
ಕರುನಾಡಿನ ಕಣ್ಣಲ್ಲಿ ಪಂಚರಾಜ್ಯ ಚುನಾವಣೆ| ಕರ್ನಾಟಕದ 'ಗ್ಯಾರಂಟಿ' ಮಾದರಿ: ಅಸ್ಸಾಂ, ಕೇರಳದಲ್ಲಿ ʼಮತʼವಾಗುವುದೆ?
ಕೇರಳ, ಅಸ್ಸಾಂ ಚುನಾವಣೆಯಲ್ಲಿಯೂ ಗ್ಯಾರಂಟಿ ಯೋಜನೆಯನ್ನೇ ಚುನಾವಣಾ ಅಸ್ತ್ರವಾಗಿದೆ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಸ್ವಲ್ಪಮಟ್ಟಿಗೆ ಯಶಸ್ವಿಯಾದರೆ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವಂತಾಗಿದೆ.
ಕರ್ನಾಟಕ ಮಾದರಿಯ ಗ್ಯಾರಂಟಿ ಯೋಜನೆಗಳು ಅಸ್ಸಾಂ, ಕೇರಳ ವಿಧಾನಸಭಾ ಚುನಾವಣೆಯಲ್ಲಿಯೂ ವಿವಿಧ ರಾಜಕೀಯ ಪಕ್ಷಗಳು ಚುನಾವಣಾ ಅಸ್ತ್ರವಾಗಿದೆ. ಆದರೆ, ಅವುಗಳ ಯಶಸ್ಸೆಷ್ಟು? ಹಾಗೂ ಚುನಾವಣಾ ಫಲಿತಾಂಶಕ್ಕೆ ಹೇಗೆ ಸಹಾಯವಾಗುತ್ತದೆ ಎಂಬುದೇ ಪ್ರಶ್ನೆ!
ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ 'ಗ್ಯಾರಂಟಿ' ಎಂಬ ಪದವು ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿ ಹೊರಹೊಮ್ಮಿದೆ. 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ ಐದು ಗ್ಯಾರಂಟಿಗಳು ಆ ಪಕ್ಷಕ್ಕೆ ಭರ್ಜರಿ ಜಯ ತಂದುಕೊಟ್ಟವು. ಅಂದಿನಿಂದ, ಈ 'ಕರ್ನಾಟಕ ಮಾದರಿ'ಯನ್ನು ದೇಶಾದ್ಯಂತ ವಿಸ್ತರಿಸಲು ಕಾಂಗ್ರೆಸ್ ಮುಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಶಕ್ತಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ ಮತ್ತು ಯುವ ನಿಧಿ ಯೋಜನೆಗಳು ರಾಜ್ಯದ ಬಜೆಟ್‌ನ ಬಹುದೊಡ್ಡ ಭಾಗವನ್ನು ಆಕ್ರಮಿಸಿಕೊಂಡಿವೆ. ವಾರ್ಷಿಕ ಸುಮಾರು 50 ಸಾವಿರ ಕೋಟಿ ರೂ.ನಷ್ಟು ಈ ಯೋಜನೆಗಳಿಗಾಗಿ ಮೀಸಲಿಡಲಾಗುತ್ತಿದೆ. ಇದು ರಾಜಕೀಯವಾಗಿ ಕಾಂಗ್ರೆಸ್‌ಗೆ ಬಲ ನೀಡಿದರೂ, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಕೊರತೆ ಎದುರಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕೇರಳ, ಅಸ್ಸಾಂನಲ್ಲಿಯೂ ಗ್ಯಾರಂಟಿ
ಕಾಂಗ್ರೆಸ್ ಪಕ್ಷವು ಕೇರಳ ಹಾಗೂ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿಯೂ ಗ್ಯಾರಂಟಿ ಘೋಷಣೆಯಾಗಿದೆ. ಕರ್ನಾಟಕದ ಮಾದರಿಯಲ್ಲಿಯೇ ಗ್ಯಾರಂಟಿ ಮಾದರಿಗಳನ್ನು ಪ್ರಸ್ತಾಪಿಸಲಾಗಿದೆ. ಕೇರಳದಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಗ್ಯಾರಂಟಿ ಯೋಜನೆ ಜಾರಿ ಕುರಿತು ಪ್ರಸ್ತಾಪಿಸಿದ್ದಾರೆ. ಕರ್ನಾಟಕದಲ್ಲಿ ಜಾರಿಗೊಳಿಸಿದಂತೆ ಕೇರಳದಲ್ಲಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ, ಅಸ್ಸಾಂನಲ್ಲಿ ಮತದಾರರನ್ನು ಸೆಳೆಯಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಂಚ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ರಾಜ್ಯದ ಗೃಹಲಕ್ಷ್ಮಿ ಮಾದರಿಯಲ್ಲೇ ಅಸ್ಸಾಂನ ಮಹಿಳೆಯರಿಗೂ ಆರ್ಥಿಕ ಭದ್ರತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಕರ್ನಾಟಕದ ಗ್ಯಾರಂಟಿಗಳು ಲಕ್ಷಾಂತರ ಜನರ ಬದುಕಿನಲ್ಲಿ ಬದಲಾವಣೆ ತಂದಿವೆ. ಅದೇ ರೀತಿ ಅಸ್ಸಾಂನಲ್ಲೂ ನಾವು ಅಧಿಕಾರಕ್ಕೆ ಬಂದ ತಕ್ಷಣ ಈ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತೆಲಂಗಾಣದಲ್ಲಿ ಗ್ಯಾರಂಟಿಗಳ ಅಬ್ಬರ, ಆರ್ಥಿಕ ಅಸ್ಥಿರತೆ
ಕರ್ನಾಟಕದ ಯಶಸ್ಸಿನಿಂದ ಪ್ರೇರಿತವಾದ ಕಾಂಗ್ರೆಸ್, ತೆಲಂಗಾಣ ಚುನಾವಣೆಯಲ್ಲಿಯೂ ಆರು ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿತು. ಈಗ ತೆಲಂಗಾಣ ಸರ್ಕಾರವು ತನ್ನ ನೌಕರರಿಗೆ ಸಂಬಳ ನೀಡಲು ಮತ್ತು ಹಳೆಯ ಸಾಲದ ಬಡ್ಡಿ ತೀರಿಸಲು ಹೆಣಗಾಡುತ್ತಿದೆ. ರಾಜ್ಯದ ಸಾಲದ ಹೊರೆ 6 ಲಕ್ಷ ಕೋಟಿ ರೂ. ದಾಟಿದ್ದು, ಹೊಸ ಯೋಜನೆಗಳಿಗೆ ಹಣ ಹೊಂದಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ರೈತರಿಗೆ ನೀಡಬೇಕಾದ ರೈತ ಭರವಸೆ ಹಣ ಬಿಡುಗಡೆ ವಿಳಂಬವಾಗುತ್ತಿರುವುದು ರೈತರಲ್ಲಿ ಅಸಮಾಧಾನ ಮೂಡಿಸಿದೆ.
ಗ್ಯಾರಂಟಿಗಳನ್ನು ನೀಡಿದ ಬಳಿಕ ಬೊಕ್ಕಸ ಬರಿದು ಮಾಡಿಕೊಂಡು ಪರದಾಡುತ್ತಿರುವುದನ್ನು ಸ್ವತಃ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಬಹಿರಂಗಪಡಿಸಿದ್ದಾರೆ. ಸರ್ಕಾರದ ಬೊಕ್ಕಸ ಪೂರ್ತಿ ಬತ್ತಿಹೋಗಿದ್ದು, ಮಾರಾಟ ಮಾಡಿ ದೇಣಿಗೆ ಎತ್ತಲು ಸಹ ಸರ್ಕಾರದ ಬಳಿ ಭೂಮಿಯಿಲ್ಲ ಎಂದು ವಿಷಾದಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಬಗ್ಗೆ ನಿಜವಾದ ತಿಳಿವಳಿಕೆ ಬಂತು. ನಾವೇ ಘೋಷಿಸಿದ ಗ್ಯಾರಂಟಿಗೆ ಮೀಸಲಾಗಿರಿಸಲು ಸರ್ಕಾರದ ಬಳಿ ದುಡ್ಡಿಲ್ಲ. ಗ್ಯಾರಂಟಿ ಬಗ್ಗೆ ದೇಶಾದ್ಯಂತ ಚರ್ಚೆಯಾಗಬೇಕು ಎಂದಿದ್ದರು. ತೆಲಂಗಾಣ ರಾಜ್ಯ ಸರ್ಕಾರದ ಮೊತ್ತ ಬರೋಬ್ಬರಿ 7.5 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ಬಿಆರ್‌ಎಸ್ ಸರ್ಕಾರವು ವಿವಿಧ ಯೋಜನೆಗಳ ಜಾರಿಗಾಗಿ ಭಾರಿ ಪ್ರಮಾಣದ ಸಾಲ ಮಾಡಿದೆ. ಈಗಿನ ಕಾಂಗ್ರೆಸ್ ಸರ್ಕಾರವು ಸಾಲ ಮಾಡಿದೆ. ಇದರಿಂದಾಗಿ ತೆಲಂಗಾಣ ರಾಜ್ಯ ಸರ್ಕಾರದ ಸಾಲದ ಮೊತ್ತ 7.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎನ್ನಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ತುರ್ತುಪರಿಸ್ಥಿತಿ
ಗ್ಯಾರಂಟಿ ಯೋಜನೆಗಳಿಂದ ತತ್ತರಿಸಿರುವ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವು ಒಂದಾಗಿದೆ. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ತಮ್ಮ ಮತ್ತು ಸಚಿವರ ಸಂಬಳವನ್ನು ಎರಡು ತಿಂಗಳು ಮುಂದೂಡುವುದಾಗಿ ಘೋಷಿಸಿದ್ದರು. ರಾಜ್ಯದ ಬೊಕ್ಕಸ ಬಹುತೇಕ ಖಾಲಿಯಾಗಿದ್ದು, ಕೇಂದ್ರ ಸರ್ಕಾರದ ನೆರವಿಲ್ಲದೆ ದೈನಂದಿನ ಆಡಳಿತ ನಡೆಸುವುದು ಕಷ್ಟವಾಗಿದೆ. ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದವು ಎಂದು ಅಲ್ಲಿನ ಕಾಂಗ್ರೆಸ್ ಸರ್ಕಾರವೇ ಹೇಳಿದೆ.
ರಾಜಕೀಯವಾಗಿ ಕಾಂಗ್ರೆಸ್‌ಗೆ ಗ್ಯಾರಂಟಿಗಳು ಲಾಭ ತಂದುಕೊಟ್ಟಿವೆ ಎಂಬುದರಲ್ಲಿ ಸಂದೇಹವಿಲ್ಲ. ಇದು ಬಡ ವರ್ಗದ ಜನರಲ್ಲಿ ಆರ್ಥಿಕ ಭದ್ರತೆಯ ಭಾವನೆ ಮೂಡಿಸಿದೆ. ಆದರೆ, ಈ ಯೋಜನೆಗಳು ಶಾಶ್ವತ ಆಸ್ತಿ ಸೃಷ್ಟಿ ಮಾಡುತ್ತಿಲ್ಲ ಎಂಬುದು ಅಷ್ಟೇ ಕಹಿ ಸತ್ಯ. ಕೇವಲ ಮತ ಗಳಿಕೆಗಾಗಿ ಆರ್ಥಿಕ ಶಿಸ್ತನ್ನು ಗಾಳಿಗೆ ತೂರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ ಎಂಬ ವಾದವೂ ಇದೆ. ಕರ್ನಾಟಕದ ಮಟ್ಟಿಗೆ ಯಶಸ್ವಿಯಾದರೂ, ಇತರೆ ರಾಜ್ಯಗಳ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿದೆ. ಹೀಗಾಗಿ ಕೇರಳ ಮತ್ತು ಅಸ್ಸಾಂನಲ್ಲಿಯೂ ಗ್ಯಾರಂಟಿ ಯೋಜನೆಯ ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಗ್ಯಾರಂಟಿಗೆ ಮೆಚ್ಚುಗೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ದೇಶದೊಳಗೆ ಪರ-ವಿರೋಧಗಳ ನಡುವೆ ಯೋಜನೆಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ರಾಜ್ಯದ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಭದ್ರ ಬುನಾದಿ ಹಾಕಿವೆ ಎಂದು ವಿಶ್ವಸಂಸ್ಥೆ ಮುಕ್ತಕಂಠದಿಂದ ಶ್ಲಾಘಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ ಜನಸಾಮಾನ್ಯರ, ವಿಶೇಷವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನೆರವಾಗಿದೆ ಎಂದು ವಿಶ್ವಸಂಸ್ಥೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದೆ. ಯೋಜನೆಗಳು ಮನೆ ಒಡತಿಯರಿಗೆ ಆರ್ಥಿಕ ಭದ್ರತೆ, ಮಹಿಳೆಯರಿಗೆ ಉಚಿತ ಪ್ರಯಾಣ, ಯುವಕರಿಗೆ ಬೆಂಬಲ ಮತ್ತು ಬಡ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಿವೆ. ಮಹಿಳಾ ಸಬಲೀಕರಣಕ್ಕೆ ರಾಜ್ಯ ಸರ್ಕಾರವು ಕೈಗೊಂಡಿರುವ ಯೋಜನೆಗಳಿಗೆ ಸಹಕಾರಿಯಾಗಿವೆ ಎಂದು ಹೇಳಿದ್ದಾರೆ.
ಇನ್ನು, ಪೊಲಿಟಿಕಲ್‌ಶಕ್ತಿ ಮತ್ತು ಸಿಟಿಜನ್ಸ್‌ಫಾರ್ ಬೆಂಗಳೂರು ಸಂಸ್ಥೆಯು ಪಂಚ ಗ್ಯಾರಂಟಿ ಯೋಜನೆಗಳು, ರಾಜ್ಯದ ಜನರ ಕುಟುಂಬಗಳಲ್ಲಿ ಪರಿಣಾಮಕಾರಿ ಬದಲಾವಣೆಗಳನ್ನು ತಂದಿದೆ. ಜತೆಗೆ ಇದು ಶಿಕ್ಷಣ ಮತ್ತು ಆರೋಗ್ಯದ ಮೇಲೆ ಜನರು ನಿಗಾವಹಿಸಲು ಕಾರಣವಾಗಿದೆ. ಕುಟುಂಬಗಳ ಆರ್ಥಿಕ ಶಕ್ತಿ ಬಲಪಡಿಸಲು ಕಾರಣವಾಗಿದೆ ಎಂದು ಹೇಳಿದೆ. ಪೊಲಿಟಿಕಲ್‌ಶಕ್ತಿ ಮತ್ತು ಸಿಟಿಜನ್ಸ್‌ಫಾರ್ ಬೆಂಗಳೂರು ಸಂಸ್ಥೆಗಳ ಸಹ-ಸಂಸ್ಥಾಪಕಿ ತಾರಾ ಕೃಷ್ಣಮೂರ್ತಿ ನೇತೃತ್ವದಲ್ಲಿ 4 ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು ಗ್ಯಾರೆಂಟಿಗಳ ಬಗ್ಗೆ ಸಮಗ್ರವಾಗಿ ನಡೆಸಿದ ಅಧ್ಯಯನದಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಮಹಿಳೆಯರು ಆರೋಗ್ಯವಂತರಾಗಿ, ಕುಟುಂಬ ಮತ್ತು ಸಮಾಜದಲ್ಲಿ ಸಬಲರಾಗಿದ್ದಾರೆ. ಅವರ ಓಡಾಟದ ಪ್ರಮಾಣವೂ ಹೆಚ್ಚಿದೆ. ಕುಟುಂಬಗಳು ಆರೋಗ್ಯ ಮತ್ತು ಶಿಕ್ಷಣದಲ್ಲಿ ದೀರ್ಘಾವಧಿ ಹೂಡಿಕೆಗಳನ್ನು ಮಾಡುತ್ತಿವೆ. ಸ್ಥಳೀಯ ಆರ್ಥಿಕತೆ ಬಲಿಷ್ಠವಾಗಿವೆ, ತಳಮಟ್ಟದಲ್ಲಿ ಬೇಡಿಕೆ ಹೆಚ್ಚಿದೆ ಎಂದಿದ್ದಾರೆ.
ಯೋಜನೆಗಳ ಸಾಧಕ - ಬಾಧಕ
ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಯೋಜನೆಗಳಿಗಾಗಿ ಪ್ರತಿವರ್ಷ 50 ಸಾವಿರ ರೂ.ನಿಂದ 60 ಸಾವಿರ ರೂ.ವರೆಗೆ ಮೀಸಲಿಡುತ್ತಿದೆ. ಇದು ರಾಜ್ಯದ ಒಟ್ಟು ಬಜೆಟ್‌ನ ಸುಮಾರು ಶೇ. 15 ರಿಂದ 20 ರಷ್ಟು ಭಾಗವಾಗಿದೆ. ಯೋಜನೆಗಳು ಸಾಧಕ-ಬಾಧಕಗಳಿಂದ ಕೂಡಿದೆ.
ಗೃಹ ಲಕ್ಷ್ಮಿ ಯೋಜನೆಯಡಿ ಮನೆಯ ಒಡತಿಗೆ ಮಾಸಿಕ ಎರಡು ಸಾವಿರ ರೂ. ನೀಡುತ್ತಿರುವುದು ಗ್ರಾಮೀಣ, ಬಡ ಕುಟುಂಬಗಳ ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡಿದೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣವು ಮಹಿಳೆಯರ ಕೆಲಸದ ಚಲನಶೀಲತೆಯನ್ನು ಹೆಚ್ಚಿಸಿದೆ. ಇದರಿಂದ ಮಹಿಳೆಯರು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸಲು ಸುಲಭವಾಗಿದೆ. ಡ ಮತ್ತು ಮಧ್ಯಮ ವರ್ಗದ ಜನರ ಕೈಗೆ ನೇರವಾಗಿ ಹಣ ತಲುಪಿದಾಗ, ಅವರು ಅದನ್ನು ದಿನಬಳಕೆಯ ವಸ್ತುಗಳ ಮೇಲೆ ಖರ್ಚು ಮಾಡುತ್ತಾರೆ. ಇದು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸುತ್ತದೆ ಮತ್ತು ಸ್ಥಳೀಯ ವ್ಯಾಪಾರ-ವಹಿವಾಟು ವೃದ್ಧಿಸಲು ಪರೋಕ್ಷವಾಗಿ ನೆರವಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಾರೆ. ಅನ್ನ ಭಾಗ್ಯ ಯೋಜನೆಯಡಿ ನೀಡಲಾಗುವ ಹೆಚ್ಚುವರಿ ಅಕ್ಕಿ ಅಥವಾ ಹಣವು ಬಡ ಕುಟುಂಬಗಳ ಹಸಿವು ನೀಗಿಸಲು ನೆರವಾಗಿದೆ. ಯುವ ನಿಧಿ ಯೋಜನೆಯು ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವವರೆಗೆ ಒಂದು ಸಣ್ಣ ಆರ್ಥಿಕ ನೆರವಿನ ಆಸರೆ ನೀಡುತ್ತಿದೆ ಎಂದು ಹೇಳಲಾಗಿದೆ.
ಬಜೆಟ್‌ನ ಬಹುಪಾಲು ಹಣ ಗ್ಯಾರಂಟಿಗಳಿಗೆ ವ್ಯಯವಾಗುತ್ತಿರುವುದರಿಂದ, ಹೊಸ ರಸ್ತೆಗಳು, ಸೇತುವೆಗಳು, ನೀರಾವರಿ ಯೋಜನೆಗಳು ಮತ್ತು ಶಾಲೆ-ಆಸ್ಪತ್ರೆಗಳ ನಿರ್ಮಾಣಕ್ಕೆ ಹಣದ ಕೊರತೆ ಎದುರಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲು ಸಾಧ್ಯವಿಲ್ಲ ಎಂದು ಸರ್ಕಾರವೇ ಒಪ್ಪಿಕೊಂಡಿರುವುದು ರಾಜ್ಯದ ದೀರ್ಘಕಾಲೀನ ಬೆಳವಣಿಗೆಗೆ ಮಾರಕವಾಗಬಹುದು. ಗ್ಯಾರಂಟಿಗಳನ್ನು ನಿಭಾಯಿಸಲು ಸರ್ಕಾರವು ಮಾರುಕಟ್ಟೆಯಿಂದ ಭಾರಿ ಮೊತ್ತದ ಸಾಲ ಮಾಡುತ್ತಿದೆ. ಕರ್ನಾಟಕದ ಒಟ್ಟು ಸಾಲದ ಮೊತ್ತವು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಸಾಲದ ಮೇಲಿನ ಬಡ್ಡಿ ಪಾವತಿಯೇ ಬಜೆಟ್‌ನ ದೊಡ್ಡ ಹೊರೆಯಾಗಿ ಪರಿಣಮಿಸುತ್ತಿದೆ. ಇದು ಭವಿಷ್ಯದ ಪೀಳಿಗೆಯ ಮೇಲೆ ದೊಡ್ಡ ಆರ್ಥಿಕ ಒತ್ತಡ ಹೇರಲಿದೆ.ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸರ್ಕಾರವು ಪೆಟ್ರೋಲ್, ಡೀಸೆಲ್ ಮೇಲಿನ ಮಾರಾಟ ತೆರಿಗೆ, ಸ್ಟಾಂಪ್ ಡ್ಯೂಟಿ, ಮದ್ಯದ ಮೇಲಿನ ಸುಂಕ ಮತ್ತು ವಿದ್ಯುತ್ ದರಗಳನ್ನು ಏರಿಕೆ ಮಾಡುತ್ತಿದೆ.
ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಇಂತಹದ್ದೇ ಯೋಜನೆಗಳನ್ನು ಘೋಷಿಸಿದ ಕಾಂಗ್ರೆಸ್ ಸರ್ಕಾರಗಳು ಈಗ ನೌಕರರಿಗೆ ಸಂಬಳ ನೀಡಲೂ ಹಣವಿಲ್ಲದೆ ತತ್ತರಿಸುತ್ತಿವೆ. ಹಿಮಾಚಲದಲ್ಲಿ ಸಂಬಳ ವಿಳಂಬವಾಗುತ್ತಿರುವುದು ಮತ್ತು ತೆಲಂಗಾಣದಲ್ಲಿ ಸಾಲದ ಹೊರೆ 7.5 ಲಕ್ಷ ಕೋಟಿಗೆ ಏರಿರುವುದು ಕರ್ನಾಟಕಕ್ಕೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದೆ. ಈ ನಡುವೆ, ಕೇರಳ ಮತ್ತು ಅಸ್ಸಾಂನಲ್ಲಿ ಅಧಿಕಾರದ ಗದ್ದುಗೆ ಹಿಡಿದರೆ ಗ್ಯಾರಂಟಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲವೇ? ಎಂಬ ಯಕ್ಷಪ್ರಶ್ನೆಯಾಗಿದೆ.

