ಪಿಲಿಕುಳ ಮೃಗಾಲಯದಲ್ಲಿ ಏಳು ಮರಿಗಳಿಗೆ ಜನ್ಮ ಕೊಟ್ಟ ಗೀತಾ ಹೆಸರಿನ ತೋಳ
x
ಪಿಲಿಕುಳ ಮೃಗಾಲಯದಲ್ಲಿ ತೋಳವೊಂದು ಏಳು ಮರಿಗಳಿಗೆ ಜನ್ಮ ನೀಡಿದೆ.

ಪಿಲಿಕುಳ ಮೃಗಾಲಯದಲ್ಲಿ ಏಳು ಮರಿಗಳಿಗೆ ಜನ್ಮ ಕೊಟ್ಟ 'ಗೀತಾ' ಹೆಸರಿನ ತೋಳ

ಕಳೆದ ಮೂರು ವರ್ಷಗಳಿಂದ ಪಿಲಿಕುಳದಲ್ಲಿ ಭಾರತೀಯ ತೋಳಗಳನ್ನು ಸಂರಕ್ಷಿಸಿ ಇರಿಸಲಾಗಿತ್ತು. ಆದರೆ, ಈ ಜಾತಿಯ ತೋಳಗಳು ಸೆರೆಯಲ್ಲಿ ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಿರುವುದು ಇದೇ ಮೊದಲು.


ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಉದ್ಯಾನದ 'ಗೀತಾ' ಎಂಬ ಹೆಸರಿನ ಭಾರತೀಯ ತೋಳವು ಏಳು ಮರಿಗಳಿಗೆ ಜನ್ಮ ನೀಡಿದ್ದು, ಮೃಗಾಲಯದ ಸಿಬ್ಬಂದಿ ಹಾಗೂ ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.

ಮೊದಲ ಯಶಸ್ವಿ ಸಂತಾನೋತ್ಪತ್ತಿ

ಕಳೆದ ಮೂರು ವರ್ಷಗಳಿಂದ ಪಿಲಿಕುಳದಲ್ಲಿ ಭಾರತೀಯ ತೋಳಗಳನ್ನು ಸಂರಕ್ಷಿಸಿ ಇರಿಸಲಾಗಿತ್ತು. ಆದರೆ, ಈ ಜಾತಿಯ ತೋಳಗಳು ಸೆರೆಯಲ್ಲಿ ಯಶಸ್ವಿಯಾಗಿ ಸಂತಾನೋತ್ಪತ್ತಿ ಮಾಡಿರುವುದು ಇದೇ ಮೊದಲು. ಈ ಮೂಲಕ ಪಿಲಿಕುಳ ಮೃಗಾಲಯವು ಅಪರೂಪದ ಪ್ರಭೇದಗಳ ಸಂರಕ್ಷಣೆಯಲ್ಲಿ ಮತ್ತೊಂದು ಮೈಲಿಗಲ್ಲುಆಗಿದೆ.

ಆರೋಗ್ಯವಾಗಿವೆ ಏಳೂ ಮರಿಗಳು

ಗೀತಾ ಹೆಸರಿನ ತೋಳವು ನಾಲ್ಕು ಗಂಡು ಮತ್ತು ಮೂರು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ. ಸದ್ಯ ತಾಯಿ ತೋಳ ಮತ್ತು ಎಲ್ಲಾ ಮರಿಗಳು ಆರೋಗ್ಯವಾಗಿವೆ ಎಂದು ಮೃಗಾಲಯದ ಮೂಲಗಳು ತಿಳಿಸಿವೆ. ಮರಿಗಳ ಚಲನವಲನ ಉತ್ತಮವಾಗಿದ್ದು, ಪ್ರಾಣಿ ಪಾಲಕರು ಇವುಗಳ ಮೇಲೆ ನಿರಂತರ ನಿಗಾ ಇರಿಸಿದ್ದಾರೆ.

ಸಾರ್ವಜನಿಕ ವೀಕ್ಷಣೆಗೆ ಮುಕ್ತ

ತಾಯಿ ತೋಳದ ಆರೈಕೆಯಲ್ಲಿ ಆರೋಗ್ಯವಂತವಾಗಿ ಬೆಳೆಯುತ್ತಿರುವ ಈ ಮರಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ಪ್ರವಾಸಿಗರು ಮತ್ತು ಶಾಲಾ ಮಕ್ಕಳಿಗೆ ಈ ಅಪರೂಪದ ವನ್ಯಜೀವಿ ಪ್ರಭೇದದ ಮರಿಗಳನ್ನು ಹತ್ತಿರದಿಂದ ನೋಡುವ ಸುವರ್ಣಾವಕಾಶ ಲಭಿಸಿದೆ.

ಪಿಲಿಕುಳ ಮೃಗಾಲಯದ ಸಂರಕ್ಷಣೆ ಮತ್ತು ಸೆರೆಹಿಡಿಯಲಾದ ಪ್ರಾಣಿಗಳ ಸಂತಾನೋತ್ಪತ್ತಿ ಪ್ರಯತ್ನಗಳಿಗೆ ಸಂದ ಜಯವಿದು. ಮೊದಲ ಬಾರಿಗೆ ತೋಳಗಳು ಮರಿ ಹಾಕಿರುವುದು ನಮ್ಮ ಸಾಧನೆಗೆ ಸಂದ ಪ್ರತಿಫಲ." ಎಂದು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಪ್ರಭಾರ ಆಯುಕ್ತ ಡಾ.ಅರುಣ್‌ ಕುಮಾರ್‌ ಶೆಟ್ಟಿ ತಿಳಿಸಿದರು.

ಪಿಲಿಕುಳದ ವಾತಾವರಣ ಹೇಗಿದೆ?

ಪಿಲಿಕುಳ ಮೃಗಾಲಯವು ಪಶ್ಚಿಮ ಘಟ್ಟಗಳ ಅಂಚಿನಲ್ಲಿರುವುದರಿಂದ ಇಲ್ಲಿನ ಹವಾಮಾನ ಮತ್ತು ನೈಸರ್ಗಿಕ ಕುರುಚಲು ಗಿಡಗಳ ಪರಿಸರ ತೋಳಗಳಿಗೆ ಹೇಳಿ ಮಾಡಿಸಿದಂತಿದೆ.

ತೋಳಗಳು ಮರಿ ಹಾಕಲು ಮೃಗಾಲಯದ ಸಿಬ್ಬಂದಿ ವಿಶೇಷವಾದ ಗುಹೆಗಳನ್ನು ಸಿದ್ಧಪಡಿಸಿದ್ದಾರೆ. ಮರಿಗಳ ಬೆಳವಣಿಗೆಯನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ದೂರದಿಂದಲೇ ಗಮನಿಸಲಾಗುತ್ತಿತ್ತು, ಇದರಿಂದ ತಾಯಿ ತೋಳಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ಹೇಳಿದ್ದಾರೆ.

ದೇಶದ ಇತರ ಪ್ರಸಿದ್ಧ ಮೃಗಾಲಯಗಳಿಗೆ ಈ ಮರಿಗಳನ್ನು ನೀಡಿ, ಅಲ್ಲಿಂದ ಬೇರೆ ಪ್ರಭೇದದ ಪ್ರಾಣಿಗಳನ್ನು ಪಿಲಿಕುಳಕ್ಕೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ. ಸೆರೆಯಲ್ಲಿರುವ ತೋಳಗಳ ವಂಶವಾಹಿ ಹೆಚ್ಚಿಸಲು ಇದು ಸಹಕಾರಿಯಾಗಿದೆ.

Read More
Next Story