ಕರಾವಳಿಯಲ್ಲಿ ನಾಳೆ ಈದುಲ್ ಫಿತ್ರ್ ಸಂಭ್ರಮ: ತಿಂಗಳ ಉಪವಾಸಕ್ಕೆ ತೆರೆ
x
ರಂಜಾನ್‌ ಪ್ರಾರ್ಥನೆಗೆ ಸೇರಿರುವ ಜನ ಸಂಗ್ರಹ ಚಿತ್ರ

ಕರಾವಳಿಯಲ್ಲಿ ನಾಳೆ 'ಈದುಲ್ ಫಿತ್ರ್' ಸಂಭ್ರಮ: ತಿಂಗಳ ಉಪವಾಸಕ್ಕೆ ತೆರೆ

ಕಳೆದ ಒಂದು ತಿಂಗಳಿಂದ ಶ್ರದ್ಧಾಭಕ್ತಿಯಿಂದ ರಂಜಾನ್ ಉಪವಾಸ ಆಚರಿಸುತ್ತಿದ್ದ ಮುಸ್ಲಿಮರಿಗೆ ಇಂದು ಚಂದ್ರದರ್ಶನವಾಗುವ ಮೂಲಕ ಉಪವಾಸ ವ್ರತ ಮುಕ್ತಾಯಗೊಂಡಿದೆ.


ಕರಾವಳಿಯಾದ್ಯಂತ ನಾಳೆ (ಮಾ.20) ಪವಿತ್ರ ರಂಜಾನ್ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಗುರುವಾರ ಸಂಜೆ ಕೇರಳದಲ್ಲಿ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಬ್ಬ ಆಚರಿಸುವಂತೆ ಜಿಲ್ಲಾ ಖಾಝಿಗಳು ಅಧಿಕೃತವಾಗಿ ಘೋಷಿಸಿದ್ದಾರೆ.

ಚಂದ್ರದರ್ಶನ ಖಚಿತಪಡಿಸಿದ ಖಾಝಿಗಳು

ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ನಾಯಿಬ್ ಖಾಝಿ ಉಸ್ತಾದ್ ಬಿ.ಕೆ. ಅಬ್ದುರ್ರಹ್ಮಾನ್ ಮದನಿ ಮೂಳೂರು ಅವರು ಚಂದ್ರದರ್ಶನವನ್ನು ಖಚಿತಪಡಿಸಿದ್ದು, ಶುಕ್ರವಾರ ಈದ್ ಆಚರಿಸುವಂತೆ ಸಮುದಾಯದ ಬಾಂಧವರಿಗೆ ಕರೆ ನೀಡಿದ್ದಾರೆ. ಈ ಬಗ್ಗೆ ಉಡುಪಿ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ. ಬಾವು ಮೂಳೂರು ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ಉಪವಾಸ ಅಂತ್ಯ; ಮನೆಗಳಲ್ಲಿ ಸಂಭ್ರಮ

ಕಳೆದ ಒಂದು ತಿಂಗಳಿಂದ ಶ್ರದ್ಧಾಭಕ್ತಿಯಿಂದ ರಂಜಾನ್ ಉಪವಾಸ ಆಚರಿಸುತ್ತಿದ್ದ ಮುಸ್ಲಿಮರಿಗೆ ಇಂದು ಚಂದ್ರದರ್ಶನವಾಗುವ ಮೂಲಕ ಉಪವಾಸ ವ್ರತ ಮುಕ್ತಾಯಗೊಂಡಿದೆ. ಒಂದು ತಿಂಗಳ ಕಾಲ ಹಗಲಿಡೀ ಅನ್ನಾಹಾರ ತ್ಯಜಿಸಿ, ಪ್ರಾರ್ಥನೆಯಲ್ಲಿ ತೊಡಗಿದ್ದ ಮುಸ್ಲಿಮರಿಗೆ ಈಗ ಈದ್ ಸಂಭ್ರಮ ಸಡಗರ ತಂದಿದೆ. ಮನೆಗಳಲ್ಲಿ ಹಬ್ಬದ ಅಡುಗೆಯ ಸಿದ್ಧತೆಗಳು ಆರಂಭವಾಗಿವೆ.

ಮಸೀದಿಗಳಲ್ಲಿ ವಿಶೇಷ ನಮಾಜ್

ಹಬ್ಬದ ಅಂಗವಾಗಿ ನಾಳೆ ಬೆಳಿಗ್ಗೆ ಕರಾವಳಿಯ ಎಲ್ಲಾ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಈದುಲ್ ಫಿತ್ರ್ ವಿಶೇಷ ಪ್ರಾರ್ಥನೆ ನಡೆಯಲಿದೆ. ಸಾವಿರಾರು ಸಂಖ್ಯೆಯಲ್ಲಿ ವಿಶ್ವಾಸಿಗಳು ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿ ಈ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಾರುಕಟ್ಟೆಯಲ್ಲಿ ಜನಸಾಗರ ಮಂಗಳೂರಿನ ಹಂಪನಕಟ್ಟೆ, ಬಂದರ್ ಹಾಗೂ ಉಡುಪಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ಹಬ್ಬದ ಖರೀದಿ ಭರಾಟೆ ಜೋರಾಗಿತ್ತು. ಹೊಸ ಬಟ್ಟೆಗಳು, ಹಣ್ಣು-ಹಂಪಲು ಹಾಗೂ ಹಬ್ಬದ ಅಗತ್ಯ ವಸ್ತುಗಳ ಖರೀದಿಗೆ ಜನರು ಮುಗಿಬಿದ್ದಿದ್ದರು. ಇದರಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆಯೂ ಕಂಡುಬಂದಿದೆ.

Read More
Next Story