
ಬಾಗಲಕೋಟೆ ಉಪಸಮರ: ಕುಟುಂಬದ ವಾರಸುದಾರಿಕೆಗೆ ಎಚ್. ವೈ. ಮೇಟಿ ಮಕ್ಕಳ ಜಗಳ!
ಶಾಸಕ ಎಚ್.ವೈ. ಮೇಟಿ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಉಪಸಮರವು ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಚುನಾವಣೆಯಲ್ಲಿ ಹೊಸ ನಾಯಕತ್ವದ ಉದಯವಾಗಲಿದೆಯೇ? ಅಥವಾ ಇಲ್ಲವೇ? ಎಂಬುದು ಕುತೂಹಲ ಮೂಡಿಸಿದೆ.
ಕೃಷ್ಣಾ ನದಿಯ ದಂಡೆಯ ಮೇಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಎದುರಾಗಿರುವ ಉಪಚುನಾವಣೆ ಇದೀಗ ರಾಜ್ಯದ ಗಮನ ಸೆಳೆದಿದೆ. ಶಾಸಕ ಎಚ್.ವೈ. ಮೇಟಿ ನಿಧನದಿಂದ ಕ್ಷೇತ್ರ ತೆರವಾಗಿದ್ದು, ಉಪಸಮರವು ಎರಡು ದಶಕಗಳಿಂದ ಇಬ್ಬರು ವ್ಯಕ್ತಿಗಳ ನಡುವಿನ ಜಿದ್ದಾಜಿದ್ದಿಗೆ ಸಾಕ್ಷಿಯಾಗಿತ್ತು. ಈಗ ಆ ಯುಗ ಅಂತ್ಯಗೊಂಡಿದೆ. ಹೊಸ ನಾಯಕತ್ವದ ಉದಯವಾಗಲಿದೆಯೇ? ಅಥವಾ ಇಲ್ಲವೇ? ಎಂಬುದು ಕುತೂಹಲ ಮೂಡಿಸಿದೆ.
ಉಪಚುನಾವಣೆಯಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ, ಎಚ್.ವೈ. ಮೇಟಿ ಕುಟುಂಬದಲ್ಲಿಯೇ ಒಡಕು ಮೂಡಿದ್ದು, ರಾಜಕೀಯ ಸ್ಥಾನಮಾನವನ್ನು ತುಂಬಲು ಅವರ ಕುಟುಂಬದಲ್ಲೇ ದೊಡ್ಡ ಸಂಘರ್ಷ ಶುರುವಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಮೇಟಿ ಕುಟುಂಬದವರಿಗೇ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದ್ದರೂ, ಕುಟುಂಬದೊಳಗಿನ ವಾರಸುದಾರಿಕೆಯ ಜಗಳ ಈಗ ಬೀದಿಗೆ ಬಂದಿದೆ. ಹಿರಿಯ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ಹೈಕಮಾಂಡ್ ಮಣೆ ಹಾಕಲು ಸಿದ್ಧತೆ ನಡೆಸಿದ್ದರೆ, ಮತ್ತೊಬ್ಬ ಪುತ್ರ ಉಮೇಶ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ, ಕಿರಿಯ ಪುತ್ರಿ ಮಹಾದೇವಿ ಮೇಟಿ ಬಂಡಾಯದ ಬಾವುಟ ಹಾರಿಸಿರುವುದು ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೇಟಿ ಕುಟುಂಬದಲ್ಲಿಯೇ ರಾಜಕೀಯ ಸ್ಥಾನಕ್ಕಾಗಿ ಮುಸುಕಿನ ಕಾದಾಟ ನಡೆಯುತ್ತಿರುವ ಕಾರಣ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಕಾಂಗ್ರೆಸ್‌ಗೆ ತಲೆಬಿಸಿಯಾಗಿದೆ. ಮಂಗಳವಾರ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ. ಸಭೆಯಲ್ಲಿ ಬಾಗಲಕೋಟೆಯ ಕಾಂಗ್ರೆಸ್ ರಾಜಕೀಯ ಕುರಿತು ಸಮಾಲೋಚನೆ ನಡೆಯಲಿದೆ. ಬಳಿಕ ಒಂದು ಹೆಸರನ್ನು ಪಕ್ಷಕ್ಕೆ ಶಿಫಾರಸು ಮಾಡಲಿದೆ ಎಂದು ಮೂಲಗಳು ಹೇಳಿವೆ. ಮಹಾದೇವಿ ಮೇಟಿ ಬಂಡಾಯವನ್ನು ಶಮನಗೊಳಿಸುವ ಕುರಿತು ಸಹ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಹೇಳಲಾಗಿದೆ.
ಮಹಾದೇವಿ ಮೇಟಿ ಅವರು ಹೊರಡಿಸಿರುವ ಭಿತ್ತಿಪತ್ರ
ಮಲ್ಲಿಕಾರ್ಜುನ ಮೇಟಿಗೆ ಟಿಕೆಟ್ ಸಾಧ್ಯತೆ?
ಎಚ್.ವೈ. ಮೇಟಿ ಅವರು ಉತ್ತರ ಕರ್ನಾಟಕದ ಪ್ರಭಾವಿ ಕುರುಬ ಸಮುದಾಯದ ನಾಯಕರಾಗಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮೇಟಿ, ಜಿಲ್ಲೆಯ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ನಿಧನದಿಂದಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಒಂದು ದೊಡ್ಡ ಶಕ್ತಿಯನ್ನು ಕಳೆದುಕೊಂಡಂತಾಗಿದೆ. ಈ ಹಿನ್ನೆಲೆಯಲ್ಲಿ, ಅನುಕಂಪದ ಅಲೆ ಮತ್ತು ಮೇಟಿ ಬೆಂಬಲಿಗರನ್ನು ಒಗ್ಗೂಡಿಸಲು ಅವರ ಕುಟುಂಬದವರಿಗೇ ಟಿಕೆಟ್ ನೀಡುವುದು ಅನಿವಾರ್ಯ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ಎಚ್.ವೈ. ಮೇಟಿ ಅವರ ಹಿರಿಯ ಪುತ್ರ ಮಲ್ಲಿಕಾರ್ಜುನ ಮೇಟಿ ಅವರಿಗೆ ಟಿಕೆಟ್ ನೀಡಲು ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆದಿವೆ. ಮಲ್ಲಿಕಾರ್ಜುನ ಸೌಮ್ಯ ಸ್ವಭಾವದವರಾಗಿದ್ದು, ತಂದೆಯ ನಿಧನದ ನಂತರ ಅವರ ಬೆಂಬಲಿಗರೊಂದಿಗೆ ಸಂಪರ್ಕದಲ್ಲಿದ್ದಾರೆ. ಹಿರಿಯ ಮಗ ಎಂಬ ಕಾರಣಕ್ಕೆ ಕುಟುಂಬದ ಮತ್ತು ರಾಜಕೀಯದ ಜವಾಬ್ದಾರಿ ಅವರ ಹೆಗಲ ಮೇಲೆ ಬೀಳಬೇಕು ಎಂಬುದು ಪಕ್ಷದ ಹಲವು ಹಿರಿಯ ನಾಯಕರ ಅಭಿಪ್ರಾಯವಾಗಿದೆ. ಮೇಟಿಯ ಮತ್ತೊಬ್ಬ ಪುತ್ರ ಉಮೇಶ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ಮತದಾರರ ಮೇಲೆ ಹಿಡಿತ ಸಾಧಿಸಿದ್ದಾರೆ. ಕಾಂಗ್ರೆಸ್‌ಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಮತಗಳಿವೆ, ಈ ಕಾರಣದಿಂದಾಗಿ ತಮಗೆ ಟಿಕೆಟ್ ನೀಡಬೇಕು ಎಂಬುದು ಅವರ ವಾದವಾಗಿದೆ.
ಮಹಾದೇವಿ ಮೇಟಿ ಬಂಡಾಯದ ಕಿಚ್ಚು
ಸಹೋದರರಿಬ್ಬರ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ಅಡ್ಡಿಯಾಗಿ ಮೇಟಿಯವರ ಕೊನೆಯ ಪುತ್ರಿ ಮಹಾದೇವಿ ನಿಂತಿದ್ದಾರೆ. ಕೇವಲ ಪುತ್ರರಿಗೆ ಮಾತ್ರ ರಾಜಕೀಯ ಸೀಮಿತವಲ್ಲ, ತಂದೆಯವರ ರಾಜಕೀಯ ಹಾದಿಯಲ್ಲಿ ತಾವು ಕೂಡ ಸಕ್ರಿಯವಾಗಿ ಕೆಲಸ ಮಾಡಿದ್ದೇವೆ, ಕ್ಷೇತ್ರದಲ್ಲಿ ನನಗೆ ಹೆಚ್ಚಿನ ಜನಬೆಂಬಲವಿದೆ ಎಂಬುದು ಮಹಾದೇವಿ ಅವರ ವಾದವಾಗಿದೆ. ಕಾಂಗ್ರೆಸ್ ತನಗೆ ಟಿಕೆಟ್ ನೀಡದಿದ್ದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಅಥವಾ ಬಂಡಾಯದ ಹಾದಿ ಹಿಡಿಯುವುದಾಗಿ ಅವರು ಪಕ್ಷಕ್ಕೆ ಎಚ್ಚರಿಕೆ ನೀಡಿದ್ದಾರೆ. ಮಹಾದೇವಿ ಅವರ ಈ ಹಠಮಾರಿ ಧೋರಣೆ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಮಹಿಳಾ ಕೋಟಾದಡಿ ಅಥವಾ ತಮ್ಮ ಕೆಲಸದ ಆಧಾರದ ಮೇಲೆ ತಮಗೆ ಆದ್ಯತೆ ನೀಡಬೇಕು ಎಂದು ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ಮೇಟಿ ಕುಟುಂಬದ ಮತಗಳು ವಿಭಜನೆಯಾಗುವ ಆತಂಕ ಎದುರಾಗಿದೆ.
ಎಚ್.ವೈ. ಮೇಟಿ ಅವರಿಗೆ ನಾಲ್ವರು ಮಕ್ಕಳಿದ್ದು, ಮಲ್ಲಿಕಾರ್ಜುನ, ಉಮೇಶ ಎಂಬ ಇಬ್ಬರು ಪುತ್ರರು ಮತ್ತು ಬಾಯಕ್ಕ, ಮಹಾದೇವಿ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಹಿರಿಯ ಪುತ್ರಿ ಬಾಯಕ್ಕ ಅವರು ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. "ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾವು ಅವರ ಪರವಾಗಿ ಕೆಲಸ ಮಾಡುತ್ತೇವೆ" ಎಂದು ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಪುತ್ರ ಉಮೇಶ ಟಿಕೆಟ್ ಆಕಾಂಕ್ಷಿಯಾಗಿದ್ದರೂ, ಪಕ್ಷದ ತೀರ್ಮಾನವನ್ನು ಗೌರವಿಸುವುದಾಗಿ ಒಲ್ಲದ ಮನಸ್ಸಿನಿಂದಲೇ ಹೇಳಿದ್ದಾರೆ. ಇದು ಮಲ್ಲಿಕಾರ್ಜುನ ಅವರಿಗೆ ನೈತಿಕ ಬಲ ನೀಡಿದೆ. ಮಹಾದೇವಿ ಮೇಟಿ ಮಾತ್ರ ತನಗೇ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕುಟುಂಬದ ಸದಸ್ಯರು ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂಬ ಅಳಲನ್ನು ಅವರು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಮುಂದಿರುವ ಸವಾಲುಗಳು
ಬಾಗಲಕೋಟೆ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ಮೇಟಿ ಕುಟುಂಬದ ಜಗಳದಿಂದಾಗಿ ಈ ಮತಬ್ಯಾಂಕ್ ಚದುರಿ ಹೋದರೆ ಅದು ನೇರವಾಗಿ ಬಿಜೆಪಿಗೆ ಲಾಭವಾಗಲಿದೆ. ಮೇಟಿ ನಿಧನದ ಅನುಕಂಪವನ್ನು ಮತಗಳಾಗಿ ಪರಿವರ್ತಿಸಲು ಕುಟುಂಬದ ಒಮ್ಮತದ ಅಭ್ಯರ್ಥಿ ಮುಖ್ಯ. ಮಹಾದೇವಿ ಮೇಟಿ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದರೆ, ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ಗೆಲುವಿನ ಹಾದಿ ಕಠಿಣವಾಗಲಿದೆ ಎಂಬ ಮಾತುಗಳು ಕೇಳಿಬಂದಿವೆ.
ಬಿಜೆಪಿಗೆ ರತ್ನಗಂಬಳಿ?
ಮೇಟಿ ಕುಟುಂಬದಲ್ಲಿ ಮಲ್ಲಿಕಾರ್ಜುನ ಮತ್ತು ಮಹಾದೇವಿ ನಡುವೆ ಜಗಳ ಶುರುವಾಗಿದೆ. ಒಂದು ವೇಳೆ ಮಹಾದೇವಿ ಮೇಟಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಅಥವಾ ಪಕ್ಷದ ನಿರ್ಧಾರದ ವಿರುದ್ಧವಾಗಿ ಕೆಲಸ ಮಾಡಿದರೆ, ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ಮತ್ತು ಮೇಟಿ ಕುಟುಂಬದ ಆಪ್ತ ಮತಗಳು ಎರಡು ಭಾಗವಾಗುತ್ತವೆ. ಕುಟುಂಬದೊಳಗೆ ಉಂಟಾಗಿರುವ ಟಿಕೆಟ್ ಭಿನ್ನಮತವು ಬಿಜೆಪಿಯ ವೀರಣ್ಣ ಚರಂತಿಮಠ ಅವರಿಗೆ ರತ್ನಗಂಬಳಿ ಹಾಸಿಕೊಟ್ಟಂತಾಗಲಿದೆ. ಒಳಜಗಳದ ಬಗ್ಗೆ ಜನತೆಯಲ್ಲಿ ನಕಾರಾತ್ಮಕ ಭಾವನೆ ಮೂಡಿದರೆ, ಆ ಮತಗಳು ತಟಸ್ಥವಾಗಬಹುದು ಅಥವಾ ಬಿಜೆಪಿಯತ್ತ ವಾಲುವುದಕ್ಕೆ ದಾರಿಯಾಗಬಹುದು.
ವೀರಣ್ಣ ಚರಂತಿಮಠ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಭದ್ರಕೋಟೆಯನ್ನು ಹೊಂದಿದ್ದಾರೆ. ಅವರು ಹೊಂದಿರುವ ಜನಸಂಪರ್ಕ, ಬಿಜೆಪಿ ಕೇಡರ್ ಬಲ ಅವರಿಗೆ ಶ್ರೀರಕ್ಷೆಯಾಗಿದೆ. ಕಾಂಗ್ರೆಸ್ ಪಾಳಯದಲ್ಲಿ ಟಿಕೆಟ್‌ಗಾಗಿ ಬೀದಿ ಜಗಳ ನಡೆಯುತ್ತಿದ್ದರೆ, ಅತ್ತ ಚರಂತಿಮಠ ಅವರು ಅತ್ಯಂತ ಶಾಂತವಾಗಿ ಮತ್ತು ವ್ಯವಸ್ಥಿತವಾಗಿ ತಮ್ಮ ಚುನಾವಣಾ ತಂತ್ರಗಾರಿಕೆಯನ್ನು ರೂಪಿಸುತ್ತಿದ್ದಾರೆ.
ಸಾಮಾನ್ಯವಾಗಿ ಶಾಸಕರ ಮರಣದ ನಂತರ ಅವರ ಕುಟುಂಬದವರಿಗೆ ಟಿಕೆಟ್ ನೀಡಿದಾಗ ಅನುಕಂಪದ ಅಲೆ ಕೆಲಸ ಮಾಡುತ್ತದೆ. ಆದರೆ ಕುಟುಂಬದ ಸದಸ್ಯರೇ ಪರಸ್ಪರ ಕಿತ್ತಾಡಿಕೊಂಡಾಗ ಜನರು ಅನುಕಂಪ ತೋರಿಸುವ ಸಾಧ್ಯತೆ ಕಡಿಮೆಯಾಗಲಿದೆ. ಕೌಟುಂಬಿಕ ಕಲಹವು ಮೇಟಿ ಮೇಲಿದ್ದ ಜನರ ಗೌರವವನ್ನು ಮತಗಳಾಗಿ ಪರಿವರ್ತಿಸಲು ಅಡ್ಡಿಯಾಗುವ ನಿರೀಕ್ಷೆ ಇದೆ. ಇದು ಚರಂತಿಮಠ ಅವರಿಗೆ ಎದುರಾಳಿಯ ಪ್ರಬಲ ಅಸ್ತ್ರವನ್ನು ನಿಷ್ಕ್ರಿಯಗೊಳಿಸಲು ಸಹಾಯ ಮಾಡಲಿದೆ ಎಂಬ ಲೆಕ್ಕಾಚಾರ ರಾಜಕೀಯ ವಲಯದಲ್ಲಿ ನಡೆದಿದೆ.

