ್ಪು ಮಾಹಿತಿ ಹರಡುವುದಾಗಿತ್ತು. ಇದೇ ಮೊದಲ ಬಾರಿಗೆ, ಭಾರತದಿಂದ ಬಂದ ತಪ್ಪು ಮಾಹಿತಿಗಿಂತ ಪಾಕಿಸ್ತಾನದಿಂದ ಹೆಚ್ಚಿನ ತಪ್ಪು ಮಾಹಿತಿಯನ್ನು ನಾವು ಎದುರಿಸುತ್ತಿದ್ದೇವೆ. ಸಾಮಾನ್ಯವಾಗಿ, ಭಾರತದಿಂದಲೇ ಹೆಚ್ಚಿನ ತಪ್ಪು ಮಾಹಿತಿಯು ಬರುತ್ತಿತ್ತು," ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. .

ಗಾಜಾ, ಟೆಕ್ಸಾಸ್‌ನ ಚಿತ್ರಗಳನ್ನು ಹಂಚಿಕೊಂಡ ಭಾರತೀಯರು

ಮೇ 7 ರ ರಾತ್ರಿಯ ಹೊತ್ತಿಗೆ, ಭಾರತದ ಕಡೆಯಿಂದಲೂ ತಪ್ಪು ಮಾಹಿತಿ ಹರಡಲು ಆರಂಭವಾಯಿತು. 'ಶೌರ್ಯ ಮಿಶ್ರಾ' ಎಂಬ ಬ್ಲ್ಯೂ ಟಿಕ್ ಖಾತೆ ಹೊಂದಿರುವವರು, ತಮ್ಮ ವಿವರದಲ್ಲಿ "ಬಿಜೆಪಿ" ಎಂದು ಬರೆದುಕೊಂಡಿರದ್ದರು. ಅವರು , 2024ರ ಮಾರ್ಚ್‌ನಲ್ಲಿ ಟೆಕ್ಸಾಸ್‌ನಲ್ಲಿ ನಡೆದ ಕಾಡ್ಗಿಚ್ಚಿನ ವಿಡಿಯೋವನ್ನು ಭಾರತದಿಂದ ಸಿಯಾಲ್ಕೋಟ್ ಮೇಲೆ ನಡೆಸಿದ ದಾಳಿಯ ವಿಡಿಯೋ ಎಂದು ಹಂಚಿಕೊಂಡರು. ಕೆಲವು ಗೇಮಿಂಗ್ ವಿಡಿಯೋಗಳ ಕ್ಲಿಪ್‌ಗಳನ್ನು ಹಂಚಿಕೋಂಡು, ಭಾರತೀಯ ಸೇನೆಯು ಪಾಕಿಸ್ತಾನಿ ವಿಮಾನಗಳನ್ನು ಹೊಡೆದುರುಳಿಸಿದವು ಎಂದು ಹೇಳಿದರು.

2021ರಲ್ಲಿ ಇಸ್ರೇಲಿ ವೈಮಾನಿಕ ದಾಳಿಗಳ ನಂತರ ಎಎಫ್‌ಪಿ ವರದಿಗಾರರು ಕ್ಲಿಕ್ಕಿಸಿದ ಗಾಜಾದ ಎರಡು ಹಳೆಯ ಚಿತ್ರಗಳನ್ನು ಕೆಲವು ಪ್ರಚಾರ ಖಾತೆಗಳು ಹಂಚಿಕೊಂಡವು. ಇವುಗಳಲ್ಲಿ ಒಂದು 'ದಿ ಜೈಪುರ್ ಡೈಲಾಗ್ಸ್'. ಇದು ತಪ್ಪು ಮಾಹಿತಿ ಹರಡುವಲ್ಲಿ ಹೆಸರುವಾಸಿಯಾದ ಬಲಪಂಥೀಯ ಪ್ರಚಾರ ಖಾತೆಯಾಗಿದೆ. ಇದು "ಸಿಯಾಲ್​​ಕೋಟ್‌ನಲ್ಲಿ ಸೂರ್ಯೋದಯ" ಎಂಬ ಶೀರ್ಷಿಕೆಯೊಂದಿಗೆ ರಾತ್ರಿ 11:35 ಕ್ಕೆ ಚಿತ್ರ ಹಂಚಿಕೊಂಡಿತು.

ಜನಾರ್ದನ್ ಮಿಶ್ರಾ ಎಂಬ ಮತ್ತೊಬ್ಬರು, ಗಾಜಾದಲ್ಲಿ ಜನರು ಓಡಾಡುತ್ತಿರುವ ವಿಡಿಯೋವನ್ನು "ಆಪರೇಷನ್ ಸಿಂದೂರ"ದಿಂದ ಎಂದು ಹೇಳಿ ಹಂಚಿಕೊಂಡರು. ಆಲ್ಟ್ ನ್ಯೂಸ್ ಸತ್ಯ-ಶೋಧನೆಯಲ್ಲಿ ಇದು ಗಾಜಾದಿಂದ ಬಂದಿರುವುದು ದೃಢಪಟ್ಟಿತು. ಆದರೂ, ಈ ಪೋಸ್ಟ್ ಅನ್ನು ಇನ್ನೂ ತೆಗೆದುಹಾಕಲಾಗಿಲ್ಲ ಮತ್ತು ಇದು 888 ಸಾವಿರ ವೀಕ್ಷಣೆ ಮತ್ತು 9.9k ಲೈಕ್‌ಗಳನ್ನು ಪಡೆದಿದೆ.

ಮಾಧ್ಯಮ ಸಂಸ್ಥೆಗಳಿಂದಲೂ ತಪ್ಪು

ಅತ್ಯಂತ ಕಳವಳಕಾರಿ ವಿಷಯವೆಂದರೆ ಮುಖ್ಯವಾಹಿನಿ ಮಾಧ್ಯಮಗಳ ಪಾತ್ರ. ಎಬಿಪಿ, ಝೀ ನ್ಯೂಸ್, ಮತ್ತು ಆಜ್ ತಕ್ ನಂತಹ ಸುದ್ದಿ ವಾಹಿನಿಗಳು 2023ರಲ್ಲಿ ಗಾಜಾದ ಮೇಲೆ ನಡೆದ ಇಸ್ರೇಲಿ ವೈಮಾನಿಕ ದಾಳಿಗಳ ದೃಶ್ಯಾವಳಿಗಳನ್ನು ಈಗಿನ 'ಆಪರೇಷನ್ ಸಿಂದೂರ'ದ ಲೈವ್ ದೃಶ್ಯಗಳೆಂದು ಪ್ರಸಾರ ಮಾಡಿದವು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಈ ವೀಡಿಯೋಗಳು ಇನ್ನೂ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಲಭ್ಯವಿವೆ ಎನ್ನಲಾಗಿದೆ.

ಟಿವಿ9 ನೆಟ್‌ವರ್ಕ್‌ನ ವರದಿಗಾರ ಆದಿತ್ಯ ರಾಜ್ ಕೌಲ್ ಟ್ವೀಟ್ ಮಾಡಿ "#BREAKING: ಪಾಕಿಸ್ತಾನ ಸೇನೆಯು ಭಾರತದ ದಾಳಿಯನ್ನು ದೃಢೀಕರಿಸಿದೆ. ಭಾರತವು ಪಾಕಿಸ್ತಾನದ ಮೇಲೆ ದಾಳಿ ನಡೆಸಿದೆ. ಕೊಟ್ಲಿ, ಮುಜಾಫರಾಬಾದ್, ಮತ್ತು ಬಹಾವಲ್ಪುರ್‌ನಲ್ಲಿ ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಪಾಕಿಸ್ತಾನ ಸೇನೆಯ ಮಾಹಿತಿ ವಿಭಾಗದ ಮುಖ್ಯಸ್ಥರು (ಡಿಜಿ ಐಎಸ್‌ಪಿಆರ್) ಪಾಕಿಸ್ತಾನಿ ವರದಿಗಾರರಿಗೆ ದೃಢೀಕರಿಸಿದ್ದಾರೆ. ಭಾರತವು ಭಯೋತ್ಪಾದಕ ರಾಷ್ಟ್ರ ಪಾಕಿಸ್ತಾನದ ಬೆನ್ನತ್ತಿದೆ." ಎಂದು ಬರೆದುಕೊಂಡು ಹಳೆಯ ಗಾಜಾ ವಿಡಿಯೋವನ್ನು ಅಪ್​ಲೋಡ್ ಮಾಡಿದ್ದರು.

ಮೇ 8 ರ ಸಂಜೆಯ ವೇಳೆಗೆ ಎಕ್ಸ್​​ ಈ ಪೋಸ್ಟ್‌ಗೆ "ಈ ಮಾಧ್ಯಮವನ್ನು ಹೊರತುಪಡಿಸಿದ ಮಾಹಿತಿ " ಎಂದು ಲೇಬಲ್ ಹಾಕಿತು. "ಭಾರತದ ದಾಳಿಯು ನಿಜವಾದರೂ, ಈ ನಿರ್ದಿಷ್ಟ ವಿಡಿಯೋ ಗಾಜಾದ ಹಳೆಯ ವಿಡಿಯೋ ಆಗಿದೆ." ಆದರೂ, ಈ ಟ್ವೀಟ್ ಅನ್ನು ಇನ್ನೂ ತೆಗೆದುಹಾಕಲಾಗಿಲ್ಲ. ಮೇ7 ರ ರಾತ್ರಿ, ಇದೇ ವರದಿಗಾರ ಸಿಯಾಲ್​ಕೋಟ್​ನಲ್ಲಿ ಸೈರನ್‌ಗಳು ಮೊಳಗುವ ವಿಡಿಯೋವನ್ನು ರಾತ್ರಿ 11:40 ಕ್ಕೆ ಪೋಸ್ಟ್ ಮಾಡಿದರು. ನಂತರ ಅವರು "ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್‌ ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿಯ (ಐಬಿ) ಉದ್ದಕ್ಕೂ ಭಾರೀ ವೈಮಾನಿಕ ಚಟುವಟಿಕೆ" ಎಂದು ರಾತ್ರಿ 11:59 ಕ್ಕೆ ಪೋಸ್ಟ್ ಮಾಡಿದರು. ಅಂತಿಮವಾಗಿ "ಮಧ್ಯರಾತ್ರಿ ಮಾಹಿತಿ: ಎಲ್ಲಿಯೂ ಯಾವುದೇ ದಾಳಿಗಳು ಅಥವಾ ಕ್ಷಿಪಣಿಗಳನ್ನು ಉಡಾಯಿಸಿರುವ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಯಾವುದೇ ವದಂತಿಗಳನ್ನು ನಂಬಬೇಡಿ" ಎಂದು ಪೋಸ್ಟ್ ಮಾಡಿದರು!

ಗುಂಡಿನ ದಾಳಿಯ ಬಲಿಪಶುಗೆ ಭಯೋತ್ಪಾಕ ಪಟ್ಟ

ಮೇ 8ರಂದು, ಭಾರತ ಸರ್ಕಾರದ ಪತ್ರಿಕಾ ಮಾಹಿತಿ ಬ್ಯೂರೋ (PIB) "ಪಾಕಿಸ್ತಾನ ಪ್ರಾಯೋಜಿತ ಪ್ರಚಾರ"ದ ವಿರುದ್ಧ ಎಚ್ಚರಿಕೆಯನ್ನು ಹೊರಡಿಸಿತು. "ಪ್ರತಿಯೊಂದು ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಮುಖ್ಯವಾಗಿದೆ. ಭಾರತೀಯ ಸೇನೆಗೆ ಸಂಬಂಧಿಸಿದ ಅಥವಾ ಈಗಿನ ಪರಿಸ್ಥಿತಿಗೆ ಸಂಬಂಧಿಸಿದ ಯಾವುದೇ ಅನುಮಾನಾಸ್ಪದ ವಿಷಯವನ್ನು ಎದುರಿಸಿದರೆ, ಅದನ್ನು #PIBFactCheck ವಿಭಾಗಕ್ಕೆ ವರದಿ ಮಾಡಿ" ಎಂದು ಅದು ಮನವಿ ಮಾಡಿತು.

ತಪ್ಪು ಮಾಹಿತಿಯು ಈಗ ಅತಿರಂಜಿತವಾಗಿದೆ. ಮೇ 8ರಂದು, ಝೀ ನ್ಯೂಸ್, ರಿಪಬ್ಲಿಕ್ ಭಾರತ್, ಮತ್ತು ನ್ಯೂಸ್18 ನಂತಹ ಭಾರತೀಯ ಸುದ್ದಿ ವಾಹಿನಿಗಳು ಒಬ್ಬ ವ್ಯಕ್ತಿಯ ಫೋಟೋವನ್ನು ಪ್ರಕಟಿಸಿ ಅವರನ್ನು "ಭಯೋತ್ಪಾದಕ" ಎಂದು ಬಿಂಬಿಸಿದವು. ಆದರೆ, ಸತ್ಯ-ಶೋಧಕ ಜುಬೈರ್ ಪ್ರಕಾರ, ಅವರು ಪೂಂಚ್‌ನಲ್ಲಿ ಪಾಕಿಸ್ತಾನದ ಗುಂಡಿನ ದಾಳಿಗೆ ಬಲಿಯಾದ ನಾಗರಿಕ. "ಇದು ಭಾರತೀಯ ಸುದ್ದಿ ವಾಹಿನಿಗಳಿಂದ ನಾಚಿಕೆಗೇಡಿನ ಕೃತ್ಯ. ಭಾರತದ ಪೂಂಚ್‌ನ ಖ್ವಾರಿ ಮೊಹಮ್ಮದ್ ಇಕ್ಬಾಲ್ ಅವರನ್ನು ರಾಷ್ಟ್ರೀಯ ಭಾರತೀಯ ಸುದ್ದಿ ವಾಹಿನಿಗಳಲ್ಲಿ 'ಭಯೋತ್ಪಾದಕ' ಎಂದು ಚಿತ್ರಿಸಲಾಗಿದೆ," ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದರು.

ಸುಳ್ಳು ಸುದ್ದಿಗಳಿಗೆ ಫಲವತ್ತಾದ ನೆಲ

ಸದ್ಯಕ್ಕೆ ಪರಿಸ್ಥಿತಿ ತಿಳಿಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ, ಸಾಮಾಜಿಕ ಮಾಧ್ಯಮವು ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿ ಬೆಳೆಸಲು ಫಲವತ್ತಾದ ನೆಲೆಯಾಗಿದೆ.

ಇದನ್ನು ಎದುರಿಸಲು, ಇಂಟರ್ನೆಟ್ ಫ್ರೀಡಂ ಫೌಂಡೇಶನ್‌ನ ಮಾಜಿ ನಿರ್ದೇಶಕ ಪ್ರತೀಕ್ ವಾಘಮಾರೆ ಕೆಲವು ಸಲಹೆಗಳನ್ನು ನೀಡಿದ್ದಾರೆ. "ಸಂಘರ್ಷದ ಸಮಯದಲ್ಲಿ, ಎಲ್ಲರನ್ನೂ 'ವಿಶ್ವಾಸಾರ್ಹವಲ್ಲದವರು' ಎಂದು ಪರಿಗಣಿಸುವುದು ಉತ್ತಮ ಎಂದು ಹೇಳಿದ್ದಾರೆ.

Read More
Next Story