
ಚನ್ನಪಟ್ಟಣದಲ್ಲಿ ಆನೆ ಶಿಕಾರಿ: ದಸರಾ ಆನೆ 'ಧನಂಜಯ' ನೇತೃತ್ವದ ಗಜಪಡೆ ಅಖಾಡಕ್ಕೆ
ಚನ್ನಪಟ್ಟಣ, ರಾಮನಗರ ಭಾಗದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಆನೆ ಹಾಗೂ ಒಂಟಿ ಸಲಗವನ್ನು ಸೆರೆಹಿಡಿಯಲು ದುಬಾರೆ ಶಿಬಿರದ ಆರು ಸಾಕಾನೆಗಳ ತಂಡ ಶನಿವಾರದಿಂದ ಬೃಹತ್ ಕಾರ್ಯಾಚರಣೆ ಆರಂಭಿಸಿದೆ.
ಕಳೆದ ಕೆಲ ತಿಂಗಳಿಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಹಾಗೂ ರಾಮನಗರ ತಾಲ್ಲೂಕಿನಾದ್ಯಂತ ರೈತರ ನಿದ್ದೆಗೆಡಿಸಿದ್ದ ಕಾಡಾನೆಗಳನ್ನು ಸೆರೆ ಹಿಡಿಯಲು ದುಬಾರೆ ಆನೆ ಶಿಬಿರದ ಸಾಕಾನೆಗಳ ತಂಡ ಅಖಾಡಕ್ಕಿಳಿದಿದೆ !
ಈ ಭಾಗದಲ್ಲಿರುವ ಆನೆಗಳ ಪೈಕಿ 2 ಆನೆಗಳನ್ನು ಸೆರೆಹಿಡಿಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಚನ್ನಪಟ್ಟಣ ಭಾಗದ ಚಿಕ್ಕಮಣ್ಣುಗುಡ್ಡೆಯಲ್ಲಿ ಒಂಟಿ ಸಲಗ ಇಲ್ಲವೆ ತೆಂಗಿನಕಲ್ಲುಅರಣ್ಯ ಪ್ರದೇಶದಲ್ಲಿ ಪುಂಡಾಟ ನಡೆಸುವ ಮಕ್ನಾ ಆನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದೆ. ಈ ಕಾರ್ಯಾಚರಣೆ ಆರಂಭಿಸುವ ಮುನ್ನ ಸಾಕಾನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.
ಅಪಾರ ಪ್ರಮಾಣದ ಬೆಳೆ ನಾಶ ಮಾಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಅತ್ಯಂತ ವ್ಯವಸ್ಥಿತವಾದ 'ಆನೆ ಸೆರೆ ಕಾರ್ಯಾಚರಣೆ'ಯನ್ನು ಹಮ್ಮಿಕೊಂಡಿದೆ. ಸಾರ್ವಜನಿಕರ ಜೀವ ಮತ್ತು ಆಸ್ತಿಗೆ ಸಂಚಕಾರ ತಂದೊಡ್ಡಿರುವ ಪುಂಡಾನೆಗಳನ್ನು ಮಣಿಸಲು ದುಬಾರೆ ಆನೆ ಶಿಬಿರದ ಆರು ಆನೆಗಳನ್ನು ಫಿಲ್ಡ್ ಗೆ ಇಳಿಸಲಾಗಿದೆ.
ಯಾವೆಲ್ಲಾ ಆನೆಗಳಿಂದ ಕಾರ್ಯಾಚರಣೆ?
ದುಬಾರೆ ಅನೆ ಶಿಬಿರದ ಸುಗ್ರೀವ, ಕಂಜನ್, ಧನಂಜಯ, ಹರ್ಷ, ಈಶ್ವರ, ಅಯ್ಯಪ್ಪ ಸೇರಿ ಒಟ್ಟು ಆರು ಸಾಕಾನೆಗಳು ಶನಿವಾರ ಸಂಜೆ ಚಿಕ್ಕಮಣ್ಣುಗುಡ್ಡೆ ಅರಣ್ಯದಲ್ಲಿನ ಕಾರ್ಯಾಚರಣೆ ನಡೆಸಿವೆ. ಸದ್ಯ ಎರಡೂ ಅರಣ್ಯ ಪ್ರದೇಶದಲ್ಲಿ ಇಲಾಖೆ ಆನೆ ಕಾರ್ಯಪಡೆ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ತೆಂಗಿನಕಲ್ಲು ಅರಣ್ಯದ ಮಕ್ನಾ ಆನೆಯು ದೇವರದೊಡ್ಡಿ, ನೆಲಮಲೆ, ಅವೇರಹಳ್ಳಿ, ಕವಣಾಪುರ ಭಾಗಗಳಲ್ಲಿ ಉಪಟಳ ನೀಡಿ ಜನರ ನಿದ್ರೆಗೆಡಿಸಿದರೆ, ಚಿಕ್ಕಮಣ್ಣುಗುಡ್ಡೆಯಲ್ಲಿರುವ ಒಂಟಿ ಸಲಗವು ಚನ್ನಮಾನಹಳ್ಳಿ ಅಂಜನಾಪುರ, ವಿಭೂತಿಕೆರೆ, ಕುಂಭಾಪುರ, ಬನ್ನಿಕುಪ್ಪೆ, ಚಿಕ್ಕೇನಹಳ್ಳಿ, ದೇವರದೊಡ್ಡಿ, ತಿಮ್ಮಯ್ಯನದೊಡ್ಡಿ ಭಾಗದಲ್ಲಿ ಓಡಾಟ ನಡೆಸಿ ನೂರಾರು ತೆಂಗಿನಮರ ನಾಶಪಡಿಸುತ್ತಿದೆಯಲ್ಲದೇ ರಸ್ತೆಯಲ್ಲಿ ಕಾಣಿಸಿಕೊಂಡು ಜನರಿಗೆ ಭಯ ತರಿಸಿದೆ.
ಶಿಬಿರಕ್ಕೆ ಪುಂಡಾನೆಗಳ ರವಾನೆ
ಪುಂಡಾನೆಗಳನ್ನು ಬಂಡೀಪುರ ಮತ್ತು ಮಡಿಕೇರಿ ಆನೆ ಶಿಬಿರಕ್ಕೆ ಸಾಗಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಿಕೊಂಡಿದೆ. ಅನೆಗಳ ಇರುವಿಕೆ ಸ್ಥಳ ಪತ್ತೆ ಹಚ್ಚಲು ಮತ್ತು ಕಾರ್ಯಾಚರಣೆಗೆ ಸುಲಭವಾಗುವ ಕಾರಣದಿಂದ ಎರಡು ಡೋನ್ ಕ್ಯಾಮೆರಾಗಳು ಸನ್ನದ್ಧವಾಗಿವೆ. ಸಿಬ್ಬಂದಿಗೆ ಔಷಧ, ನೀರು, ಊಟ, ಸಲಕರಣೆಗಳ ಸರಬರಾಜು ತಂಡ, ವೈದ್ಯರ ತಂಡ, ಆನೆ ಇರುವ ಸ್ಥಳ ಗುರುತಿಸುವ ತಂಡ, ಕಂಟ್ರೋಲ್ ರೂಂ ತಂಡ, ಸಾಕಾನೆಗಳ ಉಸ್ತುವಾರಿ ತಂಡ ರಚನೆಯಾಗಿವೆ.
ಪ್ರತೀ ತಂಡದಲ್ಲಿ ಸಿಬ್ಬಂದಿ ಜತೆ ರಾಮನಗರ, ಚನ್ನಪಟ್ಟಣ, ಕನಕಪುರ, ಸಾತನೂರು, ಮಾಗಡಿ ವಲಯ ಅರಣ್ಯಾಧಿಕಾರಿಗಳು ಇರಲಿದ್ದು, ಎಸಿಎಫ್ ಮೇಲುಸ್ತುವಾರಿ ವಹಿಸಲಿದ್ದಾರೆ.
ಕಾರ್ಯಾಚರಣೆಗೆ ದಸರಾ ಆನೆಯ ಸಾರಥ್ಯ
ಮೈಸೂರು ದಸರಾದಲ್ಲಿ ಪಾಲ್ಗೊಂಡ ಅನುಭವವಿರುವ ಧನಂಜಯ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ. ಇನ್ನುಳಿದ ಐದು ಆನೆಗಳು ಸಹ ಕಾಡಾನೆಗಳನ್ನು ಹಿಡಿಯುವಲ್ಲಿ ವಿಶೇಷ ತರಬೇತಿ ಪಡೆದುಕೊಂಡಿರುವ ಸಾಹಸಿ ಆನೆಗಳಾಗಿವೆ. ಡ್ರೋನ್ ಮೂಲಕ ಆನೆಗಳ ಚಲನವಲನದ ಮೇಲೆ ನಿಗಾ ಇರಿಸಲಾಗುತ್ತಿದ್ದು, ಅವುಗಳ ನಿಖರ ಸ್ಥಾನ ತಿಳಿದ ನಂತರ ಸಾಕಾನೆಗಳೊಂದಿಗೆ ತಂಡ ಮುನ್ನುಗ್ಗಲಿದೆ.
ಕಾಡಾನೆ ಪತ್ತೆಯಾದ ತಕ್ಷಣ ನುರಿತ ಪಶುವೈದ್ಯರ ತಂಡವು ಆನೆಗೆ ಅರವಳಿಕೆ ಚುಚ್ಚುಮದ್ದು (Tranquilizer) ನೀಡಲಿದೆ. ಆನೆ ಪ್ರಜ್ಞೆ ತಪ್ಪುತ್ತಿದ್ದಂತೆ ಸಾಕಾನೆಗಳ ಸಹಾಯದಿಂದ ಅದನ್ನು ಸುತ್ತುವರಿದು, ಕಾಲುಗಳಿಗೆ ಸರಪಳಿ ಕಟ್ಟಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತದೆ. ಸೆರೆಸಿಕ್ಕ ಆನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಲಾರಿಗಳ ಮೂಲಕ ಕೊಡಗಿನ ಮತ್ತಿಗೋಡು ಅಥವಾ ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿ.ವಿ. ಹಳ್ಳಿ, ತೆಂಗಿನಕಲ್ಲು, ಭೈರಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಯಾರೂ ಅರಣ್ಯ ಪ್ರದೇಶದ ಒಳಗೆ ಹೋಗಬಾರದು. ತೋಟಗಳಲ್ಲಿ ಕೆಲಸ ಮಾಡುವಾಗ ಗುಂಪು ಗುಂಪಾಗಿ ಇರಬೇಕು. ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದೆ.
"ಕಾಡಾನೆಗಳಿಂದ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಬೆಳೆ ನಷ್ಟವಾಗುತ್ತಿದೆ. ಕೇವಲ ಒಂದು ಆನೆ ಹಿಡಿದರೆ ಸಾಲದು, ಇಲ್ಲಿರುವ ಎಲ್ಲಾ ಆನೆಗಳನ್ನು ಸ್ಥಳಾಂತರಿಸಬೇಕು ಅಥವಾ ಶಾಶ್ವತವಾಗಿ ತಡೆಗೋಡೆ (Rail Fencing) ನಿರ್ಮಿಸಬೇಕು" ಎಂದು ಸ್ಥಳೀಯ ರೈತರು ಆಗ್ರಹಿಸಿದ್ದಾರೆ.
ಈ ಬಗ್ಗೆ ರಾಮನಗರ ಅರಣ್ಯ ಇಲಾಖೆಯ ಡಿಎಫ್ಇ ಎಂ.ರಾಮಕೃಷ್ಣಪ್ಪ "ದ ಫೆಡರಲ್ ಕರ್ನಾಟಕ"ದೊಂದಿಗೆ ಮಾತನಾಡಿ, ಚಿಕ್ಕಮಣ್ಣುಗುಡ್ಡೆ ಒಂಟಿ ಸಲಗ, ತೆಂಗಿನಕಲ್ಲು ಮಖ್ಯಾ, ಈ ಎರಡರಲ್ಲಿ ಒಂದನ್ನಾದರೂ ಸೆರೆ ಹಿಡಿಯಲು ಟಾರ್ಗೆಟ್ ಮಾಡಲಾಗಿದೆ. ಡೋನ್ ಕ್ಯಾಮರಾ ಮುಖಾಂತರ ಅವುಗಳ ಚಲನವಲನದ ಮೇಲೆ ನಿಗಾ ಇರಿಸಲಾಗಿದ್ದು, ದುಬಾರೆ ಶಿಬಿರದ ಆರು ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಈ ಹಿಂದೆ 2024ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 'ಮಕ್ನಾ' ಸೇರಿದಂತೆ ಎರಡು ಆನೆಗಳನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು. ಈಗ ಬಾಕಿ ಉಳಿದಿರುವ ಅಥವಾ ಹೊಸದಾಗಿ ಬಂದಿರುವ ಆನೆಗಳ ಸೆರೆಗೆ ಅರಣ್ಯ ಇಲಾಖೆ ಆನೆ ಸೆರೆ ಕಾರ್ಯಚರಣೆ ನಡೆಸುತ್ತಿದೆ.

