MP Bommai urges state government to drain lakes to save farmers
x

ಕೆರೆ ಹೂಳು ತೆಗೆಯುತ್ತಿರುವ ದೃಶ್ಯ (ಸಾಂದರ್ಭಿಕ ಚಿತ್ರ)

ರೈತರನ್ನು ಉಳಿಸಲು ಕೆರೆಗಳ ಹೂಳೆತ್ತಿ: ರಾಜ್ಯ ಸರ್ಕಾರಕ್ಕೆ ಸಂಸದ ಬೊಮ್ಮಾಯಿ ಆಗ್ರಹ

ಶಿಗ್ಗಾವಿ, ಸವಣೂರು ತಾಲೂಕುಗಳಲ್ಲಿ ಸುಮಾರು ಐನೂರು ಕೆರೆಗಳಿವೆ. ಅವುಗಳಲ್ಲಿ ಕನಿಷ್ಟ 100 ದೊಡ್ಡ ಕೆರೆಗಳಿವೆ. 150 ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದರು.


Click the Play button to hear this message in audio format

ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಮೊದಲು ಕೆರೆಗಳನ್ನು ಉಳಿಸಬೇಕು. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹ ಆಗುವುದಿಲ್ಲ. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೆರೆ ಹೂಳು ತೆಗೆಯಲು 200 ಕೋಟಿ ರೂ. ಮೀಸಲಿಟ್ಟಿದ್ದರು. ಅದೇ ರೀತಿ ರಾಜ್ಯ ಸರ್ಕಾರ ಪತ್ಯೇಕ ಹಣ ಮೀಸಲಿಡಬೇಕು..

ಹೀಗೆಂದು ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಭಾನುವಾರ(ಮಾ.22) ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ, ಸವಣೂರು ತಾಲೂಕುಗಳಲ್ಲಿ ಸುಮಾರು 500 ಕೆರೆಗಳಿವೆ. ಅವುಗಳಲ್ಲಿ ಕನಿಷ್ಟ 100 ದೊಡ್ಡ ಕೆರೆಗಳಿವೆ. 150 ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. 2015 ರಿಂದ 2017 ರವರೆಗೆ ಮೂರು ವರ್ಷ ಬರಗಾಲ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆ ಹೂಳು ತೆಗೆಯುವ ಕೆಲಸವಾಯಿತು. ಇಂತಹ ಭಗೀರಥ ಕೆಲಸಕ್ಕೆ ಭಾರತ ಸೇವಾ ಸಂಸ್ಥೆ ಕೆರೆಗಳ ಹೂಳು ತೆಗೆಯಲು ದೊಡ್ಡ ಸಹಾಯ ಮಾಡಿದೆ ಎಂದರು.

ನಮ್ಮ ಕೆರೆ ಎಂಬ ಭಾವನೆ ಮುಖ್ಯ

ಮೂರು ವರ್ಷದಿಂದ ಒಳ್ಳೆಯ ಮಳೆಯಾಗಿದೆ. ಆದ್ದರಿಂದ ಹೂಳು ತೆಗೆಯಲು ಆಗಿರಲಿಲ್ಲ. ಈ ವರ್ಷ ಬೇಸಿಗೆಗೆ ಕೆರೆ ಬತ್ತಿ ಹೋಗಿರುವುದರಿಂದ ಭಾರತ ಸೇವಾ ಸಂಸ್ಥೆ ವತಿಯಿಂದ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಪ್ರತಿಯೊಂದು ಜಿಲ್ಲಾ ಪಂಚಾಯತಿಯಲ್ಲಿ ಕನಿಷ್ಟ ಒಂದು ಕೆರೆ ಹೂಳೆತ್ತುವ ತೀರ್ಮಾನ ಮಾಡಿದ್ದಾರೆ. ಇದರಿಂದ ಪ್ರೇರಣೆ ಪಡೆದು ಇನ್ನಷ್ಟು ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೂಳು ತೆಗೆಯುವ ಕೆಲಸ ಮಾಡಬೇಕು. ನಮ್ಮ ಹೊಲ, ನಮ್ಮ ಮನೆ, ನಮ್ಮ ಕೆರೆ ಹಾಗೂ ನಮ್ಮ ಊರು ಎಂಬ ಭಾವನೆ ಬೆಳೆಸಿಕೊಂಡರೆ ಹಳ್ಳಿಗಳು ಸ್ವರಾಜ್ಯದಿಂದ ಸುರಾಜ್ಯ ಆಗುತ್ತವೆ ಎಂದು ಹೇಳಿದರು.

ಕೆರೆಗಳ ರಕ್ಷಣೆಯಿಂದ ಪ್ರವಾಹ ತಡೆ

ಈಗಾಗಲೇ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಲ್ಲಿ ಹಾವೇರಿ ಜಿಲ್ಲೆ ಸೇರಿದ್ದು, ಕ್ರಿಯಾ ಯೋಜನೆಯೂ ಆಗಿದೆ. ಈ ಯೋಜನೆಯಡಿಯಲ್ಲಿ ಪ್ರತಿ ತಾಲೂಕಿಗೂ ಕೆರೆ ಅಭಿವೃದ್ಧಿಗೆ ಹಣ ಬರುತ್ತದೆ. ಕೆರೆಗಳ ರಕ್ಷಣೆ ಮಾಡಿದರೆ ನಮ್ಮ ಭೂಮಿ ರಕ್ಷಣೆಯಾಗುತ್ತದೆ. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹವಾಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕೆರೆಗಳನ್ನು ಉಳಿಸಬೇಕು ಎಂದರು.

ಎರಡೂ ಕ್ಷೇತ್ರದಲ್ಲಿ ಜಯ

ನಾವು ಬಹಳ ಲೆಕ್ಕಾಚಾರ ಹಾಕಿ ದಾವಣಗೆರೆಯಲ್ಲಿ ಟಿಕೆಟ್ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಬಡವರು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ. ಆಶ್ಚರ್ಯಕರ ಫಲಿತಾಂಶ ದಾವಣಗೆರೆಯಲ್ಲಿ ದೊರೆಯುತ್ತದೆ. ಬಾಗಲಕೋಟೆಯಲ್ಲಿ ವಿಜಯ ಪಥದಲ್ಲಿ ನಾವು ಹೋಗುತ್ತಿದ್ದೇವೆ. ಕಳೆದ ಬಾರಿ ಕಾಂಗ್ರೆಸ್ ಸೇರಿದ್ದ ಅನೇಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲಿ ದೊಡ್ಡ ಪ್ರಮಾಣದ ಅಂತರದಲ್ಲಿ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Read More
Next Story