LGP Crisis| ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಸಿಲಿಂಡರ್;‌ 300ಕ್ಕೂ ಹೆಚ್ಚು ಸಿಲಿಂಡರ್‌ ಜಪ್ತಿ
x

LGP Crisis| ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಸಿಲಿಂಡರ್;‌ 300ಕ್ಕೂ ಹೆಚ್ಚು ಸಿಲಿಂಡರ್‌ ಜಪ್ತಿ

ರಾಜ್ಯದಾದ್ಯಂತ 14.2 ಕೆ.ಜಿ.ಯ ಗೃಹ ಬಳಕೆಯ ಒಟ್ಟು 386363 ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ 6371 ಸಿಲಿಂಡರ್‌ಗಳನ್ನು ವಿತರಣೆ ಮಾಡಲಾಗಿದೆ.


Click the Play button to hear this message in audio format

ಇರಾನ್-ಇಸ್ರೇಲ್ ಸಂಘರ್ಷದಿಂದ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿರುವ ಬೆನ್ನಲ್ಲೇ ಕೃತಕ ಅಭಾವ ಸೃಷ್ಟಿಸುವವರ ಮೇಲೆ ರಾಜ್ಯ ಸರ್ಕಾರ ನಿಗಾ ಇರಿಸಿದೆ. ಈ ಮಧ್ಯೆ, ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿದ ಆರೋಪದ ಮೇಲೆ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಅಕ್ರಮ ಸಿಲಿಂಡರ್‌ಗಳನ್ನು ಜಪ್ತಿ ಮಾಡಿದ್ದಾರೆ.

ಗೃಹಬಳಕೆಯ ಸಿಲಿಂಡರ್‌ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲು ಆಹಾರ ಸಚಿವರು ಸೂಚಿಸಿದ್ದು, ಅದರಂತೆ ಕಾರ್ಯಾಚರಣೆ ನಡೆಸಲಾಗಿದೆ. ಬೆಂಗಳೂರಿನ ಪೀಣ್ಯದಲ್ಲಿ 45, ಚಿಕ್ಕಜಾಲದಲ್ಲಿ 209, ಶಿವಮೊಗ್ಗ ಜಿಲ್ಲೆಯಲ್ಲಿ 3, ಯಾದಗಿರಿ ಜಿಲ್ಲೆಯಲ್ಲಿ 46 ಹಾಗೂ ದಾವಣಗೆರೆಯಲ್ಲಿ 13 ಸಿಲಿಂಡರ್‌ಗಳನ್ನು '1955ರ ಅಗತ್ಯ ವಸ್ತುಗಳ ಕಾಯ್ದೆ'ಯಡಿ ಜಪ್ತಿ ಮಾಡಿಕೊಳ್ಳಲಾಗಿದೆ. ಅದೇ ರೀತಿ, ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ಅಕ್ರಮ ರೀ-ಫಿಲ್ಲಿಂಗ್ (ಮರುಪೂರಣ) ನಡೆಸುತ್ತಿದ್ದ ಗ್ಯಾಸ್ ಏಜೆನ್ಸಿ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ, ಒಟ್ಟು ವಾಣಿಜ್ಯ ಬಳಕೆಯ ಸಿಲಿಂಡರ್‌ಗಳಲ್ಲಿ ಶೇ. 20ರಷ್ಟನ್ನು ಆಸ್ಪತ್ರೆಗಳು, ಶಾಲೆಗಳು, ಶಿಕ್ಷಣ ಸಂಸ್ಥೆಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳ ಕ್ಯಾಂಟೀನ್‌ಗಳು, ಪ್ರಮುಖ ದೇವಸ್ಥಾನಗಳಲ್ಲಿನ ಪ್ರಸಾದ ವಿನಿಯೋಗ, ಸರ್ಕಾರಿ ಕಚೇರಿಗಳು, ವೃದ್ಧಾಶ್ರಮಗಳು ಹಾಗೂ ಪ್ರಮುಖ ಖಾಸಗಿ ವಲಯದ ಕಚೇರಿಗಳಿಗೆ ಆದ್ಯತೆಯ ಮೇರೆಗೆ ವಿತರಿಸಲು ಸೂಚಿಸಲಾಗಿದೆ.

ಇಂದು ರಾಜ್ಯದಾದ್ಯಂತ 14.2 ಕೆ.ಜಿ. ತೂಕದ ಒಟ್ಟು 3,86,363 ಗೃಹಬಳಕೆಯ ಸಿಲಿಂಡರ್‌ಗಳು ಹಾಗೂ 6,371 ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ವಿತರಣೆ ಮಾಡಲಾಗಿದೆ. ಗೃಹಬಳಕೆಯ ಸಿಲಿಂಡರ್‌ಗಳ ಉಪಯೋಗಕ್ಕೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.

Read More
Next Story