ಅಟ್ಲಾಸ್ ನಿರ್ದಿಷ್ಟ ಸ್ಥಳಗಳ ಹಾನಿಯ ಮೌಲ್ಯಮಾಪನ ಸೇರಿದಂತೆ ದೇಶದ ಭೂಕುಸಿತ ಪ್ರಾಂತ್ಯಗಳಲ್ಲಿನ ಭೂಕುಸಿತಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ(ಬಲ ಚಿತ್ರ)

Explainer | Wayanad Landslide: ಭೂಕುಸಿತ ನಕ್ಷೆ ಎಂದರೇನು? ಇಸ್ರೋ ಅದನ್ನೇಕೆ ಹೊಂದಿದೆ?


ಕೇರಳದ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತವು 270 ಕ್ಕೂ ಹೆಚ್ಚು ಸಾವಿಗೆ ಕಾರಣವಾಗಿದ್ದು, ದೇಶದಲ್ಲಿ ಸುಧಾರಿತ ವಿಪತ್ತು ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಅಗತ್ಯವನ್ನು ಮುನ್ನೆಲೆಗೆ ತಂದಿದೆ.

ಭೂಕುಸಿತ ನಕ್ಷೆ ಸೇರಿದಂತೆ ವೈಮಾನಿಕ ಮತ್ತು ಉಪಗ್ರಹ ದತ್ತಾಂಶವನ್ನು ಬಳಸಿಕೊಂಡು, ಭೂಕುಸಿತ ಎಂದರೇನು? ಈ ಕುರಿತು ಕೆಲವು ಸಂಸ್ಥೆಗಳು ಏನು ಮಾಡುತ್ತಿವೆ? ಈ ಕ್ಷೇತ್ರದಲ್ಲಿನ ಇತ್ತೀಚಿನ ಸಂಶೋಧನೆಗಳೇನು ಎಂದು ನೋಡೋಣ.

ಭೂಕುಸಿತ ಎಂದರೇನು?

ಭೂಕುಸಿತ ಎಂದರೆ ʻಬಂಡೆ, ಭೂಮಿ ಅಥವಾ ಬಂಡೆಚೂರುಗಳ ರಾಶಿಗಳ ಇಳಿಜಾರಿನ ಚಲನೆ. ಮಳೆಯಿಂದ ಭೂಕುಸಿತಗಳು ಆರಂಭವಾಗಬಹುದು, ಪ್ರವಾಹ ಅಥವಾ ಉತ್ಖನನದಿಂದ ಇಳಿಜಾರುಗಳನ್ನು ಕತ್ತರಿಸುವುದು, ಭೂಕಂಪಗಳು, ಹಿಮ ಕರಗುವಿಕೆ, ಜಾನುವಾರುಗಳು ಅತಿಯಾಗಿ ಮೇಯುವುದು, ಭೂಪ್ರದೇಶವನ್ನು ಕತ್ತರಿಸುವುದು ಮತ್ತು ಭರ್ತಿ ಮಾಡುವುದು ಮತ್ತು ವಿಪರೀತ ಅಭಿವೃದ್ಧಿ ಭೂಕುಸಿತಕ್ಕೆ ಕಾರಣ ಆಗಬಹುದು.

ಮಳೆಯು ಭೂಕುಸಿತ ಸಂಭವಿಸಲು ನೈಸರ್ಗಿಕ ಪ್ರಚೋದಕ ಅಂಶ. ಮಳೆ ಪ್ರೇರಿತ ಭೂಕುಸಿತಗಳು ಸ್ಥಳ ಸ್ವರೂಪ, ಭೂವಿಜ್ಞಾನ, ಮಣ್ಣು ಮತ್ತು ಸಸ್ಯವರ್ಗದ ಮೇಲೆ ನೀರಿನ ಸಂಯೋಜಿತ ಕ್ರಿಯೆಯ ಪರಿಣಾಮ ಆಗಿರುತ್ತವೆ.

ಭಾರತ ಏಕೆ ಭೂಕುಸಿತಕ್ಕೆ ಗುರಿಯಾಗುತ್ತದೆ?

ಭಾರತವು ವಿವಿಧ ಭೌತಿಕ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ದೇಶ. ಹಿಮದಿಂದ ಆವೃತವಾದ ಪ್ರದೇಶವನ್ನು ಹೊರತುಪಡಿಸಿ, ಸುಮಾರು 0.42 ದಶ ಲಕ್ಷ ಚ.ಕಿ.ಮೀ ಅಥವಾ ಶೇ.12.6 ರಷ್ಟು ಭೂಪ್ರದೇಶ ಭೂಕುಸಿತಕ್ಕೆ ಗುರಿಯಾಗುತ್ತದೆ.

ಭಾರತದಲ್ಲಿ ಮುಂಗಾರು ಋತುವಿನಲ್ಲಿ ಭೂಕುಸಿತಗಳು ಹೆಚ್ಚಾಗಿ ಸಂಭವಿಸುತ್ತವೆ. ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳು ಭಾರೀ ಮಳೆ ಹಾಗೂ ಸ್ಥಳ ಸ್ವರೂಪದಿಂದ ಸಾಮೂಹಿಕ ಚಲನೆಗೆ ಹೆಚ್ಚು ಒಳಗಾಗುತ್ತವೆ.

ಪಶ್ಚಿಮ ಘಟ್ಟಗಳು ಏಕೆ ಹೆಚ್ಚು ದುರ್ಬಲ?

ಪಶ್ಚಿಮ ಘಟ್ಟಗಳಲ್ಲಿ ಅತಿ ಹೆಚ್ಚು ಜನಸಂಖ್ಯೆ ಮತ್ತು ಮನೆಗಳ ಸಾಂದ್ರತೆಯಿರುವುದರಿಂದ, ಸ್ಥಳೀಯ ನಿವಾಸಿಗಳು ಮತ್ತು ಕುಟುಂಬಗಳು ದುರಂತಕ್ಕೆ ಸಿಲುಕುವುದು ಹೆಚ್ಚು; ಕೇರಳದಲ್ಲಿ ಹಿಮಾಲಯ ಪ್ರದೇಶಗಳಿಗಿಂತ ಕಡಿಮೆ ಭೂಕುಸಿತಗಳು ಸಂಭವಿಸಿದರೂ, ಅಪಾಯ ಹೆಚ್ಚು.

ಭೂಕುಸಿತ ಅಟ್ಲಾಸ್ ಎಂದರೇನು?

ಭೂಕುಸಿತ ಅಟ್ಲಾಸ್ ದೇಶದಲ್ಲಿನ ಒಟ್ಟಾರೆ ಭೂಕುಸಿತದ ಸನ್ನಿವೇಶವನ್ನು ವಿವರಿಸುತ್ತದೆ ಮತ್ತು ಭೂಕುಸಿತದಿಂದ ಆಗುವ ಅಪಾಯ ಕುರಿತ ಪ್ರಮುಖ ಸಂಶೋಧನೆಗಳನ್ನು ಒಳಗೊಂಡಿದೆ. ʻಭಾರತದ ಭೂಕುಸಿತ ಅಟ್ಲಾಸ್ʼ ಅನ್ನು ಹೈದರಾಬಾದ್‌ನ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ರೂಪಿಸಿದೆ.

ಎನ್‌ಆರ್‌ಎಸ್‌ಸಿಯು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರಗಳಲ್ಲಿ ಒಂದು. ಇದು ಉಪಗ್ರಹ ದತ್ತಾಂಶ, ಉತ್ಪನ್ನಗಳು, ಅಪ್ಲಿಕೇಶನ್‌ಗಳಿಗೆ ರಿಮೋಟ್ ಸೆನ್ಸಿಂಗ್ ಮತ್ತು ಜಿಯೋಸ್ಪೇಷಿಯಲ್ ತಂತ್ರಜ್ಞಾನ ಸೇವೆಗಳನ್ನು ಒದಗಿಸುತ್ತದೆ. ವೈಮಾನಿಕ ಮತ್ತು ಉಪಗ್ರಹ ಮೂಲಗಳಿಂದ ದತ್ತಾಂಶವನ್ನು ನಿರ್ವಹಿಸುತ್ತದೆ. 1988 ರಿಂದ ಅಸ್ತಿತ್ವದಲ್ಲಿರುವ ಭಾರತೀಯ ರಿಮೋಟ್ ಸೆನ್ಸಿಂಗ್ ಪ್ರೋಗ್ರಾಂ ಆಗಿದೆ.

ಇಸ್ರೋ ಭೂಕುಸಿತ ಅಟ್ಲಾಸ್ ಅನ್ನು ಏಕೆ ಹೊಂದಿದೆ?

ಇಸ್ರೋದ ವಿಪತ್ತು ನಿರ್ವಹಣೆ ಬೆಂಬಲ (ಡಿಎಂಎಸ್) ಕಾರ್ಯಕ್ರಮವು ಬಾಹ್ಯಾಕಾಶ‌ ಆಧಾರಿತ ಒಳಹರಿವುಗಳನ್ನು ಬಳಸಿಕೊಂಡು, ದೇಶದಲ್ಲಿನ ನೈಸರ್ಗಿಕ ವಿಕೋಪಗಳ ವಿವಿಧ ಅಂಶಗಳನ್ನು ತಿಳಿಸುತ್ತದೆ. ಈ ಕಾರ್ಯಕ್ರಮದಡಿಯಲ್ಲಿ ಇಸ್ರೋ ಭೂಕುಸಿತದ ವಿಪತ್ತು ಪ್ರತಿಕ್ರಿಯೆ ಮತ್ತು ತಗ್ಗಿಸುವಿಕೆಯಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ದೇಶಾದ್ಯಂತ ಸಂಭವಿಸಿದ ಪ್ರಮುಖ ಭೂಕುಸಿತ ವಿಪತ್ತುಗಳಿಗೆ ಉಪಗ್ರಹ ದತ್ತಾಂಶ ಮತ್ತು ಮಾಹಿತಿಯನ್ನು ಒದಗಿಸಲಾಗಿದೆ. ಪ್ರಮುಖ ಭೂಕುಸಿತ ವಿಪತ್ತುಗಳಿಂದ ಹಾನಿಯ ಮೌಲ್ಯಮಾಪನವನ್ನು ಉಪಗ್ರಹ ದತ್ತಾಂಶವನ್ನು ಬಳಸಿಕೊಂಡು ಮಾಡಲಾಗಿದೆ ಮತ್ತು ವೈಮಾನಿಕ ಚಿತ್ರಗಳು ಮತ್ತು ಮೌಲ್ಯವರ್ಧಿತ ಉತ್ಪನ್ನಗಳನ್ನು ಮಧ್ಯಸ್ಥಗಾರರಿಗೆ ಒದಗಿಸಲಾಗುತ್ತದೆ.

ಭೂಕುಸಿತ ತಪಶೀಲು ದತ್ತಾಂಶ ಮೂಲ ಎಂದರೇನು?

ಭೂಕುಸಿತ ಅಟ್ಲಾಸ್ ನಿರ್ದಿಷ್ಟ ಸ್ಥಳಗಳ ಹಾನಿಯ ಮೌಲ್ಯಮಾಪನ ಸೇರಿದಂತೆ ದೇಶದ ಭೂಕುಸಿತ ಪ್ರಾಂತ್ಯಗಳಲ್ಲಿ ಭೂಕುಸಿತದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ದತ್ತಾಂಶಮೂಲವು ಹಿಮಾಲಯ ಮತ್ತು ಪಶ್ಚಿಮ ಘಟ್ಟಗಳಲ್ಲಿನ 17 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಭೂಕುಸಿತಕ್ಕೆ ಒಳಗಾಗುವ ಪ್ರದೇಶಗಳನ್ನು ಒಳಗೊಂಡಿದೆ. ದತ್ತಾಂಶ ಮೂರು ವಿಧದ ಭೂಕುಸಿತ ದಾಸ್ತಾನುಗಳನ್ನು ಹೊಂದಿದೆ; 1998-2022 ಅವಧಿಗೆ ಕಾಲೋಚಿತ, ಪ್ರಕರಣ ಆಧಾರಿತ ಮತ್ತು ಮಾರ್ಗವಾರು.

ಕಾಲೋಚಿತ ತಪಶೀಲು ಪಟ್ಟಿ; ಭಾರತದಲ್ಲಿ 2014 ಮತ್ತು 2017 ರ ಮಳೆಗಾಲಕ್ಕೆ ಅನುಗುಣವಾಗಿ ದೇಶವ್ಯಾಪಿ ಭೂಕುಸಿತ ಡೇಟಾಬೇಸ್ ಒಳಗೊಂಡಿದೆ.

ಪ್ರಕರಣ ತಪಶೀಲು ಪಟ್ಟಿ; ಕೇದಾರನಾಥ ಮತ್ತು ಕೇರಳ ವಿಪತ್ತುಗಳು, ಸಿಕ್ಕಿಂ ಭೂಕಂಪ ಮತ್ತು ಕೆಲವು ಭಾರಿ ಕಣಿವೆಗಳನ್ನು ಮುಚ್ಚುವ ಭೂಕುಸಿತಗಳಂತಹ ಕೆಲವು ಪ್ರಮುಖ ಘಟನೆಗಳ ವಿವರಗಳನ್ನು ಒಳಗೊಂಡಿದೆ.

ಮಾರ್ಗವಾರು ತಪಶೀಲು ಪಟ್ಟಿ; ಇದು ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯ ಆಯ್ದ ಮಾರ್ಗಗಳಲ್ಲಿ ಭೂಕುಸಿತದ ವಿವರಗಳನ್ನು ಒಳಗೊಂಡಿದೆ.

ಡೇಟಾಬೇಸ್ ಆಧಾರದ ಮೇಲೆ ಜಿಲ್ಲೆಗಳ ಶ್ರೇಯಾಂಕ ಏನು?

ಪ್ರಮುಖ ಸಾಮಾಜಿಕ-ಆರ್ಥಿಕ ನಿಯತಾಂಕಗಳ ಪ್ರಕಾರ, 17 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ 147 ಜಿಲ್ಲೆಗಳಿಗೆ ಶ್ರೇಯಾಂಕ ನೀಡಲು ದತ್ತಾಂಶಮೂಲವನ್ನು ಬಳಸಲಾಗಿದೆ.

ಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇದು ದೇಶದಲ್ಲಿ ಅತಿ ಹೆಚ್ಚು ಭೂಕುಸಿತ ಸಾಂದ್ರತೆಯನ್ನು ಹೊಂದಿದೆ.

ಭೂಕುಸಿತ ಅಪಾಯಕ್ಕೆ ಒಡ್ಡಿಕೊಳ್ಳುವುದು ಎಂದರೇನು?

ಪರ್ವತ ಪ್ರದೇಶಗಳಲ್ಲಿ ಭೂಕುಸಿತ ಅಪಾಯದ ಒಡ್ಡಿಕೊಳ್ಳುವಿಕೆಯ ವಿಶ್ಲೇಷಣೆ ನಡೆಸಲಾಯಿತು. ಒಂದು ಪ್ರದೇಶದಲ್ಲಿ ಭೂಕುಸಿತಗಳ ಸಂಭವಿಸುವಿಕೆಯು ನಿಯತಾಂಕಗಳಾದ ಇಳಿಜಾರು, ಶಿಲೆಗಳ ರಚನೆ, ಸ್ಥಳ ಸ್ವರೂಪ ಮತ್ತು ಭೂಬಳಕೆಯಿಂದ ಮಳೆ ಅಥವಾ ಭೂಕಂಪಕ್ಕೆ ಪ್ರತಿಕ್ರಿಯೆಯಾಗಿ ಭೂಕುಸಿತವನ್ನು ಪ್ರಚೋದಿಸುತ್ತದೆ.

ದೇಶದಲ್ಲಿನ ಭೂಕುಸಿತಗಳಲ್ಲಿ ವಾಯವ್ಯ ಹಿಮಾಲಯದಲ್ಲಿ ಶೇ. 66.5, ಈಶಾನ್ಯ ಹಿಮಾಲಯ ಶೇ.18.8 ಮತ್ತು ಪಶ್ಚಿಮ ಘಟ್ಟಗಳು ಶೇ. 14.7 ರಷ್ಟಿದೆ.

Read More
Next Story