
ಇರಾನ್ ಮೇಲೆ ಬೃಹತ್ ಸೇನಾ ಕಾರ್ಯಾಚರಣೆಗೆ ಅಮೆರಿಕ ಸಿದ್ಧತೆ: ವರದಿ
ಅಮೆರಿಕ-ಇಸ್ರೇಲ್ ಒಕ್ಕೂಟ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಪೆಂಟಗನ್ನ ಈ ನಡೆಯು ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನಕ್ಕೆ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ದಟ್ಟವಾಗುತ್ತಿದ್ದು, ಇರಾನ್ ವಿರುದ್ಧ ಬೃಹತ್ ಮಟ್ಟದ ಸೇನಾ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಮೆರಿಕ ಸಕಲ ಸಿದ್ಧತೆಗಳನ್ನು ನಡೆಸುತ್ತಿದೆ ಎಂಬ ಆತಂಕಕಾರಿ ವಿಚಾರ ಬಹಿರಂಗವಾಗಿದೆ.
ಅಮೆರಿಕ-ಇಸ್ರೇಲ್ ಒಕ್ಕೂಟ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿರುವ ಬೆನ್ನಲ್ಲೇ, ಪೆಂಟಗನ್ನ ಈ ನಡೆಯು ಜಾಗತಿಕ ಮಟ್ಟದಲ್ಲಿ ತೀವ್ರ ಸಂಚಲನಕ್ಕೆ ಹಾಗೂ ಆತಂಕಕ್ಕೆ ಕಾರಣವಾಗಿದೆ.
ಇರಾನ್ ಮೇಲೆ ಸತತವಾಗಿ ಹಲವು ವಾರಗಳ ಕಾಲ ಮುಂದುವರಿಯಲಿರುವ ಬೃಹತ್ ಮಿಲಿಟರಿ ಕಾರ್ಯಾಚರಣೆಗೆ ಅಮೆರಿಕ ಸೇನೆ ಸಜ್ಜಾಗುತ್ತಿದೆ ಎಂದು ಪ್ರತಿಷ್ಠಿತ 'ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯು ಅಮೆರಿಕದ ಉನ್ನತ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಈ ಕಾರ್ಯಾಚರಣೆಯು ವಿಶೇಷ ಪಡೆಯ ಹಾಗೂ ಸಾಂಪ್ರದಾಯಿಕ ಶೈಲಿಯ ಮಿಲಿಟರಿ ತಂತ್ರಗಾರಿಕೆಗಳನ್ನು ಒಳಗೊಂಡಿರುವ ಸಾಧ್ಯತೆಗಳು ದಟ್ಟವಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಅಮೆರಿಕದ ರಕ್ಷಣಾ ಇಲಾಖೆಯು ಈಗಾಗಲೇ ದಾಳಿಗೆ ಅಗತ್ಯವಿರುವ ನೀಲನಕ್ಷೆಯನ್ನು ಸಿದ್ಧಪಡಿಸಿಕೊಂಡಿದೆ ಎನ್ನಲಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರದ ಮೇಲೆ ಕಣ್ಣು
ಸೇನಾ ಪಡೆಗಳು ಕಾರ್ಯಾಚರಣೆಗೆ ಸಂಪೂರ್ಣವಾಗಿ ಸನ್ನದ್ಧವಾಗಿದ್ದರೂ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಬೃಹತ್ ಸೇನಾ ಕ್ರಮಕ್ಕೆ ಅಧಿಕೃತವಾಗಿ ಅನುಮೋದನೆ ನೀಡುತ್ತಾರೆಯೇ ಎಂಬ ಕುರಿತು ಇನ್ನೂ ಅನಿಶ್ಚಿತತೆ ಮುಂದುವರಿದಿದೆ. ಪಶ್ಚಿಮ ಏಷ್ಯಾದಲ್ಲಿ ಅಮೆರಿಕದ ನೇರ ಸೇನಾ ಹಸ್ತಕ್ಷೇಪವು ಯುದ್ಧದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಅಪಾಯವಿರುವುದರಿಂದ, ಶ್ವೇತಭವನವು ಅಳೆದು ತೂಗಿ ಹೆಜ್ಜೆ ಇಡುತ್ತಿದೆ. ಇದೀಗ ಎಲ್ಲರ ದೃಷ್ಟಿ ಡೊನಾಲ್ಡ್ ಟ್ರಂಪ್ ಅವರ ಅಂತಿಮ ನಿರ್ಧಾರದ ಮೇಲೆ ನೆಟ್ಟಿದೆ.
ಜಾಗತಿಕ ಇಂಧನ ಬಿಕ್ಕಟ್ಟು
ಅಮೆರಿಕ ಬೆಂಬಲಿತ ಇಸ್ರೇಲ್ ಹಾಗೂ ಇರಾನ್ ನಡುವಿನ ಈ ಭೀಕರ ಯುದ್ಧವು ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಯುದ್ಧದ ಭೀತಿಯಿಂದಾಗಿ ಜಾಗತಿಕ ತೈಲ ವ್ಯಾಪಾರಕ್ಕೆ ಅತ್ಯಂತ ಪ್ರಮುಖವಾಗಿರುವ ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರವು ಬಹುತೇಕ ಬಂದ್ ಆಗಿದೆ. ಜಗತ್ತಿನ ಪ್ರಮುಖ ಕಚ್ಚಾ ತೈಲ ಸಾಗಣೆ ಮಾರ್ಗವೇ ಸ್ಥಗಿತಗೊಂಡಿರುವುದರಿಂದ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಜಾಗತಿಕ ಮಟ್ಟದಲ್ಲಿ ಬೃಹತ್ ಇಂಧನ ಬಿಕ್ಕಟ್ಟು ತಲೆದೋರಿದೆ.

