ರಾಜ್ಯದಲ್ಲಿ ಮುಂದುವರಿದ ಅಕಾಲಿಕ ಮಳೆಯ ಅಬ್ಬರ, ಇಂದೂ ಇದೆ ಮಳೆ
x

ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಮುನ್ಸೂಚನೆ ಇದೆ. 

ರಾಜ್ಯದಲ್ಲಿ ಮುಂದುವರಿದ ಅಕಾಲಿಕ ಮಳೆಯ ಅಬ್ಬರ, ಇಂದೂ ಇದೆ ಮಳೆ

ಉತ್ತರ ಕರ್ನಾಟಕ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಶುಕ್ರವಾರದವರೆಗೂ ಗುಡುಗು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.


Click the Play button to hear this message in audio format

ರಾಜ್ಯಾದ್ಯಂತ ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಅಕಾಲಿಕ ಮಳೆಯು ತಂಪೆರೆದಿದ್ದು, ಮುಂದಿನ ಕೆಲವು ದಿನಗಳ ಕಾಲ ಮಳೆಯ ಅಬ್ಬರ ಮುಂದುವರಿಯುವ ಮುನ್ಸೂಚನೆ ಇದೆ. ಮಲೆನಾಡು ಭಾಗದಲ್ಲಿ ಭಾನುವಾರದವರೆಗೂ ವರ್ಷಧಾರೆ ಇರಲಿದ್ದು,

ಉತ್ತರ ಕರ್ನಾಟಕ, ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಶುಕ್ರವಾರದವರೆಗೂ ಗುಡುಗು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಇಪ್ಪತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಆಲಿಕಲ್ಲು ಹಾಗೂ ಬಿರುಗಾಳಿಯ ಅಬ್ಬರ ಇರಲಿದ್ದು, ಶನಿವಾರದಿಂದ ಮಳೆಯ ಪ್ರಮಾಣ ಕೊಂಚ ತಗ್ಗುವ ಸಾಧ್ಯತೆಯಿದೆ.

ವಿವಿಧ ಜಿಲ್ಲೆಗಳಲ್ಲಿ ಆಲಿಕಲ್ಲು ಹಾಗೂ ಬಿರುಗಾಳಿ ಎಚ್ಚರಿಕೆ

ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ. ಅದೇ ರೀತಿ ಬಳ್ಳಾರಿ, ವಿಜಯನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಗಂಟೆಗೆ ಐವತ್ತರಿಂದ ಅರವತ್ತು ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಆಲಿಕಲ್ಲು ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ವಿಜಯಪುರ, ಗದಗ, ಬಾಗಲಕೋಟೆ, ಧಾರವಾಡ, ಹಾವೇರಿ ಹಾಗೂ ಬೆಳಗಾವಿ ಭಾಗಗಳಲ್ಲಿಯೂ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರಿನ ಹವಾಮಾನ

ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ರಾಮನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮುಂದಿನ ಇಪ್ಪತ್ತನಾಲ್ಕು ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಗಂಟೆಗೆ ಮೂವತ್ತರಿಂದ ನಲವತ್ತು ಕಿಲೋಮೀಟರ್ ವೇಗದಲ್ಲಿ ಗಾಳಿ ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಭಾನುವಾರದಂದು ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಒಣಹವೆ ಇರಲಿದ್ದರೂ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ.

ಹಾಸನ, ಬೀದರ್ ಹಾಗೂ ಹುಬ್ಬಳ್ಳಿಯಲ್ಲಿ ತಂಪಾದ ವಾತಾವರಣ

ಈಗಾಗಲೇ ರಾಜ್ಯದ ವಿವಿಧೆಡೆ ಸುರಿದ ಮಳೆಯು ಬಿಸಿಲಿನ ತಾಪವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಬೀದರ್ ಹಾಗೂ ಹುಬ್ಬಳ್ಳಿ ಮಹಾನಗರದಲ್ಲಿ ಅಕಾಲಿಕ ಭಾರಿ ಬಿರುಗಾಳಿ ಹಾಗೂ ಸಿಡಿಲಿನೊಂದಿಗೆ ಆಲಿಕಲ್ಲು ಮಳೆಯಾಗಿದ್ದು, ವಾತಾವರಣ ಸಂಪೂರ್ಣವಾಗಿ ತಂಪಾಗಿದೆ. ಅಂತೆಯೇ ಹಾಸನದಲ್ಲಿಯೂ ಏಕಾಏಕಿ ಸುರಿದ ಧಾರಾಕಾರ ಮಳೆ ಹಾಗೂ ಆಲಿಕಲ್ಲುಗಳಿಂದಾಗಿ ರಸ್ತೆ ಮತ್ತು ಉದ್ಯಾನಗಳು ಹಿಮದಿಂದ ಆವರಿಸಿದಂತೆ ಕಂಗೊಳಿಸಿದ್ದು, ಬಿರು ಬೇಸಿಗೆಯಲ್ಲಿ ಜನರಿಗೆ ಅತೀವ ಸಂತಸ ತಂದಿದೆ.

Read More
Next Story