
ಮೃತ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ
Hippo Attack | ಪಶುವೈದ್ಯೆ ಸಮೀಕ್ಷಾ ಸಾವಿನ ಸಂಚು ನಡೆದಿತ್ತೇ; ವಾಟ್ಸ್ ಆಪ್ ಸಂದೇಶ ತಂದ ಅನುಮಾನ
ಸಮೀಕ್ಷಾ ಅವರ ಮಾವ ರಾಜಶೇಖರ್ ಅವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ಸಮೀಕ್ಷಾ ಸಾವು ಒಂದು ವ್ಯವಸ್ಥಿತ ಸಂಚು. ಅಲ್ಲಿನ ಮುರುಳಿ ಮನೋಹರ್ ಎಂಬ ಸಿಬ್ಬಂದಿ ಈ ಸಾವಿನ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಶಿವಮೊಗ್ಗ ನಗರದ ಹೊರವಲಯದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಇತ್ತೀಚೆಗೆ ನೀರಾನೆ ದಾಳಿಗೆ ಬಲಿಯಾದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ (27) ಅವರ ಸಾವಿನ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಇದು ಕೇವಲ ಆಕಸ್ಮಿಕ ಘಟನೆಯಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಹಾಗೂ ಮೃಗಾಲಯದ ಅಧಿಕಾರಿಗಳ ನಿರ್ಲಕ್ಷ್ಯ ಅಡಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಡಾ. ಸಮೀಕ್ಷಾ ಅವರು ಸಾವಿಗೂ ಮುನ್ನ ನಡೆಸಿದ್ದ ವಾಟ್ಸ್ಆಪ್ ಚಾಟ್ಗಳು ಈಗ ಮೃಗಾಲಯದ ಒಳಗಿನ ಕರಾಳ ಮುಖವನ್ನು ಅನಾವರಣಗೊಳಿಸಿವೆ. ಸಫಾರಿಯಲ್ಲಿ ಪ್ರಾಣಿಗಳ ಆರೋಗ್ಯ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಸಾಕಷ್ಟು ನ್ಯೂನತೆಗಳಿದ್ದವು ಎಂಬುದು ಈ ಚಾಟ್ಗಳಿಂದ ಸಾಬೀತಾಗಿದೆ. ಪ್ರಾಣಿಗಳಿಗೆ ಅಗತ್ಯವಿರುವ ಔಷಧೋಪಚಾರ ಮತ್ತು ಆಹಾರ ಪೂರೈಕೆ ಸರಿಯಾಗಿಲ್ಲ ಎಂಬ ಬಗ್ಗೆ ಸಮೀಕ್ಷಾ ಅವರು ಮೇಲಧಿಕಾರಿಗಳಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.
ಅಧಿಕಾರಿಗಳ ವಿರುದ್ಧ 'ಸಂಚಿನ' ಆರೋಪ
ಸಮೀಕ್ಷಾ ಅವರ ಮಾವ ರಾಜಶೇಖರ್ ಅವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ಸಮೀಕ್ಷಾ ಸಾವು ಒಂದು ವ್ಯವಸ್ಥಿತ ಸಂಚು. ಅಲ್ಲಿನ ಮುರುಳಿ ಮನೋಹರ್ ಎಂಬ ಸಿಬ್ಬಂದಿ ಈ ಸಾವಿನ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಅಧಿಕಾರಿಗಳ ಅನುಮತಿ ಇಲ್ಲದೆ ಆ ದಿನ ಜೀಪ್ ಸಫಾರಿ ಒಳಗೆ ಹೋಗಿದ್ದು ಹೇಗೆ? ನೀರಾನೆ ಇರುವ ಆವರಣದ ಗೇಟ್ ಕೀ ತೆಗೆದವರು ಯಾರು?" ಎಂದು ಅವರು ಪ್ರಶ್ನಿಸಿದ್ದಾರೆ.
ದೂರು ನೀಡಿದ್ದಕ್ಕೆ ಕಿರುಕುಳ?
ಮೃಗಾಲಯದಲ್ಲಿ ಪ್ರಾಣಿಗಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ ಮತ್ತು ಮೂಲಭೂತ ಸೌಕರ್ಯಗಳ ಕೊರತೆ ಇದೆ ಎಂದು ಸಮೀಕ್ಷಾ ಧ್ವನಿ ಎತ್ತಿದ್ದರು. ಈ ಕುರಿತು ಹಿರಿಯ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ದೂರನ್ನೂ ನೀಡಿದ್ದರು. ಇದೇ ಕಾರಣಕ್ಕೆ ಆಕೆಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಘಟನೆ ನಡೆದ ಸಮಯದಲ್ಲಿ ಸಮೀಕ್ಷಾ ಅವರ ಜೊತೆಗಿದ್ದ ಜೀಪ್ ಚಾಲಕ ಕಾರ್ತಿಕ್ ಎಂಬಾತ ಸದ್ಯ ನಾಪತ್ತೆಯಾಗಿದ್ದು, ಅಧಿಕಾರಿಗಳು ಆತನನ್ನು ಬಚ್ಚಿಡುತ್ತಿದ್ದಾರೆ ಎಂದು ದೂರಲಾಗಿದೆ.
ಮೃಗಾಲಯದಲ್ಲಿ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಸರಿಯಾಗಿಲ್ಲ. ಅಲ್ಲಿನ ಅವ್ಯವಹಾರ ಮತ್ತು ಅವ್ಯವಸ್ಥೆಯ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಮೃತ ವೈದ್ಯೆಯ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಏನಿದು ಘಟನೆ
ರಾತ್ರಿ ಸುಮಾರು 10:30ರ ವೇಳೆಗೆ ಡಾ. ಸಮೀಕ್ಷಾ ಅವರು ಮೃಗಾಲಯದ ಆಸ್ಪತ್ರೆಯಲ್ಲಿದ್ದ 'ಸನ್ ಕಾನರ್' ಹಕ್ಕಿಯೊಂದಕ್ಕೆ ಚಿಕಿತ್ಸೆ ನೀಡಲು ತೆರಳಿದ್ದರು. ಆ ಕಾರ್ಯ ಮುಗಿದ ಬಳಿಕ ರಾತ್ರಿ 11.45ರ ಸುಮಾರಿಗೆ 'ಹಂಸಿಣಿ' ಹೆಸರಿನ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ (ಇನ್ಫ್ರಾರೆಡ್ ಥರ್ಮೋಗ್ರಫಿ) ಮೂಲಕ ಪರೀಕ್ಷಿಸಲು ಆವರಣದೊಳಗೆ ಪ್ರವೇಶಿಸಿದ್ದಾರೆ. ಪರೀಕ್ಷೆ ಮುಗಿಯುತ್ತಿದ್ದಂತೆಯೇ ಕೆರಳಿದ ನೀರಾನೆಯು ಏಕಾಏಕಿ ಅವರ ಮೇಲೆ ತೀವ್ರವಾಗಿ ದಾಳಿ ನಡೆಸಿತ್ತು.
ದಾಳಿಯ ತೀವ್ರತೆಗೆ ವೈದ್ಯೆಯ ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವವಾಗಿತ್ತು. ಜೊತೆಗೆ ಯಕೃತ್ತಿಗೂ (ಲಿವರ್) ತೀವ್ರ ಹಾನಿಯಾಗಿತ್ತು. ತಕ್ಷಣವೇ ಮೃಗಾಲಯದ ಸಿಬ್ಬಂದಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಿದರೂ, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ 6. 30ರ ಸುಮಾರಿಗೆ ಅವರು ಹೃದಯ ಸ್ತಂಭನದಿಂದ ಕೊನೆಯುಸಿರೆಳೆದಿದ್ದರು.
ತನಿಖೆಗೆ ಆದೇಶ ಹಾಗೂ ಸಂತಾಪ
ವನ್ಯಜೀವಿ ಧಾಮದಲ್ಲಿ ಕರ್ತವ್ಯನಿರತ ವೈದ್ಯೆಯೊಬ್ಬರು ಪ್ರಾಣ ಕಳೆದುಕೊಂಡಿರುವುದು ತೀವ್ರ ಆಘಾತ ಮೂಡಿಸಿದೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಘಟನೆಗೆ ತೀವ್ರ ಸಂತಾಪ ಸೂಚಿಸಿದ್ದು, ಈ ದುಃಖದ ಸಮಯದಲ್ಲಿ ಸರ್ಕಾರ ಮೃತ ವೈದ್ಯೆಯ ಕುಟುಂಬದ ಬೆಂಬಲಕ್ಕೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಘಟನೆಯ ಹಿಂದಿನ ಭದ್ರತಾ ಲೋಪಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ರಾಜ್ಯ ಸರ್ಕಾರ ಆದೇಶಿಸಿದೆ.

