
ನೂತನ ಪಿಎಸ್ಐಗಳಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಿಸಿದರು.
Siddaramaiah| ಪೊಲೀಸ್ ಇಲಾಖೆಯಲ್ಲಿ ಶೀಘ್ರ 8 ಸಾವಿರ ಹುದ್ದೆ ಭರ್ತಿ; ಆಕಾಂಕ್ಷಿಗಳಲ್ಲಿ ಸಂಭ್ರಮ
ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ಪೊಲೀಸರು ನ್ಯಾಯ ಎತ್ತಿಹಿಡಿಯಬೇಕು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 8,000 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹುದ್ದೆಗಳ ಭರ್ತಿ ಸಂಬಂಧ ಬಜೆಟ್ನಲ್ಲಿ ಘೋಷಿಸಿದ್ದು, ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಕುರಿತು ಸಿಎಂ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ.
ಭಾನುವಾರ (ಮಾ.29) ಮೈಸೂರು ಘಟಕದ 46ನೇ ತಂಡದ ಸಿವಿಲ್ ಪೊಲೀಸ್ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಸಿದ್ಧವಿದೆ. ಈಗಾಗಲೇ 377 ಸಬ್ ಇನ್ಸ್ಪೆಕ್ಟರ್ಗಳು ಸೇವೆಗೆ ಸೇರ್ಪಡೆಯಾಗಿದ್ದಾರೆ. ಪಿಎಸ್ಐ, ಕಾನ್ಸ್ಟೆಬಲ್ ಹಂತದ 4,911 ಹುದ್ದೆಗಳನ್ನು ಮೂರು ವರ್ಷಗಳಲ್ಲಿ ಭರ್ತಿ ಮಾಡಲಾಗಿದೆ. ಇನ್ನೂ 8,000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದನ್ನು ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.
ನ್ಯಾಯ ವಿತರಣೆಯಲ್ಲಿ ರಾಜೀ ಬೇಡ
ನ್ಯಾಯ ವಿತರಣೆಯಲ್ಲಿ ಪೊಲೀಸರು ಯಾವುದೇ ಕಾರಣಕ್ಕೂ ರಾಜಿಯಾಗಬಾರದು. ಪೊಲೀಸ್ ಸೇವೆಯಲ್ಲಿ ಶಿಸ್ತು ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಮುಖ್ಯ. ದೀನ ದಲಿತರು, ಅಶಕ್ತರು ಮತ್ತು ಮಹಿಳೆಯರ ರಕ್ಷಣೆ ಮಾಡುವುದು ಪೊಲೀಸರ ಜವಾಬ್ದಾರಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮಧ್ಯರಾತ್ರಿಯಲ್ಲಿ ಮಹಿಳೆಯರು ನಿರ್ಭೀತಿಯಿಂದ ಓಡಾಡುವಂತಾದಾಗ ಮಾತ್ರ ನಿಜ ಅರ್ಥದಲ್ಲಿ ಸ್ವಾತಂತ್ರ್ಯ ದೊರೆತಂತೆ ಎಂದು ಮಹಾತ್ಮ ಗಾಂಧಿಯವರು ಹೇಳಿದ್ದರು. ಸಮಾಜದ ಪ್ರತಿಯೊಬ್ಬರಿಗೂ ಆರ್ಥಿಕ, ಸಾಮಾಜಿಕ ಸಮಾನತೆ ದೊರೆಯಬೇಕು. ಆದ್ದರಿಂದ ಪೊಲೀಸರು ನ್ಯಾಯ ಎತ್ತಿಹಿಡಿಯಬೇಕು. ಎಲ್ಲರಿಗೂ ರಕ್ಷಣೆ, ಸಮಾನ ಅವಕಾಶಗಳು ದೊರೆಯಬೇಕು. ಪೊಲೀಸರು ಸರ್ಕಾರದ ಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸದೇ ಕಾನೂನು ಸುವ್ಯವಸ್ಥೆ ಕಾಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು ಎಂದರು.
ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪಿಎಸ್ಐಗಳ ನಿರ್ಗಮನ ಪಥಸಂಚಲನ ವೀಕ್ಷಿಸಿದರು.
ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ
ಮಾದಕವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿದ್ದು, ಆ ದಿಕ್ಕಿನಲ್ಲಿ ಆರಕ್ಷಕರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಮಾದಕವಸ್ತು ತಯಾರಕರು, ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಯುವ ಜನಾಂಗದ ಮೇಲೆ ಮಾದಕ ವಸ್ತುಗಳ ಪರಿಣಾಮ ಮಾರಕವಾಗುತ್ತದೆ. ಇದನ್ನು ನಿರ್ಮೂಲನೆ ಮಾಡದೆ ಹೋದರೆ ಸಮಾಜದ ಸ್ವಾಸ್ಥ್ಯ ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಅಗತ್ಯ ಎಂದರು.
ಮಾನವೀಯತೆಯಿಂದ ಕೆಲಸ ಮಾಡಬೇಕು
ಪೊಲೀಸರು ಮಾನವೀಯತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರ ಜೊತೆಗೆ ಸ್ನೇಹದಿಂದ ಇರಬೇಕು. ಅಪರಾಧಿಗಳಿಗೆ ಕರುಣೆ ತೋರಬೇಕಿಲ್ಲ. ನಿರಪರಾಧಿಗಳಿಗೆ ಕರುಣೆ ತೋರಬೇಕು. ಸೈಬರ್ ಅಪರಾಧಗಳನ್ನು ನಿಗ್ರಹಿಸಲು ಸೂಕ್ತ ತರಬೇತಿ ನೀಡಿದ್ದು, ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಸಮಾಜದ ದುರ್ಬಲ ವರ್ಗದವರನ್ನು ಮುಖ್ಯವಾಹಿನಿಗೆ ತರಬೇಕು. ಬಲಾಢ್ಯರ ಕೈಯಲ್ಲಿ ಅಧಿಕಾರವಿದ್ದರೆ ಸಮಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಶ್ರೀಮಂತರು ಹಣಬಲದಿಂದ ದುರುಪಯೋಗ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಅಂತಹ ಆಮಿಷಗಳಿಗೆ ಒಳಗಾಗಬಾರದು, ಧೈರ್ಯದಿಂದ ಕೆಲಸ ಮಾಡಿ ಪೋಲಿಸ್ ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದು ಕಿವಿ ಮಾತು ಹೇಳಿದರು.

