
Karnataka By-Election|ದಾವಣಗೆರೆಯಲ್ಲಿ ಸಿದ್ದೇಶ್ವರ್ ಬೆಂಬಲಿಗನಿಗೆ ಟಿಕೆಟ್; ಬಿಎಸ್ವೈ ಬಣಕ್ಕೆ ಹೈಕಮಾಂಡ್ ಶಾಕ್
ಬಿಜೆಪಿಯಲ್ಲಿ ನಿರೀಕ್ಷಿತ ಅಭ್ಯರ್ಥಿಗಳನ್ನು ಬದಿಗೊತ್ತಿ ಎಸ್ಟಿ ಮೋರ್ಚಾದ ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಣಕ್ಕೆ ಎಚ್ಚರಿಕೆಯ ಸಂದೇಶ ಎನ್ನಲಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಘೋಷಣೆಯಾಗಿರುವ ಉಪಚುನಾವಣೆಗೆ ಬಿಜೆಪಿ ವರಿಷ್ಠರು ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಣಕ್ಕೆ ಪರೋಕ್ಷವಾಗಿ ಶಾಕ್ ನೀಡಿದೆ.
ಯುಗಾದಿ ಸಂಭ್ರಮದ ನಡುವೆಯೇ ಹೊರಬಿದ್ದ ಬಿಜೆಪಿ ಹೈಕಮಾಂಡ್ ನಿರ್ಧಾರವು ರಾಜ್ಯ ಬಿಜೆಪಿಯ ಆಂತರಿಕ ಬಣ ರಾಜಕೀಯ ಮತ್ತು ಹೈಕಮಾಂಡ್ನ ಬದಲಾದ ತಂತ್ರಗಾರಿಕೆಗೆ ಸಾಕ್ಷಿಯಾಗಿದೆ. ನಿರೀಕ್ಷಿತ ಅಭ್ಯರ್ಥಿಗಳನ್ನು ಬದಿಗೊತ್ತಿ, ಎಸ್ಟಿ ಮೋರ್ಚಾದ ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ಬಿಎಸ್ವೈ ಬಣಕ್ಕೆ ಹಿನ್ನಡೆ ತಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರವು ದಶಕಗಳಿಂದ ಲಿಂಗಾಯತ ಮತ್ತು ಮುಸ್ಲಿಂ ಮತಗಳ ಧ್ರುವೀಕರಣಕ್ಕೆ ಸಾಕ್ಷಿಯಾಗಿದೆ. ಇಲ್ಲಿಯವರೆಗೆ ಬಿಜೆಪಿ ಲಿಂಗಾಯತ ಅಥವಾ ಮರಾಠ ಸಮುದಾಯದ ನಾಯಕರಿಗೆ ಮಣೆ ಹಾಕಲಾಗುತ್ತಿತ್ತು. ಅಜಯ್ ಕುಮಾರ್ (ಲಿಂಗಾಯತ) ಅಥವಾ ಯಶವಂತರಾವ್ ಜಾಧವ್ (ಮರಾಠ) ಅವರು ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ದಿಢೀರನೇ ಕಾರ್ಯಕರ್ತರಿಗೆ ಮಣೆ ಹಾಕಿರುವುದು ರಾಜ್ಯ ಬಿಜೆಪಿ ನಾಯಕತ್ವಕ್ಕೆ ನುಂಗಲಾರದು ತುತ್ತಾಗಿ ಪರಿಣಮಿಸಿದೆ.
ದಾವಣಗೆರೆಯಲ್ಲಿ ಪರಿಶಿಷ್ಟ ಪಂಗಡದ ಜನಸಂಖ್ಯೆ ಕಡಿಮೆ ಇದ್ದರೂ ಸಂಘಟನೆ ಹಿನ್ನೆಲೆಯಲ್ಲಿ ಬಂದ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಿರುವುದು ಅಚ್ಚರಿ ಮೂಡಿಸಿದೆ. ಹೈಕಮಾಂಡನ್ನ ಈ ನಿರ್ಧಾರವು ಒಂದು ರೀತಿಯಲ್ಲಿ ಸಾಮಾಜಿಕ ನ್ಯಾಯದ ಪ್ರಯೋಗವಾದರೆ, ಮತ್ತೊಂದೆಡೆ ಪಕ್ಷದೊಳಗಿನ ಬಂಡಾಯ ಶಮನಗೊಳಿಸುವ ತಂತ್ರವಾಗಿದೆ ಎನ್ನಲಾಗಿದೆ.
ಬಿಎಸ್ವೈ ವಿರೋಧಿ ಬಣದ ಜಯಭೇರಿ
ರಾಜ್ಯ ಬಿಜೆಪಿಯಲ್ಲಿ ಎರಡು ಬಣಗಳ ನಡುವಿನ ಹಗ್ಗಜಗ್ಗಾಟವು ಹೈಕಮಾಂಡ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಒಂದು ಕಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಬಣವಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕತ್ವ ವಿರೋಧಿಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಜಿ.ಎಂ. ಸಿದ್ದೇಶ್ವರ್ ನೇತೃತ್ವದ ಬಣವಿತ್ತು. ಈ ಎರಡು ಬಣಗಳ ತಿಕ್ಕಾಟದ ಮಧ್ಯೆ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅನ್ನು ಸಿದ್ದೇಶ್ವರ್ ಬಣದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ನೀಡಿರುವುದು ಬಿಎಸ್ವೈ ಬಣಕ್ಕೆ ಬಹುದೊಡ್ಡ ಹಿನ್ನಡೆ ತಂದೊಡ್ಡಿದೆ. ರಾಜ್ಯ ಬಿಜೆಪಿ ನಾಯಕತ್ವವು ಕಳುಹಿಸಿದ್ದ ಶಿಫಾರಸುಗಳನ್ನು ಬದಿಗೆ ಸರಿಸಿ, ದೆಹಲಿ ಮಟ್ಟದಲ್ಲೇ ತಂತ್ರಗಾರಿಕೆ ಹೆಣೆದಿರುವುದು ಇಲ್ಲಿ ಸ್ಪಷ್ಟವಾಗಿದೆ.
ಎಂ.ಪಿ. ರೇಣುಕಾಚಾರ್ಯಗೆ ಮುಖಭಂಗ
ದಾವಣಗೆರೆ ಜಿಲ್ಲಾ ರಾಜಕಾರಣದಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನಡುವಿನ ಶೀತಲ ಸಮರ ಜಗಜ್ಜಾಹೀರು. 2024ರ ಲೋಕಸಭಾ ಚುನಾವಣೆಯಲ್ಲಿ ಸಿದ್ದೇಶ್ವರ್ ಪತ್ನಿ ಗಾಯತ್ರಿ ಸಿದ್ದೇಶ್ವರ್ ಪರ ರೇಣುಕಾಚಾರ್ಯ ಸರಿಯಾಗಿ ಕೆಲಸ ಮಾಡಲಿಲ್ಲ, ಅವರ ಸೋಲಿಗೆ ಪರೋಕ್ಷವಾಗಿ ಕಾರಣರಾದರು ಎಂಬ ಆಕ್ರೋಶ ಸಿದ್ದೇಶ್ವರ್ ಬಣದಲ್ಲಿತ್ತು. ಇದೇ ಕಾರಣದಿಂದ ಇಬ್ಬರ ನಡುವೆ ಆಂತರಿಕ ಕಲಹ ಏರ್ಪಟ್ಟಿತ್ತು. ಉಪಚುನಾವಣೆಯಲ್ಲಿ ರೇಣುಕಾಚಾರ್ಯ ಅವರು ತಮ್ಮ ಆಪ್ತ ಅಜಯ್ ಕುಮಾರ್ಗೆ ಟಿಕೆಟ್ ಕೊಡಿಸಲು ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಮೇಲೆ ಒತ್ತಡ ಹೇರಿದ್ದರು. ಆದರೆ, ಸಿದ್ದೇಶ್ವರ್ ಅವರು ತಮ್ಮ ಪ್ರಭಾವ ಬಳಸಿ ರೇಣುಕಾಚಾರ್ಯ ಬೆಂಬಲಿತ ಅಭ್ಯರ್ಥಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ರೇಣುಕಾಚಾರ್ಯ ಅವರಿಗೆ ಆದ ವೈಯಕ್ತಿಕ ಮತ್ತು ರಾಜಕೀಯ ಮುಖಭಂಗವಾಗಿದೆ ಎಂದು ಹೇಳಲಾಗಿದೆ.
ಜಿಲ್ಲಾ ಘಟಕದ ಮೇಲೆ ಸಿದ್ದೇಶ್ವರ್ ಹಿಡಿತ
ಲೋಕಸಭಾ ಚುನಾವಣೆಯಲ್ಲಿ ತನ್ನ ಕುಟುಂಬದ ಸದಸ್ಯರು ಸೋತರೂ ಜಿಲ್ಲಾ ಬಿಜೆಪಿ ಘಟಕದಲ್ಲಿ ಸಿದ್ದೇಶ್ವರ್ ಅವರು ತಮ್ಮ ಹಿಡಿತ ಸಡಿಲಿಸಿರಲಿಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಆಪ್ತ ವಲಯದಿಂದ ದೂರವಿದ್ದರೂ ಕೇಂದ್ರದ ನಾಯಕರೊಂದಿಗೆ ನೇರ ಸಂಪರ್ಕ ಸಾಧಿಸಿ ತಮ್ಮ ಬೆಂಬಲಿಗನಿಗೆ ಟಿಕೆಟ್ ಕೊಡಿಸುವ ಮೂಲಕ ಸಾಮರ್ಥ್ಯ ತೋರ್ಪಡಿಸಿದ್ದಾರೆ. ಸಿದ್ದೇಶ್ವರ್-ಯತ್ನಾಳ್ ಬಣಕ್ಕೆ ಈ ಟಿಕೆಟ್ ಘೋಷಣೆ ಹೊಸ ಹುರುಪು ನೀಡಿದೆ.

