ರಾಜ್ಯ ಸರ್ಕಾರದ ದಿಢೀರ್ ನಿರ್ಧಾರ: ಬೀದಿಗೆ ಬೀಳಲಿದ್ದಾರಾ 96 ಸಾವಿರ ಹೊರಗುತ್ತಿಗೆ ನೌಕರರು?
x

ರಾಜ್ಯ ಸರ್ಕಾರದ ದಿಢೀರ್ ನಿರ್ಧಾರ: ಬೀದಿಗೆ ಬೀಳಲಿದ್ದಾರಾ 96 ಸಾವಿರ ಹೊರಗುತ್ತಿಗೆ ನೌಕರರು?

ಸರ್ಕಾರವು 2028ರ ವೇಳೆಗೆ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ನೇಮಕಾತಿ ಪದ್ಧತಿಯನ್ನು ರದ್ದುಗೊಳಿಸುವ ಗುರಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಕಡಿಮೆ ಮಾಡಲು ನಿರ್ಧರಿಸಿದೆ. ಇದಕ್ಕೆ ಆಕ್ಷೇಪಗಳು ಕೇಳಿ ಬರುತ್ತಿವೆ.


Click the Play button to hear this message in audio format

ಸರ್ಕಾರಿ ಕಚೇರಿಗಳಲ್ಲಿ ದಶಕಗಳಿಂದ ಅತ್ಯಲ್ಪ ವೇತನಕ್ಕೆ ದುಡಿಯುತ್ತಾ, ಎಂದಾದರೊಂದು ದಿನ ತಮ್ಮ ಕೆಲಸ ಕಾಯಂ ಆಗಬಹುದು ಎಂಬ ಕನಸು ಕಂಡಿದ್ದ ಸಾವಿರಾರು ಹೊರಗುತ್ತಿಗೆ ನೌಕರರ ಬದುಕೀಗ ಅಕ್ಷರಶಃ ಅತಂತ್ರವಾಗಿದೆ.

ಆರ್ಥಿಕ ಶಿಸ್ತು ಕಾಪಾಡಲು ಮುಂದಾಗಿರುವ ರಾಜ್ಯ ಸರ್ಕಾರ ಹೊರಡಿಸಿರುವ ದಿಢೀರ್ ಆದೇಶವು, ವರ್ಷಾನುಗಟ್ಟಲೆ ಸರ್ಕಾರದ ಆಡಳಿತ ಯಂತ್ರಕ್ಕೆ ಬೆನ್ನೆಲುಬಾಗಿ ದುಡಿದ 96 ಸಾವಿರಕ್ಕೂ ಅಧಿಕ ಹೊರಗುತ್ತಿಗೆ ಸಿಬ್ಬಂದಿಯನ್ನು ರಾತ್ರೋರಾತ್ರಿ ಬೀದಿಗೆ ತಳ್ಳುವ ಆತಂಕ ಸೃಷ್ಟಿಸಿದೆ. ಒಪ್ಪಂದದ ಅವಧಿ ಮುಗಿದವರನ್ನು ತಕ್ಷಣವೇ ಸೇವೆಯಿಂದ ಮುಕ್ತಗೊಳಿಸುವಂತೆ ನೀಡಿರುವ ಕಟ್ಟುನಿಟ್ಟಿನ ಸೂಚನೆಯು, ಈ ಕಾರ್ಮಿಕರ ಪಾಲಿಗೆ ಬರಸಿಡಿಲಾಗಿ ಎರಗಿದೆ.



ಹಣಕಾಸು ಇಲಾಖೆಯ ಆದೇಶ?

ವರ್ಷಗಳಿಂದ ಒಂದೇ ಇಲಾಖೆಯಲ್ಲಿ ನಿರಂತರವಾಗಿ ಕೆಲಸ ಮಾಡಿಕೊಂಡು ಬಂದಿದ್ದ ಸಿಬ್ಬಂದಿಯನ್ನು ಏಕಾಏಕಿ ಕೆಲಸದಿಂದ ತೆಗೆಯುವುದು ಅಮಾನವೀಯ ಎಂಬ ಕೂಗು ಈಗ ಕೇಳಿಬರುತ್ತಿದೆ. ಆದರೆ, ಹಣಕಾಸು ಇಲಾಖೆಯು ಹೊರಡಿಸಿರುವ ಕಠಿಣ ಸುತ್ತೋಲೆಯು ಅಧಿಕಾರಿಗಳ ಕೈಕಟ್ಟಿ ಹಾಕಿದೆ. ಟೆಂಡರ್ ಅವಧಿ ಮುಗಿದ ತಕ್ಷಣ ಯಾವುದೇ ಮುನ್ಸೂಚನೆ ಅಥವಾ ನೋಟಿಸ್ ನೀಡದೆ ಸೇವೆ ರದ್ದುಗೊಳಿಸಬೇಕು ಎಂದು ಸ್ಪಷ್ಟವಾಗಿ ಆದೇಶಿಸಲಾಗಿದೆ. ಒಂದು ವೇಳೆ ಮಾನವೀಯತೆಯ ಆಧಾರದ ಮೇಲೆ ಅವಧಿ ಮುಗಿದ ಸಿಬ್ಬಂದಿಯನ್ನು ಮುಂದುವರಿಸಿದರೆ, ಅವರಿಗೆ ನೀಡುವ ವೇತನವನ್ನು ಇಲಾಖಾ ಮುಖ್ಯಸ್ಥರ ವೈಯಕ್ತಿಕ ವೇತನದಿಂದಲೇ ವಸೂಲಿ ಮಾಡುವುದಾಗಿ ಸರ್ಕಾರ ಎಚ್ಚರಿಸಿದೆ. ಹೀಗಾಗಿ ಅಧಿಕಾರಿಗಳು ಕೂಡ ಅನಿವಾರ್ಯವಾಗಿ ಹಳೆಯ ಸಿಬ್ಬಂದಿಯನ್ನು ಮನೆಗೆ ಕಳುಹಿಸುವ ನಿರ್ಧಾರಕ್ಕೆ ಬಂದಿದ್ದು, ಕಾರ್ಮಿಕರ ಭವಿಷ್ಯ ಕತ್ತಲಲ್ಲಿ ಮುಳುಗಿದೆ.

ಕಾಯಂ ಕನಸು ನುಚ್ಚುನೂರು

ಹೊರಗುತ್ತಿಗೆ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ದಶಕಗಳಿಂದ ಕೇಳಿ ಬರುತ್ತಿದೆ. ಆದರೆ, ಸರ್ಕಾರ ಈಗ ಹೈಕೋರ್ಟ್ ತೀರ್ಪುಗಳನ್ನು ಮುಂದಿಟ್ಟುಕೊಂಡು ಈ ಪದ್ಧತಿಯನ್ನೇ ಬುಡಸಹಿತ ಕೀಳಲು ಮುಂದಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಬಂದವರಿಗೆ ಕಾಯಂ ಆಗುವ ಹಕ್ಕಿಲ್ಲ ಎಂಬ ನ್ಯಾಯಾಲಯದ ಆದೇಶವನ್ನು ಗುರಾಣಿಯಾಗಿಸಿಕೊಂಡು, 2028ರ ವೇಳೆಗೆ ಹೊರಗುತ್ತಿಗೆ ಪದ್ಧತಿಯನ್ನೇ ರದ್ದು ಮಾಡುವ ಗುರಿ ಹೊಂದಲಾಗಿದೆ. ಇದಕ್ಕಿಂತ ಆತಂಕಕಾರಿ ವಿಚಾರವೆಂದರೆ, ಹೊಸ ಟೆಂಡರ್ ಪ್ರಕ್ರಿಯೆ ನಡೆದಾಗ ಹಳೆಯ ಸಿಬ್ಬಂದಿಗೆ ಆದ್ಯತೆ ನೀಡುವ ಯಾವುದೇ ಬದ್ಧತೆ ಸರ್ಕಾರಕ್ಕಿಲ್ಲದಿರುವುದು. ಏಜೆನ್ಸಿಗಳು ಬದಲಾದಂತೆ ಕಾರ್ಮಿಕರೂ ಬದಲಾಗುವ, ಹಳೆಯ ಕಾರ್ಮಿಕರು ಉದ್ಯೋಗ ಕಳೆದುಕೊಂಡು ನಡುಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ.

56 ಸಾವಿರ ನೇರ ನೇಮಕ

ಖಾಲಿ ಇರುವ 56 ಸಾವಿರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸರ್ಕಾರದ ಚಿಂತನೆಯು ಹೊಸ ಉದ್ಯೋಗಾಕಾಂಕ್ಷಿಗಳಿಗೆ ಸಂತಸ ತಂದಿರಬಹುದು. ಆದರೆ, ಈ ಹೊಸ ನೇಮಕಾತಿಯ ಸೌಧವು 96 ಸಾವಿರಕ್ಕೂ ಹೆಚ್ಚು ಬಡ ಹೊರಗುತ್ತಿಗೆ ನೌಕರರ ಕಣ್ಣೀರಿನ ಮೇಲೆ ನಿರ್ಮಾಣವಾಗುತ್ತಿದೆ ಎಂಬುದು ಅಷ್ಟೇ ಸತ್ಯ. ಆಡಳಿತದಲ್ಲಿ ದಕ್ಷತೆ ಮತ್ತು ಪಾರದರ್ಶಕತೆ ತರುವ ಉದ್ದೇಶ ಒಳ್ಳೆಯದೇ ಆದರೂ, ದಶಕಗಳಿಂದ ಇದೇ ಕೆಲಸವನ್ನು ನಂಬಿಕೊಂಡು ಜೀವನ ಕಟ್ಟಿಕೊಂಡಿದ್ದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಕೆಲಸ ಕಸಿದುಕೊಳ್ಳುತ್ತಿರುವುದು ಸಾಮಾಜಿಕ ಅಸಮಾನತೆಗೆ ಕಾರಣವಾಗುವ ಆತಂಕವನ್ನು ಹುಟ್ಟುಹಾಕಿದೆ.

ಹೋರಾಟದ ಹಾದಿ ಹಿಡಿಯಲಿರುವ ನೌಕರರ ಸಂಘಟನೆಗಳು

ಸರ್ಕಾರದ ಈ ಅಮಾನವೀಯ ನಡೆಯ ವಿರುದ್ಧ ಕಾರ್ಮಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿವೆ. ಈ ಕುರಿತು 'ದ ಫೆಡರಲ್ ಕರ್ನಾಟಕ'ದೊಂದಿಗೆ ತಮ್ಮ ಅಳಲು ತೋಡಿಕೊಂಡ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ, ಸರ್ಕಾರದ ಸುತ್ತೋಲೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆಲ್ಲಾ ಟೆಂಡರ್ ಮುಗಿದ ಬಳಿಕವೂ ಹಳೆಯ ಸಿಬ್ಬಂದಿಯನ್ನೇ ಮುಂದುವರಿಸುವ ಸಂಪ್ರದಾಯವಿತ್ತು. ಆದರೆ ಈ ಬಾರಿ ಅವರನ್ನು ಯಾವುದೇ ಕಾರಣಕ್ಕೂ ಪರಿಗಣಿಸಬಾರದು ಎಂಬ ಕಠಿಣ ನಿಯಮ ತಂದಿರುವುದು ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ. ಶೀಘ್ರದಲ್ಲೇ ಎಲ್ಲಾ ಸಂಘದ ಮುಖಂಡರೊಂದಿಗೆ ವಿಸ್ತೃತ ಮಾತುಕತೆ ನಡೆಸಿ, ಸರ್ಕಾರದ ಈ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಅತಂತ್ರರಾದ ನೌಕರರ ವಿವರ ಇಲ್ಲಿದೆ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ 96,844 ನೌಕರರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದು, ಇವರೆಲ್ಲರಿಗೂ ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅಂಕಿ-ಅಂಶಗಳನ್ನು ಗಮನಿಸುವುದಾದರೆ, ಕೃಷಿ ಇಲಾಖೆಯಲ್ಲಿ ಅತಿ ಹೆಚ್ಚು ಅಂದರೆ 15,824 ಸಿಬ್ಬಂದಿ ಅತಂತ್ರರಾಗಿದ್ದಾರೆ. ಇದರ ಬೆನ್ನಲ್ಲೇ ಪಶುಸಂಗೋಪನೆ ಇಲಾಖೆಯಲ್ಲಿ 15,376 ಹಾಗೂ ಹಿಂದುಳಿದ ವರ್ಗಗಳ ಇಲಾಖೆಯಲ್ಲಿ 11,424 ನೌಕರರ ಭವಿಷ್ಯ ಡೋಲಾಯಮಾನವಾಗಿದೆ. ಅದೇ ರೀತಿ ಸಹಕಾರ ಇಲಾಖೆಯಲ್ಲಿ 6,511, ಡಿಪಿಎಆರ್ ವಿಭಾಗದಲ್ಲಿ 5,753, ಇ-ಆಡಳಿತದಲ್ಲಿ 5,686, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿ 3,579, ಇಂಧನ ಇಲಾಖೆಯಲ್ಲಿ 3,403 ಮತ್ತು ಆರ್ಥಿಕ ಇಲಾಖೆಯಲ್ಲಿ 3,314 ಸಿಬ್ಬಂದಿ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಇನ್ನುಳಿದಂತೆ ಮೀನುಗಾರಿಕೆಯಲ್ಲಿ 2,794, ಅರಣ್ಯ ಇಲಾಖೆಯಲ್ಲಿ 2,744, ಕೈಮಗ್ಗ-ಜವಳಿಯಲ್ಲಿ 2,724, ಆಹಾರ ಇಲಾಖೆಯಲ್ಲಿ 2,579, ಆರೋಗ್ಯ ಇಲಾಖೆಯಲ್ಲಿ 2,286, ಉನ್ನತ ಶಿಕ್ಷಣದಲ್ಲಿ 1,603, ಒಳಾಡಳಿತದಲ್ಲಿ 1,570, ತೋಟಗಾರಿಕೆಯಲ್ಲಿ 1,514 ಹಾಗೂ ವಸತಿ ಇಲಾಖೆಯ 1,305 ಹೊರಗುತ್ತಿಗೆ ಸಿಬ್ಬಂದಿಯ ಬದುಕು ಈಗ ಸರ್ಕಾರದ ಒಂದು ಆದೇಶದಿಂದಾಗಿ ಅಕ್ಷರಶಃ ತ್ರಿಶಂಕು ಸ್ಥಿತಿಗೆ ತಲುಪಿದೆ.

Read More
Next Story