
ಎಮ್‌ಆರ್‌ಐ, ಸಿಟಿ ಸ್ಕ್ಯಾನ್ ಸ್ಥಗಿತ ಸುದ್ದಿ ಸುಳ್ಳು; ಆಸ್ಪತ್ರೆಗಳಲ್ಲಿ ಪರ್ಯಾಯ ವ್ಯವಸ್ಥೆ
ಕೇಂದ್ರ ಸರ್ಕಾರದಿಂದ ಬರಬೇಕಾದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಸರಿಯಾದ ಸಮಯಕ್ಕೆ ತಲುಪದಿದ್ದರೂ, ರಾಜ್ಯದ ಆರೋಗ್ಯ ಇಲಾಖೆಯು ತನ್ನೆಲ್ಲಾ ಯೋಜನೆಗಳಿಗೆ ಸಮರ್ಪಕವಾಗಿ ಹಣ ಒದಗಿಸುತ್ತಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಸೇವೆಗಳು ಸ್ಥಗಿತಗೊಂಡಿವೆ ಎಂಬ ವಿಚಾರವು ಸತ್ಯಕ್ಕೆ ದೂರವಾಗಿದ್ದು, ಸರ್ಕಾರದ ಹಣ ದುರುಪಯೋಗವಾಗುವುದನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೃಷ್ಣ ಡೈಗ್ನೋಸ್ಟಿಕ್ಸ್ ಕಂಪನಿಯು ಬಾಕಿ ಹಣ ಪಾವತಿಯಾಗಿಲ್ಲ ಎಂದು ಪತ್ರ ಬರೆದಿರುವುದನ್ನೇ ದೊಡ್ಡದಾಗಿ ಬಿಂಬಿಸುತ್ತಿರುವ ಪ್ರತಿಪಕ್ಷಗಳ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಕ್ಕೆ ಹಣಕಾಸಿನ ಕೊರತೆ ಇದೆ ಎಂದು ಟೀಕಿಸಲಾಗುತ್ತಿದೆ. ವಾಸ್ತವದಲ್ಲಿ ಖಾಸಗಿ ಕಂಪನಿಯ ಪರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರದ ಹಣ ದುರುಪಯೋಗವಾಗುವುದನ್ನು ತಡೆಯುವುದು ನಮ್ಮ ಕರ್ತವ್ಯವಾಗಿದೆ. ಜನರಿಗೆ ತೊಂದರೆಯಾಗಬಾರದು ಎಂಬ ಏಕೈಕ ಉದ್ದೇಶದಿಂದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಿಂದ ಬರಬೇಕಾದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಸರಿಯಾದ ಸಮಯಕ್ಕೆ ತಲುಪದಿದ್ದರೂ, ರಾಜ್ಯದ ಆರೋಗ್ಯ ಇಲಾಖೆಯು ತನ್ನೆಲ್ಲಾ ಯೋಜನೆಗಳಿಗೆ ಸಮರ್ಪಕವಾಗಿ ಹಣ ಒದಗಿಸುತ್ತಿದೆ. ಇಲಾಖೆಯು ಆರ್ಥಿಕವಾಗಿ ಸದೃಢವಾಗಿದ್ದು, ಯಾವುದೇ ರೀತಿಯ ಪಾರ್ಶ್ವವಾಯುಸ್ಥಿತಿಯಲ್ಲಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಹಿಂದೆ ಈ ಡೈಗ್ನೋಸ್ಟಿಕ್ ಕೇಂದ್ರಗಳಿಗೆ ಯಾವುದೇ ನಿರ್ದಿಷ್ಟ ನಿಯಮವಿರಲಿಲ್ಲ. ಕಂಪನಿಯವರು ನೀಡಿದ್ದೇ ಲೆಕ್ಕ ಎಂಬಂತಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಒಂದು ವ್ಯವಸ್ಥಿತ ನಿಯಮ ಮತ್ತು ದೃಢೀಕರಣ ಪದ್ಧತಿಯನ್ನು ಜಾರಿಗೆ ತಂದಿತು. ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದಾಗಿನಿಂದ ಸ್ಕ್ಯಾನಿಂಗ್ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ಬ್ರೇಕ್ ಹಾಕುವ ಮೂಲಕ ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 200 ಕೋಟಿ ರೂ. ಗಳಷ್ಟು ಸಾರ್ವಜನಿಕ ಹಣವನ್ನು ನಾವು ಉಳಿಸಿದ್ದೇವೆ ಎಂದು ಹೇಳಿದರು.
ಕೃಷ್ಣ ಡೈಗ್ನೋಸ್ಟಿಕ್ಸ್ ಕಂಪನಿಯು 2019ರಿಂದ ಸುಮಾರು 143 ಕೋಟಿ ರೂಪಾಯಿಗಳ ಹಿಂಬಾಕಿ ಹಣ ನೀಡುವಂತೆ ಬೇಡಿಕೆಯಿಟ್ಟಿದೆ. ಅಷ್ಟೇ ಅಲ್ಲದೆ, ಪ್ರತಿ ವರ್ಷ ಶೇ. 5ರಷ್ಟು ಹಣವನ್ನು ಹೆಚ್ಚುವರಿಯಾಗಿ ನೀಡಬೇಕು ಎಂದು ಒತ್ತಾಯಿಸಿದೆ. ಈ ಬೇಡಿಕೆಗಳನ್ನು ಸರ್ಕಾರವು ಖಡಾಖಂಡಿತವಾಗಿ ನಿರಾಕರಿಸಿದೆ. ಹಳೆಯ ಸ್ಕ್ಯಾನ್‌ಗಳ ಸರಿಯಾದ ದೃಢೀಕರಣ ನೀಡಿದರೆ ಮಾತ್ರ ಹಣ ಬಿಡುಗಡೆ ಮಾಡುತ್ತೇವೆ. ನಿಯಮಬಾಹಿರವಾಗಿ ಹಣ ನೀಡಲು ಸಾಧ್ಯವಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದೇವೆ. ರಾಜ್ಯದ ಒಟ್ಟು 13 ಆಸ್ಪತ್ರೆಗಳಲ್ಲಿ ಮಾತ್ರ ಈ ಕಂಪನಿಯ ಸೇವೆಯಿಂದ ಸಮಸ್ಯೆಯಾಗಿದೆ. ಈ ಪೈಕಿ ಹೆಚ್ಚಿನ ಆಸ್ಪತ್ರೆಗಳಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಉಳಿದ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಈ ಕಂಪನಿಯ ಜೊತೆ ಒಪ್ಪಂದ ಮುಂದುವರಿದರೂ ಸಹ, ಸ್ಥಳೀಯ ಆಸ್ಪತ್ರೆಗಳ ಜೊತೆಗೂ ಸಹಭಾಗಿತ್ವ ಹೊಂದಲು ಮುಕ್ತ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರವು ಖಾಸಗಿ ಕಂಪನಿಗಳ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಏಳು ಸರ್ಕಾರಿ ಆಸ್ಪತ್ರೆಗಳಲ್ಲಿ ಎಮ್‌ಆರ್‌ಐ ಹಾಗೂ ಮೂರು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ಇಲಾಖೆಯ ವತಿಯಿಂದಲೇ ಸುಧಾರಿತ ಯಂತ್ರಗಳನ್ನು ಪೂರೈಸಲಾಗುವುದು ಎಂದರು.

