ರಾಹುಲ್ ವಿರುದ್ಧ ದ್ವೇಷ ಹೇಳಿಕೆ: ಎನ್‌ಡಿಎ ನಾಯಕರ ವಿರುದ್ಧ ಕಾಂಗ್ರೆಸ್ ದೂರು
x

ರಾಹುಲ್ ವಿರುದ್ಧ ದ್ವೇಷ ಹೇಳಿಕೆ: ಎನ್‌ಡಿಎ ನಾಯಕರ ವಿರುದ್ಧ ಕಾಂಗ್ರೆಸ್ ದೂರು

ರಾಹುಲ್‌ ಗಾಂಧಿ ಅವರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರುವ ಹಾಗೂ ದೇಶದಾದ್ಯಂತ ಶಾಂತಿ ಕದಡುವ ಉದ್ದೇಶದಿಂದ ಎನ್ಡಿಎ ನಾಯಕರು ಹೇಳಿಕೆ ನೀಡುತ್ತಿದ್ದಾರೆ ಎಂದು ಪಕ್ಷ ಆರೋಪಿಸಿದೆ.


ರಾಹುಲ್ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಆಡಳಿತಾರೂಢ ಎನ್‌ಡಿಎ ನಾಯಕರ ಇತ್ತೀಚಿನ ಹೇಳಿಕೆಗಳ ವಿರುದ್ಧ ಕಾಂಗ್ರೆಸ್ ಬುಧವಾರ (ಸೆಪ್ಟೆಂಬರ್ 18) ದೂರು ದಾಖಲಿಸಿದೆ.

ಜಮ್ಮು-ಕಾಶ್ಮೀರ ಮತ್ತು ಹರ್ಯಾಣದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಶದಾದ್ಯಂತ ಶಾಂತಿ ಕದಡುವ ಉದ್ದೇಶದಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರ ಸುರಕ್ಷತೆ ಮತ್ತು ಭದ್ರತೆಗೆ ಧಕ್ಕೆ ತರಲು ಈ ಹೇಳಿಕೆ ನೀಡಲಾಗಿದೆ ಎಂದು ಪಕ್ಷ ಆರೋಪಿಸಿದೆ. ಎಐಸಿಸಿ ಖಜಾಂಚಿ ಮತ್ತು ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಅವರು ತುಘಲಕ್ ರೋಡ್ ಪೊಲೀಸ್ ಠಾಣೆ ಅಧಿಕಾರಿಗೆ ಸಲ್ಲಿಸಿದ ದೂರಿನಲ್ಲಿ ಬಿಜೆಪಿ ನಾಯಕರಾದ ತರ್ವಿಂದರ್ ಸಿಂಗ್ ಮಾರ್ವಾ, ರವನೀತ್ ಸಿಂಗ್ ಬಿಟ್ಟು ಮತ್ತು ರಘುರಾಜ್ ಸಿಂಗ್ ಹಾಗೂ ಶಿವಸೇನೆಯ ಶಾಸಕ ಸಂಜಯ ಗಾಯಕವಾಡ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದೆ. ಇವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮಾಕೆನ್‌ ಕೋರಿದರು.

ರಾಜಕೀಯದ ಅಧಮ ಸ್ಥಿತಿ: ದೂರು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಕೆನ್, ʻಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿರುವುದು ನಮಗೆ ತಿಳಿದಿದೆ. ಆನಂತರವೂ ಇಂತಹ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಇದ ಕ್ಕಿಂತ ಕೆಳಮಟ್ಟಕ್ಕೆ ಇಳಿಯಲು ಸಾಧ್ಯವಿಲ್ಲ. ಬಿಜೆಪಿಯ ಒಬ್ಬ ನಾಯಕನಲ್ಲ; ಅನೇಕ ನಾಯಕರು ಇಂತಹ ಹೇಳಿಕೆ ನೀಡಿದ್ದರೂ,ಆ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ,ʼ ಎಂದು ಅವರು ಹೇಳಿದರು.

ʻರಾಹುಲ್ ಅವರು ಎಸ್‌ಸಿ, ಎಸ್‌ಟಿ, ಒಬಿಸಿ, ಬುಡಕಟ್ಟು ಮತ್ತು ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಅವರ ಮಾತು ಬಿಜೆಪಿಯವರಿಗೆ ಇಷ್ಟವಿಲ್ಲ. ಇದೇ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಕಾಂಗ್ರೆಸ್ ಇದಕ್ಕೆಲ್ಲ ಹೆದರುವುದಿಲ್ಲ,ʼ ಎಂದು ಹೇಳಿದರು.

ಬಹಿರಂಗ ಹತ್ಯೆ ಬೆದರಿಕೆ: ಸೆಪ್ಟೆಂಬರ್ 11 ರಂದು ಬಿಜೆಪಿ ಕಾರ್ಯಕ್ರಮವೊಂದರಲ್ಲಿ ಮಾರ್ವಾ ಅವರು ರಾಹುಲ್ ಗಾಂಧಿಗೆ ಹತ್ಯೆ ಬೆದರಿಕೆ ಹಾಕಿದರು. ʻಸರಿಯಾಗಿ ವರ್ತಿಸದಿದ್ದರೆ ನಿಮ್ಮ ಅಜ್ಜಿಯ ನೀವು ದಾರಿಯನ್ನೇ ಹಿಡಿಯುತ್ತೀರಿ ಎಂದು ಬೆದರಿಸಿದ್ದರು. ಶಿವಸೇನೆಯ ಶಾಸಕ ಗಾಯಕ್‌ವಾಡ್‌, ವಿರೋಧ ಪಕ್ಷದ ನಾಯಕನ ನಾಲಿಗೆ ಕತ್ತರಿಸುವವರಿಗೆ 11 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಪ್ರತಿಪಕ್ಷದ ನಾಯಕ ʻದೇಶದ ನಂಬರ್ ಒನ್ ಭಯೋತ್ಪಾದಕʼ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಬಿಟ್ಟು ಹಾಗೂ ಉತ್ತರ ಪ್ರದೇಶ ಸರ್ಕಾರದ ಸಚಿವ ರಘುರಾಜ್ ಸಿಂಗ್ ಹೇಳಿಕೆ ನೀಡಿದ್ದರು.

ಮಹಿಳೆಯರು, ಯುವಜನರು, ದಲಿತರು ಮತ್ತು ಇತರ ಅಂಚಿನಲ್ಲಿರುವ ಜನರ ಸಮಸ್ಯೆಗಳನ್ನು ರಾಹುಲ್‌ ಎತ್ತುತ್ತಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಕಾಂಗ್ರೆಸ್ ಹೇಳಿದೆ.

Read More
Next Story