
ಜಿಬಿಎ ಚುನಾವಣೆ; ಹಿಡಿತ ಸಾಧಿಸಲು ಬಿಜೆಪಿ ಭರ್ಜರಿ ತಾಲೀಮು, ಹಿರಿಯ ನಾಯಕರಿಗೆ ಮಹತ್ವದ ಜವಾಬ್ದಾರಿ
ಬಿ.ವೈ. ವಿಜಯೇಂದ್ರ ನೇತೃತ್ವ ವಹಿಸಿದ್ದರೆ, ವಿಧಾನಸಭಾ ಮತ್ತು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಕರ್ನಾಟಕದ ರಾಜಕೀಯ ಅಖಾಡದಲ್ಲಿ ಬೆಂಗಳೂರು ನಗರದ ಆಡಳಿತ ಹಿಡಿತ ಸಾಧಿಸುವುದು ಪ್ರತಿ ಪಕ್ಷಕ್ಕೂ ಅತ್ಯಂತ ಮಹತ್ವದ ವಿಚಾರವಾಗಿದೆ. 2015 ರಿಂದಲೂ ಬಾಕಿ ಉಳಿದಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಚುನಾವಣೆಗಳು ಇದೀಗ ಸಂಪೂರ್ಣ ಹೊಸ ಸ್ವರೂಪ ಪಡೆದುಕೊಂಡಿವೆ. ಬಿಬಿಎಂಪಿಯನ್ನು ರದ್ದುಗೊಳಿಸಿ 2025 ರಲ್ಲಿ ರಚನೆಯಾಗಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (GBA) ಕ್ಕೆ ಮೊದಲ ಬಾರಿಗೆ ಚುನಾವಣೆಗಳು ನಡೆಯಲಿವೆ. ಈ ಐತಿಹಾಸಿಕ ಚುನಾವಣೆಗಳಿಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಬಿಜೆಪಿ ಕರ್ನಾಟಕ ಘಟಕವು ತನ್ನ ಸಂಘಟನಾತ್ಮಕ ಸಿದ್ಧತೆಗಳನ್ನು ತೀವ್ರಗೊಳಿಸಿದೆ.
ಪಕ್ಷದ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ, ಮುಂಬರುವ ಚುನಾವಣಾ ಕಣದಲ್ಲಿ ಪಕ್ಷವನ್ನು ಸಂಘಟಿಸಲರು ಪ್ರಮುಖ ನಾಯಕರಿಗೆ ಮಹತ್ವದ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ.
ಯಾವಾಗ ಚುನಾವಣೆ?
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಒಟ್ಟು 369 ವಾರ್ಡ್‌ಗಳನ್ನು ಹೊಂದಿದ್ದು, ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಜವಾಬ್ದಾರಿ ಹೊತ್ತಿದೆ. ಈ ಹೊಸ ಪ್ರಾಧಿಕಾರಕ್ಕೆ ಜೂನ್ 30 ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಗಡುವು ವಿಧಿಸಿದೆ. ಈ ಬಾರಿ ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳ (EVM) ಬದಲಾಗಿ ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್‌ಗಳನ್ನು ಬಳಸಲು ನಿರ್ಧರಿಸಿರುವುದು ಚುನಾವಣಾ ಪ್ರಕ್ರಿಯೆಯಲ್ಲಿನ ಪ್ರಮುಖ ಬದಲಾವಣೆಯಾಗಿದ್ದು, ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ತಂತ್ರಗಾರಿಕೆಯನ್ನು ರೂಪಿಸುತ್ತಿದೆ.
ಬಿಜೆಪಿಯ ರಾಜ್ಯ ತಂಡ ಮತ್ತು ಜವಾಬ್ದಾರಿಗಳ ಹಂಚಿಕೆ
ಮಾರ್ಚ್ 22ರಂದು ಹೊರಡಿಸಲಾದ ಪತ್ರಿಕಾ ಪ್ರಕಟಣೆಯ ಪ್ರಕಾರ, ಮುಂಬರುವ ಚುನಾವಣಾ ಕಾರ್ಯತಂತ್ರವನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ಪಕ್ಷವು 12 ಪ್ರಮುಖ ನಾಯಕರನ್ನು ಒಳಗೊಂಡ ರಾಜ್ಯ ತಂಡವನ್ನು ರಚಿಸಿದೆ. ಈ ತಂಡದಲ್ಲಿ ಪಕ್ಷದ ಹಿರಿಯ ನಾಯಕರು, ಕೇಂದ್ರ ಸಚಿವರು, ಸಂಸದರು ಮತ್ತು ಶಾಸಕರು ಸೇರಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ರಾಜ್ಯ ಅಧ್ಯಕ್ಷರಾಗಿ ಇಡೀ ತಂಡದ ನೇತೃತ್ವ ವಹಿಸಿದ್ದರೆ, ವಿಧಾನಸಭಾ ಮತ್ತು ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್ ಹಾಗೂ ಛಲವಾದಿ ನಾರಾಯಣಸ್ವಾಮಿ ಅವರು ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.
ಕೇಂದ್ರ ಸಚಿವರಾದ ವಿ. ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರು ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇವರ ಜೊತೆಗೆ ಶಾಸಕರುಗಳಾದ ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವಥ್ ನಾರಾಯಣ್ ಮತ್ತು ಸಂಸದರುಗಳಾದ ಪಿ.ಸಿ. ಮೋಹನ್, ಡಾ. ಸಿ.ಎನ್. ಮಂಜುನಾಥ್, ತೇಜಸ್ವಿ ಸೂರ್ಯ, ಡಾ. ಕೆ. ಸುಧಾಕರ್ ಅವರು ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಪಕ್ಷದ ಸಂಘಟನಾತ್ಮಕ ಜವಾಬ್ದಾರಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಸ್. ನಂದೀಶ್ ರೆಡ್ಡಿ ಅವರು ನಿರ್ವಹಿಸಲಿದ್ದಾರೆ.
ವಲಯವಾರು ಉಸ್ತುವಾರಿಗಳು ಮತ್ತು ವಿಧಾನಸಭಾ ಕ್ಷೇತ್ರಗಳ ನಾಯಕರು
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ಪ್ರಮುಖ ವಲಯಗಳಿಗೆ ತಲಾ ನಾಲ್ವರು ನಾಯಕರನ್ನು ಒಳಗೊಂಡ ತಂಡಗಳನ್ನು ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಈ ತಂಡಗಳು ಆಯಾ ವಲಯದ ಚುನಾವಣಾ ಸಿದ್ಧತೆ, ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಚಾರ ಕಾರ್ಯಗಳನ್ನು ನೋಡಿಕೊಳ್ಳಲಿವೆ. ಬೆಂಗಳೂರು ಪೂರ್ವ ಪ್ರಾಧಿಕಾರದ ಜವಾಬ್ದಾರಿಯನ್ನು ಬೈರತಿ ಬಸವರಾಜ್, ಮಂಜುಳಾ ಅರವಿಂದ್ ಲಿಂಬಾವಳಿ, ಎನ್. ರವಿಕುಮಾರ್ ಮತ್ತು ಎನ್.ಎಸ್. ನಂದೀಶ್ ರೆಡ್ಡಿ ಅವರಿಗೆ ವಹಿಸಲಾಗಿದೆ. ಬೆಂಗಳೂರು ಉತ್ತರ ಪ್ರಾಧಿಕಾರದ ಉಸ್ತುವಾರಿಯನ್ನು ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ದಾಸರಹಳ್ಳಿ, ತಮ್ಮೇಶ್‌ಗೌಡ, ಭಾರತಿ ಶೆಟ್ಟಿ ಮತ್ತು ಕಟ್ಟಾ ಸುಬ್ರಮಣ್ಯ ನಾಯ್ಡು ನಿರ್ವಹಿಸಲಿದ್ದಾರೆ. ಬೆಂಗಳೂರು ಪಶ್ಚಿಮ ಪ್ರಾಧಿಕಾರಕ್ಕೆ ಆರ್. ಅಶೋಕ್, ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವಥ್ ನಾರಾಯಣ್ ಮತ್ತು ಮುನಿರತ್ನ ಸೇರಿದಂತೆ ಒಟ್ಟು ಹತ್ತು ನಾಯಕರು ಜವಾಬ್ದಾರಿ ಹೊತ್ತಿದ್ದಾರೆ. ಬೆಂಗಳೂರು ದಕ್ಷಿಣ ಪ್ರಾಧಿಕಾರದ ಹೊಣೆಯನ್ನು ಸತೀಶ್ ರೆಡ್ಡಿ, ಎಂ. ಕೃಷ್ಣಪ್ಪ, ಕೆ. ರಾಮಮೂರ್ತಿ ಮತ್ತು ಪೂರ್ಣಿಮಾ ಪ್ರಕಾಶ್ ಅವರಿಗೆ ನೀಡಲಾಗಿದೆ. ಬೆಂಗಳೂರು ಕೇಂದ್ರ ಪ್ರಾಧಿಕಾರದ ಉಸ್ತುವಾರಿಯಾಗಿ ಸಿ.ಟಿ. ರವಿ, ಎಸ್. ರಘು, ಕೆ. ರಾಮಮೂರ್ತಿ, ಉದಯ್ ಬಿ. ಗರುಡಾಚಾರ್, ಸಪ್ತಗಿರ ಗೌಡ ಮತ್ತು ಸರೋಜಿನಿ ಭಾರದ್ವಾಜ್ ಅವರನ್ನು ನೇಮಕ ಮಾಡಲಾಗಿದೆ.
ವಿಧಾನಸಭಾ ವ್ಯಾಪ್ತಿಗೆ ಪ್ರತ್ಯೇಕ ಉಸ್ತುವಾರಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ 28 ವಿಧಾನಸಭಾ ಕ್ಷೇತ್ರಗಳಿಗೂ ಪ್ರತ್ಯೇಕವಾಗಿ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಯಲಹಂಕ, ಕೆ.ಆರ್. ಪುರಂ, ರಾಜರಾಜೇಶ್ವರಿ ನಗರ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಶಾಸಕರು ಮತ್ತು ಹಿರಿಯ ನಾಯಕರನ್ನು ನೇಮಿಸಿ ಪಕ್ಷದ ಕಾರ್ಯಕರ್ತರನ್ನು ಸಕ್ರಿಯಗೊಳಿಸುವಂತೆ ನಾಯಕರಿಗೆ ಸೂಚಿಸಲಾಗಿದೆ.
2026 ರ ಮೇ-ಜೂನ್ ತಿಂಗಳಲ್ಲಿ ನಡೆಯುವ ಸಾಧ್ಯತೆಯಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗಳು ಕರ್ನಾಟಕದ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿವೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಬಿಜೆಪಿ, ಈಗ ಬೆಂಗಳೂರು ನಗರದ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಹವಣಿಸುತ್ತಿದೆ.

