FASTag|Annual pass for non-commercial vehicles from August 15, Minister Gadkari makes important announcement
x

ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ

FASTag|ಆ.15 ರಿಂದ ವಾರ್ಷಿಕ ಪಾಸ್‌; ಸಚಿವ ನಿತಿನ್‌ ಗಡ್ಕರಿ ಘೋಷಣೆ; ವಾರ್ಷಿಕ ಪಾಸ್‌ ವಿಶೇಷತೆ ಏನು?

ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಪಾಸ್‌ ಮಾನ್ಯವಾಗಿರಲಿದೆ. ವಾಣಿಜ್ಯೇತರ ಖಾಸಗಿ ವಾಹನಗಳ ಸಂಚಾರಕ್ಕೆ ಮಾತ್ರ ಈ ಪಾಸ್ ಅನ್ವಯವಾಗಲಿದೆ.


ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬರುವ ಟೋಲ್‌ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ʼಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ʼ ಯೋಜನೆಯನ್ನು ಆಗಸ್ಟ್‌ 15 ರಿಂದ ಜಾರಿಗೊಳಿಸಲು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ನಿರ್ಧರಿಸಿದೆ.

ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರು ಈ ಕುರಿತು ತಮ್ಮ ʼಎಕ್ಸ್ʼ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪಾಸ್ ಸಕ್ರಿಯಗೊಳಿಸಿದ ದಿನಾಂಕದಿಂದ ಒಂದು ವರ್ಷ ಅಥವಾ 200 ಟ್ರಿಪ್‌ಗಳವರೆಗೆ ವಾರ್ಷಿಕ ಪಾಸ್‌ ಯೋಜನೆಯ ನಿಯಮ ಮಾನ್ಯವಾಗಿರಲಿದೆ. ಕಾರು, ಜೀಪ್‌ ಮತ್ತು ವ್ಯಾನ್‌ಗಳಂತಹ ವಾಣಿಜ್ಯೇತರ ಖಾಸಗಿ ವಾಹನಗಳ ಸಂಚಾರಕ್ಕೆ ಮಾತ್ರ ಈ ಪಾಸ್ ಅನ್ವಯವಾಗಲಿದೆ.

ಶೀಘ್ರವೇ ಲಿಂಕ್‌ ಬಿಡುಗಡೆ

ವಾರ್ಷಿಕ ಪಾಸ್‌ ಸಂಬಂಧಿಸಿದ ಲಿಂಕ್ ಶೀಘ್ರದಲ್ಲೇ ʼರಾಜ್‌ಮಾರ್ಗ್ ಯಾತ್ರಾʼ ಅಪ್ಲಿಕೇಶನ್‌ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಸಿಗಲಿದೆ. 60 ಕಿ.ಮೀ ವ್ಯಾಪ್ತಿಯೊಳಗೆ ಇರುವ ಟೋಲ್ ಪ್ಲಾಜಾಗಳಿಗೆ ಸಂಬಂಧಿಸಿದ ಪ್ರಯಾಣಿಕರ ದೀರ್ಘಕಾಲದ ಸಮಸ್ಯೆಗಳು ಈ ಯೋಜನೆಯಿಂದ ಪರಿಹಾರವಾಗಲಿವೆ ಎಂದು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಪಾಸ್‌ ದರ ಎಷ್ಟು?

ವಾಣಿಜ್ಯೇತರ ವಾಹನಗಳಿಗೆ ಕೇಂದ್ರ ಸರ್ಕಾರ ವಾರ್ಷಿಕ 3,000 ರೂ. ನಿಗದಿಪಡಿಸಿದ್ದು, ಒಟ್ಟು 200 ಬಾರಿ ಟೋಲ್‌ಗಳನ್ನು ದಾಟಬಹುದಾಗಿದೆ. ಒಂದು ಟೋಲ್‌ ಪ್ಲಾಜಾ ದಾಟಿದರೆ ಒಂದು ಟ್ರಿಪ್‌ ಎಂದು ಪರಿಗಣಿಸಲಾಗುತ್ತದೆ. ಈಗಾಗಲೇ ಇರುವ ʼಫಾಸ್ಟ್ಯಾಗ್‌ಗಳಿಗೆ ರಿಚಾರ್ಜ್‌ ಮಾಡಿಸುವ ಮೂಲಕ ಯೋಜನೆಯ ಅನುಕೂಲ ಪಡೆಯಬಹುದು.

ರಾಜ್ಯ ಹೆದ್ದಾರಿಗೆ ಅನ್ವಯವಿಲ್ಲ

ಕೇಂದ್ರ ಸರ್ಕಾರ ಘೋಷಿಸಿರುವ ʼಫಾಸ್ಟ್ಯಾಗ್‌ ವಾರ್ಷಿಕ ಪಾಸ್‌ʼ ಕೇವಲ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ವಹಿಸುವ ಎಕ್ಸ್‌ಪ್ರೆಸ್‌ ವೇಗಳಿಗೆ ಮಾತ್ರ ಅನ್ವಯಿಸಲಿದೆ. ರಾಜ್ಯ ಹೆದ್ದಾರಿಗಳು ಹಾಗೂ ಎನ್‌ಎಚ್‌ಎಐ ನಿರ್ವಹಿಸದ ಎಕ್ಸ್‌ಪ್ರೆಸ್‌ ವೇಗಳಿಗೆ ಈ ಪಾಸ್‌ ಅನ್ವಯವಾಗುವುದಿಲ್ಲ.

ಪಾಸ್‌ನ ಅನುಕೂಲಗಳೇನು?

  • ಫಾಸ್ಟ್ಯಾಗ್‌ ಅನ್ನು ಒಮ್ಮೆ ಖರೀದಿಸಿದರೆ ಒಂದು ವರ್ಷ ಅಥವಾ ಟೋಲ್‌ ಪ್ಲಾಜಾದಲ್ಲಿ 200 ಬಾರಿ ಸಂಚರಿಸಬಹುದು.
  • ವಾರ್ಷಿಕವಾಗಿ ಯಾವುದೇ ಹೆಚ್ಚುವರಿ ಟೋಲ್‌ ಶುಲ್ಕಗಳನ್ನು ಕಟ್ಟುವ ಅಗತ್ಯವಿರುವುದಿಲ್ಲ.
  • ಪಾಸ್‌ಗಳಲ್ಲಿಯೂ ರೇಡಿಯೋ ಪ್ರಿಕ್ವೆನ್ಸಿ ಐಡೆಂಟಿಫಿಕೇಶನ್‌ ತಂತ್ರಜ್ಞಾನ ಬಳಕೆ ಮಾಡುವುದರಿಂದ ಟೋಲ್‌ ಪ್ಲಾಜಾಗಳಲ್ಲಿ ಸ್ವಯಂ ಚಾಲಿತವಾಗಿ ಶುಲ್ಕ ಪಾವತಿಯಾಗಲಿದೆ.

ಫಾಸ್ಟ್ಯಾಗ್‌ ಅನಾನುಕೂಲತೆಗಳೇನು?

  • ಫಾಸ್ಟ್ಯಾಗ್‌ ರೀಡರ್‌ಗಳಲ್ಲಿ ತಾಂತ್ರಿಕ ದೋಷ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಶುಲ್ಕ ಪಾವತಿ ಮಾಡಲು ವಿಳಂಬವಾಗುತ್ತಿದೆ.
  • ಕೆಲವು ಟೋಲ್‌ ಪ್ಲಾಜ್‌ಗಳಲ್ಲಿ ರೀಡರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ. ಮತ್ತೆ ಕೆಲ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್‌ ಸವಾರರಿಗೆ ಪ್ರತ್ಯೇಕ ಲೇನ್‌ಗಳಿವೆ.
  • ಹಣ ಪಾವತಿಸಿ ಸಂಚರಿಸುವ ವಾಹನಗಳಿಗೆ ಪ್ರವೇಶ ನೀಡುವುದರಿಂದ ಫಾಸ್ಟ್ಯಾಗ್‌ ಸವಾರರಿಗೆ ಸಮಸ್ಯೆಯಾಗುತ್ತಿದೆ.
  • ಫಾಸ್ಟ್ಯಾಗ್‌ ಹೊಂದಿರುವ ವಾಹನಗಳಿಗೆ ಪ್ರತ್ಯೇಕ ಲೇನ್‌ಗಳನ್ನು ನಿಗದಿ ಮಾಡಿರುವುದಿಲ್ಲ. ಇದರಿಂದ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.

ಪಾಸ್‌ ಪಡೆಯಲು ಷರತ್ತುಗಳೇನು?

  • ಫಾಸ್ಟ್ಯಾಗ್‌ ಅನ್ನು ವಾಹನ ನೊಂದಣಿ ಸಂಖ್ಯೆಗೆ ಲಿಂಕ್‌ ಮಾಡಿರಬೇಕು.
  • ಟ್ಯಾಗ್‌ನ್ನು ಕಪ್ಪುಪಟ್ಟಿಗೆ ಸೇರಿಸಿರಬಾರದು
  • ಪಾಸ್‌ ಅವಧಿ ಮುಗಿದ ನಂತರ ಮರು ಖರೀದಿಸಬೇಕು ಅಥವಾ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.
Read More
Next Story