
ಮೃತ್ಯುಕೂಪ ಕೃಷಿ ಹೊಂಡಗಳು; ಯಾದಗಿರಿಯಲ್ಲಿ ನಾಲ್ವರು ಮಕ್ಕಳ ಜಲಸಮಾಧಿ
ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು ಕೃಷಿ ಹೊಂಡ ನಿರ್ಮಿಸುವಾಗ ಕಡ್ಡಾಯವಾಗಿ ಬೇಲಿ ನಿರ್ಮಾಣ ಮಾಡಬೇಕು ಎಂದು ಸೂಚಿಸುತ್ತವೆ. ಆದರೆ, ಹಣ ಉಳಿಸುವ ಸಲುವಾಗಿ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿರುವುದೇ ಸಾವಿಗೆ ಕಾರಣವಾಗುತ್ತಿದೆ.
ಬಿಸಿಲಿನ ಬೇಗೆಯಿಂದ ತಣಿಯಲು ಹೋದ ಪುಟ್ಟ ಕಂದಮ್ಮಗಳ ಪಾಲಿಗೆ ಕೃಷಿ ಹೊಂಡವೇ ಮೃತ್ಯುಕೂಪವಾಗಿ ಮಾರ್ಪಟ್ಟಿದೆ. ಈಜಲು ಹೋದ ಒಂದೇ ಗ್ರಾಮದ ನಾಲ್ವರು ಮಕ್ಕಳು ನೀರು ಪಾಲಾಗಿರುವ ಘಟನೆ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಶನಿವಾರ ಸಂಜೆ ಬೆಳಕಿಗೆ ಬಂದಿದೆ.
ಮೃತ ಮಕ್ಕಳನ್ನು ಕಿರಣ್ (6), ಬಸಮ್ಮ (11), ಶರತ್ (6) ಹಾಗೂ ಹನುಮೇಶ್ (7) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದುದರಿಂದ ಮಕ್ಕಳು ಆಟವಾಡುತ್ತಾ ಗ್ರಾಮದ ಸಮೀಪವಿರುವ ಕೃಷಿ ಹೊಂಡದ ಬಳಿ ಈಜಲು ಹೋಗಿದ್ದರು. ನೀರಿನ ಆಳದ ಅರಿವಿಲ್ಲದೆ ಹೊಂಡಕ್ಕೆ ಇಳಿದ ಮಕ್ಕಳು ನೀರಿನಲ್ಲಿ ಮುಳುಗಲು ಆರಂಭಿಸಿದ್ದಾರೆ. ಆಗ ಒಬ್ಬರನ್ನೊಬ್ಬರು ಉಳಿಸಲು ಪ್ರಯತ್ನದಲ್ಲಿ ನಾಲ್ವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದ ಕಾರಣ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದಾಗ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡು ಬಂದಿದೆ.
ಮುಗಿಲು ಮುಟ್ಟಿದ ಪೋಷಕರ ಆಕ್ರಂಧನ
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.ಕಣ್ಣ ಮುಂದೆಯೇ ಆಟವಾಡುತ್ತಿದ್ದ ಕಂದಮ್ಮಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ನೆರೆದವರ ಕಣ್ಣಾಲಿಗಳನ್ನು ತೇವಗೊಳಿಸಿದ್ದವು. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಕೃಷಿ ಹೊಂಡದ ಬಳಿ ಯಾವುದೇ ಸುರಕ್ಷಿತ ಕ್ರಮ ಕೈಗೊಳ್ಳದಿರುವುದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ.
ಮೃತ್ಯುಕೂಪಗಳಾಗಿರುವ ಕೃಷಿ ಹೊಂಡಗಳು
ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಕೃಷಿಹೊಂಡಗಳಲ್ಲಿ ಮುಳುಗಿ ಮೃತಪಡುತ್ತಿರುವ ಪ್ರಕರಣಗಳು ಮರುಕಳುಹಿಸುತ್ತಿವೆ.
ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ಶನಿವಾರ ಕೃಷಿ ಹೊಂಡದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲೇ ಸಿಲುಕಿ ಮೃತಪಟ್ಟರೆ, ಮತ್ತಿಬ್ಬರು ಅಪಾಯದಿಂದ ಪಾರಾಗಿದ್ದರು. ಮೃತರನ್ನು ಸುರೇಶ್ (21), ನರಸೇಗೌಡ (22) ಎಂದು ಗುರುತಿಸಲಾಗಿತ್ತು.
ಎರಡು ದಿನಗಳ ಹಿಂದೆಯಷ್ಟೇ ಮಂಡ್ಯ ಜಿಲ್ಲೆಯ ಹಲಗೂರು ಸಮೀಪದ ನಂದೀಪುರ ಗ್ರಾಮದಲ್ಲಿ 15 ವರ್ಷದ ಪೃಥ್ವಿಕ್ ಎಂಬ ಬಾಲಕ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದ. 2025 ಜುಲೈ 21ರಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಕೃತಕ ಕೃಷಿ ಹೊಂಡದಲ್ಲಿ ನೀರು ತರಲು ಹೋಗಿ ತಂದೆ ಮತ್ತು ಮಗ ಮುಳುಗಿ ಸಾವಿಗೀಡಾಗಿದ್ದರು. ಮೃತರನ್ನು ಬಸವರಾಜ ನೀಲಪ್ಪ ಕೆಂಗೇರಿ (40) ಮತ್ತು ಅವರ ಪುತ್ರ ಧರೆಪ್ಪ (14) ಎಂದು ಗುರುತಿಸಲಾಗಿತ್ತು.
2025 ಅ.16ರಂದು ವಿಜಯಪುರ ತಾಲೂಕಿನ ಮಿಂಚನಾಳ ತಾಂಡಾದಲ್ಲಿ ಕುರಿ ಮೇಯಿಸಲು ಹೋಗಿದ್ದ ಮೂವರು ಮಕ್ಕಳು ಆಕಸ್ಮಿಕವಾಗಿ ಕೃಷಿ ಹೊಂಡಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿದ್ದರು.
ಸುರಕ್ಷತಾ ಕ್ರಮ ಪಾಲಿಸದ ಮಾಲೀಕರು
ಕೃಷಿ ಹೊಂಡಗಳು ರೈತರಿಗೆ ವರದಾನವಾಗಿದ್ದರೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆ ಜೀವಕಂಟಕವಾಗುತ್ತಿವೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳು ಕೃಷಿ ಹೊಂಡ ನಿರ್ಮಿಸುವಾಗ ಕಡ್ಡಾಯವಾಗಿ ಬೇಲಿ ನಿರ್ಮಾಣ ಮಾಡಬೇಕು ಎಂದು ಸೂಚಿಸುತ್ತವೆ. ಆದರೆ, ಹಣ ಉಳಿಸುವ ಸಲುವಾಗಿ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿರುವುದೇ ಸಾವಿಗೆ ಕಾರಣವಾಗುತ್ತಿದೆ.
ಹೊಂಡದ ಬಳಿ ಅಪಾಯದ ಸೂಚನೆ ನೀಡುವ ನಾಮಫಲಕ ಅಳವಡಿಸಬೇಕು. ಆಕಸ್ಮಿಕವಾಗಿ ನೀರಿಗೆ ಬಿದ್ದರೆ ಮೇಲೆ ಬರಲು ಅನುಕೂಲವಾಗುವಂತೆ ಹೊಂಡದ ಒಳಗೆ ಹಗ್ಗ ಅಥವಾ ಬಲೆಗಳನ್ನು ಅಳವಡಿಸಬೇಕು ಎಂಬ ಸೂಚನೆಗಳನ್ನು ಪಾಲಿಸದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

