ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ
x

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಹೋದರಿ ಜವರಮ್ಮ (88) ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.


Click the Play button to hear this message in audio format

ಮಾಜಿ ಪ್ರಧಾನಿ ಮತ್ತು ಹಿರಿಯ ರಾಜಕೀಯ ಮುತ್ಸದ್ದಿ ಎಚ್.ಡಿ. ದೇವೇಗೌಡರ ಸಹೋದರಿ ಜವರಮ್ಮ (88) ಅವರು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ದೊಡ್ಡಗೌಡರ ಕುಟುಂಬದ ಕೊಂಡಿಯೊಂದು ಕಳಚಿದಂತಾಗಿದೆ.

ಜವರಮ್ಮ ಅವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರ ಅಂತ್ಯಕ್ರಿಯೆಯು ಸ್ವಗ್ರಾಮವಾದ ಹೊಳೆನರಸೀಪುರ ತಾಲೂಕಿನ ಬಸವನಾಯಕನಹಳ್ಳಿಯಲ್ಲಿ ನೆರವೇರಿತು. ಕುಟುಂಬದ ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜವರಮ್ಮ ಅವರಿಗೆ ಅಂತಿಮ ವಿದಾಯ ಹೇಳಲಾಯಿತು.

ದೇವೇಗೌಡರು ಮತ್ತು ಅವರ ಸಹೋದರಿ ಜವರಮ್ಮ ನಡುವೆ ದಶಕಗಳಿಂದ ಮಾತುಕತೆ ಇರಲಿಲ್ಲ. ಹಿಂದೆ ದೇವೇಗೌಡರ ಪುತ್ರಿ ಅನುಸೂಯಾ ಅವರನ್ನು ಜವರಮ್ಮ ತಮ್ಮ ಮಗನಿಗೆ ಸೊಸೆಯಾಗಿ ಮಾಡಿಕೊಳ್ಳಬೇಕೆಂದು ಬಯಸಿದ್ದರು. ಈ ಸಂಬಂಧವಾಗಿ ಎರಡು ಕುಟುಂಬಗಳ ನಡುವೆ ಮಾತುಕತೆಯೂ ನಡೆದಿತ್ತು. ಆದರೆ, ಕಾರಣಾಂತರಗಳಿಂದ ಮದುವೆ ಪ್ರಸ್ತಾಪ ಮುರಿದುಬಿದ್ದಿತ್ತು. ಈ ಘಟನೆ ಜವರಮ್ಮ ಅವರಿಗೆ ತೀವ್ರ ಬೇಸರ ತರಿಸಿತ್ತು. ಮಗಳ ಮದುವೆ ವಿಚಾರದಲ್ಲಿ ಉಂಟಾದ ಮನಸ್ತಾಪವು ಅಣ್ಣ-ತಂಗಿಯ ಸಂಬಂಧದಲ್ಲಿ ದೊಡ್ಡ ಕಂದಕವನ್ನೇ ಸೃಷ್ಟಿಸಿತ್ತು.

ಈ ಕಹಿ ಘಟನೆಯಿಂದ ಎಷ್ಟು ನೊಂದಿದ್ದರೆಂದರೆ, ಜವರಮ್ಮ ಅವರು ದಶಕಗಳ ಕಾಲ ತಮ್ಮ ತವರು ಮನೆಯಾದ ಹರದನಹಳ್ಳಿಗೆ ಹೋಗುವುದನ್ನೇ ಬಿಟ್ಟಿದ್ದರು. ದೇವೇಗೌಡರ ಕುಟುಂಬದ ಯಾವುದೇ ಶುಭ ಸಮಾರಂಭಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿರಲಿಲ್ಲ. ಅಣ್ಣ-ತಂಗಿಯ ನಡುವೆ ಎಷ್ಟೇ ಬಿರುಕಿದ್ದರೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತ್ರ ಅತ್ತೆಯೊಂದಿಗಿನ ಬಾಂಧವ್ಯ ಕಡಿದುಕೊಂಡಿರಲಿಲ್ಲ. ಪ್ರತಿ ವರ್ಷ ಗೌರಿ ಹಬ್ಬದ ಸಂದರ್ಭದಲ್ಲಿ ರೇವಣ್ಣ ಅವರು ನಿಯಮಿತವಾಗಿ ಅತ್ತೆ ಜವರಮ್ಮ ಅವರ ಮನೆಗೆ ತೆರಳಿ ಬಾಗಿನ ನೀಡಿ, ಅವರ ಆಶೀರ್ವಾದ ಪಡೆಯುತ್ತಿದ್ದರು.

Read More
Next Story