ವಾಣಿಜ್ಯ ಸಿಲಿಂಡರ್ ಕೊರತೆ; ಹೋಟೆಲ್ ಉದ್ಯಮಿಗಳಿಂದ ಪ್ರಧಾನಿಗೆ ಪತ್ರ
x

ವಾಣಿಜ್ಯ ಸಿಲಿಂಡರ್ ಕೊರತೆ; ಹೋಟೆಲ್ ಉದ್ಯಮಿಗಳಿಂದ ಪ್ರಧಾನಿಗೆ ಪತ್ರ

ವಾಣಿಜ್ಯ ಸಿಲಿಂಡರ್‌ಗಳಿಗೆ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಪತ್ರದಲ್ಲಿ ಒತ್ತಾಯಿಸಿದೆ.


ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ತೀವ್ರ ಅಭಾವ ಸೃಷ್ಟಿಯಾಗಿದ್ದು, ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಈಗಾಗಲೇ ಹಲವು ರೆಸ್ಟೋರೆಂಟ್‌ಗಳು ಬಾಗಿಲು ಹಾಕಿದ್ದು, ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗಿದೆ. ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸುವಂತೆ ಕೋರಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.

ಬೆಂಗಳೂರು ನಗರ ಒಂದರಲ್ಲೇ 40 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಸಿಲಿಂಡರ್ ಕೊರತೆಯಿಂದ ಸಾವಿರಾರು ಕಾರ್ಮಿಕರ ಬದುಕು ಬೀದಿಗೆ ಬಿದ್ದಂತಾಗಿದೆ. ದೈನಂದಿನ ಅಗತ್ಯದ ಶೇ. 50ರಷ್ಟಾದರೂ ಸಿಲಿಂಡರ್ ಪೂರೈಕೆಗೆ ಪೆಟ್ರೋಲಿಯಂ ಸಚಿವರಿಗೆ ಆದೇಶಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಆಟೊ ಚಾಲಕರು, ಗಿಗ್‌ ಕಾರ್ಮಿಕರು, ರೋಗಿಗಳು, ಹಿರಿಯ ನಾಗರಿಕರು ಮತ್ತು ಪಿಜಿಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ನಿತ್ಯದ ಊಟ ಒದಗಿಸುವ ಹೊಣೆ ಹೋಟೆಲ್‌ಗಳ ಮೇಲಿದೆ. ಈ ಉದ್ಯಮವನ್ನೇ ನಂಬಿಕೊಂಡಿರುವ 6 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಮತ್ತು ಅವರ ಕುಟುಂಬಗಳು ಅನಿಶ್ಚಿತತೆಯಲ್ಲಿದ್ದಾರೆ. ಹೋಟೆಲ್‌ಗಳು ಮುಚ್ಚಿರುವುದರಿಂದ ಹಾಲು, ಹಣ್ಣು ಮತ್ತು ತರಕಾರಿಗಳಂತಹ ಕೃಷಿ ಉತ್ಪನ್ನಗಳ ಬೇಡಿಕೆಯೂ ಕುಸಿದಿದ್ದು, ರೈತರಿಗೆ ನಷ್ಟ ತಂದೊಡ್ಡಿದೆ ಎಂದು ಅಲವತ್ತುಕೊಂಡಿದ್ದಾರೆ.

ಹೋಟೆಲ್‌ಗಳು ಅಗತ್ಯ ಸೇವೆಗಳಡಿ ಬರಲಿವೆ. ಕೇವಲ ವ್ಯಾಪಾರವಷ್ಟೇ ಅಲ್ಲದೆ, ಜನರಿಗೆ ಉಚಿತ ಕುಡಿಯುವ ನೀರು ಮತ್ತು ಶೌಚಾಲಯದಂತಹ ಕನಿಷ್ಠ ಸೌಲಭ್ಯಗಳನ್ನೂ ನೀಡುತ್ತಿವೆ. ವಾಣಿಜ್ಯ ಸಿಲಿಂಡರ್‌ಗಳಿಗೆ ಅಭಾವ ಎದುರಾಗಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕು ಎಂದು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಪತ್ರದಲ್ಲಿ ಒತ್ತಾಯಿಸಿದೆ.

ಹೈಕೋರ್ಟ್ ಮೆಟ್ಟಿಲೇರಿದ ಸಂಘ

ಸಿಲಿಂಡರ್ ಪೂರೈಕೆಗೆ ಸೂಕ್ತ ನಿರ್ದೇಶನ ನೀಡುವಂತೆ ಆಗ್ರಹಿಸಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ರಾಜ್ಯದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯವನ್ನು ತಕ್ಷಣ ಬಗೆಹರಿಸುವಂತೆ ಕೋರಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕೋರಿದೆ.

ತೈಲ ಕಂಪನಿಗಳು ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯನ್ನು ಏಕಾಏಕಿ ಕಡಿತಗೊಳಿಸಿರುವುದು ಅವೈಜ್ಞಾನಿಕ ಮತ್ತು ಕಾನೂನುಬಾಹಿರ. ಸಿಲಿಂಡರ್ ಇಲ್ಲದೆ ಹೋಟೆಲ್‌ಗಳು ಮುಚ್ಚುತ್ತಿರುವುದರಿಂದ ಇಡೀ ಉದ್ಯಮವೇ ನಷ್ಟಕ್ಕೆ ಒಳಗಾಗಿದೆ. ಹೋಟೆಲ್‌ ಉದ್ಯಮ ನೆಚ್ಚಿಕೊಂಡಿರುವ ಲಕ್ಷಾಂತರ ಕಾರ್ಮಿಕರ ಜೀವನಕ್ಕೂ ತೊಂದರೆಯಾಗಿದೆ. ನ್ಯಾಯಾಲಯ ಕೂಡಲೇ ಪೆಟ್ರೋಲಿಯಂ ಕಂಪನಿಗಳು ಮತ್ತು ಸಂಬಂಧಪಟ್ಟ ಇಲಾಖೆಗಳಿಗೆ ಆದ್ಯತೆಯ ಮೇರೆಗೆ ಸಿಲಿಂಡರ್ ಪೂರೈಸಲು ನಿರ್ದೇಶನ ನೀಡಬೇಕು ಎಂದು ರಿಟ್‌ ಅರ್ಜಿಯಲ್ಲಿ ಕೋರಲಾಗಿದೆ.

Read More
Next Story