
ಸಮರ್ಪಕ ಉತ್ತರ ನೀಡದಿದ್ದರೆ ರಾಜಕೀಯ ನಿವೃತ್ತಿ ಪಡೆಯಲಿ: ಸಿಎಂಗೆ ಛಲವಾದಿ ನಾರಾಯಣಸ್ವಾಮಿ ಸವಾಲು
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಐದು ದಿನಗಳ ಕಾಲ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದಾರೆ. ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಜನರಿಗೆ ಧಮ್ಕಿ ಹಾಕಲಾಗುತ್ತಿದೆ.
ಪರಿಶಿಷ್ಟ ಜಾತಿ, ವರ್ಗ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ದ್ರೋಹದ ಬಗ್ಗೆ ಬಹಿರಂಗ ಸಂವಾದಕ್ಕೆ ಸಿದ್ದವಿದ್ದು, ನನ್ನ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಪಕ ಉತ್ತರ ನೀಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಉತ್ತರ ನೀಡಲಾಗದಿದ್ದರೆ ಅವರು ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಭಿವೃದ್ಧಿ ಶೂನ್ಯ ಹಾಗೂ ಘೋಷಣೆಗಳ ಸರ್ಕಾರ ಎಂದು ಟೀಕಿಸಿದರು. ವಿಶ್ವದಾದ್ಯಂತ ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಕಾಂಗ್ರೆಸ್ ನಾಯಕರು ಅವರನ್ನು ಸರೆಂಡರ್ ಮೋದಿ ಎಂದು ಕರೆಯುತ್ತಿರುವುದು ಅವರ ಅಜ್ಞಾನಕ್ಕೆ ಹಿಡಿದ ಕನ್ನಡಿ. ಮೋದಿಯವರು ಎಲ್ಲಿಯೂ ಶರಣಾಗಿಲ್ಲ, ಅವರು ಕಷ್ಟಕಾಲದಲ್ಲೂ ದೇಶವನ್ನು ಮುನ್ನಡೆಸಬಲ್ಲರು. ಕಾಂಗ್ರೆಸ್‌ನವರು ದೇಶದ ಆಡಳಿತ ನಡೆಸುತ್ತಿದ್ದರೆ, ಭಾರತವು ಇಂದು ಪಾಕಿಸ್ತಾನದಂತೆ ಭಿಕ್ಷೆ ಬೇಡುವ ಸ್ಥಿತಿಗೆ ತಲುಪುತ್ತಿತ್ತು. ಇಂತಹ ಸಾಧಕ ಪ್ರಧಾನಿಯನ್ನು ಟೀಕಿಸಲು ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ, ದಾವಣಗೆರೆಯಲ್ಲಿ ಸೋಲಿನ ಭೀತಿ
ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಐದು ದಿನಗಳ ಕಾಲ ಅಲ್ಲಿಯೇ ಠಿಕಾಣಿ ಹೂಡುತ್ತಿದ್ದಾರೆ. ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳು ನಿಲ್ಲುತ್ತವೆ ಎಂದು ಜನರಿಗೆ ಧಮ್ಕಿ ಹಾಕಲಾಗುತ್ತಿದೆ. ಎರಡೇ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಇಡೀ ರಾಜ್ಯಕ್ಕೆ ಗ್ಯಾರಂಟಿ ನಿಲ್ಲಿಸುತ್ತೀರಾ? ಅಥವಾ ಸೋಲುವ ಭೀತಿಯಿಂದ ಇಂತಹ ಸುಳ್ಳು ಸುದ್ದಿ ಹರಡುತ್ತಿದ್ದೀರಾ? ಜನರಿಗೆ ಕೊಟ್ಟ ಸೌಲಭ್ಯಗಳನ್ನು ಕಿತ್ತುಕೊಳ್ಳುವ ಅಧಿಕಾರ ನಿಮಗಿದೆಯೇ?. ಅಲ್ಲದೆ, ಒಂದು ವೇಳೆ ಕಾಂಗ್ರೆಸ್ ಸೋತರೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬಹುದು ಎಂಬ ಒಳಗಿನ ಭಯವೇ ಸಿದ್ದರಾಮಯ್ಯ ಅವರನ್ನು ಈ ಕ್ಷೇತ್ರಗಳಲ್ಲಿ ಅತಿಯಾಗಿ ಓಡಾಡುವಂತೆ ಮಾಡಿದೆ ಎಂದು ಲೇವಡಿ ಮಾಡಿದರು.
ಸರ್ಕಾರಿ ಯಂತ್ರದ ದುರುಪಯೋಗ
ಚುನಾವಣಾ ಗೆಲುವಿಗಾಗಿ ಕಾಂಗ್ರೆಸ್ ಸರ್ಕಾರವು ಜಿಲ್ಲಾಡಳಿತವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಶಾಲಾ ಶಿಕ್ಷಕರು ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಆಸ್ಪತ್ರೆಯ ಪ್ಯಾರಾ ಮೆಡಿಕಲ್ ಸಿಬ್ಬಂದಿಯ ವೇತನ ಹೆಚ್ಚಿಸುವುದಾಗಿ ನೀಡಿದ್ದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ. ಅವರು ತಮ್ಮ ಹಕ್ಕುಗಳಿಗಾಗಿ ಇಂದಿಗೂ ಹೋರಾಟ ಮಾಡುತ್ತಲೇ ಇದ್ದಾರೆ. ಶೋಷಿತ ವರ್ಗದ ಧ್ವನಿಯನ್ನು ಅಡಗಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದರು.
ಎಸ್‌ಸಿಪಿ/ಟಿಎಸ್‌ಪಿ ಹಣದ ಲೂಟಿ, ದಲಿತರಿಗೆ ದ್ರೋಹ
ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಅನ್ಯ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದೆ. 42 ಸಾವಿರ ಕೋಟಿ ರೂ. ಘೋಷಣೆಯಾಗಿದ್ದು, ಇದರಲ್ಲಿ 21 ಸಾವಿರ ಕೋಟಿ ರೂ. ಅನ್ನು ದಲಿತೇತರ ಹಾಗೂ ಅನ್ಯ ಇಲಾಖೆಗಳಿಗೆ ಹಂಚಿಕೆ ಮಾಡಲಾಗಿದೆ. ಉಳಿದ ಹಣದಲ್ಲಿ 14 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ವರ್ಗಾಯಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ನಿಜವಾದ ಅಭಿವೃದ್ಧಿ ಕೆಲಸಗಳಿಗೆ ಸಿಗುತ್ತಿರುವುದು ಕೇವಲ 7 ಸಾವಿರ ಕೋಟಿ ಮಾತ್ರ ಆಗಿದೆ. ಸಂವಿಧಾನ ದಿನಾಚರಣೆ ಹಾಗೂ ಪ್ರಜಾಪ್ರಭುತ್ವ ದಿನಾಚರಣೆಯ ಹೆಸರಿನಲ್ಲಿ ಅಬ್ಬರದ ಪ್ರಚಾರಕ್ಕೆ ದಲಿತರ ಹಣವನ್ನು ಬಳಸುತ್ತಿದ್ದಾರೆ. ಎಸ್‌ಸಿ, ಎಸ್‌ಟಿ ನಿಗಮಗಳಿಗೆ 500 ಕೋಟಿ ರೂ. ಘೋಷಿಸಿ, 200 ಕೋಟಿ ರೂ. ಅನ್ನು ಬಿಡುಗಡೆ ಮಾಡಿಲ್ಲ. ಯಾವುದೇ ಹೊಸ ಯೋಜನೆಗಳಿಲ್ಲದೆ ದಲಿತ ಯುವಕರು ಮತ್ತು ಉದ್ಯಮಿಗಳು ಕಂಗಾಲಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಳ ಮೀಸಲಾತಿ ವಂಚನೆ
ಒಳ ಮೀಸಲಾತಿ ವಿಚಾರದಲ್ಲಿ ಸರ್ಕಾರವು ದಲಿತ ಸಮುದಾಯಗಳ ನಡುವೆ ಜಗಳ ಹಚ್ಚುವ ತಂತ್ರ ರೂಪಿಸುತ್ತಿದೆ. ದಲಿತರ ಹಿತರಕ್ಷಣೆ ಮಾಡುವ ಬದಲು ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಒಡೆಯುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಪ್ರಸ್ತುತ ಸುಮಾರು 4 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಆದರೆ ಖಜಾನೆ ಖಾಲಿಯಾಗಿದೆ ಎಂಬ ನೆಪವೊಡ್ಡಿ ಕೇವಲ 2.84 ಲಕ್ಷ ಹುದ್ದೆಗಳ ಭರ್ತಿಯನ್ನೂ ಮುಂದೂಡುತ್ತಾ ಯುವಜನತೆಗೆ ವಂಚಿಸುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡದೆ ಸರ್ಕಾರ ಸಂಪೂರ್ಣವಾಗಿ ಕುಸಿದಿದೆ ಎಂದು ತಿಳಿಸಿದರು.

