
ಶಿವಮೊಗ್ಗ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರ ಕ್ರೌರ್ಯ: ವಿದ್ಯಾರ್ಥಿಯ ಮೈಮೇಲೆ 22 ಬಾಸುಂಡೆ..!
ಶೇಡ್ತಿಕೆರೆ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಶಾಲೆಯ ಶಿಕ್ಷಕರು ಮನಬಂದಂತೆ ಥಳಿಸಿದ್ದಾರೆ. ಇದು ಕೇವಲ ದಂಡನೆಯಾಗಿರದೆ ಆಕ್ರೋಶ ಹೊರಹಾಕುವಂತೆಯಂತೆ ಕಂಡಿದೆ.
ವಿದ್ಯೆಯನ್ನು ಕಲಿಸಿ, ಬುದ್ಧಿ ಹೇಳಿ, ಮಕ್ಕಳನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಶಿಕ್ಷಕರೇ ಕ್ರೂರಿಗಳಂತೆ ವರ್ತಿಸಿರುವ ಆಘಾತಕಾರಿ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶೇಡ್ತಿಕೆರೆಯ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಾಲೆಯ ಆವರಣದಲ್ಲಿ ನಡೆಯುವ ಸಣ್ಣಪುಟ್ಟ ತಪ್ಪುಗಳನ್ನೆಲ್ಲ ಒಬ್ಬನೇ ವಿದ್ಯಾರ್ಥಿಯ ಮೇಲೆ ಹೊರಿಸಿ, ಆತನನ್ನು ಮೃಗೀಯವಾಗಿ ದಂಡಿಸಿರುವ ಈ ಘಟನೆಯು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ.
ಶೇಡ್ತಿಕೆರೆ ಶಾಲೆಯ 7ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ತಪ್ಪುಗಳ ನೆಪವೊಡ್ಡಿ, ಶಾಲೆಯ ಸಹಶಿಕ್ಷಕರಾದ ಪ್ರಮೋದ್ ಸಣ್ಣಕ್ಕಿ ಮತ್ತು ವೆಂಕಟೇಶ್ ಎಂಬುವರು ಮನಬಂದಂತೆ ಥಳಿಸಿದ್ದಾರೆ. ಇದು ಕೇವಲ ದಂಡನೆಯಾಗಿರದೆ, ತಮ್ಮ ಆಕ್ರೋಶವನ್ನು ಹೊರಹಾಕಿದಂತೆ ಕಂಡಿದೆ.
ಶಿಕ್ಷಕರ ಕ್ರೌರ್ಯ ಎಷ್ಟಿತ್ತೆಂದರೆ, ವಿದ್ಯಾರ್ಥಿಯ ಮೈಮೇಲೆ ಬಾಸುಂಡೆಗಳು ಎದ್ದಿವೆ. ಅಲ್ಲದೇ, ಕೈಬೆರಳುಗಳಿಂದ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ. ಘಟನೆಯ ನಂತರ ವಿದ್ಯಾರ್ಥಿ ತೀವ್ರ ನೋವಿನಿಂದ ನರಳುತ್ತಿರುವುದನ್ನು ಕಂಡು, ಪೋಷಕರು ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಹಲ್ಲೆಯ ತೀವ್ರತೆಯನ್ನು ಕಂಡು ದಂಗಾಗಿದ್ದಾರೆ. ಸದ್ಯ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಮಾನಸಿಕ ಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಈ ಸಂಬಂಧ ಪೊಲೀಸ್ ಠಾಣೆಗೂ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಾಥಮಿಕ ವಿಚಾರಣೆಯ ವೇಳೆ ಶಿಕ್ಷಕರದ್ದೇ ತಪ್ಪಿದೆ ಎಂಬ ಮಾಹಿತಿ ತಿಳಿದುಬಂದಿದೆ ಎನ್ನಲಾಗಿದೆ.
ಶಿಕ್ಷಕರ ಕೊಠಡಿಗೆ ಹೋಗಿದ್ದೇ ತಪ್ಪಾಯ್ತು!
ಶೇಡ್ತಿಕೆರೆ ಶಾಲೆಯಲ್ಲಿ ವಾಲಿಬಾಲ್ಗೆ ಗಾಳಿ ತುಂಬುವ ಸಲುವಾಗಿ ವಿದ್ಯಾರ್ಥಿಗಳು ಶಿಕ್ಷಕರ ಕೊಠಡಿಗೆ ತೆರಳಿದ್ದಾರೆ. ಈ ವೇಳೆ ಕೊಠಡಿಯಲ್ಲಿದ್ದ ಎನ್ನಲಾದ ಎರಡು ಸಾವಿರ ರೂ. ನಾಪತ್ತೆಯಾಗಿದೆ. ಈ ಸಂಬಂಧ ಸರಿಯಾಗಿ ವಿಚಾರಣೆ ನಡೆಸುವ ಬದಲು, ಶಿಕ್ಷಕರು ವಿದ್ಯಾರ್ಥಿಯನ್ನು ಕರೆದು ಮನಬಂದಂತೆ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗೆ ತೀವ್ರ ಗಾಯಗಳಾಗಿವೆ. ವಿದ್ಯಾರ್ಥಿ ಮನೆಗೆ ಬಂದಾಗಲೇ ಗಾಯದ ತೀವ್ರತೆ ಪೋಷಕರಿಗೆ ಗೊತ್ತಾಗಿದೆ. ಒಟ್ಟಿನಲ್ಲಿ ಶಿಕ್ಷಕರ ಕೊಠಡಿಗೆ ಹೋಗಿದ್ದೇ ವಿದ್ಯಾರ್ಥಿಯ ತಪ್ಪಾಯಿತೇ ಎಂಬ ಮಾತುಗಳು ಕೇಳಿಬಂದಿವೆ.
ಈ ಬಗ್ಗೆ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿದ ವಿದ್ಯಾರ್ಥಿಯ ಭಾವ ಅಣ್ಣಪ್ಪ, "ಶಿಕ್ಷಕರು ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ್ದಾರೆ. ಪೋಷಕರನ್ನು ಶಾಲೆಗೆ ಕರೆಸಿದ ಶಿಕ್ಷಕರು, ವಿದ್ಯಾರ್ಥಿಯು ಸಿಗರೇಟು ಸೇದಿದ್ದಾನೆ ಹಾಗೂ ಎರಡು ಸಾವಿರ ರೂ. ಕಳ್ಳತನ ಮಾಡಿದ್ದಾನೆ ಎಂಬ ಶಂಕೆಯ ಮೇಲೆ ಹೊಡೆದಿರುವುದಾಗಿ ತಿಳಿಸಿದ್ದಾರೆ. ತಮ್ಮ ಹುಡುಗನದ್ದೇ ತಪ್ಪಿರಬಹುದು, ಆತನಿಗೆ ಬುದ್ಧಿವಾದ ಹೇಳುವುದಾಗಿ ತಿಳಿಸಿ ಪೋಷಕರು ಮನೆಗೆ ಮರಳಿದ್ದರು. ಆದರೆ, ಮನೆಗೆ ಬಂದ ವಿದ್ಯಾರ್ಥಿಯ ಅಳುವನ್ನು ಗಮನಿಸಿದಾಗ ಗಾಯಗಳ ತೀವ್ರತೆ ಗೊತ್ತಾಗಿದೆ. ಆತನ ಮೈಮೇಲೆ 22 ಬಾರಿ ಹೊಡೆದ ಗುರುತುಗಳಿವೆ. ಈ ಬಗ್ಗೆ ಶಾಲೆಗೆ ತೆರಳಿ ಪ್ರಶ್ನಿಸಿದಾಗ ಶಿಕ್ಷಕರು ನಾನಾ ಕಾರಣಗಳನ್ನು ನೀಡಿದ್ದಾರೆ" ಎಂದರು.
"ಹಲ್ಲೆಯಿಂದಾಗಿ ವಿದ್ಯಾರ್ಥಿಗೆ ಜ್ವರ ಬಂದಿದ್ದು, ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರೇ ಆಶ್ಚರ್ಯಚಕಿತರಾಗಿದ್ದಾರೆ. ತಕ್ಷಣವೇ ಪೊಲೀಸರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ವೈದ್ಯರು ಸೂಚಿಸಿದ್ದರಿಂದ, ಪೊಲೀಸರಿಗೆ ದೂರು ನೀಡಲಾಗಿದೆ. ಅಲ್ಲದೇ, ಡಿಡಿಪಿಐ ಅವರಿಗೂ ಮಾಹಿತಿ ನೀಡಲಾಗಿದೆ. ವಿದ್ಯಾರ್ಥಿಗಳನ್ನು ತಿದ್ದುವ ಅಧಿಕಾರ ಶಿಕ್ಷಕರಿಗಿದೆ; ಆದರೆ, ಯಾವುದೋ ನೆಪವೊಡ್ಡಿ, ವಿಷಯವೇ ಗೊತ್ತಿಲ್ಲದ ವಿದ್ಯಾರ್ಥಿಗೆ ಮನಬಂದಂತೆ ಥಳಿಸುವುದು ಎಷ್ಟು ಸರಿ? ಶಿಕ್ಷಕರನ್ನು ಅಮಾನತುಗೊಳಿಸುವಂತೆ ನಾವು ಒತ್ತಾಯ ಮಾಡುತ್ತಿಲ್ಲ, ಆದರೆ, ಅವರನ್ನು ಬೇರೆಡೆಗೆ ವರ್ಗಾಯಿಸುವಂತೆ ಆಗ್ರಹಿಸಿದ್ದೇವೆ" ಎಂದು ಅವರು ತಿಳಿಸಿದರು.

