ಶಿಷ್ಟಾಚಾರ ಉಲ್ಲಂಘನೆ ಆರೋಪ, ಇವಿಎಂ ಸಾಗಿಸುತ್ತಿದ್ದ ಕಾರಿನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ
ಕೇಂದ್ರ ನಾಗ್ಪುರ ಕ್ಷೇತ್ರದ ಕಿಲ್ಲಾ ಪ್ರದೇಶದಲ್ಲಿ ಬುಧವಾರ ಮತಗಟ್ಟೆ ಅಧಿಕಾರಿಗಳು ಇವಿಎಂ ಅನ್ನು ಬೂತ್ ಸಂಖ್ಯೆ 268ರಿಂದ ಗೊತ್ತುಪಡಿಸಿದ ಸ್ಟ್ರಾಂಗ್ ರೂಂಗೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮತದಾನ ಮುಗಿದ ನಂತರ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿಕೊಂಡು ಇವಿಎಂ ಯಂತ್ರಗಳನ್ನು ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ಟ್ರಾಂಗ್ ರೂಂಗೆ ಇವಿಎಂ ಸಾಗಿಸುತ್ತಿದ್ದ ಕಾರಿನ ಮೇಲೆ ದಾಳಿ ಮಾಡಿದ ಘಟನೆ ಬುಧವಾರ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಾಳಿಗೆ ಒಳಗಾದ ಇವಿಎಂ ಅನ್ನು ಮತದಾನ ಪ್ರಕ್ರಿಯೆಯಲ್ಲಿ ಬಳಸಲಾಗಿಲ್ಲ. ಅದನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ನಾಗ್ಪುರ ಕ್ಷೇತ್ರದ ಕಿಲ್ಲಾ ಪ್ರದೇಶದಲ್ಲಿ ಬುಧವಾರ ಮತಗಟ್ಟೆ ಅಧಿಕಾರಿಗಳು ಇವಿಎಂ ಅನ್ನು ಬೂತ್ ಸಂಖ್ಯೆ 268ರಿಂದ ಗೊತ್ತುಪಡಿಸಿದ ಸ್ಟ್ರಾಂಗ್ ರೂಂಗೆ ಕಾರಿನಲ್ಲಿ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ.
ಇವಿಎಂಗಳನ್ನು ದಾಖಲೆ ಮುದ್ರಿಸಲು ಜೆರಾಕ್ಸ್ ಅಂಗಡಿಗೆ ಕರೆದೊಯ್ಯಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಯಂತ್ರಗಳನ್ನು ನಿರ್ವಹಿಸುವಲ್ಲಿ ಮಾರ್ಗಸೂಚಿಗಳ ಉಲ್ಲಂಘನೆಯ ಬಗ್ಗೆ ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಇವಿಎಂ ಸಾಗಾಟದ ವೇಳೆ ಪ್ರೋಟೋಕಾಲ್ಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ವ್ಯಕ್ತಿಗಳ ಗುಂಪು ವಾಹನವನ್ನು ತಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಲು ಪ್ರಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನೊಳಗಿನ ಅಧಿಕಾರಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ವರದಿಗಳು ಸೂಚಿಸಿವೆ. ಆದರೆ ಪೊಲೀಸರು ಅದನ್ನು ದೃಢಪಡಿಸಿಲ್ಲ. ಈ ಪ್ರದೇಶದ ನಿವಾಸಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಅವರು ಸಮಸ್ಯೆ ಬಗೆಹರಿಸಿದ್ದಾರೆ.
ಕೊಟ್ವಾಲಿ ಪೊಲೀಸ್ ಠಾಣೆಯ ತಂಡವು ಘಟನಾ ಸ್ಥಳಕ್ಕೆ ಧಾವಿಸಿ ಇವಿಎಂ ಮತ್ತು ಕಾರಿನಲ್ಲಿದ್ದ ಅಧಿಕಾರಿಗಳನ್ನು ರಕ್ಷಿಸಿದ್ದಾರೆ. ನಂತರ ಇವಿಎಂ ಜೊತೆಗೆ ವಾಹನವನ್ನು ಹೆಚ್ಚಿನ ತನಿಖೆಗಾಗಿ ಕೊಟ್ವಾಲಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಈ ವಿಷಯವನ್ನು ಪರಿಶೀಲನೆ ಮಾಡುತ್ತಿದ್ದಾರೆ. ಅವರ ತನಿಖೆ ಆಧಾರದ ಮೇಲೆ ಕೇಸ್ ದಾಖಲಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆ ಸ್ನ ಹಿರಿಯ ನಾಯಕರು ಕೊಟ್ವಾಲಿ ಪೊಲೀಸ್ ಠಾಣೆಗೆ ಧಾವಿಸಿದ್ದರು. ಅಲ್ಲಿ ಅವರು ತೀವ್ರ ವಾಗ್ವಾದ ನಡೆಸಿದ್ದಾರೆ. 288 ಸದಸ್ಯರ ರಾಜ್ಯ ವಿಧಾನಸಭೆಗೆ ಬುಧವಾರ ಚುನಾವಣೆ ನಡೆದಿದೆ.