ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಬಡವರ ಉಚಿತ ಸ್ಕ್ಯಾನಿಂಗ್ ಸ್ಥಗಿತ: ರೋಗಿಗಳ ಪರದಾಟ
x

ರಾಜ್ಯದ 14 ಜಿಲ್ಲಾಸ್ಪತ್ರೆಗಳಲ್ಲಿ ಬಡವರ ಉಚಿತ ಸ್ಕ್ಯಾನಿಂಗ್ ಸ್ಥಗಿತ: ರೋಗಿಗಳ ಪರದಾಟ

ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಗ್ನೋಸ್ಟಿಕ್‌ ಸಂಸ್ಥೆಗಳಿಗೆ ಸರ್ಕಾರ 140 ಕೋಟಿ ರೂ. ಬಾಕಿ ಮೊತ್ತ ಪಾವತಿಸದಿರುವುದೇ ಸೇವೆ ಸ್ಥಗಿತಕ್ಕೆ ಕಾರಣವಾಗಿವೆ. ಪರಿಣಾಮ ಸ್ಕ್ಯಾನಿಂಗ್‌ಗೆ ಬರುವ ಜನರು ಪರದಾಡುವಂತಾಗಿದೆ.


Click the Play button to hear this message in audio format

ರಾಜ್ಯದ ಸಾರ್ವಜನಿಕ ಆರೋಗ್ಯ ಇಲಾಖೆಯ ಇತಿಹಾಸದಲ್ಲಿಯೇ ಆತಂಕಕಾರಿ ಬೆಳವಣಿಗೆಯಾಗಿದ್ದು, ರಾಜ್ಯದ 14 ಜಿಲ್ಲಾ ಕೇಂದ್ರಗಳಲ್ಲಿ ಬಡವರಿಗಾಗಿ ಮೀಸಲಾಗಿದ್ದ ಉಚಿತ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನಿಂಗ್ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸರ್ಕಾರಿ ಆಸ್ಪತ್ರೆಯಲ್ಲಿರುವ ಡಯಾಗ್ನೋಸ್ಟಿಕ್‌ ಸಂಸ್ಥೆಗಳಿಗೆ ಸರ್ಕಾರ 140 ಕೋಟಿ ರೂ. ಬಾಕಿ ಮೊತ್ತ ಪಾವತಿಸದಿರುವ ಕಾರಣವೇ ಸೇವೆ ಸ್ಥಗಿತಕ್ಕೆ ಕಾರಣವಾಗಿವೆ. ಪರಿಣಾಮ ಸ್ಕ್ಯಾನಿಂಗ್‌ ಸೇವೆಗಳಿಗೆ ಬರುವ ಜನರು ಪರದಾಡುವಂತಾಗಿದೆ.

ರಾಜ್ಯ ಸರ್ಕಾರವು ಜಿಲ್ಲಾ ಆಸ್ಪತ್ರೆಗಳಲ್ಲಿ ದುಬಾರಿ ಯಂತ್ರೋಪಕರಣಗಳನ್ನು ಅಳವಡಿಸಲು ಮತ್ತು ನಿರ್ವಹಿಸಲು ಸಾಧ್ಯವಾಗದ ಕಾರಣ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಕ್ರಸ್ನಾ ಡಯಾಗ್ನೋಸ್ಟಿಕ್ ಲಿಮಿಟೆಡ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದದ ಪ್ರಕಾರ, ಆಸ್ಪತ್ರೆಯ ಜಾಗದಲ್ಲಿ ಸಂಸ್ಥೆಯು ಯಂತ್ರಗಳನ್ನು ಅಳವಡಿಸಿ ತಂತ್ರಜ್ಞರನ್ನು ನೇಮಿಸಲಾಗಿದೆ. ಬಿಪಿಎಲ್‌ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಮತ್ತು ಇತರರಿಗೆ ರಿಯಾಯಿತಿ ದರದಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ. ಇದರ ವೆಚ್ಚವನ್ನು ಸರ್ಕಾರವು ಸಂಸ್ಥೆಗೆ ಮರುಪಾವತಿ ಮಾಡಬೇಕಾಗುತ್ತದೆ. ಆದರೆ, ಕಳೆದ ಹಲವು ತಿಂಗಳುಗಳಿಂದ ಅಥವಾ ವರ್ಷಗಳಿಂದ ಈ ಬಿಲ್ ಪಾವತಿ ಸಮರ್ಪಕವಾಗಿ ನಡೆದಿಲ್ಲ. ಈಗ ಬಾಕಿ ಮೊತ್ತ 140 ಕೋಟಿ ರೂ.ಗೆ ತಲುಪಿದೆ. ತಂತ್ರಜ್ಞರ ವೇತನ, ವಿದ್ಯುತ್ ಬಿಲ್, ಯಂತ್ರಗಳ ನಿರ್ವಹಣೆ ಮತ್ತು ರಾಸಾಯನಿಕಗಳ ವೆಚ್ಚವನ್ನು ಭರಿಸಲು ಹಣವಿಲ್ಲದ ಕಾರಣ ಅವರು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಸಂಸ್ಥೆಯ ವಾದವಾಗಿದೆ.

14 ಜಿಲ್ಲೆಗಳಲ್ಲಿ ಸಮಸ್ಯೆ

ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಶಿವಮೊಗ್ಗ ಸೇರಿದಂತೆ ರಾಜ್ಯದ 14 ಆಯಕಟ್ಟಿನ ಜಿಲ್ಲೆಗಳಲ್ಲಿ ಈ ಸಮಸ್ಯೆಯಾಗಿದೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಲಕ್ಷಾಂತರ ಜನರಿಗೆ ಈಗ ಸ್ಕ್ಯಾನಿಂಗ್ ಸೇವೆ ಲಭ್ಯವಿಲ್ಲ. ಜಿಲ್ಲಾಸ್ಪತ್ರೆಗಳಿಗೆ ಬರುವ ರೋಗಿಗಳು ಸಾಮಾನ್ಯವಾಗಿ ಅತ್ಯಂತ ಬಡವರಾಗಿರುತ್ತಾರೆ. ಸೇವೆಯ ಸ್ಥಗಿತದಿಂದಾಗಿ ರೋಗದ ಪತ್ತೆ ತಡವಾಗುತ್ತಿದೆ. ಇದು ಸಾವಿನ ಪ್ರಮಾಣ ಹೆಚ್ಚಾಗಲು ಕಾರಣವಾಗಬಹುದು ಎಂಬುದು ತಜ್ಞ ವೈದ್ಯರ ಅಭಿಪ್ರಾಯವಾಗಿದೆ.

ಅಪಘಾತಕ್ಕೀಡಾದವರು, ಪಾರ್ಶ್ವವಾಯು ಪೀಡಿತರು ಮತ್ತು ತಲೆಗೆ ಪೆಟ್ಟು ಬಿದ್ದ ರೋಗಿಗಳಿಗೆ ತಕ್ಷಣದ ಚಿಕಿತ್ಸೆ ನೀಡಲು ಸ್ಕ್ಯಾನಿಂಗ್ ವರದಿ ಅತ್ಯಗತ್ಯ. ಆದರೆ ಆಸ್ಪತ್ರೆಯ ಸಿಬ್ಬಂದಿಗಳು ಹಣ ಕೊಟ್ಟರೆ ಮಾತ್ರ ಸ್ಕ್ಯಾನ್ ಮಾಡಲಾಗುವುದು. ಇಲ್ಲವಾದರೆ ಹೊರಗೆ ಹೋಗಿ ಎಂಬುದಾಗಿ ನೇರವಾಗಿ ಹೇಳುತ್ತಿದ್ದಾರೆ ಎಂದು ರೋಗಿಗಳ ಸಂಬಂಧೀಕರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಖಾಸಗಿ ಲ್ಯಾಬ್‌ಗಳಲ್ಲಿ ಎಂಆರ್‌ಐ ಸ್ಕ್ಯಾನ್‌ಗೆ 8 ಸಾವಿರ ರೂ.ನಿಂದ 15 ಸಾವಿರ ರೂ.ವರೆಗೆ ವೆಚ್ಚವಾಗುತ್ತದೆ. ದಿನಗೂಲಿ ನೌಕರರು ಮತ್ತು ಬಡ ರೈತರು ಇಷ್ಟು ದೊಡ್ಡ ಮೊತ್ತವನ್ನು ಎಲ್ಲಿಂದ ತರಬೇಕು ಎಂಬುದು ಪ್ರಶ್ನೆಯಾಗಿದೆ. ಹಣ ನೀಡುವವರಿಗೆ ಮಾತ್ರ ಸೇವೆ ಲಭ್ಯವಿದೆ ಎಂಬುದು ಸರ್ಕಾರದ ಉಚಿತ ಸೇವೆ ಎಂಬ ಬದ್ಧತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಬಿಲ್‌ ಬಾಕಿ ಉಳಿಯಲು ಕಾರಣಗಳು

ಸರ್ಕಾರದ ಮಟ್ಟದಲ್ಲಿ ಈ ಬಿಲ್ ಬಾಕಿ ಉಳಿಯಲು ಹಲವು ಕಾರಣಗಳಿವೆ ಎಂದು ಹೇಳಲಾಗಿದೆ. ಆರೋಗ್ಯ ಇಲಾಖೆಗೆ ನಿಗದಿಪಡಿಸಿದ ಅನುದಾನ ಬೇರೆ ಯೋಜನೆಗಳಿಗೆ ಬಳಕೆಯಾಗಿರುವುದು ಅಥವಾ ಗ್ಯಾರಂಟಿ ಯೋಜನೆಗಳ ಒತ್ತಡದಿಂದಾಗಿ ಇಲಾಖೆಯ ಅನುದಾನ ಕಡಿತವಾಗಿರುವ ಸಾಧ್ಯತೆಯಿದೆ. ಆಡಿಟ್ ನೆಪದಲ್ಲಿ ಬಿಲ್‌ಗಳನ್ನು ತಿಂಗಳುಗಟ್ಟಲೆ ತಡೆಹಿಡಿಯುವುದು ಆರೋಗ್ಯ ಇಲಾಖೆಯಲ್ಲಿ ಸಾಮಾನ್ಯವಾಗಿದೆ. ಸರ್ಕಾರದ ದರ ಪಟ್ಟಿ ಮತ್ತು ಸಂಸ್ಥೆಯ ಬೇಡಿಕೆಗಳ ನಡುವಿನ ವ್ಯತ್ಯಾಸವೂ ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸ್ಥಗಿತಗೊಂಡರೆ ರೋಗಿಗಳು ಅನಿವಾರ್ಯವಾಗಿ ಖಾಸಗಿ ಸ್ಕ್ಯಾನಿಂಗ್ ಕೇಂದ್ರಗಳತ್ತ ಮುಖ ಮಾಡಬೇಕಾಗುತ್ತದೆ. ಇದು ಖಾಸಗಿ ಕೇಂದ್ರಗಳಿಗೆ ವರದಾನವಾಗಲಿದ್ದು, ಅವರು ಮನಬಂದಂತೆ ಹಣ ವಸೂಲಿ ಮಾಡುವ ಸಾಧ್ಯತೆ ಇರುತ್ತದೆ. ಸ್ಕ್ಯಾನಿಂಗ್ ವರದಿ ಇಲ್ಲದೆ ವೈದ್ಯರು ಶಸ್ತ್ರಚಿಕಿತ್ಸೆ ಅಥವಾ ಮುಂದಿನ ಚಿಕಿತ್ಸೆ ನೀಡಲು ಹಿಂಜರಿಯುತ್ತಾರೆ. ಇದು ರೋಗಿಗಳ ಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುತ್ತದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ಜನರಿಗಿರುವ ನಂಬಿಕೆ ಈ ಘಟನೆಯಿಂದ ಸಂಪೂರ್ಣವಾಗಿ ಕುಸಿದುಹೋಗುತ್ತದೆ ಎನ್ನಲಾಗಿದೆ.

Read More
Next Story