
ದಾವಣಗೆರೆ ದಕ್ಷಿಣ ಉಪಸಮರ| ಸಚಿವ ಜಮೀರ್ ನಿರಾಸಕ್ತಿಗೆ ʼಕೈʼ ನಾಯಕರ ಬೇಸರ; ಶಿಸ್ತು ಪಾಲಿಸಲು ಸೂಚನೆ?
ಜಮೀರ್ ಅವರ ಈ ಅಸಮಾಧಾನವೇ ಸಮುದಾಯದ ಮತಗಳನ್ನು ಚದುರಿಸಬಹುದು ಆತಂಕವೂ ʼಕೈʼ ನಾಯಕರನ್ನು ಕಾಡುತ್ತಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಟಿಕೆಟ್ ಸಿಗದೇ ಪಕ್ಷದ ವಿರುದ್ಧ ಬಂಡಾಯ ಸಾರಿದ್ದ ಸಾದಿಕ್ ಪೈಲ್ವಾನ್ ಅವರನ್ನು ಸಿಎಂ ಹಾಗೂ ಡಿಸಿಎಂ ಮನವೊಲಿಸಿದರೂ ಸಚಿವ ಜಮೀರ್ ಅಹಮದ್ ಅವರು ಪ್ರಚಾರದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವುದು ಯಕ್ಷ ಪ್ರಶ್ನೆಯಾಗಿದೆ.
ಜಮೀರ್ ಅವರ ಈ ಅಸಮಾಧಾನವೇ ಸಮುದಾಯದ ಮತಗಳನ್ನು ಚದುರಿಸಬಹುದು ಆತಂಕವೂ ʼಕೈʼ ನಾಯಕರನ್ನು ಕಾಡುತ್ತಿದೆ. ಹಾಗಾಗಿ, ದಾವಣಗೆರೆಯಲ್ಲಿ ಸ್ಥಳೀಯ ನಾಯಕರೊಂದಿಗೆ ಸರಣಿ ಸಭೆ ನಡೆಸಿ ಚುನಾವಣೆ ಗೆಲ್ಲಿಸಿಕೊಂಡು ಬರುವ ಟಾಸ್ಕ್ ನೀಡಲಾಗಿದೆ. ಶಿಗ್ಗಾವಿ ಶಾಸಕ ಯಾಸಿರ್ ಅಹಮದ್ ಖಾನ್ ಪಠಾನ್, ಸಲೀಂ ಅಹಮದ್, ರಿಜ್ವಾನ್ ಅರ್ಹದ್ ಅವರ ಜೊತೆಗೆ ಸಾದಿಕ್ ಪೈಲ್ವಾನ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಯಾವುದೇ ಕಾರಣಕ್ಕೂ ಮುಸ್ಲಿಂ ಮತಗಳು ಚದುರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಜಮೀರ್ ಅವರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸದಿರುವ ಕುರಿತು ಪ್ರತಿಕ್ರಿಯಿಸಿದ ಡಿ. ಕೆ. ಶಿವಕುಮಾರ್ ಅವರು, ಇಲ್ಲಿ ಜಮೀರ್ ಆಗಲಿ, ಡಿ.ಕೆ.ಶಿವಕುಮಾರ್ ಆಗಲಿ ಅಥವಾ ಸಿದ್ದರಾಮಯ್ಯ ಅವರಿಂದಾಗಲಿ ಪಕ್ಷ ನಡೆಯುತ್ತಿಲ್ಲ. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷದ ಶಿಸ್ತು, ನಿಯಮಗಳನ್ನು ಪಾಲಿಸಬೇಕು ಎಂದು ಹೇಳುವ ಮೂಲಕ ಜಮೀರ್ ಅಹಮದ್ ಅವರು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
16 ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಅಲ್ಪಸಂಖ್ಯಾತರಿಗೆ ನೀಡಿರುವುದನ್ನು ಪ್ರಸ್ತಾಪಿಸುವ ಮೂಲಕ ಪ್ರಸ್ತಾಪಿಸುವ ಮೂಲಕ ಡಿಕೆಶಿ ಅವರು ಪಕ್ಷದ ನಿಲುವು ಏನೆಂಬುದನ್ನು ತೋರಿಸಿದ್ದೇವೆ. ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದಾಗಿ ಅನುಕಂಪದ ಅಲೆಯಿದೆ. ಈ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಶೇ. 79ರಷ್ಟು ಜನ ಕಾಂಗ್ರೆಸ್ ಪರವಾಗಿದ್ದಾರೆ ಎಂಬುದು ತಿಳಿದುಬಂದಿದೆ. ಅಲ್ಲದೇ ಗ್ಯಾರಂಟಿ ಯೋಜನೆಗಳು ರಕ್ಷಾಕವಚವಾಗಿವೆ ಎಂದು ಹೇಳಿದ್ದಾರೆ.
ಶಾಮನೂರು ಕುಟುಂಬ ಲಿಂಗಾಯತ ಸಮುದಾಯದ ದೊಡ್ಡ ಶಕ್ತಿ.ಕ್ಷೇತ್ರಕ್ಕೆ ಮುಸ್ಲಿಂ ಮತಗಳ ಬೆಂಬಲ ಅನಿವಾರ್ಯ. ಈ ಎರಡೂ ಸಮುದಾಯಗಳನ್ನು ಒಟ್ಟಾಗಿ ಕೊಂಡೊಯ್ಯುವ ಮೂಲಕ ಬಿಜೆಪಿಯ 'ಹಿಂದುತ್ವ'ದ ಅಲೆ ತಡೆಯಬಹುದು ಎಂಬುದು ಡಿಕೆಶಿ ಲೆಕ್ಕಾಚಾರವಾಗಿದೆ.
ಎಲ್ಲಾ ಗೊಂದಲಗಳಿಗೆ ತೆರೆ
“ನಾವು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲಾ ಸಮಾಜ, ಎಲ್ಲಾ ವರ್ಗಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದೆ. ಶಾಮನೂರು ಶಿವಶಂಕರಪ್ಪ ಅವರು ರಾಷ್ಟ್ರೀಯ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷರಾಗಿದ್ದವರು. ಅವರ ಕೊಡುಗೆ ಅಪಾರವಾಗಿದೆ. ನಾನು ಇಲ್ಲಿ ಪ್ರತ್ಯೇಕ ಸಮೀಕ್ಷೆ ಮಾಡಿಸಿದ್ದು, ಕೋವಿಡ್ ಸಮಯದಲ್ಲಿ ಶಾಮನೂರು ಶಿವಶಂಕರಪ್ಪನವರು ಮಾಡಿದ ಸಹಾಯ, ಸಹಕಾರವನ್ನು ಜನ ಸ್ಮರಿಸುತ್ತಿದ್ದಾರೆ. ವಿದ್ಯಾ ಕ್ಷೇತ್ರದಲ್ಲಿ ಅವರು ನೀಡಿರುವ ಸೇವೆಯನ್ನು ನೆನೆಯುತ್ತಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
“ಗ್ಯಾಸ್, ಪೆಟ್ರೋಲ್, ಡೀಸೆಲ್, ಕಬ್ಬಿಣ, ಸೀಮೆಂಟ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇನ್ನು ಮುಂದೆಯೂ ಏರಿಕೆಯಾಗಲಿದೆ. ಈ ಬೆಲೆ ಏರಿಕೆಯಿಂದ ಜನರನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಈ ಯೋಜನೆ ಮಹತ್ವ ಈಗ ಅರಿವಾಗುತ್ತಿದೆ” ಎಂದರು.

