
ಹೈಕೋರ್ಟ್
ಸೋಮನಹಳ್ಳಿ ಟೋಲ್ ವಿವಾದ: ಸ್ಥಳೀಯರಿಗೆ ಉಚಿತ ಪಾಸ್ ವಿತರಣೆಗೆ ಹೈಕೋರ್ಟ್ ಸೂಚನೆ
ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಉಚಿತ ಪ್ರವೇಶ ನೀಡುತ್ತಿಲ್ಲ. ಒಂದು ತಿಂಗಳೊಳಗೆ ಉಚಿತ ಪಾಸ್‌ಗಳನ್ನು ನೀಡಬೇಕು ಎಂದು ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಪ್ಲಾಜಾ ನಿರ್ವಹಿಸುತ್ತಿರುವ ಸಂಸ್ಥೆಗೆ ನ್ಯಾಯಾಲಯ ನಿರ್ದೇಶಿಸಿದೆ.
ಕನಕಪುರ ರಸ್ತೆ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಶುಲ್ಕ ಸಂಗ್ರಹವು ರಾಷ್ಟ್ರೀಯ ಹೆದ್ದಾರಿ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಶುಲ್ಕ ಸಂಗ್ರಹ ಪ್ರಶ್ನಿಸಿ ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಏಕಸದಸ್ಯ ನ್ಯಾಯಪೀಠ ಮಹತ್ವದ ಆದೇಶ ಹೊರಡಿಸಿದೆ.
ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಉಚಿತ ಪ್ರವೇಶ ನೀಡುತ್ತಿಲ್ಲ. ಒಂದು ತಿಂಗಳೊಳಗೆ ಉಚಿತ ಪಾಸ್‌ಗಳನ್ನು ನೀಡಬೇಕು ಎಂದು ಹೆದ್ದಾರಿ ಪ್ರಾಧಿಕಾರ ಹಾಗೂ ಟೋಲ್ ಪ್ಲಾಜಾ ನಿರ್ವಹಿಸುತ್ತಿರುವ ಸಂಸ್ಥೆಗೆ ನ್ಯಾಯಾಲಯ ನಿರ್ದೇಶಿಸಿದೆ.
ನಿಯಮ ಪಾಲಿಸದಿದ್ದರೆ ಟೋಲ್ ಸಂಗ್ರಹ ಸ್ಥಗಿತ
30 ದಿನಗಳೊಳಗೆ ನ್ಯಾಯಾಲಯ ನೀಡಿರುವ ನಿರ್ದೇಶನ ಪಾಲಿಸದಿದ್ದರೆ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಶುಲ್ಕ ಸಂಗ್ರಹವನ್ನು ತಕ್ಷಣದಿಂದಲೇ ನಿಲ್ಲಿಸಬೇಕು. ಟೋಲ್ ಪ್ಲಾಜಾವನ್ನು ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹದ ನಿರ್ಣಯ) ನಿಯಮಗಳು-2008ರ ಪ್ರಕಾರ ಬೇರೆಡೆ ಸ್ಥಳಾಂತರಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ಒದಗಿಸದೆ ಟೋಲ್ ವಿಧಿಸುವುದು ಏಕಪಕ್ಷೀಯ ಮತ್ತು ಅಸಮಂಜಸ. ಇಂತಹ ಸೌಲಭ್ಯವು ಪುರಸಭೆ ಅಥವಾ ನಗರ ವ್ಯಾಪ್ತಿಯಿಂದ 10 ಕಿ.ಮೀ ದೂರವಿರಬೇಕು. ಸುರಕ್ಷತಾ ಕ್ರಮ ಅಳವಡಿಸದೇ ಸ್ಥಳೀಯ ನಿವಾಸಿಗಳಿಂದ ಟೋಲ್ ಸಂಗ್ರಹಕ್ಕೆ ಒತ್ತಾಯ ಮಾಡುವುದು ಅನ್ಯಾಯ ಮತ್ತು ದಬ್ಬಾಳಿಕೆ ಎಂದು ನ್ಯಾಯಮೂರ್ತಿಗಳು ಗರಂ ಆಗಿದ್ದಾರೆ.
2025 ಮೇ 12 ರಿಂದ ಬೆಂಗಳೂರಿನಿಂದ-ಕನಕಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಶುಲ್ಕ ಸಂಗ್ರಹ ಆರಂಭಿಸಲಾಗಿತ್ತು. ಟೋಲ್ ಪ್ಲಾಜಾದಲ್ಲಿ 5 ಕಿ.ಮೀ. ಅಂತರದಲ್ಲಿರುವ ಸ್ಥಳೀಯರಿಂದಲೂ 60 ಕಿ.ಮೀ. ದೂರದ ಶುಲ್ಕ ವಸೂಲಿ ಮಾಡುತ್ತಿದ್ದ ಕ್ರಮ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು.

