
ರೈತರನ್ನು ಉದ್ಯಮಿಗಳನ್ನಾಗಿಸುವ ಗುರಿ: ಸಚಿವ ಚಲುವರಾಯಸ್ವಾಮಿ
ಫೆಬ್ರವರಿ 6 ರಿಂದ ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ಬೃಹತ್ 'ಕೃಷಿ ಮೇಳ' ನಡೆಯಲಿದ್ದು, ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಬ್ರಾಂಡಿಂಗ್‌ಗೆ ಹೆಚ್ಚಿನ ಒತ್ತು ನೀಡಲಾಗುವುದು.
ತಂತ್ರಜ್ಞಾನ ಆಧರಿತ ಕೃಷಿ ಕಾರ್ಯಕ್ರಮಗಳು ಕೇವಲ ಲಾಭದಾಯಕವಲ್ಲದೇ ರೈತರನ್ನು ಉದ್ಯಮಿಗಳನ್ನಾಗಿ ಮಾಡುವ ಉದ್ದೇಶ ಹೊಂದಿವೆ. ಇದರಡಿ ಉತ್ಪನ್ನಗಳ ಮೌಲ್ಯವರ್ಧನೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.
ಕಬ್ಬನ್ ಪಾರ್ಕ್ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಅಗ್ರಿ ವಾಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರಂತರ ಪ್ರಯತ್ನಗಳಿಂದ ಕೃಷಿ ಉತ್ಪಾದನೆ ಸ್ಥಿರವಾಗಿ ಇತ್ತೀಚೆಗೆ ಹೆಚ್ಚಾಗಿದೆ. ಇದರಿಂದ ದೇಶವು ಇತರೆ ರಾಷ್ಟ್ರಗಳನ್ನು ಮೀರಿ ಮುನ್ನಡೆಯಲು ಸಾಧ್ಯವಾಗಿದೆ. ಈಗ ನಮ್ಮ ಮುಂದಿರುವ ಸವಾಲುಗಳು ಕೇವಲ ಕೃಷಿ ಉತ್ಪಾದನೆ ಹೆಚ್ಚಳ ಮಾತ್ರವಲ್ಲ, ರೈತರು ತಮ್ಮ ಉತ್ಪನ್ನಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡಿ ನೇರವಾಗಿ ಮಾರುಕಟ್ಟೆಗೆ ತಲುಪುವ ಮೂಲಕ ಹೆಚ್ಚು ಆದಾಯ ಗಳಿಸುವಂತಾಗಬೇಕು ಎಂದು ತಿಳಿಸಿದರು.
ಯುವ ರೈತರನ್ನು ಕೃಷಿ ಉದ್ಯಮಿಗಳಾಗಿ ಸಬಲೀಕರಿಸುವುದು ಸರ್ಕಾರದ ನೀತಿ ಚೌಕಟ್ಟಿನ ಪ್ರಮುಖ ಆದ್ಯತಾ ವಿಷಯವಾಗಿದೆ. ಈ ದೃಷ್ಟಿಕೋನದಿಂದ ಇದೇ ಫೆಬ್ರವರಿ 6ರಿಂದ ಫೆಬ್ರವರಿ 8ರವರೆಗೆ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿ ಗೇಟು ಮೈದಾನದಲ್ಲಿ ನಡೆಯಲಿರುವ ಕೃಷಿ ಮೇಳ ಆಯೋಜಿಸಲಾಗುತ್ತಿದೆ. ಮೂರು ದಿನಗಳ ಈ ಕಾರ್ಯಕ್ರಮವು ರೈತರಿಗೆ ತಂತ್ರಜ್ಞಾನ, ಬ್ರಾಂಡಿಂಗ್ ಅವಕಾಶಗಳು ಮತ್ತು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸುವ ವೇದಿಕೆಯಾಗಲಿದೆ ಎಂದು ಹೇಳಿದರು.
ರೈತ ಉತ್ಪಾದಕ ಸಂಸ್ಥೆಗಳು ಸೇರಿದಂತೆ 300ಕ್ಕೂ ಹೆಚ್ಚು ಮಳಿಗೆಗಳು ಆಧುನಿಕ ಯಂತ್ರೋಪಕರಣಗಳು, ಸಂಸ್ಕರಣಾ ತಂತ್ರಗಳು ಮತ್ತು ಕೃಷಿ ಮೌಲ್ಯ ಸರಪಳಿಯ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಂಡ ನವೀನತೆಗಳನ್ನು ಪ್ರದರ್ಶಿಸಲಿವೆ ಎಂದರು.
ಈ ಕೃಷಿ ಮೇಳವನ್ನು ಫೆ. 6ರಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದು, ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವರು ಭಾಗವಹಿಸುವ ನಿರೀಕ್ಷೆಯಿದೆ. ಹಲವು ಸಚಿವರು, ಹಿರಿಯ ಅಧಿಕಾರಿಗಳು, ಕೃಷಿ ತಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸಿ, ಸಮಕಾಲೀನ ಕೃಷಿ ಪದ್ಧತಿಗಳು ಮತ್ತು ಮಾರುಕಟ್ಟೆ ಆಧಾರಿತ ಕೃಷಿಯ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ರೈತರಿಗೆ ವಿವಿಧ ಹವಾಮಾನ ಪರಿಸ್ಥಿತಿಗಳಲ್ಲಿ ವರ್ಷಪೂರ್ತಿ ಎದುರಾಗುವ ಸವಾಲುಗಳನ್ನು ಎದುರಿಸಲು ಹಾಗೂ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಹೊಂದಾಣಿಕೆ ಮಾಡಲು ಅಗತ್ಯ ಜ್ಞಾನ ಒದಗಿಸುವುದು ಕೃಷಿ ಇಲಾಖೆಯ ಉದ್ದೇಶವಾಗಿದೆ. ಈ ಕಾರ್ಯಕ್ರಮದಲ್ಲಿ ಎಲ್ಲ ಸಂಬಂಧಪಟ್ಟ ಹಿತಾಸಕ್ತಿದಾರರು ಭಾಗವಹಿಸಿ ಮೇಳವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.

