Haryana polls:  ಕಾಂಗ್ರೆಸ್‌ನಲ್ಲೂ ಟಿಕೆಟ್‌ ಗದ್ದಲ, ಬಂಡಾಯ
x
ಹೊಸದಿಲ್ಲಿಯಲ್ಲಿ ಹರಿಯಾಣ ಕಾಂಗ್ರೆಸ್ ನಾಯಕ ದೀಪಕ್ ಬಬಾರಿಯಾ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.

Haryana polls: ಕಾಂಗ್ರೆಸ್‌ನಲ್ಲೂ ಟಿಕೆಟ್‌ ಗದ್ದಲ, ಬಂಡಾಯ

ಟಿಕೆಟ್ ನಿರಾಕರಿಸಿದ ಎಲ್ಲರೊಂದಿಗೆ ಪಕ್ಷ ಮಾತನಾಡಿದೆ. ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿರುವ ಹಲವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಆಶಿಶ್ ದುವಾ ಹೇಳಿದರು.


ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪಟ್ಟಿ ಬಿಡುಗಡೆಯಾದ ಬಳಿಕ, ಬಂಡಾಯದ ಬಾವುಟ ಹಾರಲು ಆರಂಭವಾಗಿದೆ. ಕಾಂಗ್ರೆಸ್ 90 ಸ್ಥಾನಗಳಲ್ಲಿ 89 ರಲ್ಲಿ ಸ್ಪರ್ಧಿಸುತ್ತಿದೆ. ಅದು ಭಿವಾನಿಯನ್ನು ಸಿಪಿಐ(ಎಂ) ಗೆ ಬಿಟ್ಟುಕೊಟ್ಟಿದೆ.

ಅತೃಪ್ತ ಕಾಂಗ್ರೆಸ್ ನಾಯಕರ ಪ್ರತಿಭಟನೆಯು ಆಡಳಿತ ವಿರೋಧಿ ಅಲೆ ಮೇಲೆ ಅಧಿಕಾರಕ್ಕೆ ಏರುವ ನಿರೀಕ್ಷೆಯಲ್ಲಿದ್ದ ಪಕ್ಷಕ್ಕೆ ಹೊಡೆತ ಕೊಡುತ್ತದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವ್ಯಾಪಕ ಆಕ್ರೋಶ: 2014 ರ ವಿಧಾನಸಭೆ ಚುನಾವಣೆಯಲ್ಲಿ ಫರೀದಾಬಾದ್‌ನ ತಿಗಾಂವ್ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಗೆದ್ದು 2019 ರಲ್ಲಿ ಸೋತಿದ್ದ ಲಲಿತ್ ನಗರ್, ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ನಗರ್ ಅವರು 1984 ರಿಂದ ಎನ್‌ಎಸ್‌ಯುಐ ಯಲ್ಲಿ ಇದ್ದಾರೆ. ʻಪಕ್ಷ ನನ್ನ ಶ್ರಮ, ಸಾಮರ್ಥ್ಯ ಮತ್ತು ಒಡನಾಟವನ್ನು ಕಡೆಗಣಿಸಿದೆ. ನಾನೊಬ್ಬ ಕಾಂಗ್ರೆಸ್ ಪಕ್ಷದ ಕಟ್ಟಾ ಕಾರ್ಯಕರ್ತ. ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ,ʼ ಎಂದು ಹೇಳಿದ್ದಾರೆ.

ಬಲ್ಲಭಗಢದಲ್ಲೂ ಬಂಡಾಯ: ಶಾರದಾ ರಾಥೋಡ್ ಅವರು ಬಲ್ಲಭಗಢ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಮತ್ತೊಬ್ಬ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ. ʻಪಟ್ಟಿಯಲ್ಲಿ ನನ್ನ ಹೆಸರು ಇದೆ ಎಂದು ಭರವಸೆ ನೀಡಿದ್ದರು. ಕ್ಷೇತ್ರದ ಸಂಪೂರ್ಣ ಜ್ಞಾನ ಇದ್ದು, ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಇರಿಸಿಕೊಂಡಿದ್ದೇನೆ. ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ಸ್ವತಂತ್ರವಾಗಿ ಸ್ಪರ್ಧಿಸಲಿದ್ದೇನೆ,ʼ ಎಂದು ಹೇಳಿದರು.

ಅಂಬಾಲಾ ಕಂಟೋನ್ಮೆಂಟ್‌ ಕ್ಷೇತ್ರದಿಂದ ಟಿಕೆಟ್‌ ವಂಚಿತರಾಗಿರುವ ಚಿತ್ರಾ ಸರ್ವರಾ, ಟಿಕೆಟ್ ಹಂಚಿಕೆಯಲ್ಲಿ ದೊಡ್ಡ ತಪ್ಪು ಆಗಿದೆ ಎಂದು ಅವರು ಫೆಡರಲ್‌ಗೆ ತಿಳಿಸಿದರು. ʻ2019ರಲ್ಲಿ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿದ್ದೆ. 2024ರಲ್ಲಿ ಟಿಕೆಟ್‌ ನೀಡಲಾಗುತ್ತದೆ ಎಂಬ ಷರತ್ತಿನೊಂದಿಗೆ ಕಾಂಗ್ರೆಸ್ ಸೇರಿದ್ದೇನೆ. ಆದರೆ, ಪಕ್ಷ ನನ್ನನ್ನು ವಂಚಿಸಿದ್ದು, ಇದಕ್ಕೆ ಬೆಲೆ ತೆರಲಿದೆ,ʼ ಎಂದು ಹೇಳಿದರು.

ಹಿರಿಯ ರಾಜಕಾರಣಿ ಮತ್ತು ಮಾಜಿ ಹಣಕಾಸು ಸಚಿವ ಸಂಪತ್ ಸಿಂಗ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಹಲವು ಬಾರಿ ವಿಜೇತ ಮತ್ತು 12 ನೇ ಹರ್ಯಾಣ ವಿಧಾನಸಭೆಯಲ್ಲಿ ಅತ್ಯಂತ ಹಿರಿಯ ಶಾಸಕರಾದ ಅವರು ಹಿಸಾರ್‌ನ ನಲ್ವಾದಿಂದ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಭಿವಾನಿಯಿಂದ ಅಭಿಜಿತ್ ತನ್ವಾರ್, ಗೊಹಾನಾದಿಂದ ಹರ್ಷ ಚಿಕಾರ ಮತ್ತು ನರ್ವಾನಾದಿಂದ ವಿದ್ಯಾ ರಾಣಿ ಟಿಕೆಟ್ ಹಂಚಿಕೆಯಲ್ಲಿ ಪಕ್ಷಪಾತ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ.

ಸಮರ್ಥನೆ: ʻಟಿಕೆಟ್ ನಿರಾಕರಿಸಿದ ಎಲ್ಲರೊಂದಿಗೆ ಮಾತನಾಡಲಾಗಿದೆ. ಉಮೇದುವಾರಿಕೆಯನ್ನು ಹಿಂಪಡೆಯಲಿದ್ದಾರೆ,ʼ ಎಂದು ಕಾಂಗ್ರೆಸ್ ನಾಯಕ ಆಶಿಶ್ ದುವಾ ದ ಫೆಡರಲ್‌ಗೆ ತಿಳಿಸಿದ್ದಾರೆ.

ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಗುರುಗ್ರಾಮ್ ಕ್ಷೇತ್ರದ ಟಿಕೆಟ್‌ ಸ್ಪರ್ಧಿಯಾಗಿದ್ದೆ. ಎರಡು ದಶಕದಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಆದರೆ, ಪಕ್ಷದ ನಿರ್ಧಾರವನ್ನು ಗೌರವಿಸುತ್ತೇನೆ. ಕಾಂಗ್ರೆಸ್ 90 ಸ್ಥಾನಗಳಿಗೆ 2,500 ಕ್ಕೂ ಹೆಚ್ಚು ಅರ್ಜಿ ಸ್ವೀಕರಿಸಿದೆ,ʼ ಎಂದು ಅವರು ಹೇಳಿದರು.

ʻಪ್ರತಿಭಟನೆ ನಿರೀಕ್ಷಿತ. ಇದರಿಂದ ಐಎನ್‌ಎಲ್‌ಡಿ ಮತ್ತು ಬಿಎಸ್‌ಪಿಗೆ ಲಾಭವಾಗಬಹುದು. ಆದರೆ, ಕಾಂಗ್ರೆಸ್ ಬಂಡಾಯ ಶಮನಗೊಳಿಸುತ್ತದೆ. 50ಕ್ಕೂ ಅಧಿಕ ಸ್ಥಾನ ಖಚಿತ,ʼ ಎಂದು ಜಾಟ್ ನಾಯಕರೊಬ್ಬರು ದಿ ಫೆಡರಲ್‌ಗೆ ತಿಳಿಸಿದರು.

ಕಾಂಗ್ರೆಸ್-ಎಎಪಿ ಮೈತ್ರಿ ಇಲ್ಲ: ಹರಿಯಾಣದಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿ ಮಾಡಿಕೊಂಡಿಲ್ಲ. ಜೆಜೆಪಿ ಮತ್ತು ಆಜಾದ್ ಸಮಾಜ ಪಕ್ಷ ಹಾಗೂ ಐಎನ್‌ಎಲ್‌ಡಿ ಮತ್ತು ಬಿಎಸ್‌ಪಿ ಕೈಜೋಡಿಸಿವೆ. ಎಎಪಿ ಎಲ್ಲಾ 90 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ.

ರಾಜಕೀಯ ವಿಶ್ಲೇಷಕ ದೇವಿಂದರ್ ಸಿಂಗ್ ಸುರ್ಜೆವಾಲಾ, ʻಎಎಪಿ ಜೊತೆ ಕೈಜೋಡಿಸದೆ ಇರುವುದರಿಂದ ಕಾಂಗ್ರೆಸ್‌ ಗೆ ನಷ್ಟವಿಲ್ಲ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸುವಷ್ಟು ಪ್ರಬಲವಾಗಿದೆ. ಮತದಾರರು ಹಾಗೂ ಕಾಂಗ್ರೆಸ್ ನಾಯಕರು ಎಎಪಿ ಜೊತೆಗಿನ ಒಪ್ಪಂದಕ್ಕೆ ವಿರುದ್ಧವಾಗಿದ್ದಾರೆ. ಆಪ್‌ ಪಟ್ಟಣಗಳಲ್ಲಿ ಪ್ರಭಾವ ಹೊಂದಿದ್ದರೂ, ಕಾಂಗ್ರೆಸ್‌ಗೆ ಹಾನಿ ಮಾಡಲಾರದು. ಇದರಿಂದ ಬಿಜೆಪಿಗೆ ತೊಂದರೆಯಾಗಲಿದೆ ,ʼ ಎಂದು ದ ಫೆಡರಲ್‌ಗೆ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ಕುಮಾರಿ ಸೆಲ್ಜಾ ಅವರ ನಡುವಿನ ಕೊನೆ ಕ್ಷಣದ ಆಕ್ಷೇಪದಿಂದಾಗಿ ಕಾಂಗ್ರೆಸ್‌ನಿಂದ ಸೀಟುಗಳ ಘೋಷಣೆ ವಿಳಂಬವಾಯಿತು ಎಂದು ಹೇಳಲಾಗಿದೆ.

ವಿಧಾನಸಭಾ ಚುನಾವಣೆ ಅಕ್ಟೋಬರ್ 5 ರಂದು ನಡೆಯಲಿದ್ದು, 900ಕ್ಕೂ ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿ, ಜನನಾಯಕ ಜನತಾ ಪಕ್ಷ (ಜೆಜೆಪಿ), ಇಂಡಿಯನ್ ನ್ಯಾಷನಲ್ ಲೋಕದಳ (ಐಎನ್‌ಎಲ್‌ಡಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ), ಆಜಾದ್ ಸಮಾಜ ಪಕ್ಷ (ಎಎಸ್‌ಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಕಣದಲ್ಲಿವೆ.

Read More
Next Story