ರಾಜ್ಯದಲ್ಲಿ 4,824 ಕೋಟಿ ಹೂಡಿಕೆಗೆ ಒಪ್ಪಿಗೆ; 14,525 ಹೊಸ ಉದ್ಯೋಗಗಳ ಸೃಷ್ಟಿ
x

ರಾಜ್ಯದಲ್ಲಿ 4,824 ಕೋಟಿ ಹೂಡಿಕೆಗೆ ಒಪ್ಪಿಗೆ; 14,525 ಹೊಸ ಉದ್ಯೋಗಗಳ ಸೃಷ್ಟಿ

158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ರಾಜ್ಯದ 13 ಜಿಲ್ಲೆಗಳಲ್ಲಿ 37 ಹೊಸ ಕೈಗಾರಿಕಾ ಯೋಜನೆಗಳು ಹಾಗೂ 2 ಹೆಚ್ಚುವರಿ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ.


Click the Play button to hear this message in audio format

ರಾಜ್ಯವನ್ನು ಜಾಗತಿಕ ಕೈಗಾರಿಕಾ ಭೂಪಟದಲ್ಲಿ ಮುಂಚೂಣಿಯಲ್ಲಿರಿಸುವ ಸರ್ಕಾರದ ಪ್ರಯತ್ನಕ್ಕೆ ಮತ್ತೊಂದು ಬೃಹತ್ ಯಶಸ್ಸು ಸಿಕ್ಕಿದೆ. 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ರಾಜ್ಯದ ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ 13 ಜಿಲ್ಲೆಗಳಾದ್ಯಂತ ಹರಡಿರುವ 37 ಹೊಸ ಕೈಗಾರಿಕಾ ಯೋಜನೆಗಳು ಹಾಗೂ 2 ಹೆಚ್ಚುವರಿ ಹೂಡಿಕೆಯ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಹಸಿರು ನಿಶಾನೆ ತೋರಿಸಲಾಗಿದ್ದು, ಇದರಿಂದ ರಾಜ್ಯದ 14,525 ಜನರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ.

ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆದ ಮಹತ್ವದ ಸಭೆಯು ರಾಜ್ಯದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದೆ. ವಿಶೇಷವಾಗಿ ಈ ಬಾರಿ ಕೇವಲ ಬೆಂಗಳೂರಿಗೆ ಸೀಮಿತವಾಗದೆ, ರಾಜ್ಯದ ವಿವಿಧ ಭಾಗಗಳಲ್ಲಿ ಕೈಗಾರಿಕೆಗಳ ವಿಕೇಂದ್ರೀಕರಣಕ್ಕೆ ಒತ್ತು ನೀಡಲಾಗಿದೆ. ಈ ಬಾರಿಯ ಹೂಡಿಕೆಯು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್‌ ಟೆಕ್ಸ್‌ಟೈಲ್‌, ಕಂಪ್ರೆಸ್ಡ್‌ ಗ್ಯಾಸ್‌, ಏರೋಸ್ಪೇಸ್‌, ಚಿನ್ನಾಭರಣ ತಯಾರಿಕೆ, ಎಲೆಕ್ಟ್ರಾನಿಕ್ಸ್, ಸಾಫ್ಟ್‌ವೇರ್ ಹಾಗೂ ಪ್ರವಾಸೋದ್ಯಮಕ್ಕೆ ಪೂರಕವಾದ ಪಂಚತಾರಾ ಹೋಟೆಲ್ ನಿರ್ಮಾಣ ಸೇರಿದಂತೆ ಹತ್ತಾರು ವೈವಿಧ್ಯಮಯ ವಲಯಗಳ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಐಟಿ ಮೂಲಸೌಲಭ್ಯ ಅಭಿವೃದ್ಧಿ

ಈ ಕುರಿತು ಮಾತನಾಡಿದ ಸಚಿವ ಎಂ. ಬಿ. ಪಾಟೀಲ್‌, ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ನಾವು ಎಲ್ಲಾ ವಲಯಗಳಿಗೂ ಸಮಾನ ಆದ್ಯತೆ ನೀಡುತ್ತಿದ್ದೇವೆ. ಹೊಸ ಉದ್ಯೋಗಗಳ ಸೃಷ್ಟಿ ಮತ್ತು ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಬಾಗ್ಮನೆ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್ ವತಿಯಿಂದ 494.65 ಕೋಟಿ ಮೊತ್ತದಲ್ಲಿ ಐಟಿ ಮೂಲಸೌಲಭ್ಯ ಅಭಿವೃದ್ಧಿಪಡಿಸಲಾಗುವುದು. 443.50 ಕೋಟಿ ರೂ. ವೆಚ್ಚದಲ್ಲಿ ನೂತನ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು. ಇದು ಉತ್ತರ ಕರ್ನಾಟಕದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. 376 ಕೋಟಿ ಹೂಡಿಕೆಯೊಂದಿಗೆ ಟೆಕ್ನಿಕಲ್‌ ಟೆಕ್ಸ್‌ಟೈಲ್‌ ಘಟಕವನ್ನು ಆರಂಭಿಸಲಾಗುವುದು. ರಾಜ್ಯದ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಕ್ಕೆ ಉತ್ತೇಜನ ನೀಡುವ ಸಲುವಾಗಿ 300 ಕೋಟಿ ರೂ. ವೆಚ್ಚದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ 257.77 ಕೋಟಿ ರೂ. ವೆಚ್ಚದಲ್ಲಿ ಕಂಪ್ರೆಸ್ಡ್‌ ಗ್ಯಾಸ್‌ ಘಟಕ ಸ್ಥಾಪನೆಯಾಗಲಿದೆ. ತ್ಸುಯೊ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಯು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಒತ್ತು ನೀಡಿದ್ದು, 250 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಮೋಟರ್‌ ಹಾಗೂ ಕಂಟ್ರೋಲರ್‌ ತಯಾರಿಕೆ ಘಟಕಗಳನ್ನು ಸ್ಥಾಪಿಸಲಿದೆ ಎಂದು ಹೇಳಿದರು.

ಹೂಡಿಕೆಯ ವರ್ಗೀಕರಣ, ಉದ್ಯೋಗಾವಕಾಶಗಳು

ಸಭೆಯಲ್ಲಿ ಅನುಮೋದನೆ ನೀಡಲಾದ ಯೋಜನೆಗಳನ್ನು ಹೂಡಿಕೆಯ ಮೊತ್ತಕ್ಕೆ ಅನುಗುಣವಾಗಿ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಬೃಹತ್ ಮತ್ತು ಮಧ್ಯಮ ಯೋಜನೆಗಳ ಸಂಬಂಧ 50 ಕೋಟಿ ರೂ.ಗಿಂತ ಹೆಚ್ಚು ಒಟ್ಟು 22 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 3,908.68 ಕೋಟಿ ಹೂಡಿಕೆಯಾಗಲಿದೆ. ಈ ವಲಯ ಒಂದರಿಂದಲೇ 12,475 ಜನರಿಗೆ ಉದ್ಯೋಗ ಲಭಿಸಲಿದೆ. ಮಧ್ಯಮ ಕೈಗಾರಿಕಾ ಯೋಜನೆಗಳು 15 ರಿಂದ 50 ಕೋಟಿ ರೂ. ಹೂಡಿಕೆಯಾಗಲಿದ್ದು, 15 ಹೊಸ ಯೋಜನೆಗಳಿಗೆ ಮನ್ನಣೆ ನೀಡಲಾಗಿದೆ. 350.60 ಕೋಟಿ ಹೂಡಿಕೆಯೊಂದಿಗೆ 1,750 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಈಗಾಗಲೇ ಚಾಲ್ತಿಯಲ್ಲಿರುವ 2 ಯೋಜನೆಗಳಿಗೆ ಹೆಚ್ಚುವರಿಯಾಗಿ 565 ಕೋಟಿ ರೂ. ಹೂಡಿಕೆ ಮಾಡಲು ಅನುಮೋದಿಸಲಾಗಿದೆ. ಇದರಿಂದ 300 ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.

ಈ ಬೃಹತ್ ಹೂಡಿಕೆಯು ರಾಜ್ಯದ ಜಿಡಿಪಿ ಹೆಚ್ಚಳಕ್ಕೆ ಗಣನೀಯ ಕೊಡುಗೆ ನೀಡಲಿದೆ. ವಿಶೇಷವಾಗಿ ವಿದ್ಯುತ್ ಚಾಲಿತ ವಾಹನಗಳ ಬಿಡಿಭಾಗ ತಯಾರಿಕೆ ಮತ್ತು ಕಂಪ್ರೆಸ್ಡ್ ಗ್ಯಾಸ್ ಘಟಕಗಳು ರಾಜ್ಯದ ಹಸಿರು ಇಂಧನ ಗುರಿಗಳಿಗೆ ಪೂರಕವಾಗಿವೆ. ಸಕ್ಕರೆ ಕಾರ್ಖಾನೆ ಮತ್ತು ಟೆಕ್ಸ್‌ಟೈಲ್ ಘಟಕಗಳು ಕೃಷಿ ಆಧಾರಿತ ಕೈಗಾರಿಕೆಗಳಿಗೆ ಹೊಸ ಚೈತನ್ಯ ನೀಡಲಿವೆ. ರಾಜ್ಯ ಸರ್ಕಾರದ ಈ ಏಕಗವಾಕ್ಷಿ ಪದ್ಧತಿಯು ಉದ್ಯಮಿಗಳಿಗೆ ಕೆಂಪು ಪಟ್ಟಿಯ ಅಡೆತಡೆಗಳಿಲ್ಲದೆ ಸುಲಭವಾಗಿ ಪರವಾನಗಿ ಪಡೆಯಲು ನೆರವಾಗುತ್ತಿದೆ. ಇದರಿಂದಾಗಿ ದೇಶೀಯ ಮತ್ತು ವಿದೇಶಿ ಕಂಪನಿಗಳು ರಾಜ್ಯದತ್ತ ಮುಖ ಮಾಡುತ್ತಿವೆ ಎಂದರು.

Read More
Next Story