ಪರಿಸರವಾದಿ ಯಲ್ಲಪ್ಪರೆಡ್ಡಿಗೆ ಅಭಿನಂದನೆ; ಪರಿಸರ ರಕ್ಷಣೆಯ ಪಿತಾಮಹ ಎಂದು ಬಣ್ಣನೆ
x

ಪರಿಸರವಾದಿ ಯಲ್ಲಪ್ಪರೆಡ್ಡಿಗೆ ಅಭಿನಂದನೆ; ಪರಿಸರ ರಕ್ಷಣೆಯ ಪಿತಾಮಹ ಎಂದು ಬಣ್ಣನೆ

ಸ್ಥಳೀಯ ಸಸ್ಯವರ್ಗಗಳು ಮತ್ತು ಪವಿತ್ರ ವನಗಳನ್ನು ಪುನರುಜ್ಜೀವನಗೊಳಿಸುವುದು ಇಂದಿನ ತುರ್ತು. ನಮ್ಮ ನೆಲ ಮೂಲದ ಸಸ್ಯಗಳನ್ನು ಬೆಳೆಸಲು ಹೆಚ್ಚು ಒತ್ತು ನೀಡುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗಲಿದೆ.


Click the Play button to hear this message in audio format

ನಾಡಿನ ಹಸಿರು ವನಸಿರಿ ಉಳಿಸಲು ಶ್ರಮಿಸಿದ ಹಿರಿಯ ಪರಿಸರವಾದಿ, ನಿವೃತ್ತ ಅರಣ್ಯಾಧಿಕಾರಿ ಡಾ.ಆ.ನ.ಯಲ್ಲಪ್ಪ ರೆಡ್ಡಿ ಅವರ 91ನೇ ವರ್ಷದ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳ ಬಳಗವು ಗೌರವಾಭಿನಂದನೆ ಸಲ್ಲಿಸಿತು. ಪರಿಸರ ಪ್ರೇಮಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಯಲ್ಲಪ್ಪರೆಡ್ಡಿ ಅಭಿನಂದನೆ ಕಾರ್ಯಕ್ರಮದಲ್ಲಿ ಅವರ ಸಾಧನೆ ಮೆಲುಕು ಹಾಕಿದರು.

ಡಾ. ಆ.ನ.ಯಲ್ಲಪ್ಪರೆಡ್ಡಿ ಅವರು ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್‌) ಅಧಿಕಾರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದವರು. ರಾಜ್ಯ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಅಧಿಕಾರದಲ್ಲಿದ್ದಾಗಲೂ ಮತ್ತು ನಿವೃತ್ತಿ ನಂತರವೂ ಪರಿಸರ ರಕ್ಷಣೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ.

ಅಭಿವೃದ್ಧಿ ಎಂಬುದು ಪರಿಸರಕ್ಕೆ ಮಾರಕವಾಗಬಾರದು. ವಿಜ್ಞಾನ ಮತ್ತು ತಂತ್ರಜ್ಞಾನ ಬಳಸುವಾಗ ಪ್ರಕೃತಿಯ ಸಮತೋಲನ ಕೆಡದಂತೆ ನೋಡಿಕೊಳ್ಳಬೇಕು ಎಂಬುದು ಅವರ ಪ್ರಬಲ ವಾದವಾಗಿದೆ. ವಿದೇಶಿ ತಳಿಯ ಗಿಡಗಳಿಗಿಂತ ನಮ್ಮ ಮಣ್ಣಿನ ಗುಣಕ್ಕೆ ಹೊಂದಿಕೊಳ್ಳುವ ಸ್ಥಳೀಯ ಸಸ್ಯಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಭಾರತೀಯ ಸಂಪ್ರದಾಯದ 'ದೇವಕಾಡು' ಅಥವಾ ಪವಿತ್ರ ವನಗಳನ್ನು ಸಂರಕ್ಷಿಸುವ ಮೂಲಕ ಜೀವವೈವಿಧ್ಯವನ್ನು ಉಳಿಸಬಹುದು ಎಂಬುದನ್ನು ನಂಬಿದ್ದಾರೆ.

ಬೆಂಗಳೂರು ಉದ್ಯಾನ ನಗರಿ ಎಂದು ಕರೆಸಿಕೊಳ್ಳಲು ಯಲ್ಲಪ್ಪ ರೆಡ್ಡಿ ಶ್ರಮವೂ ಇದೆ. ನಗರದ ರಸ್ತೆಗಳು, ಸಾರ್ವಜನಿಕ ಆವರಣಗಳು ಮತ್ತು ಪೊಲೀಸ್ ಠಾಣೆಗಳಲ್ಲಿ ಲಕ್ಷಾಂತರ ಗಿಡಗಳನ್ನು ನೆಡಲು ಪ್ರೇರಣೆಯಾಗಿದ್ದಾರೆ. ಔಷಧೀಯ ಗುಣದ ಸಸ್ಯಗಳ ಬಗ್ಗೆ ಇವರಿಗೆ ಅಪಾರ ಜ್ಞಾನವಿದ್ದು, ಅವುಗಳ ನಾಶವನ್ನು ತಡೆಯಲು ಅನೇಕ ಯೋಜನೆ ರೂಪಿಸಿದ್ದಾರೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆ ಮತ್ತು ಒತ್ತುವರಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಕ್ಕೆ ಅನೇಕ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ. ಅರಣ್ಯಗಳು ಕೇವಲ ಮರಗಳಲ್ಲ, ಅವು ಹಕ್ಕಿಗಳು ಮತ್ತು ಪ್ರಾಣಿಗಳ ಆವಾಸಸ್ಥಾನ ಎಂಬ ಅರಿವು ಮೂಡಿಸುವಲ್ಲಿ ಯಲ್ಲಪ್ಪರೆಡ್ಡಿ ಅವರ ಪಾತ್ರ ದೊಡ್ಡದು.

ಪವಿತ್ರ ವನ ಪರಿಕಲ್ಪನೆಗೆ ಮರುಜೀವ

ಡಾ. ಯಲ್ಲಪ್ಪ ರೆಡ್ಡಿ ಅವರ ಸಾಧನೆ ಕೇವಲ ಅರಣ್ಯ ಇಲಾಖೆಯ ಕೆಲಸಕ್ಕೆ ಸೀಮಿತವಾಗಿಲ್ಲ. ಅವರು ಪಶ್ಚಿಮ ಘಟ್ಟಗಳ ೧೫೦ಕ್ಕೂ ಹೆಚ್ಚು ಅಪರೂಪದ ಸ್ಥಳೀಯ ಪ್ರಭೇದಗಳ ಸಂರಕ್ಷಣೆ ಮತ್ತು ಪುನಃಸ್ಥಾಪನೆಗಾಗಿ ಆಧುನಿಕ 'ಪರಿಸರ-ತಂತ್ರಜ್ಞಾನ'ಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಅವಧಿಯಲ್ಲಿ ಅವರು ಪವಿತ್ರ ವನ ಎಂಬ ಪರಿಕಲ್ಪನೆಯನ್ನು ಮರುಜೀವಗೊಳಿಸಿದರು ಮತ್ತು ಗಿಡಮೂಲಿಕೆ ಉದ್ಯಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಜೀವವೈವಿಧ್ಯದ ಸಂರಕ್ಷಣೆಯಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪರಿಸರ ವಿಜ್ಞಾನದ ಅಗಾಧ ಜ್ಞಾನವನ್ನು ಮುಂದಿನ ಪೀಳಿಗೆಗೆ ಹಂಚಿದ್ದಾರೆ. ಉಷ್ಣವಲಯದ ಕಾಡುಗಳು ಮತ್ತು ಪರಿಸರ ಸಮತೋಲನದ ಬಗ್ಗೆ ಅವರು ಹಲವಾರು ತಾಂತ್ರಿಕ ಪ್ರಬಂಧಗಳು ಹಾಗೂ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಈ ಸೇವೆಯನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾಲಯವು ಅವರಿಗೆ 'ಗೌರವ ಡಾಕ್ಟರೇಟ್' ನೀಡಿ ಗೌರವಿಸಿದೆ. ಅಲ್ಲದೆ, ಅರಣ್ಯ ಕ್ಷೇತ್ರದಲ್ಲಿನ ಅವರ ಅಪ್ರತಿಮ ಸಾಧನೆಗಾಗಿ ಭಾರತ ಸರ್ಕಾರದ ಪ್ರತಿಷ್ಠಿತ 'ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ' ಪ್ರಶಸ್ತಿಯೂ ಅವರಿಗೆ ಸಂದಿದೆ.

ಡಾ. ಯಲ್ಲಪ್ಪ ರೆಡ್ಡಿ ಅವರು ಪ್ರಸ್ತುತ ಲಾಲ್‌ಬಾಗ್ ಮತ್ತು ಕಬ್ಬನ್ ಪಾರ್ಕ್ ಸಲಹಾ ಸಮಿತಿಗಳಲ್ಲಿ ಸಕ್ರಿಯರಾಗಿದ್ದು, ಇಂದಿಗೂ ನಗರದ ಹಸಿರನ್ನು ಉಳಿಸಲು ಶ್ರಮಿಸುತ್ತಿದ್ದಾರೆ. ಅವರ ೯೧ ವರ್ಷಗಳ ಜೀವನವು ಪರಿಸರ ಪ್ರೇಮಿಗಳಿಗೆ ಮತ್ತು ವಿಶೇಷವಾಗಿ ಯುವಜನತೆಗೆ ಒಂದು ದೊಡ್ಡ ಪ್ರೇರಣೆಯಾಗಿದೆ. ಈ ಕಾರ್ಯಕ್ರಮವು ಕೇವಲ ವ್ಯಕ್ತಿಯೊಬ್ಬರಿಗೆ ಸಲ್ಲಿಸಿದ ಗೌರವವಲ್ಲ, ಬದಲಾಗಿ ಪರಿಸರ ಕಾಳಜಿಗೆ ಸಂದ ಗೌರವವಾಗಿದೆ.

ಪರಿಸರ ರಕ್ಷಣೆಯ ಆಧುನಿಕ ಪಿತಾಮಹ

ಕಾರ್ಯಕ್ರಮದಲ್ಲಿ ಯಲ್ಲಪ್ಪ ರೆಡ್ಡಿ ಅವರ ಪರಿಸರ ಸೇವೆಯ ಕುರಿತು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಎಡಿಜಿಪಿ ಬಿ.ದಯಾನಂದ ಮಾತನಾಡಿ, ಯಲ್ಲಪ್ಪ ರೆಡ್ಡಿ ಅವರನ್ನು ಪರಿಸರ ರಕ್ಷಣೆಯ ಆಧುನಿಕ ಪಿತಾಮಹ ಎಂದು ಬಣ್ಣಿಸಿದರು. ಸಾಮಾನ್ಯವಾಗಿ ಪರಿಸರವಾದಿಗಳು ಎಂದರೆ ಅವರು ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಾರೆ ಅಥವಾ ಕೇವಲ ವಿರೋಧ ವ್ಯಕ್ತಪಡಿಸುತ್ತಾರೆ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ. ಆದರೆ ಯಲ್ಲಪ್ಪ ರೆಡ್ಡಿ ಅವರು ಈ ಆರೋಪಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದ್ದಾರೆ. ಅವರಿಗೆ ಅಭಿವೃದ್ಧಿಯ ಅಗತ್ಯವೂ ತಿಳಿದಿದೆ ಮತ್ತು ಪರಿಸರದ ಮಹತ್ವವೂ ಅರಿವಿದೆ. ಈ ಎರಡನ್ನೂ ಸರಿದೂಗಿಸಿಕೊಂಡು ಹೋಗುವ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿ ಎಂದು ಶ್ಲಾಘಿಸಿದರು.

ವಿಶೇಷವಾಗಿ ಬೆಂಗಳೂರಿನ ಪೊಲೀಸ್ ಇಲಾಖೆಯೊಂದಿಗೆ ಯಲ್ಲಪ್ಪ ರೆಡ್ಡಿ ಅವರಿಗಿರುವ ನಿಕಟ ಸಂಬಂಧವನ್ನು ಸ್ಮರಿಸಿದ ಅವರು, ನಗರದ ಅನೇಕ ಪೊಲೀಸ್ ಠಾಣೆಗಳ ಆವರಣ ಇಂದು ಹಸಿರಾಗಿ ಕಂಗೊಳಿಸುತ್ತಿದ್ದರೆ ಅದಕ್ಕೆ ಯಲ್ಲಪ್ಪ ರೆಡ್ಡಿ ಅವರ ಮಾರ್ಗದರ್ಶನವೇ ಕಾರಣ. ಅಂದು ಅವರು ಪೊಲೀಸ್ ಠಾಣೆಗಳಲ್ಲಿ ಹಚ್ಚಿದ ಗಿಡಗಳು ಇಂದು ಹೆಮ್ಮರವಾಗಿ ಬೆಳೆದು, ಇಡೀ ಇಲಾಖೆಗೆ ನೆರಳು ಮತ್ತು ತಂಪಾದ ವಾತಾವರಣವನ್ನು ನೀಡುತ್ತಿವೆ. ಅವರ ಪರಿಸರ ಪ್ರೇಮ ಕೇವಲ ಮಾತಿಗೆ ಸೀಮಿತವಲ್ಲ, ಅದು ಕೃತಿಯಲ್ಲಿ ಸಾಬೀತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಾಮಾಣಿಕತೆ, ಪರಿಸರ ಪ್ರಜ್ಞೆ

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಆ.ನ. ಯಲ್ಲಪ್ಪ ರೆಡ್ಡಿ, ತಮ್ಮ ಸುದೀರ್ಘ ವೃತ್ತಿಜೀವನ ಮತ್ತು ಪರಿಸರ ಹೋರಾಟದ ಅನುಭವಗಳನ್ನು ಹಂಚಿಕೊಂಡರು. ಸರ್ಕಾರಿ ಕೆಲಸದಲ್ಲಿ ಬದುಕಿಗೆ ಆರ್ಥಿಕ ಭದ್ರತೆ ಸಿಗುತ್ತದೆ ನಿಜ. ಆದರೆ ಆ ಕೆಲಸದಲ್ಲಿ ನಾವು ಎಷ್ಟು ಪ್ರಾಮಾಣಿಕರಾಗಿರುತ್ತೇವೆಯೋ, ಅಷ್ಟು ಗೌರವ ನಮಗೆ ಸಮಾಜದಿಂದ ತಾನಾಗಿಯೇ ದೊರೆಯುತ್ತದೆ ಎಂದು ಯುವ ಜನತೆಗೆ ಕಿವಿಮಾತು ಹೇಳಿದರು. ಪರಿಸರ ರಕ್ಷಣೆಯ ಮುಂದಿನ ಹಾದಿಯ ಬಗ್ಗೆ ಕಳಕಳಿ ವ್ಯಕ್ತಪಡಿಸಿದ ಅವರು, ನಮ್ಮ ಸ್ಥಳೀಯ ಸಸ್ಯವರ್ಗಗಳನ್ನು ಮತ್ತು ಪವಿತ್ರ ವನಗಳನ್ನು ಪುನರುಜ್ಜೀವನಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ನಮ್ಮ ನೆಲದ ಮೂಲ ಸಸ್ಯಗಳು ಈ ಮಣ್ಣಿನ ಗುಣಕ್ಕೆ ತಕ್ಕಂತೆ ಬೆಳೆಯುತ್ತವೆ. ಅವುಗಳನ್ನು ಉಳಿಸಿಕೊಳ್ಳದಿದ್ದರೆ ಜೀವವೈವಿಧ್ಯಕ್ಕೆ ದೊಡ್ಡ ಧಕ್ಕೆ ಉಂಟಾಗಲಿದೆ. ಅದರಲ್ಲೂ ಔಷಧೀಯ ಸಸ್ಯಗಳ ಸಂರಕ್ಷಣೆಗೆ ನಾವು ಹೆಚ್ಚಿನ ಒತ್ತು ನೀಡಬೇಕು. ಪ್ರತಿಯೊಂದು ಸಸ್ಯವೂ ತನ್ನದೇ ಆದ ವೈದ್ಯಕೀಯ ಗುಣಗಳನ್ನು ಹೊಂದಿರುತ್ತವೆ, ಅವುಗಳನ್ನು ಉಳಿಸುವುದು ಮುಂದಿನ ಪೀಳಿಗೆಯ ಆರೋಗ್ಯದ ದೃಷ್ಟಿಯಿಂದ ಮುಖ್ಯ ಎಂದರು.

ತಂತ್ರಜ್ಞಾನದ ಬಳಕೆಯ ಬಗ್ಗೆ ಎಚ್ಚರಿಸಿದ ಅವರು ನಾವು ಅಭಿವೃದ್ಧಿಯ ಹೆಸರಿನಲ್ಲಿ ತಂತ್ರಜ್ಞಾನವನ್ನು ಬಳಸುವಾಗ ಅದು ಪರಿಸರದ ಮೇಲೆ ಬೀರುವ ದುಷ್ಪರಿಣಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕೇವಲ ತಾಂತ್ರಿಕ ಪ್ರಗತಿ ಮಾತ್ರ ಜೀವನವಲ್ಲ. ಪಕ್ಷಿ ಸಂರಕ್ಷಣೆ ಮತ್ತು ನಿತ್ಯಹರಿದ್ವರ್ಣ ಅರಣ್ಯಗಳ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಪ್ರಕೃತಿಯ ಸಮತೋಲನ ತಪ್ಪಿದರೆ ಮನುಕುಲ ಉಳಿಯುವುದು ಕಷ್ಟ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕೃತಿಯ ಸ್ವಯಂಪೂರ್ಣತೆ

ಸಾಹಿತಿ, ಚಿಂತಕ ಲಕ್ಷ್ಮೀಶ ತೊಲಪಡಿ ಮಾತನಾಡಿ, ಪರಿಸರ ಮತ್ತು ಮನುಷ್ಯನ ನಡುವಿನ ಸಂಬಂಧದ ಬಗ್ಗೆ ದಾರ್ಶನಿಕ ನೋಟವನ್ನು ಬೀರಿದರು. ಈ ಜಗತ್ತಿನಲ್ಲಿ ಯಾವುದೂ ಪರಿಪೂರ್ಣವಲ್ಲದಿದ್ದರೂ, ಪ್ರಕೃತಿಯಲ್ಲಿನ ಪ್ರತಿಯೊಂದು ಜೀವಿಯೂ ಸ್ವಯಂಪೂರ್ಣವಾಗಿದೆ. ಮನುಷ್ಯ ಜಾತಿಯನ್ನು ಹೊರತುಪಡಿಸಿ, ಅತ್ಯಂತ ಸಣ್ಣ ಕ್ರಿಮಿಕೀಟಗಳಿಗೂ ಸಹ ಈ ಸ್ವಯಂಪೂರ್ಣತೆಯ ಅರಿವಿದೆ. ಅವು ಪ್ರಕೃತಿಯ ನಿಯಮದಂತೆ ಬದುಕುತ್ತವೆ. ಆದರೆ ಮನುಷ್ಯ ಮಾತ್ರ ಪ್ರಕೃತಿಯನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ಹೋಗಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಸಮಾಜದಲ್ಲಿ ಪರಿಸರದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.

ಯಲ್ಲಪ್ಪ ರೆಡ್ಡಿ ಅವರ ಜೀವನ ಹಸಿರುಮಯವಾಗಿದೆ. ವೃತ್ತಿಯಿಂದ ಅರಣ್ಯಾಧಿಕಾರಿಯಾಗಿದ್ದರೂ, ಪ್ರವೃತ್ತಿಯಿಂದ ಅವರು ಕಟ್ಟಾ ಪರಿಸರ ಪ್ರೇಮಿಯಾಗಿ ಉಳಿದಿದ್ದಾರೆ. ಕೆರೆಗಳ ಸಂರಕ್ಷಣೆ, ನಗರ ಅರಣ್ಯೀಕರಣ ಮತ್ತು ಪರಿಸರ ನೀತಿಗಳ ನಿರೂಪಣೆಯಲ್ಲಿ ಅವರ ಕೊಡುಗೆ ಅಪಾರ. ಅವರ ಕಾರ್ಯವೈಖರಿಯು ಇಂದಿನ ಯುವ ಪರಿಸರ ಪ್ರೇಮಿಗಳಿಗೆ ದಾರಿದೀಪವಾಗಿದೆ ಎಂದರು.

Read More
Next Story