
ಯುಕೆಪಿ 3ನೇ ಹಂತಕ್ಕೆ ಆಂಧ್ರದ ಕ್ಯಾತೆ: ದೆಹಲಿಯಲ್ಲಿ ರಾಜ್ಯ ಸರ್ವಪಕ್ಷಗಳ ಸಂಸದರ ಸಭೆ ಕರೆದ ಡಿಸಿಎಂ
ಯುಕೆಪಿ ಯೋಜನೆಯ 3ನೇ ಹಂತವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಕೈಗೊಂಡ ತೀರ್ಮಾನದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರವು ಕೇಂದ್ರದ ಮೆಟ್ಟಿಲೇರಿರುವುದು ರಾಜ್ಯದ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಈಗ ಮತ್ತೊಮ್ಮೆ ಅಂತಾರಾಜ್ಯ ರಾಜಕೀಯ ಸಮರದ ಕೇಂದ್ರಬಿಂದುವಾಗಿದೆ.
ಯೋಜನೆಯ 3ನೇ ಹಂತವನ್ನು ಜಾರಿಗೊಳಿಸಲು ರಾಜ್ಯ ಸರ್ಕಾರವು ಕೈಗೊಂಡ ತೀರ್ಮಾನದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರವು ಕೇಂದ್ರದ ನೊರೆ ಹೋಗಿರುವುದು ಮತ್ತು ಭೂಸ್ವಾಧೀನ ಪ್ರಕ್ರಿಯೆಗೆ ತಡೆಯೊಡ್ಡಲು ಯತ್ನಿಸುತ್ತಿರುವುದು ರಾಜ್ಯದ ಆಕ್ರೋಶಕ್ಕೆ ಕಾರಣವಾಗಿದೆ.
ಆಂಧ್ರ ಪ್ರದೇಶದ ಕ್ಯಾತೆಯನ್ನು ಎದುರಿಸಲು ರಾಜ್ಯ ಸರ್ಕಾರ ಈಗ ಸರ್ವಪಕ್ಷ ನಿಯೋಗದ ಅಸ್ತ್ರವನ್ನು ಬಳಸಲು ಮುಂದಾಗಿದೆ. ದೆಹಲಿಯಲ್ಲಿ ರಾಜ್ಯದ ಸಂಸದರೊಂದಿಗೆ ಸಭೆ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೀರ್ಮಾನಿಸಿದ್ದಾರೆ.
ಆಂಧ್ರ ಪ್ರದೇಶದ ಆಕ್ಷೇಪಕ್ಕೆ ಕೇಂದ್ರ ಸರ್ಕಾರವು ಸ್ಪಷ್ಟನೆ ಕೇಳಿ ಪತ್ರ ಬರೆದಿರುವುದು ರಾಜ್ಯಕ್ಕೆ ಅಸಮಾಧಾನ ತಂದಿದೆ. ನ್ಯಾಯಾಧೀಕರಣದ ಅಂತಿಮ ಅಧಿಸೂಚನೆ ಹೊರಡಿಸುವಲ್ಲಿ ಕೇಂದ್ರ ವಿಳಂಬ ಮಾಡುತ್ತಿರುವುದು ವಿವಾದಕ್ಕೆ ತುಪ್ಪ ಸುರಿದಂತಾಗಿದೆ.
ಈ ಸಂಬಂಧ ಬಾಗಲಕೋಟೆಯಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಲ್ಲಿ ಒಂದಾದ ಯುಕೆಪಿ 3ನೇ ಹಂತಕ್ಕೆ ತಕರಾರು ಎತ್ತಿರುವ ಹಾಗೂ ತುಂಗಭದ್ರಾ ಅಣೆಕಟ್ಟಿನ ನೀರು ಪೋಲು ತಡೆಯಲು ಸಹಕಾರ ನೀಡದಿರುವ ಆಂಧ್ರ ಪ್ರದೇಶದ ನಡೆ ವಿರುದ್ಧ ಧ್ವನಿ ಎತ್ತಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರಾಜ್ಯದ ಸಂಸದರ ಜತೆ ದೆಹಲಿಯ ಕರ್ನಾಟಕ ಭವನದಲ್ಲಿ ಬರುವ ಮಂಗಳವಾರ ಸಭೆ ನಡೆಸಲಾಗುವುದು ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಹಾಗೂ ಭೂಸ್ವಾಧೀನ ಪ್ರಕ್ರಿಯೆ ಮಾಡಬಾರದು ಎಂದು ಆಂಧ್ರ ಪ್ರದೇಶದವರು ಕೇಂದ್ರ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಬರೆದಿದ್ದು, ಈ ವಿಚಾರವಾಗಿ ಕೇಂದ್ರ ಸರ್ಕಾರ ನಮಗೆ ಪತ್ರ ಬರೆದು ಸ್ಪಷ್ಟನೆ ಕೇಳಿದೆ.
ನ್ಯಾಯಾಧೀಕರಣ ಆದೇಶದ ಪ್ರಕಾರ ನಮ್ಮ ಪಾಲಿನ ನೀರಿನ ಬಳಕೆಗೆ ಯೋಜನೆ ಮಾಡುತ್ತಿದ್ದು, ಈಗಾಗಲೇ 26 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಆರಂಭಿಸಿದ್ದೇವೆ. ಈಗಾಗಲೇ ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ಮಾಡುತ್ತಿಲ್ಲ. 2010 ರಲ್ಲಿ ಆಗಿರುವ ಆದೇಶದ ಅನುಸಾರ ನಮ್ಮ ಪಾಲಿನ ನೀರು ಬಳಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಇದಕ್ಕೆ ಆಂಧ್ರ ಪ್ರದೇಶ ಸರ್ಕಾರ ತಗಾದೆ ತೆಗೆದಿದೆ. ಇದರ ಜತೆಗೆ, ತುಂಗಭದ್ರಾ ಅಣೆಕಟ್ಟೆಯಿಂದ ನಮಗೆ 30 ಟಿಎಂಸಿ ನೀರು ವ್ಯರ್ಥವಾಗುತ್ತಿದ್ದು, ಇದಕ್ಕೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಆಂಧ್ರ ಸರ್ಕಾರ ನಮಗೆ ಸಹಕಾರ ನೀಡುತ್ತಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಸಂಸದರ ಜತೆ ಚರ್ಚೆ ಮಾಡಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲು ಸಚಿವರಾದ ಹೆಚ್.ಕೆ ಪಾಟೀಲ್, ಎಂ.ಬಿ. ಪಾಟೀಲ್, ಬೋಸರಾಜು ಅವರೊಂದಿಗೆ ದೆಹಲಿಗೆ ತೆರಳುವುದಾಗಿ ತಿಳಿಸಿದರು.
ಆಂಧ್ರಪ್ರದೇಶದ ತಕರಾರು
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವು ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಕೃಷ್ಣಾ ನದಿ ನೀರು ಹಂಚಿಕೆ ನ್ಯಾಯಾಧೀಕರಣದ ತೀರ್ಪಿನ ಪ್ರಕಾರ, ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸಲು ರಾಜ್ಯಕ್ಕೆ ಅವಕಾಶವಿದೆ. ಇದರಿಂದ ಸುಮಾರು 130 ಟಿಎಂಸಿ ಹೆಚ್ಚಿನ ನೀರನ್ನು ಸಂಗ್ರಹಿಸಲು ಮತ್ತು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಆಂಧ್ರ ಪ್ರದೇಶ ಸರ್ಕಾರವು ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಅಣೆಕಟ್ಟಿನ ಎತ್ತರ ಹೆಚ್ಚಳವಾದರೆ ಕೆಳಭಾಗದ ರಾಜ್ಯಗಳಿಗೆ (ಆಂಧ್ರ ಮತ್ತು ತೆಲಂಗಾಣ) ನೀರಿನ ಹರಿವು ಕಡಿಮೆಯಾಗುತ್ತದೆ ಎಂಬುದು ಆ ರಾಜ್ಯದ ವಾದವಾಗಿದೆ. ಆದರೆ, ರಾಜ್ಯ ಸರ್ಕಾರವು ನ್ಯಾಯಾಧೀಕರಣದ ಆದೇಶದಂತೆಯೇ ನಾವು ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುತ್ತಿದ್ದೇವೆ. ಭೂಸ್ವಾಧೀನ ಮತ್ತು ಪುನರ್ವಸತಿ ಪ್ರಕ್ರಿಯೆಗಾಗಿ ಈಗಾಗಲೇ ಸಾವಿರಾರು ಕೋಟಿ ರೂ. ಗಳನ್ನು ವ್ಯಯಿಸಲಾಗಿದೆ. ರಾಜ್ಯ ಸರ್ಕಾರವು ಈಗಾಗಲೇ 26 ಸಾವಿರ ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಆಂಧ್ರದ ಆಕ್ಷೇಪವು ಕೇವಲ ಅಭಿವೃದ್ಧಿಗೆ ಅಡ್ಡಿಪಡಿಸುವ ತಂತ್ರವಾಗಿದೆ ಎಂದು ಹೇಳುತ್ತಿದೆ.
ಇತರೆ ನೆರೆ ರಾಜ್ಯಗಳಿಂದಲೂ ಅಡ್ಡಿ
ಕೇವಲ ಆಂಧ್ರ ಪ್ರದೇಶ ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳೂ ಕೂಡ ಕರ್ನಾಟಕದ ಯೋಜನೆಗೆ ಅಡ್ಡಿಪಡಿಸುತ್ತಿವೆ. ಕೃಷ್ಣಾ ನದಿ ಹರಿಯುವ ರಾಜ್ಯಗಳ ನಡುವೆ ನೀರಿನ ಹಂಚಿಕೆಯ ಹಗ್ಗಜಗ್ಗಾಟ ದಶಕಗಳಿಂದ ನಡೆಯುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯು ಕೇವಲ ಒಂದು ನೀರಾವರಿ ಯೋಜನೆಯಲ್ಲ, ಅದು ಉತ್ತರ ಕರ್ನಾಟಕದ ಅಸ್ಮಿತೆ. ಕರ್ನಾಟಕವು ನ್ಯಾಯಾಧೀಕರಣ ನೀಡಿದ ಪಾಲಿನ ನೀರನ್ನು ಬಳಸಿಕೊಳ್ಳಲು ಹವಣಿಸುತ್ತಿದೆಯೇ ಹೊರತು ಬೇರೆ ರಾಜ್ಯದ ಪಾಲನ್ನಲ್ಲ. ನೆರೆ ರಾಜ್ಯಗಳ ಆಕ್ಷೇಪವು ರಾಜಕೀಯ ಪ್ರೇರಿತವಾಗಿದ್ದು, ಇದನ್ನು ಕಾನೂನಾತ್ಮಕವಾಗಿ ಮತ್ತು ರಾಜತಾಂತ್ರಿಕವಾಗಿ ಎದುರಿಸುವುದು ಅನಿವಾರ್ಯವಾಗಿದೆ.
ಸಚಿವ ಸಂಪುಟದಲ್ಲಿ ಕೈಗೊಂಡ ತೀರ್ಮಾನ
ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯುಕೆಪಿ 3ನೇ ಹಂತಕ್ಕೆ ಚಾಲನೆ ನೀಡಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2025ರ ಸೆ.16ರಂದು ಮಹತ್ವದ ನಿರ್ಧಾರ ಕೈಗೊಂಡಿತು. ಯೋಜನೆಯ ಪೂರ್ಣ ಅನುಷ್ಠಾನಕ್ಕಾಗಿ ಒಂದೇ ಹಂತದಲ್ಲಿ 1.33 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ. ರೈತರ ಹಿತರಕ್ಷಣೆಗಾಗಿ ಪ್ರತಿ ಎಕರೆಗೆ 35 ರಿಂದ 40 ಲಕ್ಷ ರೂ.ವರೆಗೆ ಪರಿಹಾರ ನಿಗದಿಪಡಿಸಲಾಗಿದೆ. ಇದು ಈ ಭಾಗದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಒಟ್ಟು 70 ಸಾವಿರ ಕೋಟಿ ರೂ. ಬೃಹತ್ ಮೊತ್ತವನ್ನು ಮೂರು ಹಂತಗಳಲ್ಲಿ ವ್ಯಯಿಸಲು ಸರ್ಕಾರ ಮುಂದಾಗಿದೆ. ಈಗಾಗಲೇ ಯೋಜನೆಗಾಗಿ 20 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದೆ.

