LPG Crisis: ಸಿಲಿಂಡರ್ ಕಳ್ಳತನ, ಕಾಳಸಂತೆ ತಡೆಗೆ ಗೋದಾಮುಗಳ ಮೇಲೆ ಪೊಲೀಸ್ ಸರ್ಪಗಾವಲು
x
ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಸಿಲೆಂಡರ್‌ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

LPG Crisis: ಸಿಲಿಂಡರ್ ಕಳ್ಳತನ, ಕಾಳಸಂತೆ ತಡೆಗೆ ಗೋದಾಮುಗಳ ಮೇಲೆ ಪೊಲೀಸ್ ಸರ್ಪಗಾವಲು

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಗ್ಯಾಸ್ ಗೋದಾಮುಗಳ ಮೇಲೆ ನಿತ್ಯ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ.


ರಾಜ್ಯಾದ್ಯಂತ ಏಕಾಏಕಿ ಸೃಷ್ಟಿಯಾಗಿರುವ ಅಡುಗೆ ಅನಿಲ (ಎಲ್‌ಪಿಜಿ) ಅಭಾವವು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿರುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೂ ಹೊಸ ಸವಾಲೊಡ್ಡಿದೆ!

ಬೇಡಿಕೆಗೆ ತಕ್ಕಷ್ಟು ಎಲ್‌ಪಿಜಿ ಪೂರೈಕೆಯಾಗದ ಹಿನ್ನೆಲೆಯಲ್ಲಿ ಗ್ಯಾಸ್ ಏಜೆನ್ಸಿಗಳ ಬಳಿ ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕಳ್ಳರು, ಸಿಲಿಂಡರ್ ಕಳವು ಮಾಡುತ್ತಿದ್ದಾರೆ. ಮತ್ತೊಂದೆಡೆ ಕೃತಕ ಅಭಾವದಿಂದಾಗಿ ಕಾಳಸಂತೆಯಲ್ಲಿ ಸಿಲಿಂಡರ್‌ಗಳು ಮಾರಾಟಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸ್ ಇಲಾಖೆಯು ಜಂಟಿಯಾಗಿ ಕಟ್ಟೆಚ್ಚರ ವಹಿಸಿವೆ.

ಕಾಳಸಂತೆಯಲ್ಲಿ ದುಪ್ಪಟ್ಟು

ಈ ಕೊರತೆಯನ್ನೇ ನೆಪವಾಗಿಟ್ಟುಕೊಂಡು ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಸಿಲಿಂಡರ್ ಮಾರಾಟ ಮಾಡುವುದನ್ನು ತಡೆಯಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಮರೋಪಾದಿಯಲ್ಲಿ ಮೈದಾನಕ್ಕಿಳಿದಿದ್ದಾರೆ. ಇಲಾಖೆಯ ಅಧಿಕಾರಿಗಳ ತಂಡಗಳು ಪ್ರತಿದಿನ ಗ್ಯಾಸ್ ಏಜೆನ್ಸಿಗಳ ಗೋದಾಮುಗಳಿಗೆ ದಿಢೀರ್ ಭೇಟಿ ನೀಡಿ, ದಾಸ್ತಾನು ಮತ್ತು ವಿತರಣಾ ವರದಿಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿವೆ. ಪ್ರತಿನಿತ್ಯ ಎಷ್ಟು ಸಿಲಿಂಡರ್‌ಗಳು ಪೂರೈಕೆಯಾಗಿವೆ ಮತ್ತು ಎಷ್ಟು ವಿತರಣೆಯಾಗಿವೆ ಎಂಬ ಲೆಕ್ಕಾಚಾರವನ್ನು ಕರಾರುವಾಕ್ಕಾಗಿ ಪಡೆಯಲಾಗುತ್ತಿದೆ. ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿಟ್ಟರೆ, ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡಿದರೆ ಅಥವಾ ವಾಣಿಜ್ಯ ಉದ್ದೇಶಗಳಿಗೆ ಗೃಹಬಳಕೆಯ ಸಿಲಿಂಡರ್ ಪೂರೈಸಿದರೆ ಅಂತಹ ಏಜೆನ್ಸಿಗಳ ಪರವಾನಗಿ ರದ್ದುಪಡಿಸುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಪೊಲೀಸರ ಭದ್ರತೆಯೂ ಇದೆ

ಈ ಮೊದಲು ಅಪರೂಪಕ್ಕೊಮ್ಮೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಿಲಿಂಡರ್ ಗೋದಾಮುಗಳ ಪರಿಶೀಲನೆ ನಡೆಸುತ್ತಿದ್ದರು. ಆದರೆ, ಪೊಲೀಸರ ಭದ್ರತೆಯನ್ನು ಪಡೆದಿರುವ ಉದಾಹರಣೆಗಳೇ ಇಲ್ಲ. ಆದರೀಗ, ನಿತ್ಯ ಗೋದಾಮುಗಳ ಪರಿಶೀಲನೆ ಮಾತ್ರವಲ್ಲದೆ, ಪೂರೈಕೆ ಹಾಗೂ ಮಾರಾಟಗೊಳ್ಳುತ್ತಿರುವ ಸಿಲಿಂಡರ್‌ಗಳ ಲೆಕ್ಕವನ್ನು ಪಡೆದುಕೊಳ್ಳುತ್ತಿದ್ದಾರೆ. ನಿತ್ಯ ಪೊಲೀಸರ ಭದ್ರತೆಯಲ್ಲಿ ಪರಿಶೀಲನೆ ನಡೆಸುತ್ತಿದ್ದು, ಅಕ್ರಮ ದಾಸ್ತಾನು ಪತ್ತೆಯಾದ ಕೂಡಲೇ ಸ್ಥಳದಲ್ಲೇ ಪ್ರಕರಣ ದಾಖಲಿಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಪೊಲೀಸರೊಟ್ಟಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಸಿಲಿಂಡರ್‌ಗಳ ತಪಾಸಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕೃತಕ ಅಭಾವ ಸೃಷ್ಟಿಸುವುದು ಹಾಗೂ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲೆಂಡರ್‌ಗಳ ಮಾರಾಟ ನಡೆಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಪೊಲೀಸರಿಗೂ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ಕಳ್ಳರ ಹಾವಳಿಯೂ ಹೆಚ್ಚು

ಸಿಲಿಂಡರ್ ಕೊರತೆಯ ಬೆನ್ನಲ್ಲೇ ರಾಜ್ಯದ ನಾನಾ ಭಾಗಗಳಲ್ಲಿ ಸಿಲಿಂಡರ್ ಕಳವು ಪ್ರಕರಣಗಳು ಗಣನೀಯವಾಗಿ ವರದಿಯಾಗುತ್ತಿವೆ. ಮನೆಗಳ ಹೊರಾಂಗಣದಲ್ಲಿಟ್ಟಿದ್ದ ಖಾಲಿ ಹಾಗೂ ಭರ್ತಿಯಾದ ಸಿಲಿಂಡರ್‌ಗಳು, ವಿತರಕರ ವಾಹನಗಳಿಂದ ಮತ್ತು ರಾತ್ರಿ ವೇಳೆ ವಿತರಕರ ಗೋದಾಮುಗಳಿಗೆ ಕನ್ನ ಹಾಕಿ ಸಿಲಿಂಡರ್ ಎಗರಿಸುತ್ತಿರುವ ದೂರುಗಳು ಪೊಲೀಸ್ ಠಾಣೆ ಮೆಟ್ಟಿಲೇರುತ್ತಿವೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಎಚ್ಚೆತ್ತಿರುವ ಪೊಲೀಸ್ ಇಲಾಖೆಯು, ಎಲ್ಲಾ ಗ್ಯಾಸ್ ಏಜೆನ್ಸಿಗಳ ಗೋದಾಮುಗಳಿಗೆ ರಾತ್ರಿ ವೇಳೆ ವಿಶೇಷ ಭದ್ರತೆಯನ್ನು ಒದಗಿಸಿದೆ. ಪೊಲೀಸ್ ಗಸ್ತು ವಾಹನಗಳು ನಿರಂತರವಾಗಿ ಗೋದಾಮುಗಳ ಸುತ್ತಮುತ್ತ ಕಾರ್ಯಾಚರಣೆ ನಡೆಸುತ್ತಿದ್ದು, ಅನುಮಾನಾಸ್ಪದ ವಾಹನಗಳು ಹಾಗೂ ವ್ಯಕ್ತಿಗಳ ತಪಾಸಣೆಯನ್ನು ಚುರುಕುಗೊಳಿಸಲಾಗಿದೆ.

ಒಟ್ಟಾರೆಯಾಗಿ, ಒಂದೆಡೆ ಗ್ಯಾಸ್ ಪೂರೈಕೆಯ ವ್ಯತ್ಯಯದಿಂದ ಜನಸಾಮಾನ್ಯರು ಪರದಾಡುತ್ತಿದ್ದರೆ, ಮತ್ತೊಂದೆಡೆ ಕಳ್ಳಕಾಕರ ಹಾವಳಿ ಆಡಳಿತ ಯಂತ್ರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪರಿಸ್ಥಿತಿ ತಿಳಿಗೊಳಿಸಲು ಸರ್ಕಾರಿ ಮಟ್ಟದಲ್ಲಿ ಪೂರೈಕೆದಾರರೊಂದಿಗೆ ಮಾತುಕತೆಗಳು ಸಾಗಿದ್ದರೂ, ಸದ್ಯಕ್ಕೆ ಗೋದಾಮುಗಳಿಗೆ ಕಾವಲು ಕಾಯುವ ಹಾಗೂ ಕಟ್ಟುನಿಟ್ಟಿನ ತಪಾಸಣೆ ನಡೆಸುವ ಅನಿವಾರ್ಯತೆ ನಿರ್ಮಾಣವಾಗಿರುವುದು ಪ್ರಸ್ತುತ ಬಿಕ್ಕಟ್ಟಿನ ತೀವ್ರತೆಗೆ ಕನ್ನಡಿ ಹಿಡಿದಿದೆ.

ಈ ಬಗ್ಗೆ ದೇವನಹಳ್ಳಿಯ ಗ್ಯಾಸ್ ವಿತರಕ ಮುನಿರಾಜು 'ದ ಫೆಡರಲ್ ಕರ್ನಾಟಕ'ದೊಂದಿಗೆ ಮಾತನಾಡಿ, "ಈ ಮೊದಲು ಯಾವ ತಪಾಸಣೆಗಳು ನಡೆಯುತ್ತಿರಲಿಲ್ಲ. ಆದರೀಗ ನಿತ್ಯ ಪೊಲೀಸರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ತಂಡ ಸಿಲಿಂಡರ್ ಗೋದಾಮುಗಳ ಪರಿಶೀಲನೆ ನಡೆಸುತ್ತಿದೆ. ಅಂದು ಸಂಜೆಯೊಳಗೆ ನಿತ್ಯ ಮಾರಾಟವಾದ ಸಿಲಿಂಡರ್‌ಗಳ ಲೆಕ್ಕ ನೀಡಬೇಕು. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಮೊದಲ ಆದ್ಯತೆ ಮೇರೆಗೆ ವಿದ್ಯಾರ್ಥಿ ನಿಲಯಗಳು ಹಾಗೂ ಆಸ್ಪತ್ರೆಗಳಿಗೆ ಪೂರೈಸಬೇಕೆಂಬ ನಿಯಮವನ್ನು ರೂಪಿಸಲಾಗಿದೆ. ಕಾಳಸಂತೆಯಲ್ಲಿ ಸಿಲಿಂಡರ್‌ಗಳ ಮಾರಾಟ ಹಾಗೂ ಕೃತಕ ಅಭಾವ ಸೃಷ್ಟಿಯಾಗಬಾರದೆಂಬ ಕಾರಣಕ್ಕೆ ಅಧಿಕಾರಿಗಳೊಂದಿಗೆ ಪೊಲೀಸರು ಸಹ ನಿತ್ಯ ಲೆಕ್ಕ ಕೇಳುತ್ತಿದ್ದಾರೆ" ಎಂದರು.

ಈ ಬಗ್ಗೆ ಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕಿ ಎ.ಶಿಲ್ಪ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ಕಾಳಸಂತೆಯಲ್ಲಿ ಸಿಲೆಂಡರ್‌ಗಳ ಮಾರಾಟ ವಾಗಬಾರದು ಎಂಬ ಉದ್ದೇಶದಿಂದ ಎಲ್ಲ ಗ್ಯಾಸ್‌ ಗೋದಾಮುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಪೊಲೀಸ್‌ ಇಲಾಖೆಯ ಸಹಕಾರದೊಂದಿಗೆ ನಿತ್ಯ ಪರಿಶೀಲನೆ ನಡೆಸಲಾಗುತ್ತಿದೆ ಎಂದರು.

Read More
Next Story