ಬೆಣ್ಣೆ ನಗರಿಯ ಉಪಕದನ: ಆಕಾಂಕ್ಷಿ ಬದಿಗಿಟ್ಟು ಕಾರ್ಯಕರ್ತರಿಗೆ ಮಣೆ ಹಾಕಿದ ಬಿಜೆಪಿ
x

ಬೆಣ್ಣೆ ನಗರಿಯ ಉಪಕದನ: ಆಕಾಂಕ್ಷಿ ಬದಿಗಿಟ್ಟು ಕಾರ್ಯಕರ್ತರಿಗೆ ಮಣೆ ಹಾಕಿದ ಬಿಜೆಪಿ

ಎಸ್‌ಟಿ ಸಮುದಾಯದ ಮತಗಳು ನಿರ್ಣಾಯಕವಲ್ಲದಿದ್ದರೂ ಶ್ರೀನಿವಾಸ್‌ ದಾಸ ಕರಿಯಪ್ಪಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಎಂಬ ಸಂದೇಶ ರವಾನಿಸಲು ಯತ್ನಿಸಿದೆ.


Click the Play button to hear this message in audio format

'ಬೆಣ್ಣೆ ನಗರಿ' ದಾವಣಗೆರೆ ಸದ್ಯಕ್ಕೆ ಕುತೂಹಲದ ಕೇಂದ್ರಬಿಂದುವಾಗಿದೆ. ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನದಿಂದ ಘೋಷಣೆಯಾಗಿರುವ ಉಪಚುನಾವಣೆಯು ಎರಡೂ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿದೆ. ಈ ಮಧ್ಯೆ, ಬಿಜೆಪಿ ಹೈಕಮಾಂಡ್ ಕೈಗೊಂಡಿರುವ ತೀರ್ಮಾನವು ರಾಜಕೀಯ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದೆ. ಪ್ರಬಲ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಅಥವಾ ಲಿಂಗಾಯತ ಸಮುದಾಯದ ಸ್ಥಳೀಯ ನಾಯಕರನ್ನು ಬದಿಗಿಟ್ಟು, ಎಸ್‌ಟಿ ಸಮುದಾಯದ ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ.

ಶ್ರೀನಿವಾಸ್ ದಾಸ ಕರಿಯಪ್ಪ ಬಿಜೆಪಿಯ ಹಳೆಯ ಕಾರ್ಯಕರ್ತ ಮತ್ತು ಪ್ರಸ್ತುತ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷರು. ಮೂಲತಃ ಸಂಘಟನಾ ಹಿನ್ನೆಲೆ ಹೊಂದಿರುವ ಅವರು, ದೀರ್ಘಕಾಲದಿಂದ ಪಕ್ಷಕ್ಕಾಗಿ ದುಡಿದವರು. ಕಳೆದ ಕೆಲ ಚುನಾವಣೆಗಳಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಇತರರು ಪ್ರಬಲವಾಗಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದರಿಂದ ಹಿಂದೆ ಸರಿದಿದ್ದರು. ಎಸ್‌ಟಿ ಸಮುದಾಯದ ಮತಗಳು ಕ್ಷೇತ್ರದಲ್ಲಿ ನಿರ್ಣಾಯಕವಲ್ಲದಿದ್ದರೂ ಶ್ರೀನಿವಾಸ್‌ ದಾಸ ಕರಿಯಪ್ಪಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಸಾಮಾಜಿಕ ನ್ಯಾಯ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಮಣೆ ಎಂಬ ಸಂದೇಶ ರವಾನಿಸಲು ಯತ್ನಿಸಿದೆ.

ಜಿ.ಬಿ. ವಿನಯ್ ಕುಮಾರ್‌ಗೆ ತಪ್ಪಿದ ಟಿಕೆಟ್‌

2024ರ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಲ್ಲಿ ಜಿ.ಬಿ. ವಿನಯ್ ಕುಮಾರ್ ಅಲೆ ಸೃಷ್ಟಿಸಿದ್ದರು. ಕಾಂಗ್ರೆಸ್ ಟಿಕೆಟ್ ವಂಚಿತರಾಗಿ ಪಕ್ಷೇತರರಾಗಿ ಸ್ಪರ್ಧಿಸಿ 42,907 ಮತಗಳನ್ನು ಗಳಿಸಿದ್ದರು. ಈ ಬಾರಿ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಈ ಸಂಬಂಧ ಬಿಜೆಪಿಗೆ ಸೇಪರ್ಡೆಯಾಗಲು ತಯಾರಿ ನಡೆಸಿದರು. ಯುವ ನಾಯಕನಾಗಿ ಹೊರಹೊಮ್ಮಿದ್ದ ವಿನಯ್ ಕುಮಾರ್‌ಗೆ ಬಿಜೆಪಿ ಟಿಕೆಟ್ ನೀಡಬಹುದು ಎಂಬ ಬಲವಾದ ವದಂತಿಗಳಿದ್ದವು. ಆದರೆ, ವಿನಯ್ ಕುಮಾರ್ ಬಿಜೆಪಿಗೆ ಸೇರ್ಪಡೆಯಾಗುವುದು ಸ್ಥಳೀಯ ನಾಯಕರ ವಿರೋಧ ಇತ್ತು. ಹೀಗಾಗಿ ವಿನಯ್‌ ಕುಮಾರ್‌ಗೆ ಟಿಕೆಟ್‌ ಕೈತಪ್ಪಿದೆ ಎಂದು ಹೇಳಲಾಗಿದೆ.

ಸಿದ್ದೇಶ್ವರ ಬಣದ ಮೇಲುಗೈ

ದಾವಣಗೆರೆ ಬಿಜೆಪಿಯಲ್ಲಿ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಪ್ರಭಾವ ಅಗಾಧವಾದುದು. ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ಸಿದ್ದೇಶ್ವರ ಬಣದ ಕೈ ಮೇಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶ್ರೀನಿವಾಸ್ ದಾಸ ಕರಿಯಪ್ಪ ಅವರು ಸಿದ್ದೇಶ್ವರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮತ್ತು ಅಜಯ್ ಕುಮಾರ್ ಅವರಂತಹ ಪ್ರಬಲ ನಾಯಕರು ರೇಸ್‌ನಲ್ಲಿದ್ದರೂ, ಸಿದ್ದೇಶ್ವರ್‌ ಬೆಂಬಲ ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ವರದಾನವಾಯಿತು. ಇದು ಪಕ್ಷದ ಒಳಗಿನ ಬಣ ರಾಜಕೀಯವನ್ನು ಶಮನಗೊಳಿಸುವ ತಂತ್ರ ಎಂಬ ಮಾತುಗಳು ಕೇಳಿಬಂದಿವೆ.

ಜಾತಿ ಲೆಕ್ಕಾಚಾರದ ಹೊಸ ಪ್ರಯೋಗ

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಲಿಂಗಾಯತ ಮತ್ತು ಮುಸ್ಲಿಂ ಮತಗಳ ನಡುವೆ ಪೈಪೋಟಿ ಇರುತ್ತದೆ. ಶಾಮನೂರು ಶಿವಶಂಕರಪ್ಪ ಅವರು ಲಿಂಗಾಯತ ಮತಗಳ ಜತೆಗೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಾ ಬಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಎಸ್‌ಟಿ ಸಮುದಾಯದ ಅಭ್ಯರ್ಥಿಯನ್ನು ಆರಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಲಿಂಗಾಯತ ಅಭ್ಯರ್ಥಿಯನ್ನು ಹಾಕದಿದ್ದರೆ, ಆ ಮತಗಳು ಶಾಮನೂರು ಅವರತ್ತ ವಾಲುತ್ತವೆಯೇ ಅಥವಾ ಪಕ್ಷದ ಸಿದ್ಧಾಂತಕ್ಕೆ ಬದ್ಧವಾಗಿ ಶ್ರೀನಿವಾಸ್ ದಾಸರನ್ನು ಬೆಂಬಲಿಸುತ್ತವೆಯೇ? ಎಂಬುದು ಕುತೂಹಲ ಮೂಡಿಸಿವೆ. ವಿನಯ್ ಕುಮಾರ್ ಅವರಿಗೆ ಟಿಕೆಟ್ ತಪ್ಪಿರುವುದರಿಂದ ಕುರುಬ ಸಮುದಾಯದ ಮತಗಳು ಯಾರತ್ತ ವಾಲುತ್ತವೆ ಎಂಬುದು ಯಕ್ಷಪ್ರಶ್ನೆಯಾಗಿದೆ.

ಎದುರಾಗಲಿರುವ ಸವಾಲುಗಳು

ಶ್ರೀನಿವಾಸ್ ದಾಸ ಕರಿಯಪ್ಪ ಅವರಿಗೆ ಈ ಹಾದಿ ಸುಲಭವಾಗಿಲ್ಲ. ಅವರ ಮುಂದೆ ಸಾಲು ಸಾಲು ಸವಾಲುಗಳಿವೆ. ಟಿಕೆಟ್ ವಂಚಿತರಾದ ಯಶವಂತರಾವ್ ಜಾಧವ್, ಅಜಯ್ ಕುಮಾರ್ ಮತ್ತು ರಾಜೇನಹಳ್ಳಿ ಶಿವಕುಮಾರ್ ಅವರ ಬೆಂಬಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮೊದಲ ಆದ್ಯತೆಯಾಗಿದೆ. ವಿನಯ್ ಕುಮಾರ್ ಅವರು ಮತ್ತೆ ಪಕ್ಷೇತರರಾಗಿ ಅಥವಾ ಬೇರೆ ದಾರಿಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದರೆ ಅದು ಬಿಜೆಪಿ ಪಾಲಿಗೆ ಕಂಟಕವಾಗಬಹುದು. ಶಾಮನೂರು ಶಿವಶಂಕರಪ್ಪ ಕುಟುಂಬದ ಆರ್ಥಿಕ ಮತ್ತು ಸಂಘಟನಾ ಶಕ್ತಿಯ ಮುಂದೆ ಶ್ರೀನಿವಾಸ್ ದಾಸ ಎಷ್ಟು ಪ್ರಬಲವಾಗಿ ನಿಲ್ಲಬಲ್ಲರು ಎಂಬ ಸ್ಥಳೀಯ ನಾಯಕರ ಪ್ರಶ್ನೆಯಾಗಿದೆ.

Read More
Next Story