ಅಸಹಿಷ್ಣುತೆ ವಾತಾವರಣದಲ್ಲಿ ʼಸೌಹಾರ್ದʼ ಪದಕ್ಕಾಗಿ ಎರಡು ಮಠಗಳ ಮೇಲಾಟ
x
ದಿಂಗಾಲೇಶ್ವರ ಸ್ವಾಮೀಜಿ(ಎಡ ಚಿತ್ರ), ಸಿದ್ದರಾಮ ಸ್ವಾಮೀಜಿ (ಬಲ ಚಿತ್ರ)

ಅಸಹಿಷ್ಣುತೆ ವಾತಾವರಣದಲ್ಲಿ ʼಸೌಹಾರ್ದʼ ಪದಕ್ಕಾಗಿ ಎರಡು ಮಠಗಳ ಮೇಲಾಟ


ಕರ್ನಾಟಕದಲ್ಲಿ ಧಾರ್ಮಿಕ ಸೌಹಾರ್ದದ ಚಾಂಪಿಯನ್ ಎಂದು ಕರೆಯಲ್ಪಡುವ ಎರಡು ಪ್ರಮುಖ ಧಾರ್ಮಿಕ ಸಂಸ್ಥೆಗಳ ನಡುವೆ ಅನಪೇಕ್ಷಿತ ಮತ್ತು ಅನಿರೀಕ್ಷಿತ ವಿವಾದ ಭುಗಿಲೆದ್ದಿದೆ. ವಿಪರ್ಯಾಸವೆಂದರೆ, 'ಸಾಮರಸ್ಯ' ಎಂಬ ಪದ ಈ ತೊಂದರೆಗೆ ಕಾರಣವಾಗಿರು ವುದು. ಧಾರ್ಮಿಕ ಸೌಹಾರ್ದವನ್ನು ಸಂಭ್ರಮಿಸಲು ನಡೆದ ಕಾರ್ಯಕ್ರಮದಲ್ಲಿನ ಮಾತುಗಳಿಂದ ಆರಂಭವಾದ ಜಗಳ, ಕ್ರಮೇಣ ಹದ ಗೆಟ್ಟು 17,000 ಜನಸಂಖ್ಯೆಯ ಪಟ್ಟಣ ಶಿರಹಟ್ಟಿಯಲ್ಲಿ ಕರ್ಫ್ಯೂ ಹೇರುವಷ್ಟು ಗಂಭೀರವಾಯಿತು. ಮತ್ತು, ಇಡೀ ದಿನ ಸ್ವಾಮಿಗಳ ಲ್ಲೊಬ್ಬರು ಮಠದಿಂದ ಹೊರಗೆ ಕಾಲಿಡದಂತೆ ತಡೆಯಿತು.

ಸಮನ್ವಯತೆಯ ಎರಡು ಮಠಗಳು: ವಿವಾದದ ಒಂದು ಕಡೆಯಲ್ಲಿ ಫಕೀರೇಶ್ವರ ಮಠವಿದೆ. ಶಿರಹಟ್ಟಿಯಲ್ಲಿರುವ ಮಠದ ಆವರಣದಲ್ಲಿ ದೇವಾಲಯ ಮತ್ತು ಮಸೀದಿ ಎರಡೂ ಇವೆ. ಕೇಸರಿ ಮತ್ತು ಹಸಿರು ಧ್ವಜಗಳು ಒಟ್ಟಿಗೆ ಹಾರಾಡುತ್ತವೆ; ಫಕೀರ ಹಾಗೂ ಈಶ್ವರ ಎರಡೂ ಹೆಸರು ಒಳಗೊಂಡಿರುವ ಮಠ ಮುಸ್ಲಿಂ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳನ್ನು ಗೌರವಿಸುತ್ತದೆ. ಮಠ 50 ಕ್ಕೂ ಹೆಚ್ಚು ದೇವಾಲಯಗಳು ಮತ್ತು 5 ದರ್ಗಾಗಳನ್ನು ನಿರ್ವಹಿಸುತ್ತದೆ. ಪ್ರತಿದಿನ ಸಾವಿರಾರು ಹಿಂದೂ ಮತ್ತು ಮುಸ್ಲಿಂ ಭಕ್ತರು ಆಗಮಿಸುತ್ತಾರೆ. ಮಠದ ಮುಖ್ಯಸ್ಥರಾದ ಸ್ವಾಮೀಜಿ, ಕೇಸರಿ ಪೇಟ, ಹಸಿರು ಶಾಲು ಮತ್ತು ಬಿಳಿ ಅಂಗಿ ಧರಿಸುತ್ತಾರೆ.

ವಿವಾದದ ಇನ್ನೊಂದು ಬದಿಯಲ್ಲಿರುವುದು ಸುಮಾರು 28 ಕಿಮೀ ದೂರದಲ್ಲಿರುವ ಗದಗದ ತೋಂಟದಾರ್ಯ ಮಠ. ತೋಂಟದಾರ್ಯ ಸ್ವಾಮೀಜಿ ತಲೆಮಾರುಗಳಿಂದ ಉದಾರವಾದಿ ಲಿಂಗಾಯತ ಸಂಪ್ರದಾಯವನ್ನು ಅನುಸರಿಸಿದ್ದಾರೆ ಮತ್ತು ಎಲ್ಲಾ ಧರ್ಮಗಳ ಜನರನ್ನು ಬೆಂಬಲಿಸಿದ್ದಾರೆ. ಕೆಲವೊಮ್ಮೆಸ್ಥಳೀಯರ ವಿರೋಧ ಎದುರಿಸಿ, ಮಸೀದಿಗಳಿಗೆ ಭೂಮಿ ದಾನ ಮಾಡಿದ್ದಾರೆ; ಧಾರ್ಮಿಕ ಸಮಿತಿಗಳಿಗೆ ಮುಖ್ಯಸ್ಥರಾಗಿ ಮುಸ್ಲಿಮರನ್ನು ನೇಮಿಸಿದ್ದಾರೆ. ಇತ್ತೀಚೆಗೆ ಹಾಲಿ ಮಠಾಧೀಶರಾದ ಸಿದ್ದರಾಮ ಸ್ವಾಮೀಜಿ ಮಠ ಆಯೋಜಿಸುವ ಜಾತ್ರೆ ಯಿಂದ ಮುಸ್ಲಿಮರನ್ನು ದೂರವಿಡಲು ಬಯಸಿದ ಬಲಪಂಥೀಯ ಹಿಂದುತ್ವದ ಸಂಘಟನೆಗಳ ವಿರುದ್ಧ ನಿಂತರು.

ಸಾಮರಸ್ಯ ದಿನದಿಂದ ಸಂಘರ್ಷ ಆರಂಭ: ತೋಂಟದಾರ್ಯ ಮಠವು 2018ರಲ್ಲಿ ಅಗಲಿದ ಸಿದ್ದಲಿಂಗ ಸ್ವಾಮೀಜಿ ಅವರ 75ನೇ ಜನ್ಮದಿನಾಚರಣೆಯ ಆಮಂತ್ರಣ ಪತ್ರಿಕೆಯನ್ನು ಫೆಬ್ರವರಿ ಆರಂಭದಲ್ಲಿ ಮುದ್ರಿಸಿದಾಗ, ಉಭಯ ಮಠಗಳ ನಡುವೆ ವಾಗ್ವಾದ ಆರಂಭವಾಯಿತು. ಭಾವೈಕ್ಯದ ಹರಿಕಾರ ಎಂದು ವರ್ಣಿಸ ಲಾದ ಸಿದ್ದಲಿಂಗ ಸ್ವಾಮಿಗಳಿಗೆ ಗೌರವ ಸಲ್ಲಿಸಲು ಕಾರ್ಯಕ್ರಮದೊಂದಿಗೆ ಫೆಬ್ರವರಿ 21ರಂದು 'ಸಾಮರಸ್ಯ ದಿನ' ಆಚರಿಸಲಾಗುವುದು ಎಂದು ಆಮಂತ್ರಣ ಪತ್ರದಲ್ಲಿ ಇತ್ತು. ಫಕೀರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿ ಪತ್ರಿಕಾಗೋಷ್ಠಿ ನಡೆಸಿ, ತೋಂಟದಾರ್ಯ ಮಠದವರು ‘ಸಾಮರಸ್ಯ’ ಪದ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಪದ 500 ವರ್ಷಗಳಿಂದ ಸರ್ವಧರ್ಮ ಆರಾಧನೆಯನ್ನು ಉತ್ತೇಜಿಸುತ್ತಿರುವ ಫಕೀರೇಶ್ವರ ಮಠಕ್ಕೆ ಸೇರುತ್ತದೆ ಎಂದು ಹೇಳಿದರು.

ʻನಮ್ಮಲ್ಲಿ ಗೋಪುರ ಮತ್ತು ಮಿನಾರ್ ಇದೆ. ಹಸಿರು ಮತ್ತು ಕೇಸರಿ ಧ್ವಜಗಳನ್ನು ಹಾರಿಸುತ್ತೇವೆ ಮತ್ತು ಎಲ್ಲಾ ಧರ್ಮದ ಜನ ನಮ್ಮ ಬಳಿಗೆ ಬರುತ್ತಾರೆ. ಮಾತು, ನಡೆ, ನೋಟದಲ್ಲಿ ತೋಂಟದಾರ್ಯ ಮಠಕ್ಕಿಂತ ಹೆಚ್ಚು ಮುಕ್ತವಾಗಿದ್ದೇವೆʼ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತೋಂಟದಾರ್ಯ ಮಠ ವಿರಕ್ತ ಮಠ, ʻಸಿದ್ದಲಿಂಗ ಸ್ವಾಮೀಜಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ವಹಿಸಿದ್ದರು ಮತ್ತು ಲಿಂಗಾಯತ ಮತ್ತು ವೀರಶೈವರನ್ನು ಒಡೆಯಲು ಪ್ರಯತ್ನಿಸಿದರು. ಅವರನ್ನು ಸೌಹಾರ್ದದ ರಾಯಭಾರಿ ಎಂದು ಕರೆಯುವುದು ಸರಿ ಯಲ್ಲ,ʼ ಎಂದು ವಾದಿಸಿದರು. ಇಷ್ಟಲ್ಲದೆ, ಸಿದ್ದಲಿಂಗ ಸ್ವಾಮೀಜಿ ಗೌರವಾರ್ಥವಾಗಿ ಫೆಬ್ರವರಿ 21 ಅನ್ನು 'ಸಾಮರಸ್ಯ ದಿನ' ವೆಂದು ಘೋಷಿ ಸಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತಡೆದಿದ್ದೆ ಎಂದು ದಿಂಗಾಲೇಶ್ವರ ಸ್ವಾಮಿ ಹೇಳಿಕೊಂಡರು.

2024ರ ಜನವರಿಯಲ್ಲಿ ಫಕೀರೇಶ್ವರ ಮಠವು ಸಿದ್ದರಾಮ ಸ್ವಾಮಿಗಳ 75ನೇ ಜನ್ಮದಿನಾಚರಣೆಗೆ ಸಿದ್ಧತೆ ಆರಂಭಿಸಿತು. ಫೆಬ್ರವರಿ 1 ರಂದು ಹುಬ್ಬಳ್ಳಿಯಲ್ಲಿ ಆನೆ, ಕುದುರೆ ಮತ್ತು ಒಂಟೆಗಳೊಂದಿಗೆ 'ಭಾವೈಕ್ಯತೆ ರಥ ಯಾತ್ರೆ'ಯನ್ನು ನಡೆಸಲಾಯಿತು.

ಸಾಮರಸ್ಯದ ಉತ್ತೇಜನಕ್ಕೆ ಪೇಟೆಂಟ್ ಬೇಕಿಲ್ಲ: ತೋಂಟದಾರ್ಯ ಮಠದ ಮುಖ್ಯಸ್ಥರಾದ ಸಿದ್ದರಾಮ ಸ್ವಾಮೀಜಿ ಮಾಧ್ಯಮಗಳೊಂದಿಗೆ ಮಾತನಾಡಿ, ಸೌಹಾರ್ದ ಬೆಳೆಸಲು ಪೇಟೆಂಟ್ ಅಗತ್ಯವಿಲ್ಲ ಎಂದರು. ʻಸಮಾಜಕ್ಕೆ ಶಾಂತಿ ಮತ್ತು ಸಹಿಷ್ಣುತೆ ಅಗತ್ಯವಿರುವುದರಿಂದ, ಇಡೀ ದೇಶ ಅದನ್ನು ಉತ್ತೇಜಿಸಬೇಕು. ಇದು ಯಾವುದೇ ವ್ಯಕ್ತಿ ಅಥವಾ ಮಠಕ್ಕೆ ಸೀಮಿತವಾಗಬಾರದುʼ ಎಂದರು. ತೋಂಟದಾರ್ಯ ಮಠದ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ʻಸಂಸ್ಥೆ ಬಸವಣ್ಣನವರ ಉದಾರವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ತತ್ವಕ್ಕೆ ಬದ್ಧವಾಗಿದೆ. 17ನೇ ಮುಖ್ಯಸ್ಥರಾದ ಸಿದ್ದೇಶ್ವರ ಮಹಾಸ್ವಾಮೀಜಿ (1881-1924) ಮಸೀದಿ ನಿರ್ಮಿಸಲು ಭೂಮಿ ದಾನ ಮಾಡಿದ್ದರುʼ ಎಂದು ಹೇಳಿದರು. ಸ್ವಾಮೀಜಿಯನ್ನು ಹೊಗಳಿ, ಸೈಯದ್ ಘೌಸ್ ಎಂಬ ಸೂಫಿ ಕವಿ ಉರ್ದು ಮತ್ತು ಕನ್ನಡದಲ್ಲಿ ದ್ವಿಭಾಷಾ ಸ್ತೋತ್ರವನ್ನು ಬರೆದಿದ್ದರು.ʻಇದು ನಮ್ಮ ಇತಿಹಾಸದ ಒಂದು ಸಣ್ಣ ತುಣುಕುʼ ಎಂದು ಹೇಳಿದರು.

ಸಿದ್ದಲಿಂಗ ಸ್ವಾಮೀಜಿ ಕನ್ನಡ, ಪರಿಸರ ಮತ್ತು ಜನಪರ ಹೋರಾಟಗಳನ್ನು ಬೆಂಬಲಿಸಿದ ಪ್ರಗತಿಪರ ಧಾರ್ಮಿಕ ನಾಯಕ ಎಂದು ಗುರುತಿಸಿ ಕೊಂಡಿದ್ದಾರೆ. ದಲಿತರು ಮತ್ತು ಅಲ್ಪಸಂಖ್ಯಾತರೊಂದಿಗೆ ಕೆಲಸ ಮಾಡಿದ್ದು, ರಾಷ್ಟ್ರೀಯ ಏಕೀಕರಣ ಮತ್ತು ಕೋಮು ಸೌಹಾರ್ದಕ್ಕಾಗಿ ಕೇಂದ್ರ ಸರ್ಕಾರದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ತೀವ್ರಗೊಂಡ ವಿವಾದ: ತೋಂಟದಾರ್ಯ ಮಠ ಹಿಂದೆ ಸರಿಯಲು ನಿರಾಕರಿಸಿದ್ದರಿಂದ, ವಿವಾದ ಉಲ್ಬಣಗೊಂಡಿತು ಮತ್ತು ದಿಂಗಾಲೇಶ್ವರ ಸ್ವಾಮೀಜಿ ಫೆಬ್ರವರಿ 21 ಅನ್ನು ಕರಾಳ ದಿನವನ್ನಾಗಿ ಆಚರಿಸಲು ತಮ್ಮ ಅನುಯಾಯಿಗಳಿಗೆ ಕರೆ ನೀಡಿದರು. ಗದಗದಲ್ಲಿ ಪ್ರತಿ ಮೆರವಣಿಗೆ ಆಯೋಜಿಸಿದರು. ಪೊಲೀಸರು 144 ಸೆಕ್ಷನ್ ವಿಧಿಸಿ, ಫಕೀರೇಶ್ವರ ಮಠದ ದ್ವಾರಗಳನ್ನು ಮುಚ್ಚಿ ಯಾರೂ ಹೊರಗೆ ಕಾಲಿಡದಂತೆ ತಡೆದರು.

ಕರ್ನಾಟಕದ ಸೂಫಿಗಳ ಕುರಿತು ಪುಸ್ತಕ ಬರೆದಿರುವ ಲೇಖಕ ರಹಮತ್ ತರೀಕೆರೆ, ʻಸಂಘ ಪರಿವಾರವನ್ನು ಓಲೈಸಲು ಬಹುತೇಕ ಧಾರ್ಮಿಕ ಸಂಸ್ಥೆಗಳು ತೀವ್ರಗಾಮಿ ನಿಲುವಿಗೆ ಪಕ್ಕಾಗುತ್ತಿರುವಾಗ, ಈ ಪ್ರಕರಣದಲ್ಲಿ ವ್ಯತಿರಿಕ್ತವಾಗಿ ನಡೆಯುತ್ತಿದೆʼ ಎನ್ನುತ್ತಾರೆ. ʻಕರ್ನಾಟಕದಲ್ಲಿ ಶತಮಾನಗಳಿಂದ ವಿಕಸನಗೊಂಡ ಜನಪ್ರಿಯ ಸಮನ್ವಯ ಸಂಪ್ರದಾಯದ ಉತ್ತರಾಧಿಕಾರಿತ್ವಕ್ಕೆ ಈ ಎರಡು ಮಠಗಳು ಜಗಳವಾಡುವುದನ್ನು ನೋಡುವುದು ಹರ್ಷದಾಯಕ ಸಂಗತಿʼ ಎಂದರು.

ಉತ್ತರ ಕರ್ನಾಟಕದ ಇತಿಹಾಸ- ಸಮ ಸಮಾಜ ನಿರ್ಮಾಣ: ಉತ್ತರ ಕರ್ನಾಟಕವು ಧಾರ್ಮಿಕ ನಂಬಿಕೆಗಳ ಮಿಶ್ರಣದ ಕೇಂದ್ರವಾಗಿರುವ ಇತಿಹಾಸವನ್ನು ಹೊಂದಿದೆ. 12 ನೇ ಶತಮಾನದಲ್ಲಿ ಉತ್ತರ ಕರ್ನಾಟಕದಲ್ಲಿ ಸಮ ಸಮಾಜದ ನಿರ್ಮಾಣದ ಆಶಯವಿದ್ದ ಚಳವಳಿ ನಡೆಯಿತು. ಬಹಮನಿ ಮತ್ತು ಆದಿಲ್ ಶಾಹಿ ಸಾಮ್ರಾಜ್ಯಗಳ ಉದಯದೊಂದಿಗೆ ಸೂಫಿಗಳು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಗೊಂಡರು. ವಿಭಿನ್ನ ಧಾರ್ಮಿಕ ನಂಬಿಕೆಗಳು ಮತ್ತು ಆಚರಣೆಗಳನ್ನು ಒಟ್ಟಿಗೆ ನೇಯ್ಗೆ ಮಾಡುವ ಸಾಮಾಜಿಕ ಮಂಥನ ನಡೆಯಿತು.

ʻಸಾಮಾನ್ಯ ನೆಲೆಯನ್ನು ಹಂಚಿಕೊಂಡಿದ್ದ ಸೂಫಿಗಳು ಮತ್ತು ಶರಣರು ಒಟ್ಟಿಗೆ ಸೇರಿದರು. ಇಂದ್ರಿಯಾತೀತ ಪ್ರೀತಿಯನ್ನು ಅನುಸರಿಸಿದ ಅವರು, ಆಸಕ್ತಿ ತೋರಿದ ಎಲ್ಲರಿಗೂ ದೀಕ್ಷೆ ನೀಡಿದರು; ಗುರುವಿನ ಪಾತ್ರಕ್ಕೆ ಒತ್ತು ನೀಡಿದರು ಮತ್ತು ಧರ್ಮದ ಉದಾರವಾದಿ ಓದನ್ನು ಉತ್ತೇಜಿಸಿದರು,ʼ ಎಂದು ತರೀಕೆರೆ ಹೇಳಿದರು. ಈ ಪ್ರದೇಶದಲ್ಲಿ ಇನ್ನಿತರ ವಿಭಿನ್ನ ಸಂಪ್ರದಾಯಗಳೂ ಹೆಚ್ಚಿದವು. ಹುಬ್ಬಳ್ಳಿಯ ಆರೂಡ ಪಂಥದ ಸಿದ್ದಾರೂಡ ಸ್ವಾಮೀಜಿ, ಕಬೀರ್ ದಾಸ್ ಎಂಬ ಮುಸ್ಲಿಂ ಶಿಷ್ಯನನ್ನು ಹೊಂದಿದ್ದರು. ತತ್ವಪದಕಾರರಲ್ಲಿ ಅತ್ಯಂತ ಪ್ರಸಿದ್ಧರಾದ ಶಿಶುನಾಳ ಶರೀಫರು ಮುಸ್ಲಿಮರು. ಅವರ ಗುರು ಗೋವಿಂದ ಭಟ್ಟರು ಬ್ರಾಹ್ಮಣ ಮತ್ತು ಶಾಕ್ತ ಸಾಧಕರಾಗಿದ್ದರು.

ಆಳವಾಗಿ ಬೇರೂರಿರುವ ಸಮನ್ವಯತೆ: ಈ ಜನಪ್ರಿಯ ಚಳವಳಿಗಳ ಪ್ರಭಾವದಿಂದ ಉತ್ತರ ಕರ್ನಾಟಕ ಹಲವು ಧರ್ಮಗಳ ಸಂತರು, ಯಾತ್ರಾ ಕೇಂದ್ರಗಳು, ಆಚರಣೆಗಳು ಮತ್ತು ಹಬ್ಬಗಳಿಂದ ತುಂಬಿರುವ, ಹಲವು ನಂಬಿಕೆಗಳ ಕೊಲಾಜ್‌ ಚಿತ್ರವಾಗಿ ಬದಲಾಯಿತು. ಅಲ್ಲಿ ಒಂದು ಪಂಗಡ ಎಲ್ಲಿ ಕೊನೆಗೊಂಡಿತು ಮತ್ತು ಇನ್ನೊಂದು ಎಲ್ಲಿಂದ ಆರಂಭವಾಯಿತು ಎಂದು ಹೇಳುವುದು ಕಷ್ಟಕರವಾಗಿತ್ತು.

ಆಳವಾಗಿ ಬೇರೂರಿರುವ ಸಮನ್ವಯ ಧಾರ್ಮಿಕ ಆಚರಣೆಗಳ ಬೆರಗು ಮೂಡಿಸುವ ಸರಣಿ ಇಂದಿಗೂ ಮುಂದುವರೆದಿದೆ. ಬಿಜಾಪುರದ ಹಜರತ್ ಹಾಶಿಂ ಪೀರ್ ಉರುಸ್ ಸಮಯದಲ್ಲಿ ಮುಸ್ಲಿಂ ನಟರಿರುವ ಕೃಷ್ಣ ಪಾರಿಜಾತ ನಾಟಕ ಪ್ರಮುಖ ಆಕರ್ಷಣೆಯಾಗಿರುತ್ತದೆ. 19ನೇ ಶತಮಾನದ ಸೂಫಿ ಕವಿ ಖಾದ್ರಿ ಪೀರಾ ಅವರು 9 ನೇ ಶತಮಾನದ ಮನ್ಸೂರ್ ಅಲ್ ಹಲ್ಲಾಜ್ ಮತ್ತು 12 ನೇ ಶತಮಾನದ ಬಸವಣ್ಣ ಈ ಇಬ್ಬರ ಅನುಯಾಯಿ ಆಗಿದ್ದರು.

ಫಕೀರಪ್ಪನ ಜೀವನ: ಶಿರಹಟ್ಟಿ ಮಠದ ಧರ್ಮದರ್ಶಿ ಫಕೀರಪ್ಪನವರ ಜೀವನವು ಈ ಪ್ರದೇಶದ ಎಲ್ಲವನ್ನೂ ಒಳಗೊಳ್ಳುವ ಪ್ರವೃತ್ತಿಗೆ ಸಾಕ್ಷಿಯಾಗಿದೆ. 17 ನೇ ಶತಮಾನದ ಸೂಫಿ ಸಂತರಾದ ಖ್ವಾಜಾ ಅಮೀನ್ ಉದ್ ದಿನ್ ಅಲಾ, ಲಿಂಗಾಯತ ಮಗು ಚನ್ನವೀರನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದರು; ಆನಂತರ ಆತ ಫಕೀರಪ್ಪ ಎಂದು ಹೆಸರಾದ. ಐತಿಹ್ಯಗಳ ಪ್ರಕಾರ, ಫಕೀರಪ್ಪ ತನ್ನ ಪವಾಡಗಳಿಂದ ಮಹಾರಾಜ ಅಕ್ಬರ್‌ ಹಾಗೂ ಹೈದರಾಬಾದಿನ ನಿಜಾಮನಿಂದ ಶ್ಲಾಘಿಸಲ್ಪಟ್ಟಿದ್ದರು. ಬಡವರಿಗೆ ನೆರವಾದರು, ಕೋಮು ಕಲಹವನ್ನು ಬಗೆಹರಿಸಿದರು ಮತ್ತು ಮಕ್ಕಳಿಲ್ಲದ ಮುಸ್ಲಿಂ ಆಡಳಿತಗಾರರು ಹಿಂದೂ ಮಕ್ಕಳನ್ನು ದತ್ತು ತೆಗೆದುಕೊಳ್ಳುವಂತೆ ಮನವೊಲಿಸಿದರು. ಇಂಥ ಮಕ್ಕಳ ವಂಶಸ್ಥರು 'ಖಾನ್' ಎಂಬ ಉಪನಾಮವನ್ನು ಹೊಂದುತ್ತಾರೆ ಎಂಬ ಷರತ್ತಿನ ಮೇಲೆ ರಾಜ ಇದಕ್ಕೆ ಸಮ್ಮತಿಸಿದ ಹಾಗೂ ಇಂದಿಗೂ ಕೆಲವು ಹಿಂದೂ ಕುಟುಂಬಗಳು ಈ ಪದ್ಧತಿಯನ್ನು ಅನುಸರಿಸುತ್ತಿವೆ ಎನ್ನಲಾಗಿದೆ.

ಐತಿಹ್ಯದ ಪ್ರಕಾರ, ಫಕೀರಪ್ಪನವರ ಸೂಫಿ ಗುರುವಾದ ಖ್ವಾಜಾ ಅಮೀನ್ಉದ್ ದಿನ್ ಅಲಾ, ಮೋನಪ್ಪ ಎಂಬ ಹೆಸರಿನಿಂದ ಮರು ಜನ್ಮ ಪಡೆದರು. ಮೌನ್-ಉದ್-ದಿನ್ ಎಂದು ಪೂಜಿಸಲ್ಪಡುವ ಮೋನಪ್ಪನ ತಿಂತಿನಿಯಲ್ಲಿ ನಡೆಯುವ ವಾರ್ಷಿಕ ಜಾತ್ರೆಯು ಈ ಕೆಳಗಿನ ಸೂಫಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ:

ಏಕ್ ಲಾಖ್ ಐಸಿ ಹಜಾರ್ ಪಾಂಚೊ ಪಿರ್ ಪೈಗಂಬರ್

ಜಿತಾ ಪಿರ್ ಮೌನ್-ಉದ್-ದಿನ್ ಕಾಸಿಪತಿ ಹರ್ ಹರ್ ಮಹಾದೇವ್

(1,80,000 ಸಂತರಲ್ಲಿ ಐವರು ಪ್ರವಾದಿಗಳು. ಮೌನ್-ಉದ್-ದಿನ್ ಜೀವಂತ ಪ್ರವಾದಿ, ಕಾಶಿಯ ಪ್ರಭುವಾದ ಮಹಾದೇವನಿಗೆ ನಮಸ್ಕಾರ)

ʻಸಿದ್ದಲಿಂಗ ಸ್ವಾಮೀಜಿ ಕರ್ನಾಟಕದ ಸೂಫಿಸಂನ ಕೇಂದ್ರ ಬಿಜಾಪುರದಿಂದ ಬಂದವರು. ಅವರ ಸಮನ್ವಯತೆ ಸಾವಯವವಾಗಿದ್ದು, ವಿಭಿ ನ್ನಸಮುದಾಯಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ಕೆಲಸ ಮಾಡುವ ಅವರ ಅನುಭವದಿಂದ ಹೊರಬಂದಿದೆ. ಅವರು ನಿಜಕ್ಕೂ 'ಸೌಹಾರ್ದದ ರಾಯಭಾರಿ' ಎಂದು ಲೇಖಕ ತರೀಕೆರೆ ಹೇಳಿದರು. ಈ ವಿವಾದ ಹಲವರನ್ನು ಅಚ್ಚರಿಗೆ ದೂಡಿದೆ. ʻಎರಡೂ ಮಠಗಳು ನಿಕಟ ಬಾಂಧವ್ಯವನ್ನು ಹೊಂದಿವೆʼ ಎಂದು ತೋಂಟದಾರ್ಯ ಮಠದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ʻದಿಂಗಾಲೇಶ್ವರ ಸ್ವಾಮಿಗಳ ಹಿರಿಯರಾದ ಫಕೀರ ಸಿದ್ದರಾಮ ಸ್ವಾಮೀಜಿ ಮತ್ತು ಸಿದ್ದಲಿಂಗ ಸ್ವಾಮೀಜಿ ಕಾಲೇಜಿನಲ್ಲಿ ಸಹಪಾಠಿಗಳಾಗಿದ್ದರು. ನಾವು ಸಾಮರಸ್ಯ ದಿನವನ್ನು ಆಚರಿಸಲು ಪ್ರಾರಂಭಿಸಿದಾಗ, ಉದ್ಘಾಟಿಸಲು ಫಕೀರ ಸಿದ್ದರಾಮ ಸ್ವಾಮೀಜಿ ಅವರನ್ನು ಆಹ್ವಾನಿಸಿದ್ದೆವು. ಅವರು ಈ ಬಗ್ಗೆ ದೂರಲಿಲ್ಲ,ʼ ಎಂದು ಅಧಿಕಾರಿ ಹೇಳಿದರು.

ವಿವಾದಕ್ಕೆ ವೈಯಕ್ತಿಕ ಕಾರಣ? : ವಿವಾದಕ್ಕೆ ವೈಯಕ್ತಿಕ ಕೋನವಿದೆ ಎಂದು ಹಲವರು ಭಾವಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಸಮಿತಿ ರಚಿಸಲಾಗಿತ್ತು. ತಮ್ಮನ್ನು ಪರಿಗಣಿಸಬೇಕೆಂದು ದಿಂಗಾಲೇಶ್ವರ ಸ್ವಾಮೀಜಿ ಬಯಸಿದ್ದರು. ಆದರೆ, ಅವರ ಹೆಸರು ಪರಿಗಣಿಸಲ್ಪಡಲಿಲ್ಲ. ಇದಕ್ಕಾಗಿ ಅವರು ತೋಂಟದಾರ್ಯ ಸ್ವಾಮಿಗಳನ್ನು ದೂಷಿಸುತ್ತಿದ್ದಾರೆ ಎನ್ನಲಾಗಿದೆ. ʻಅದು ಆಯ್ಕೆ ಸಮಿತಿಯ ನಿರ್ಧಾರ. ಆದರೆ, ನಾವು ಅವರಿಗೆ ಅವಕಾಶ ನಿರಾಕರಿಸಿದೆವು ಎಂಬ ಕಲ್ಪನೆ ಅವರ ಮೆದುಳಿನಲ್ಲಿ ಗಟ್ಟಿಯಾಗಿ ಕುಳಿತಿದೆ. ಅವರು ನಮ್ಮನ್ನು ಆಗಾಗ ದೂಷಿಸುತ್ತಿರುತ್ತಾರೆʼ ಎಂದು ತೋಂಟದಾರ್ಯ ಮಠದ ಹಿರಿಯ ಅಧಿಕಾರಿ ಹೇಳಿದರು. ಪ್ರತಿಕ್ರಿಯೆಗಾಗಿ ಸಂಪರ್ಕಿಸಿದಾಗ, ದಿಂಗಾಲೇಶ್ವರ ಸ್ವಾಮೀಜಿ ಕರೆ ಹಿಂತಿರುಗಿಸಲಿಲ್ಲ.ಮಠಗಳ ಹೆಚ್ಚಿನ ಭಕ್ತರು ವಿವಾದದಿಂದ ದೂರವಿರು ವಂತೆ ತೋರುತ್ತಿದೆ.

ಶಿರಹಟ್ಟಿ ಮಠದ ಮುಸ್ಲಿಂ ಸಮುದಾಯದ ಭಕ್ತರೊಬ್ಬರು ಮಾತನಾಡಿ, ʻತೋಂಟದಾರ್ಯ ಮಠಕ್ಕೆ ಕೊಡುವಷ್ಟೇ ಗೌರವವನ್ನು ಫಕೀರೇಶ್ವರ ಮಠಕ್ಕೂ ಕೊಡುತ್ತೇವೆ. ಈ ವಿವಾದದ ಅವಶ್ಯಕತೆ ಇರಲಿಲ್ಲʼ.

- ಎಂ.ಎ.ಅರುಣ್

Read More
Next Story