Maharashtra Election| ಮಹಾಯುತಿ- ಮಹಾ ವಿಕಾಸ್‌ ಅಘಾಡಿ ಮಧ್ಯೆ ಬಿಟ್‌ಕಾಯಿನ್‌ ಸಮರ
x

Maharashtra Election| ಮಹಾಯುತಿ- ಮಹಾ ವಿಕಾಸ್‌ ಅಘಾಡಿ ಮಧ್ಯೆ ಬಿಟ್‌ಕಾಯಿನ್‌ ಸಮರ

ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನಾಯಕರು ಮತದಾರರಿಗೆ ಹಣ ಹಂಚಲು ಬಿಟ್‌ಕಾಯಿನ್ ಹಗರಣದ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ.


ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಟ್‌ ಕಾಯಿನ್ ಹಗರಣ ಪ್ರತಿಧ್ವನಿಸುತ್ತಿದೆ. ಬುಧವಾರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಮತ್ತು ಎನ್‌ಸಿಪಿ (ಶರದ್ ಬಣ) ನಾಯಕಿ ಸುಪ್ರಿಯಾ ಸುಳೆ ಅವರು ಬಿಟ್‌ ಕಾಯಿನ್ ದುರುಪಯೋಗದ ಕುರಿತು ಮಾತನಾಡಿರುವ ಆಡಿಯೊ ತುಣುಕನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಮತದಾರರಿಗೆ ಹಣ ಹಂಚಲು ಬಿಟ್‌ಕಾಯಿನ್ ಹಗರಣದ ಲಾಭ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು, ಮತದಾನದ ದಿನವೇ ನೈಜ ಮತದಾರರಿಗೆ ಸುಳ್ಳು ಮಾಹಿತಿ ಹರಡುತ್ತಿರುವ ಬಿಜೆಪಿಯ ಕುತಂತ್ರವಾಗಿದೆ ಎಂದು ಸಾಮಾಜಿಕ ಮಾಧ್ಯಮದ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹಾಗೂ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರು 2018ರ ಬಿಟ್‌ ಕಾಯಿನ್ ಹಗರಣದ ಆಪರೇಟರ್‌ಗಳ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಚುನಾವಣೆಯಲ್ಲಿ ಮತದಾರರಿಗೆ ಬಿಟ್‌ಕಾಯಿನ್ ಹಗರಣದ ಹಣ ಬಳಸಲು ಪ್ರಯತ್ನಿಸಿದ್ದಾರೆ. ಇದರಿಂದ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಕುರಿತು ಗಂಭೀರ ಪ್ರಶ್ನೆ ಎದ್ದಿದೆ. ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿಯ ಕುತಂತ್ರ ಇದಾಗಿದೆ. ಕೂಡಲೇ ಕಾಂಗ್ರೆಸ್ ಹಾಗೂ ಎನ್‌ಸಿಪಿ ನಾಯಕರು ಆಡಿಯೋ ತುಣುಕುಗಳ ಕುರಿತು ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಒತ್ತಾಯಿಸಿದ್ದಾರೆ.

ಬಿಜೆಪಿ ನಾಯಕರ ಆರೋಪದ ಕುರಿತಂತೆ ಟ್ವೀಟ್‌ ಮಾಡಿರುವ ಸುಪ್ರಿಯಾ ಸುಳೆ ಅವರು, ಬಿಟ್ಕಾಯಿನ್ ದುರುಪಯೋಗದ ಸುಳ್ಳು ಆರೋಪ ಮಾಡಿರುವ ಬಿಜೆಪಿ ವಿರುದ್ಧ ಚುನಾವಣಾ ಆಯೋಗ ಹಾಗೂ ಸೈಬರ್ ಅಪರಾಧ ವಿಭಾಗಕ್ಕೆ ದೂರು ಸಲ್ಲಿಸಲಾಗುವುದು. ಮತದಾನದ ಸಮಯದಲ್ಲಿ ಬಿಜೆಪಿಯ ಈ ಆರೋಪದ ಹಿಂದಿರುವ ಉದ್ದೇಶ ಸ್ಪಷ್ಟವಾಗಿದೆ. ಸುಳ್ಳು ಹಾಗೂ ನೀಚ ಹೇಳಿಕೆಗಳು ಪ್ರಜಾಪ್ರಭುತ್ವ ಹಾಗೂ ಸಂವಿಧಾನಬಾಹಿರವಾಗಿವೆ ಎಂದು ಟೀಕಿಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ನಾನಾ ಪರೋಲೆ ಹಾಗೂ ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಅವರದ್ದು ಎನ್ನಲಾದ ಬಿಟ್‌ ಕಾಯಿನ್‌ ಕುರಿತ ಆಡಿಯೋ ಸಂಭಾಷಣೆ ಮತ್ತು ಸಿಗ್ನಲ್ ಚಾಟ್‌ಗಳನ್ನು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹಂಚಿಕೊಂಡಿದ್ದರು. ಆಡಿಯೋದಲ್ಲಿ ಇಬ್ಬರು ನಾಯಕರು ಬಿಟ್‌ ಕಾಯಿನ್ ಬದಲು ಚುನಾವಣೆಗೆ ಹಣ ಬೇಕು ಎಂದು ಸಾರಥಿ ಅಸೋಸಿಯೇಟ್ಸ್‌ ಉದ್ಯೋಗಿ ಗೌರವ್‌ ಮೆಹ್ತಾ ಅವರನ್ನು ಕೇಳಿದ್ದಾರೆ. ಇದಕ್ಕೆ ಮೆಹ್ತಾ ವಿಚಾರಣೆಯ ಆತಂಕ ವ್ಯಕ್ತಪಡಿಸಿದಾಗ, ನೀವು ಯಾವುದೇ ವಿಚಾರಣೆ ಬಗ್ಗೆ ಚಿಂತಿಸಬೇಡಿ, ನಾವು ಅಧಿಕಾರಕ್ಕೆ ಬಂದ ಎಲ್ಲವನ್ನೂ ನೋಡಿಕೊಳ್ಳುತ್ತೇವೆ ಎಂದು ಹೇಳಿರುವುದು ಆಡಿಯೋದಲ್ಲಿದೆ.

ಆಡಿಯೋ ಸಂಭಾಷಣೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಕೂಡ ಇದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಟ್‌ ಕಾಯಿನ್‌ ಹಗರಣದಲ್ಲಿ ದೊಡ್ಡ ದೊಡ್ಡ ಕುಳಗಳು ಶಾಮೀಲಾಗಿರುವುದು ಇದರಿಂದ ತಿಳಿದುಬರುತ್ತದೆ. ಅವರು ಯಾರೆಂಬುದನ್ನು ಕಾಂಗ್ರೆಸ್‌ ಹಾಗೂ ಎನ್‌ಸಿಪಿ ನಾಯಕರು ಬಹಿರಂಗಪಡಿಸಬೇಕು ಎಂದು ತ್ರಿವೇದಿ ಆಗ್ರಹಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮಹಾವಿಕಾಸ್‌ ಅಘಾಡಿ ಅಧಿಕಾರದ ಅವಧಿಯಲ್ಲಿ ಗೃಹ ಸಚಿವರು ಪ್ರತಿ ತಿಂಗಳು 100 ಕೋಟಿ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಪೊಲೀಸ್ ಆಯುಕ್ತರು ಆರೋಪಿಸಿದ್ದರು. ಉತ್ತಮ ಆಡಳಿತ ಮತ್ತು ಸಮಾಜದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಡಿಜಿಟಲ್ ವಹಿವಾಟು ಬಳಸದೇ ಭ್ರಷ್ಟಾಚಾರಕ್ಕೆ ಬಳಸುತ್ತಿದೆ. ಆಡಿಯೋ ಬಹಿರಂಗದಿಂದ ಅದರ ಮುಖವಾಡ ಕಳಚಿಬಿದ್ದಿದೆ ಎಂದು ತ್ರಿವೇದಿ ಹೇಳಿದ್ದಾರೆ.

ಮಂಗಳವಾರವಷ್ಟೇ ಮಹಾರಾಷ್ಟ್ರದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರು. ವೋಟಿಗಾಗಿ ಹಣ ಹಂಚಿದ್ದಾರೆ ಎಂದು ಎಂದು ಪ್ರತಿಪಕ್ಷಗಳು ವೀಡಿಯೊ ಉಲ್ಲೇಖಿಸಿ ಆರೋಪಿಸಿದ್ದವು. ಈ ಆರೋಪವನ್ನು ಬಿಜೆಪಿ ತಿರಸ್ಕರಿಸಿತ್ತು.

Read More
Next Story