ಸರ್ಕಾರಿ ಶಾಲೆಗಳಲ್ಲಿ ಇನ್ನು ಕಾನ್ವೆಂಟ್ ಮಾದರಿ ಶಿಕ್ಷಣ
x

ಸರ್ಕಾರಿ ಶಾಲೆಗಳಲ್ಲಿ ಇನ್ನು 'ಕಾನ್ವೆಂಟ್' ಮಾದರಿ ಶಿಕ್ಷಣ

ಖಾಸಗಿ ಶಾಲೆಗಳ ಪೈಪೋಟಿ ಎದುರಿಸಲು ರಾಜ್ಯದ ಆಯ್ದ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದಲೇ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ.


Click the Play button to hear this message in audio format

ಖಾಸಗಿ ಕಾನ್ವೆಂಟ್ ಶಾಲೆಗಳ ಅಬ್ಬರದ ನಡುವೆ ಬಡ ಮತ್ತು ಮಧ್ಯಮ ವರ್ಗದ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಶಿಕ್ಷಣ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ. ರಾಜ್ಯದ ಆಯ್ದ ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (Pre-Primary) ತರಗತಿಗಳಾದ ಎಲ್‌ಕೆಜಿ ಮತ್ತು ಯುಕೆಜಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಈ ಮೂಲಕ ಸರ್ಕಾರಿ ಶಾಲೆಗಳನ್ನು ಕೇವಲ 'ಅಕ್ಷರ ಕಲಿಯುವ ಕೇಂದ್ರ'ಗಳನ್ನಾಗಿ ಉಳಿಸದೆ, 'ಆಧುನಿಕ ಶಿಕ್ಷಣ ಕೇಂದ್ರ'ಗಳನ್ನಾಗಿ ಪರಿವರ್ತಿಸಲು ಸರ್ಕಾರ ಮುಂದಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 46,174 ಸರ್ಕಾರಿ ಶಾಲೆಗಳಿದ್ದು, ಇವುಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಸುಮಾರು 3,617 ಶಾಲೆಗಳು ಮುಚ್ಚಲ್ಪಟ್ಟಿವೆ. ಇದರೊಂದಿಗೆ ಹೊಸದಾಗಿ 900 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ.

ರಾಜ್ಯದಲ್ಲಿನ 19,603 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ (LPS) ಆಯ್ದ ಕೆಲವು ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದಲೇ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ಆರಂಭವಾಗಲಿವೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಶಿಕ್ಷಣ ಆರಂಭವಾಗುತ್ತಿದ್ದರಿಂದ, ಅನಿವಾರ್ಯವಾಗಿ ಪೋಷಕರು ಪ್ರಿ-ಪ್ರೈಮರಿ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದರು. ಒಮ್ಮೆ ಖಾಸಗಿ ಶಾಲೆಗೆ ಸೇರಿದ ಮಗು ಮತ್ತೆ ಸರ್ಕಾರಿ ಶಾಲೆಗೆ ಮರಳುವುದು ವಿರಳವಾಗಿತ್ತು. ಈಗ ಸರ್ಕಾರವೇ ಎಲ್‌ಕೆಜಿ ಆರಂಭಿಸಿರುವುದರಿಂದ, ಪ್ರಾಥಮಿಕ ಶಿಕ್ಷಣದ ಬೇರುಗಳನ್ನು ಸರ್ಕಾರಿ ವ್ಯವಸ್ಥೆಯಲ್ಲೇ ಭದ್ರಪಡಿಸಬಹುದು ಎನ್ನುವುದು ಶಿಕ್ಷಣ ಇಲಾಖೆಯ ವಾದ.

ಅಂಗನವಾಡಿಗಳ ಅಸ್ತಿತ್ವ?

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಗೊಂಡರೆ, ದಶಕಗಳಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಆರಂಭಿಕ ಶಿಕ್ಷಣ ನೀಡುತ್ತಿದ್ದ ಅಂಗನವಾಡಿಗಳು ಮೂಲೆಗುಂಪಾಗುತ್ತವೆಯೇ ಎಂಬ ಆತಂಕ ಸೃಷ್ಟಿಯಾಗಿದೆ. ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವ ಬದಲು ಶಾಲೆಗಳಲ್ಲೇ ಪ್ರತ್ಯೇಕ ವಿಭಾಗ ತೆರೆಯುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ನಡುವೆ ಶೀತಲ ಸಮರಕ್ಕೆ ಕಾರಣವಾಗಬಹುದು.

ಜೊತೆಗೆ 'ಮ್ಯಾಗ್ನೆಟ್ ಸ್ಕೂಲ್' ಪರಿಕಲ್ಪನೆಯಡಿ ಸಣ್ಣ ಶಾಲೆಗಳನ್ನು ಹತ್ತಿರದ ದೊಡ್ಡ ಶಾಲೆಗಳೊಂದಿಗೆ (KPS) ವಿಲೀನಗೊಳಿಸಿ, ಅಲ್ಲಿ ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

Read More
Next Story