By Election| ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಕ್ಕೆ ಏ.9 ರಂದು ಉಪ ಚುನಾವಣೆ; ಮೇ4 ರಂದು ಫಲಿತಾಂಶ
x
ಶಾಮನೂರು ಶಿವಶಂಕರಪ್ಪ ಹಾಗೂ ಎಚ್‌.ವೈ.ಮೇಟಿ

By Election| ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಕ್ಕೆ ಏ.9 ರಂದು ಉಪ ಚುನಾವಣೆ; ಮೇ4 ರಂದು ಫಲಿತಾಂಶ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ.


Click the Play button to hear this message in audio format

ಕಾಂಗ್ರೆಸ್‌ ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ ಹಾಗೂ ಎಚ್.ವೈ. ಮೇಟಿ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ಏ. 9 ರಂದು ಎರಡೂ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಲ್ಲಿರಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭಾನುವಾರ ತಿಳಿಸಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಹಾಗೂ ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಈಗಾಗಲೇ ಉಪಚುನಾವಣೆಗೆ ಸಿದ್ಧತೆ ಆರಂಭಿಸಿದ್ದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಕಳೆದ ವಾರವೇ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿತ್ತು.

ಮತದಾರರ ಪಟ್ಟಿ ಪ್ರಕಟಿಸಿದ ಆಯೋಗ

ಎರಡೂ ಕ್ಷೇತ್ರಗಳಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 2,58,118. ಇದರಲ್ಲಿ 1,26,233 ಪುರುಷ ಮತದಾರರು, 1,31,863 ಮಹಿಳಾ ಮತದಾರರಿದ್ದಾರೆ. ಅಂತೆಯೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,32,564 ಮತದಾರರಿದ್ದಾರೆ. ಇವರಲ್ಲಿ 1,18,355 ಮಹಿಳಾ ಮತದಾರರು ಇದ್ದರೆ, ಪುರುಷ ಮತದಾರರು 1,14,165 ಇದ್ದಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ 18-19 ವರ್ಷ ವಯಸ್ಸಿನ 3,538 ಹೊಸ ಮತದಾರರು ನೋಂದಣಿಯಾಗಿದ್ದು, 2,582 ವಿಕಲಚೇತನ ಮತದಾರರು ಮತ್ತು 100 ವರ್ಷ ದಾಟಿದ 38 ಹಿರಿಯ ಮತದಾರರು ಪಟ್ಟಿಯಲ್ಲಿದ್ದಾರೆ. 85 ವರ್ಷ ದಾಟಿದವರು 3,039 ಮತದಾರರಿದ್ದಾರೆ. 22 ಮಂದಿ ತೃತೀಯ ಲಿಂಗಿ ಮತದಾರರಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 2,204 ಹೊಸ ಯುವ ಮತದಾರರು ಸೇರ್ಪಡೆಯಾಗಿದ್ದಾರೆ. 44 ತೃತೀಯ ಲಿಂಗಿ ಮತದಾರರಿದ್ದಾರೆ. ವಿಕಲಚೇತನ ಮತದಾರರು 2,452 ಇದ್ದಾರೆ. 85 ವರ್ಷಕ್ಕಿಂತ ಮೇಲ್ಪಟ್ಟ ಮತದಾರರು 2,157 ಇದ್ದರೆ, 100 ವರ್ಷಕ್ಕಿಂತ ಮೇಲ್ಪಟ್ಟವರು 44 ಮಂದಿ ಇದ್ದಾರೆ. ಬಾಗಲಕೋಟೆ ಕ್ಷೇತ್ರದಲ್ಲಿ ಒಟ್ಟು 8,799 ಅರ್ಜಿಗಳು ಸಲ್ಲಿಕೆಯಾಗಿದ್ದು, 8,586 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೇವಲ 212 ಅರ್ಜಿಗಳು ತಿರಸ್ಕೃತಗೊಂಡಿವೆ.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 3,315 ಅರ್ಜಿ ಸಲ್ಲಿಕೆಯಾಗಿದ್ದು, 3,171 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಯಲ್ಲಿ ಬಿಎಲ್ಎಗಳನ್ನು ನೇಮಕ ಮಾಡುವ ಮೂಲಕ ಮತದಾರರ ಪಟ್ಟಿಯ ನಿರಂತರ ನವೀಕರಣಕ್ಕೆ ಸಹಕರಿಸಲು ಸೂಚಿಸಲಾಗಿದೆ. ಅಂತಿಮ ಪಟ್ಟಿ ಪ್ರಕಟವಾದರೂ, ಅರ್ಹ ಮತದಾರರು ಏ. 1, ಜು. 1 ಮತ್ತು ಅ. 1ರ ಅರ್ಹತಾ ದಿನಾಂಕಗಳ ಆಧಾರದ ಮೇಲೆ ಮುಂಗಡವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಮತದಾರರು ಯಾವುದೇ ಮಾಹಿತಿ ಅಥವಾ ದೂರುಗಳಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸಬಹುದು ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿಯು ತಿಳಿಸಿದೆ.

ಮಾಜಿ ಸಚಿವ ಎಚ್.ವೈ. ಮೇಟಿ ತೀವ್ರ ಅನಾರೋಗ್ಯದ ಕಾರಣ 2025ರ ನ. 4ರಂದು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಅವರು 2025ರ ಡಿ. 14 ರಂದು ನಿಧನರಾಗಿದ್ದರು.

ರಾಜಕೀಯ ಪಕ್ಷಗಳಲ್ಲಿ ಸಿದ್ಧತೆ ಆರಂಭ

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಹಾಗೂ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಪಣ ತೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಐಸಿಸಿ ಮಾರ್ಗದರ್ಶನದಂತೆ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವಿನ ರಣತಂತ್ರ ರೂಪಿಸಲು ಸಚಿವರನ್ನೊಳಗೊಂಡ ಪ್ರಬಲ ಉಸ್ತುವಾರಿ ಸಮಿತಿಗಳನ್ನು ರಚಿಸಿ ಅಖಾಡಕ್ಕಿಳಿಸಿದ್ದಾರೆ.

ಬಾಗಲಕೋಟೆ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಕೇವಲ ಒಂದು ಕ್ಷೇತ್ರಕ್ಕೆ 15 ಸದಸ್ಯರ ಬಲಿಷ್ಠ ಉಸ್ತುವಾರಿ ತಂಡವನ್ನು ನೇಮಕ ಮಾಡಿದೆ. ಈ ತಂಡದಲ್ಲಿ ಎಂಟು ಮಂದಿ ಪ್ರಭಾವಿ ಸಚಿವರು ಇರುವುದು ವಿಶೇಷ.

ಇನ್ನು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ತನ್ನ ಹಿಡಿತ ಸಾಧಿಸಲು ಕಾಂಗ್ರೆಸ್ ಹತ್ತು ಮಂದಿ ಸಚಿವರ ದಂಡನ್ನೇ ಸಜ್ಜುಗೊಳಿಸಿದೆ. ಇಲ್ಲಿ ಒಟ್ಟು 16 ಜನರ ಸಮಿತಿಯನ್ನು ರಚಿಸಲಾಗಿದೆ.

ಜಾತಿ ಲೆಕ್ಕಾಚಾರ ಜೋರು

ಬಾಗಲಕೋಟೆಯಲ್ಲಿ ಕುರುಬ, ಲಿಂಗಾಯತ ಮತ್ತು ಪರಿಶಿಷ್ಟ ಜಾತಿಯ ಮತಗಳು ನಿರ್ಣಾಯಕವಾಗಿದ್ದು, ಸಮಿತಿಯಲ್ಲಿ ಆರ್.ಬಿ. ತಿಮ್ಮಾಪುರ, ಎಂ.ಬಿ. ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರಿಗೆ ಸ್ಥಾನ ನೀಡಿರುವುದು ಈ ಸಮುದಾಯಗಳನ್ನು ಸೆಳೆಯುವ ಉದ್ದೇಶ ಹೊಂದಿದೆ. ಇತ್ತ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಉಂಟಾದ ಶೂನ್ಯವನ್ನು ತುಂಬಲು ಲಿಂಗಾಯತ ಮತ್ತು ಅಲ್ಪಸಂಖ್ಯಾತ ಮತಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಅದಕ್ಕಾಗಿಯೇ ಜಮೀರ್ ಅಹ್ಮದ್ ಖಾನ್ ಮತ್ತು ಮಲ್ಲಿಕಾರ್ಜುನ್ ಅವರಂತಹ ನಾಯಕರನ್ನು ಮುಂಚೂಣಿಯಲ್ಲಿ ನಿಲ್ಲಿಸಲಾಗಿದೆ.

Read More
Next Story