Private School Fees|ಶಾಲೆಗಳಲ್ಲಿ  ಪ್ರವೇಶ ಶುಲ್ಕ ಮತ್ತಷ್ಟು ಏರಿಕೆ; ಪೋಷಕರಿಗೆ ಮತ್ತಷ್ಟು ಬಿಸಿ; ತ.ನಾಡು ಮಾದರಿಯಲ್ಲಿ ಕಡಿವಾಣ?
x

Private School Fees|ಶಾಲೆಗಳಲ್ಲಿ ಪ್ರವೇಶ ಶುಲ್ಕ ಮತ್ತಷ್ಟು ಏರಿಕೆ; ಪೋಷಕರಿಗೆ ಮತ್ತಷ್ಟು ಬಿಸಿ; ತ.ನಾಡು ಮಾದರಿಯಲ್ಲಿ ಕಡಿವಾಣ?

ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಲ್ಲಿ ಶುಲ್ಕ ಏರಿಕೆ ಕುರಿತು ದೂರು ನೀಡಬೇಕಾದರೆ, ಸಿಬಿಎಸ್ಇ ಮಂಡಳಿಗೆ ನೀಡಬೇಕು. ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿದರೂ ಮಂಡಳಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬುದು ಪೋಷಕರ ಆರೋಪ.


ಖಾಸಗಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಶುಲ್ಕ ಏರಿಕೆಯ ಬಿಸಿ ಪೋಷಕರ ಜೇಬು ಸುಡುತ್ತಿದೆ. ಖಾಸಗಿ ಶಾಲೆಗಳು ಪರೀಕ್ಷೆ ಆರಂಭದೊಂದಿಗೆ ದಾಖಲಾತಿ ಪ್ರಕ್ರಿಯೆಯನ್ನೂ ಆರಂಭಿಸಿವೆ. ಆದರೆ, ರಾಜ್ಯದಲ್ಲಿ ಪರಿಣಾಮಕಾರಿಯಾದ ಶುಲ್ಕ ನಿಯಂತ್ರಣ ವ್ಯವಸ್ಥೆ ಇಲ್ಲದ ಕಾರಣ ಪೋಷಕರ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ.

ಶಿಕ್ಷಕರ ವೇತನ, ನಿರ್ವಹಣಾ ವೆಚ್ಚ ಹೆಚ್ಚಳದ ನೆಪ ಹೇಳಿ ಪ್ರತೀ ವರ್ಷವೂ ಶಾಲಾ ಪ್ರವೇಶ ಶುಲ್ಕ ಹೆಚ್ಚಿಸಲಾಗುತ್ತಿದೆ. ಕೆಲ ಶಾಲೆಗಳು ಶೇ. 5 ರಷ್ಟು ಶುಲ್ಕ ಏರಿಸಿದರೆ, ಮತ್ತೆ ಕೆಲ ಶಾಲೆಗಳು ಶೇ.10ರಿಂದ 15 ರಷ್ಟು ಶುಲ್ಕ ಏರಿಸುತ್ತಿವೆ. ಇದಲ್ಲದೇ ಬೋಧನಾ ಶುಲ್ಕ, ಯೂನಿಫಾರಂ, ಸಮವಸ್ತ್ರ, ಪುಸ್ತಕಗಳು, ವಾಹನ ಸೌಲಭ್ಯದ ಹೆಸರಿನಲ್ಲೂ ಪ್ರತ್ಯೇಕವಾಗಿ ಹಣ ಸಂಗ್ರಹಿಸುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಶುಲ್ಕ ಏರಿಕೆಗೆ ಪೋಷಕರ ಆಕ್ಷೇಪ

ತಮಿಳುನಾಡಿನಲ್ಲಿ ಶುಲ್ಕ ನಿಯಂತ್ರಣ ಸಮಿತಿ ಅಸ್ತಿತ್ವದಲ್ಲಿದೆ. ಅದೇ ಮಾದರಿಯಲ್ಲಿ ಶುಲ್ಕ ನಿಯಂತ್ರಣ ವ್ಯವಸ್ಥೆಯು ಕರ್ನಾಟಕದಲ್ಲೂ ಜಾರಿಯಾಗಬೇಕು. ಆ ಮೂಲಕ ಖಾಸಗಿ ಶಾಲೆ ಆಡಳಿತ ಮಂಡಳಿಗಳ ಮನಸೋಇಚ್ಛೆ ಪ್ರವೇಶ ಶುಲ್ಕ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

“ಖಾಸಗಿ ಶಾಲೆಗಳು ಪ್ರತೀ ವರ್ಷ ಶುಲ್ಕ ಏರಿಸುವುದರಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಹೊರೆಯಾಗಲಿದೆ. ಶುಲ್ಕ ಏರಿಕೆ ಮಾಡುವುದು ಖಾಸಗಿ ಶಾಲೆಗಳಿಗೆ ಅಭ್ಯಾಸವಾಗಿಬಿಟ್ಟಿದೆ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು." ಎಂದು ಚಿಕ್ಕಬಿದರಕಲ್ಲು ಗ್ರಾಮದ ನಿವಾಸಿ ಹಾಗೂ ವಿದ್ಯಾರ್ಥಿಯ ಪೋಷಕರಾದ ಕೆ.ಸಿ. ಮರಿಯಪ್ಪ ʼದ ಫೆಡರಲ್ ಕರ್ನಾಟಕʼ ಕ್ಕೆ ತಿಳಿಸಿದರು.

ಆರ್‌ಟಿಇ ಸೀಟು; ಪೋಷಕರ ಗೊಂದಲ

1 ರಿಂದ 8ನೇ ತರಗತಿವರೆಗೆ ಆರ್‌ಟಿಇ (ಶಿಕ್ಷಣ ಹಕ್ಕು ಕಾಯ್ದೆ) ಅಡಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು, ಈಗ 9ನೇ ತರಗತಿಗೆ ದಾಖಲಾತಿ ಪಡೆಯಲು ಶುಲ್ಕ ಭರಿಸಬೇಕಾಗಿದೆ. ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಎಸ್ಎಸ್ಎಲ್‌ಸಿವರೆಗೆ ಆರ್‌ಟಿಇ ಕಾಯ್ದೆಯಡಿ ಶಿಕ್ಷಣ ಒದಗಿಸಲು ನಿರ್ಣಯ ಕೈಗೊಂಡಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸುತ್ತೋಲೆ ಹೊರಡಿಸದ ಕಾರಣ 9ನೇ ತರಗತಿಗೆ ಶುಲ್ಕ ಭರಿಸುವ ಅನಿವಾರ್ಯತೆ ಎದುರಾಗಿದೆ. ಬಹುತೇಕ ಪೋಷಕರು ಕರೆ ಮಾಡಿ, ಅಳಲು ತೋಡಿಕೊಳ್ಳುತ್ತಿದ್ದಾರೆ ಎಂದು ಆರ್‌ಟಿಇ ಹಾಗೂ ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ನಾಗಸಿಂಹ ಜಿ.ರಾವ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಪ್ರತಿ ಶಾಲೆಯು ಪ್ರವೇಶ ಶುಲ್ಕ ಕುರಿತು ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು. ಬಹುತೇಕ ಶಾಲೆಗಳಲ್ಲಿ ಶುಲ್ಕ ಏರಿಕೆ ಮಾಡಿರುವ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಂಡಿರುವ ಯಾವುದೇ ಉದಾಹರಣೆ ಇಲ್ಲ. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಲ್ಲಿ ಶುಲ್ಕ ಏರಿಕೆ ಕುರಿತು ದೂರು ನೀಡಬೇಕಾದರೆ, ಸಿಬಿಎಸ್ಇ ಮಂಡಳಿಗೆ ನೀಡಬೇಕು. ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿದರೂ ಮಂಡಳಿ ಅಧಿಕಾರಿಗಳು ಸ್ಪಂದಿಸಲ್ಲ. ಪೋಷಕರಲ್ಲಿ ಒಗ್ಗಟ್ಟಿನ ಕೊರತೆಯಿಂದ ಯಾವುದೇ ಸಮಸ್ಯೆ ಬಗೆಹರಿಯುತ್ತಿಲ್ಲ. ಇದು ಕ್ಯಾಂಪೇನ್ ರೀತಿ ಶುರುವಾದರೆ ಬಹಳಷ್ಟು ಬದಲಾವಣೆ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಮಿಳುನಾಡು ಮಾದರಿ ವ್ಯವಸ್ಥೆಗೆ ಆಗ್ರಹ

ರಾಜ್ಯ ಸರ್ಕಾರವು ಶುಲ್ಕ ನಿಯಂತ್ರಣ ಸಮಿತಿ ರಚಿಸಿದರೂ ಖಾಸಗಿ ಶಾಲೆಗಳು ಅಭಿವೃದ್ಧಿ ಶುಲ್ಕ, ಕಟ್ಟಡ ನಿಧಿ, ಪಠ್ಯೇತರ ಚಟುವಟಿಕೆಯ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿರುವುದು ಪೋಷಕರನ್ನು ಕಂಗಾಲಾಗಿಸಿದೆ.

ಖಾಸಗಿ ಶಾಲೆಗಳ ಶುಲ್ಕ ಏರಿಕೆಯ ಪರಿಪಾಠಕ್ಕೆ ಕಡಿವಾಣ ಹಾಕಲು ತಮಿಳುನಾಡು ಮಾದರಿಯ ಶುಲ್ಕ ನಿಯಂತ್ರಣ ಸಮಿತಿ ರಚಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ವ್ಯವಸ್ಥೆ ಜಾರಿಯಾದರೆ ಖಾಸಗಿ ಶಾಲೆಗಳು ಮನಬಂದಂತೆ ಶುಲ್ಕ ಏರಿಸುವುದಕ್ಕೆ ತಡೆ ಬೀಳಲಿದೆ. ಪೋಷಕರಿಗೂ ಇದರಿಂದ ಅನುಕೂಲ ಆಗಲಿದೆ ಎಂಬುದು ಪೋಷಕರ ಅಭಿಪ್ರಾಯವಾಗಿದೆ.

ತಮಿಳುನಾಡು ಮಾದರಿ ಹೇಗಿದೆ?

ತಮಿಳುನಾಡಿನಲ್ಲಿ ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸಲು ಸರ್ಕಾರವು ವಿಶೇಷ ಸಮಿತಿ ರಚಿಸಿದೆ. ತಮಿಳುನಾಡು ಸರ್ಕಾರವು "Tamil Nadu Schools (Regulation of Collection of Fee) Act, 2009" ಅಡಿ ರಚಿಸಿರುವ ಉನ್ನತ ಮಟ್ಟದ ಸಮಿತಿಗೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಅಧ್ಯಕ್ಷರಾಗಿದ್ದಾರೆ.

ಖಾಸಗಿ ಶಾಲೆಗಳು ಇಷ್ಟ ಬಂದಂತೆ ಶುಲ್ಕ ಹೆಚ್ಚಿಸುವಂತಿಲ್ಲ. ಬದಲಾಗಿ ಪ್ರತಿಯೊಂದು ಖಾಸಗಿ ಶಾಲೆಯು ತನ್ನ ಮೂಲಸೌಕರ್ಯ, ಶಿಕ್ಷಕರ ಸಂಬಳ ಮತ್ತು ಇತರ ವೆಚ್ಚಗಳ ಆಧಾರದ ಮೇಲೆ ಹೆಚ್ಚಿಸಲಿರುವ ಶುಲ್ಕದ ವಿವರವನ್ನು ಮೊದಲು ಸಮಿತಿಗೆ ಸಲ್ಲಿಸಬೇಕು. ಸಮಿತಿಯು ಶಾಲೆ ಒದಗಿಸುವ ಸೌಲಭ್ಯಗಳು ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಪರಿಶೀಲಿಸಿ, ನ್ಯಾಯಸಮ್ಮತ ಶುಲ್ಕ ನಿಗದಿಪಡಿಸುತ್ತದೆ. ಹೀಗೆ ಒಂದು ಬಾರಿ ಶುಲ್ಕ ಹೆಚ್ಚಿಸಿದರೆ ಅದು ಮೂರು ವರ್ಷಗಳವರೆಗೆ ಜಾರಿಯಲ್ಲಿರಲಿದೆ.

ಸಮಿತಿ ನಿಗದಿಪಡಿಸಿದ ಮೊತ್ತಕ್ಕಿಂತ ಒಂದೇ ಒಂದು ರೂಪಾಯಿ ಹೆಚ್ಚು ಶುಲ್ಕ ಪಡೆದರೆ ನಿಯಮ ಉಲ್ಲಂಘನೆ ಮಾಡಿದಂತಾಗಲಿದೆ. ಆಗ ಶಾಲೆಗಳಿಗೆ ದಂಡ ವಿಧಿಸುವ ಜತೆಗೆ ಶಾಲೆಯ ಮಾನ್ಯತೆ ರದ್ದುಗೊಳಿಸುವ ಅಧಿಕಾರವೂ ಸಮಿತಿಗೆ ಇರಲಿದೆ. ಜತೆಗೆ ಪ್ರತಿಯೊಂದು ಶಾಲೆಯು ಸಮಿತಿ ನಿಗದಿಪಡಿಸಿದ ಶುಲ್ಕದ ಪಟ್ಟಿಯನ್ನು ಶಾಲೆಯ ನೋಟಿಸ್ ಬೋರ್ಡ್‌ನಲ್ಲಿ ಪ್ರದರ್ಶಿಸುವುದು ಕಡ್ಡಾಯ ಇರಲಿದೆ.

ಪೋಷಕರಿಗೆ ದೂರು ನೀಡುವ ಅವಕಾಶ

ತಮಿಳುನಾಡು ಮಾದರಿಯ ಶುಲ್ಕ ನಿಯಂತ್ರಣ ವ್ಯವಸ್ಥೆಯಲ್ಲಿ ಯಾವುದಾದರೂ ಶಾಲೆ, ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಕೇಳಿದರೆ ಅಥವಾ ಡೊನೇಷನ್ ಹೆಸರಿನಲ್ಲಿ ಹಣ ವಸೂಲಿ ಮಾಡಿದರೆ ಪೋಷಕರು ನೇರವಾಗಿ ಸಮಿತಿಗೆ ದೂರು ನೀಡಬಹುದು.

ತಮಿಳುನಾಡಿನ ಈ ಪಾರದರ್ಶಕ ವ್ಯವಸ್ಥೆಯಿಂದ ಶಿಕ್ಷಣದ ವ್ಯಾಪಾರೀಕರಣ ತಡೆಯುವ ಜತೆಗೆ ಮಧ್ಯಮ ವರ್ಗದ ಪೋಷಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬಹುದಾಗಿದೆ. ಹಾಗಾಗಿಯೇ, ಕರ್ನಾಟಕದಲ್ಲೂ ಇಂತಹದ್ದೇ ಕಟ್ಟುನಿಟ್ಟಿನ ವ್ಯವಸ್ಥೆ ಜಾರಿಗೆ ತರಬೇಕು ಎಂಬುದು ಪೋಷಕರ ಒತ್ತಾಯವಾಗಿದೆ.

ಕರ್ನಾಟಕದಲ್ಲಿ ಶುಲ್ಕ ನಿಗದಿ ವ್ಯವಸ್ಥೆ ಹೇಗಿದೆ?

ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಇದು ತಮಿಳುನಾಡಿಗೆ ಹೋಲಿಸಿದರೆ ಕೊಂಚ ಭಿನ್ನವಾಗಿದೆ. ಕರ್ನಾಟಕ ಶಿಕ್ಷಣ ಕಾಯ್ದೆ-1983 ರಡಿ ಶುಲ್ಕ ನಿಯಂತ್ರಣಕ್ಕೆ ಅವಕಾಶವಿದ್ದರೂ ಇಲ್ಲಿ ಶುಲ್ಕ ನಿರ್ಣಯ ಸೂತ್ರ ಜಾರಿಯಲ್ಲಿದೆ.

ಖಾಸಗಿ ಶಾಲೆಗಳು ಎಷ್ಟು ಶುಲ್ಕ ವಿಧಿಸಬಹುದು ಎಂಬುದಕ್ಕೆ ನಿರ್ದಿಷ್ಟ ಸೂತ್ರ ನಿಗದಿಪಡಿಸಿದೆ. ಆ ಪ್ರಕಾರವೇ ಬೋಧನಾ ಶುಲ್ಕ, ಸಿಬ್ಬಂದಿಗೆ ನೀಡುವ ಒಟ್ಟು ವೇತನದ ಶೇ. 30 ರಿಂದ 35 ರಷ್ಟು ಹೆಚ್ಚುವರಿ ಮೊತ್ತ ಸೇರಿಸಿ (ಅಭಿವೃದ್ಧಿ ವೆಚ್ಚ) ಶುಲ್ಕ ನಿರ್ಧರಿಸಬೇಕು.

ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಯಾವುದಾದರೂ ಶಾಲೆಯು ಸರ್ಕಾರದ ಸೂತ್ರಕ್ಕಿಂತ ಹೆಚ್ಚು ಶುಲ್ಕ ವಿಧಿಸಿದರೆ ಅಥವಾ ಪೋಷಕರಿಗೆ ಕಿರುಕುಳ ನೀಡಿದರೆ ಸಮಿತಿಗೆ ದೂರು ಸಲ್ಲಿಸಬಹುದು. ಈ ಸಮಿತಿಯು ಶಾಲೆಯ ಆಡಿಟ್ ವರದಿಗಳನ್ನು ಪರಿಶೀಲಿಸಿ, ತಪ್ಪಿತಸ್ಥ ಶಾಲೆಗಳಿಗೆ ದಂಡ ವಿಧಿಸುವ ಅಧಿಕಾರ ಹೊಂದಿದೆ.

ಇನ್ನು ಶಾಲಾ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಕೂಡ ಹಲವು ತೀರ್ಪುಗಳಲ್ಲಿ ಖಾಸಗಿ ಶಾಲೆಗಳಿಗೆ ಲಾಭ ಗಳಿಸುವ ಉದ್ದೇಶವಿರಬಾರದು, ಆದಾಗ್ಯೂ ಅವರು ಶಿಕ್ಷಣ ಸಂಸ್ಥೆಯನ್ನು ನಡೆಸಲು ಅಗತ್ಯವಿರುವಷ್ಟು ಹಣ ಸಂಗ್ರಹಿಸಲು ಸ್ವತಂತ್ರರು ಎಂದು ಹೇಳಿರುವುದೇ ಬೇಕಾಬಿಟ್ಟಿ ಶುಲ್ಕ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಎರಡೂ ರಾಜ್ಯಗಳ ಶುಲ್ಕ ನಿಯಂತ್ರಣ ವ್ಯವಸ್ಥೆಗೆ ಇರುವ ವ್ಯತ್ಯಾಸವೆಂದರೆ ತಮಿಳುನಾಡಿನಲ್ಲಿ ರಾಜ್ಯಮಟ್ಟದ ಸಮಿತಿಯೊಂದೇ ಎಲ್ಲಾ ಶಾಲೆಗಳ ಶುಲ್ಕವನ್ನು ನಿಗದಿಪಡಿಸುತ್ತದೆ. ಆದರೆ, ಕರ್ನಾಟಕದಲ್ಲಿ ಶಾಲೆಗಳೇ ಫೀ ಫಾರ್ಮುಲಾ ಮಾಡಿಕೊಂಡು ಶುಲ್ಕ ನಿಗದಿಪಡಿಸಿಕೊಳ್ಳಲಿವೆ. ರಾಜ್ಯ ಸರ್ಕಾರ ಕೇವಲ ದೂರು ಬಂದಾಗ ಮಾತ್ರ ಹಸ್ತಕ್ಷೇಪ ಮಾಡಲಿದೆ.

90 ದಿನಗಳ ಸಡಿಲಿಕೆಗೆ ಪೋಷಕರ ಪಟ್ಟು

ರಾಜ್ಯ ಸರ್ಕಾರ ಮಕ್ಕಳ ಶಾಲಾ ಪ್ರವೇಶಕ್ಕೆ 60 ದಿನಗಳ ವಯಸ್ಸಿನ ಸಡಿಲಿಕೆ ನೀಡಿದೆ. ಇದರಿಂದ 1 ಲಕ್ಷ ಮಕ್ಕಳಿಗೆ ಸಹಾಯವಾಗಲಿದೆ. ಇನ್ನೂ ಶಾಲೆಯಿಂದ ಸುಮಾರು 4 ಲಕ್ಷ ಮಕ್ಕಳು ಹೊರಗುಳಿಯುವ ಭೀತಿಯಲ್ಲಿದ್ದಾರೆ. ಸರ್ಕಾರ ಕನಿಷ್ಠ 90 ದಿನಗಳ ಸಡಿಲಿಕೆ ನೀಡಿದರೆ ಅನುಕೂಲವಾಗಲಿದೆ ಎಂಬುದು ಪೋಷಕರು ಒತ್ತಾಯವಾಗಿದೆ.

ಒಂದು ವೇಳೆ ಪೋಷಕರ ಬೇಡಿಕೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡಿದರೆ ಖಾಸಗಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ 1ನೇ ತರಗತಿ ಮಕ್ಕಳ ಪ್ರವೇಶಾತಿ ಸಂಖ್ಯೆ ಹೆಚ್ಚಲಿದೆ. ಈಗಾಗಲೇ ಶೇ.10 ರಿಂದ 20 ರಷ್ಟು ಶುಲ್ಕ ಹೆಚ್ಚಿಸಿರುವ ಖಾಸಗಿ ಶಾಲೆಗಳಿಗೆ ಇನ್ನಷ್ಟು ಲಾಭವಾಗಲಿದೆ ಎನ್ನಲಾಗಿದೆ.

ಕಡಿವಾಣ ಹಾಕದಿರಲು ಕಾರಣವೇನು?

ಕರ್ನಾಟಕದಲ್ಲಿ ನೀತಿ ರೂಪಿಸುವ ರಾಜಕಾರಣಿಗಳೇ ಬಹುಪಾಲು ಶಿಕ್ಷಣ ಸಂಸ್ಥೆಗಳ ಒಡೆತನ ಹೊಂದಿರುವುದರಿಂದ ಶುಲ್ಕ ನಿಯಂತ್ರಣ ವ್ಯವಸ್ಥೆ ಕಟ್ಟುನಿಟ್ಟಾಗಿಲ್ಲ ಎಂಬುದು ಕಟುವಾಸ್ತುವ.

ಇನ್ನು ದೊಡ್ಡ ದೊಡ್ಡ ಖಾಸಗಿ ಶಿಕ್ಷಣ ಸಂಸ್ಥೆಗಳ ಹಿಂದೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿ ಇರಲಿದೆ. ಕಾನೂನು ರೂಪಿಸುವವರೇ ಶಿಕ್ಷಣ ಸಂಸ್ಥೆಗಳ ಮಾಲೀಕರಾದಾಗ ಸ್ವಹಿತಾಸಕ್ತಿ ಹೆಚ್ಚು ಕೆಲಸ ಮಾಡಲಿದೆ. ಅಲ್ಲದೇ ಶಿಕ್ಷಣವು ಉದ್ಯಮವಾಗಿ ಮಾರ್ಪಟ್ಟಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿರುವುದರಿಂದ ಯಾವುದೇ ಸರ್ಕಾರ ಕೂಡ ಶುಲ್ಕ ನಿಯಂತ್ರಣ ವಿಷಯದಲ್ಲಿ ಕಠಿಣ ನಿಲುವು ತಡೆಯುವುದು ಕಷ್ಟ ಎನ್ನಲಾಗಿದೆ.

ಒಟ್ಟಾರೆ, ಶಿಕ್ಷಣವು ವ್ಯಾಪಾರವಾಗುತ್ತಿದೆ ಎಂಬ ಕೂಗು ಬಲವಾಗುತ್ತಿದ್ದು, ಸರ್ಕಾರವು ಪೋಷಕರ ಹಿತರಕ್ಷಣೆ ಮತ್ತು ಖಾಸಗಿ ಶಾಲೆಗಳ ಶುಲ್ಕದ ಮೇಲೆ ನಿಯಂತ್ರಣ ಸಾಧಿಸಲು ಯಾವುದೇ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Read More
Next Story