ಟಿಕೆಟ್ ಸಿಕ್ಕಿದ್ದು ಸಂತೋಷ, ಅಲ್ಪಸಂಖ್ಯಾತರ ಮುನಿಸು ಶಮನಗೊಳಿಸುವೆ: ಸಮರ್ಥ್ ಮಲ್ಲಿಕಾರ್ಜುನ್
x

ಟಿಕೆಟ್ ಸಿಕ್ಕಿದ್ದು ಸಂತೋಷ, ಅಲ್ಪಸಂಖ್ಯಾತರ ಮುನಿಸು ಶಮನಗೊಳಿಸುವೆ: ಸಮರ್ಥ್ ಮಲ್ಲಿಕಾರ್ಜುನ್

ಸಮರ್ಥ್ ಅವರು ದುಗ್ಗಮ್ಮ ದೇವಿಯ ದರ್ಶನ ಪಡೆದು, ಕುರುಬರಕೇರಿಯಲ್ಲಿ ಕಾರ್ಯಕರ್ತರೊಂದಿಗೆ ಭರ್ಜರಿ ಮನೆ-ಮನೆ ಪ್ರಚಾರ ಆರಂಭಿಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.


Click the Play button to hear this message in audio format

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಗ್ಗಂಟಾಗಿದ್ದ ಕಾಂಗ್ರೆಸ್ ಟಿಕೆಟ್ ಕೊನೆಗೂ ಹಿರಿಯ ನಾಯಕ, ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಮೊಮ್ಮಗ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಮಲ್ಲಿಕಾರ್ಜುನ್ ಅವರ ಪಾಲಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಮುಖಂಡರ ತೀವ್ರ ಪೈಪೋಟಿ ಹಾಗೂ ವಿರೋಧದ ನಡುವೆಯೂ ಹೈಕಮಾಂಡ್ ಯುವ ನಾಯಕನಿಗೆ ಮಣೆಹಾಕಿದೆ. ಭಾನುವಾರ ತಮ್ಮ ಹೆಸರು ಅಧಿಕೃತವಾಗಿ ಘೋಷಣೆಯಾಗುತ್ತಿದ್ದಂತೆಯೇ ಸಮರ್ಥ್ ಅವರು ದುಗ್ಗಮ್ಮ ದೇವಿಯ ದರ್ಶನ ಪಡೆದು, ಕುರುಬರಕೇರಿಯಲ್ಲಿ ಕಾರ್ಯಕರ್ತರೊಂದಿಗೆ ಭರ್ಜರಿ ಮನೆ-ಮನೆ ಪ್ರಚಾರ ಆರಂಭಿಸುವ ಮೂಲಕ ಅಖಾಡಕ್ಕೆ ಇಳಿದಿದ್ದಾರೆ.

ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

ಸಮರ್ಥ್ ಅವರಿಗೆ ಟಿಕೆಟ್ ಒಲಿದಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ದಾವಣಗೆರೆ ನಗರದ ಕುರುಬರಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಮರ್ಥ್, "ಟಿಕೆಟ್ ಸಿಕ್ಕಿರುವುದು ನನಗೆ ತೀವ್ರ ಸಂತೋಷ ತಂದಿದೆ. ನಾನು ದುಗ್ಗಮ್ಮ ದೇವಸ್ಥಾನದಲ್ಲಿದ್ದಾಗಲೇ ಅಧಿಕೃತ ಘೋಷಣೆಯ ವಿಷಯ ತಿಳಿಯಿತು. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷವು ಪ್ರತಿ ಬಾರಿಯೂ ಜಯಭೇರಿ ಬಾರಿಸಿದೆ, ಈ ಬಾರಿಯೂ ನೂರಕ್ಕೆ ನೂರು ನಾವೇ ಗೆಲ್ಲುತ್ತೇವೆ" ಎಂದು ಅತೀವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಿಗಾಲಿನಲ್ಲೇ ಪ್ರಚಾರ, ದೇವರಿಗೆ ಸಂಕಲ್ಪ

ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮ ತಾಯಿ ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಚಪ್ಪಲಿ ಧರಿಸದೆ ಬರಿಗಾಲಿನಲ್ಲೇ ಪ್ರಚಾರ ಮಾಡಿದ್ದ ಸಮರ್ಥ್, ಈ ಬಾರಿಯ ಉಪಚುನಾವಣೆಯಲ್ಲೂ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಬರಿಗಾಲಿನಲ್ಲಿ ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, "ನನ್ನ ಕಾಲನ್ನು ನೋಡಬೇಡಿ, ಬರಿಗಾಲಿನಲ್ಲಿ ನಡೆಯುತ್ತಿರುವುದು ನನಗೂ ಮತ್ತು ದೇವರಿಗೂ ಮಧ್ಯೆ ಇರುವ ಒಂದು ವೈಯಕ್ತಿಕ ಸಂಕಲ್ಪ" ಎಂದು ಸ್ಪಷ್ಟಪಡಿಸಿದ್ದಾರೆ. ಬಿರುಸಿನ ಬಿಸಿಲನ್ನೂ ಲೆಕ್ಕಿಸದೆ ಅವರು ಮತದಾರರ ಮನೆ-ಮನೆಗೆ ತೆರಳಿ ಆಶೀರ್ವಾದ ಬೇಡುತ್ತಿದ್ದಾರೆ.

ಅಲ್ಪಸಂಖ್ಯಾತ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವೆ

ಟಿಕೆಟ್ ಕೈತಪ್ಪಿದ್ದಕ್ಕಾಗಿ ಅಲ್ಪಸಂಖ್ಯಾತ ನಾಯಕರು ಅಸಮಾಧಾನಗೊಂಡಿರುವ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ ಸಮರ್ಥ್, "ಚುನಾವಣೆ ಎಂದ ಮೇಲೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸಹಜ. ಅಲ್ಪಸಂಖ್ಯಾತ ಮುಖಂಡರು ಕಳೆದ 30 ವರ್ಷಗಳಿಂದ ನಮ್ಮ ತಾತನವರೊಂದಿಗೆ ಬೆರೆತವರು. ಅವರು ನಮ್ಮ ಮನೆಗೆ ಬರುತ್ತಿದ್ದರು, ನಾನು ಅವರ ಮನೆಗೆ ಹೋಗಿದ್ದೇನೆ. ನಮ್ಮ ನಡುವೆ ಅಂತಹ ಯಾವುದೇ ಬಿರುಕು ಮೂಡಿಲ್ಲ. ದಾವಣಗೆರೆ ಒಂದು ಶಾಂತಿಯ ನಗರ. ಅಲ್ಪಸಂಖ್ಯಾತ ನಾಯಕರನ್ನು ನಾನೇ ಖುದ್ದಾಗಿ ಕರೆಸಿ ಮಾತನಾಡಿ, ಅವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಳ್ಳುವೆ. ಅವರು ಯಾರೂ ನೋಟಾಗೆ (NOTA) ಮತ ಹಾಕುವುದಿಲ್ಲ, ಅದು ಸಾಧ್ಯವೂ ಇಲ್ಲ" ಎಂದು ಹೇಳುವ ಮೂಲಕ ಭಿನ್ನಮತ ಶಮನಗೊಳಿಸುವ ಭರವಸೆ ನೀಡಿದ್ದಾರೆ.

Read More
Next Story