ಉಡುಪಿಯಲ್ಲಿ ಹಣಬು ಹೆಸರಿನಲ್ಲಿ ಕೊರಗರ ಶೋಷಣೆ; ನಿಷೇಧಿತ ಅಜಲು ಪದ್ಧತಿ ಮತ್ತೆ ಜಾರಿ?
x
ಉಡುಪಿಯಲ್ಲಿ 'ಹಣಬು' ಹೆಸರಿನಲ್ಲಿ ಕೊರಗರ ಶೋಷಣೆ

ಉಡುಪಿಯಲ್ಲಿ 'ಹಣಬು' ಹೆಸರಿನಲ್ಲಿ ಕೊರಗರ ಶೋಷಣೆ; ನಿಷೇಧಿತ ಅಜಲು ಪದ್ಧತಿ ಮತ್ತೆ ಜಾರಿ?

ನಿಷೇಧಿತ 'ಅಜಲು' ಪದ್ಧತಿಯನ್ನು ಸಂಸ್ಕೃತಿಯ ಹೆಸರಿನಲ್ಲಿ ನಡೆಸಲಾಗಿದೆ ಎಂದು ಕರ್ನಾಟಕ ಹಾಗೂ ಕೇರಳದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಗಂಭೀರ ಆರೋಪ ಮಾಡಿದ್ದು, ಕ್ರಮಕ್ಕೆ ಒತ್ತಾಯಿಸಿದೆ.


Click the Play button to hear this message in audio format

ರಾಜ್ಯದಲ್ಲಿ ಅಜಲು ಪದ್ಧತಿ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕರಾವಳಿ ಗ್ರಾಮೀಣ ಭಾಗಗಳಲ್ಲಿ ಸಂಪ್ರದಾಯದ ಹೆಸರಿನಲ್ಲಿಇನ್ನೂ ಜೀವಂತವಾಗಿದೆ ಎಂಬ ಆಘಾತಕಾರಿ ಆರೋಪ ಕೇಳಿಬಂದಿದೆ. ಇತ್ತೀಚೆಗೆ ಮಹಾಶಿವರಾತ್ರಿಯಂದು ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಶಂಕರನಾರಾಯಣ ಗ್ರಾಮ ಹಾಗೂ ಇನ್ನಿತರ ಪ್ರದೇಶಗಳಲ್ಲಿ ‘ಹಣಬು’ ಎಂಬ ಆಚರಣೆ ಮೂಲಕ ದಲಿತರನ್ನು ಶೋಷಿಸಲು ನಿಷೇಧಿತ 'ಅಜಲು' ಪದ್ಧತಿ ನಡೆಸಲಾಗಿದೆ ಎಂದು ಕರ್ನಾಟಕ ಹಾಗೂ ಕೇರಳದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಗಂಭೀರ ಆರೋಪ ಮಾಡಿದೆ.

ಶಿವರಾತ್ರಿಯ ರಾತ್ರಿ ಉಡುಪಿ ಜಿಲ್ಲೆಯ ಶಂಕರನಾರಾಯಣ ಗ್ರಾಮ ಹಾಗೂ ಇನ್ನಿತರ ಪ್ರದೇಶಗಲ್ಲಿ ನಡೆದಿದೆ ಎನ್ನಲಾದ ಈ ಘಟನೆಯಲ್ಲಿ ಕೊರಗ ಸಮುದಾಯದ ಜನರನ್ನು ಒಗ್ಗೂಡಿಸಿ ರಾತ್ರಿಯಿಡೀ ಡೋಲು ಬಾರಿಸಲಾಗಿದೆ. ಬೆಂಕಿಯ ಪಂಜುಗಳನ್ನು ಹಿಡಿದು, ಡೋಲು ಬಾರಿಸುತ್ತಾ ಮನೆ ಮನೆಗೆ ತೆರಳಿ ಭಿಕ್ಷೆ ಬೇಡುವ ಮೂಲಕ ಈ ಆಚರಣೆ ನಡೆಸಲಾಗಿದೆ. ಇದು ಮೇಲ್ನೋಟಕ್ಕೆ ಹಬ್ಬದಂತೆ ಕಂಡರೂ, ವಾಸ್ತವದಲ್ಲಿ ಇದು ಕೊರಗ ಸಮುದಾಯದವರನ್ನು ಬಳಸಿಕೊಂಡು ಊರಿನ ‘ಮಾರಿ’ ಅಥವಾ ಅನಿಷ್ಠವನ್ನು ಕಳೆಯುವ ಅಮಾನವೀಯ ಅಜಲು ಪದ್ಧತಿಯ ಭಾಗ ಎಂಬುದು ಒಕ್ಕೂಟ ಸದಸ್ಯರು ದೂರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ನಾಗರಾಜ ಶೆಟ್ಟಿ ನೈಕಂಬಳಿ ಎಂಬುವರ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ 'ಹಣಬು' ಆಚರಣೆಯ ವಿಡಿಯೋ ಹರಿದಾಡುತ್ತಿದ್ದು, ಇದು ಕೊರಗ ಅಭಿವೃದ್ಧಿ ಒಕ್ಕೂಟದ ವಾಟ್ಸ್​ಆ್ಯಪ್​ ಗುಂಪುಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಸಬಿತಾ ಅವರು ಬೇಸರ ವ್ಯಕ್ತಪಡಿಸಿದ್ದು, “ನಾವು ಸಮುದಾಯದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ, ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರನ್ನು ಮರಳು ಮಾಡಲಾಗುತ್ತಿದೆ. ಹಿರಿಯರು ಹಳೆಯ ನಂಬಿಕೆಗಳಿಗೆ ಕಟ್ಟುಬಿದ್ದು ಅನಿವಾರ್ಯವಾಗಿ ಇಂತಹ ಶೋಷಣೆಗೆ ಒಳಗಾಗುತ್ತಿದ್ದಾರೆ,” ಎಂದು ಹೇಳಿದ್ದಾರೆ.

ಚರ್ಚೆಗೆ ಕಾರಣವಾದ ವಿಡಿಯೊ ಇರುವ ಫೇಸ್​ಬುಕ್ ಲಿಂಕ್ ಇಲ್ಲಿದೆ

ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ಕಾಯಿದೆ- 2000ರಲ್ಲಿ ಉಲ್ಲೇಖಿಸಲಾಗಿರುವ 60 ಅನಿಷ್ಠ ಆಚರಣೆಗಳ ಪಟ್ಟಿಯಲ್ಲಿ, ಬಲವಂತವಾಗಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಡೋಲು ಬಾರಿಸುವ ಅಜಲು ಚಾಕರಿಯೂ ಒಂದು. ಇದನ್ನು ಉಲ್ಲಂಘಿಸಿ ಶಿವರಾತ್ರಿಯಂದು ಈ ಕೃತ್ಯ ಎಸಗಲಾಗಿದೆ ಎಂದು ಒಕ್ಕೂಟದ ಸದಸ್ಯ ಕುಮಾರದಾಸ್ ಹಾಲಾಡಿ 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಸಂಸ್ಕೃತಿ ಬೇರೆ, ಚಾಕರಿ ಬೇರೆ’

ಈ ಬಗ್ಗೆ 'ದ ಫೆಡರಲ್ ಕರ್ನಾಟಕ' ಜತೆ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡಾ ಅವರು, “ಕೊರಗರು ತಮ್ಮ ಸಂಸ್ಕೃತಿಯ ಭಾಗವಾಗಿ, ಕಲೆಗಾಗಿ ಡೋಲು ಬಾರಿಸುವುದು ತಪ್ಪಲ್ಲ. ನಮ್ಮಲ್ಲಿ ಸಾಂಸ್ಕೃತಿಕ ತಂಡಗಳಿದ್ದು, ವೇದಿಕೆಗಳಲ್ಲಿ ಗೌರವಯುತವಾಗಿ ಪ್ರದರ್ಶನ ನೀಡುತ್ತೇವೆ. ಆದರೆ, ಊರಿನ ಮೇಲ್ವರ್ಗದವರ ಅನಿಷ್ಠ ಕಳೆಯಲು, ಅವರ ಚಾಕರಿಗಾಗಿ ರಾತ್ರಿಯಿಡೀ ಊರೂರು ಸುತ್ತಿ ಡೋಲು ಬಾರಿಸುವುದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ,” ಎಂದು ಕಿಡಿಕಾರಿದ್ದಾರೆ. ದೇವಸ್ಥಾನಗಳ ಹೊರಗೆ ನಿಂತು ಡೋಲು ಬಾರಿಸುವುದು, ಕಂಬಳದ ಹಿಂದಿನ ರಾತ್ರಿ ಡೋಲು ಸೇವೆ ಮಾಡುವುದು ಇವೆಲ್ಲವೂ ಅಜಲು ಚಾಕರಿಯೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕುಮಾರದಾಸ್​ ಹಾಲಾಡಿ

ಶಾಸಕರ ನಡೆ ಮತ್ತು ವಿರೋಧಾಭಾಸ

ಶಿವರಾತ್ರಿಯಂದು ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರು ತಮ್ಮ ಕ್ಷೇತ್ರದ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯದ ಸುರೇಂದ್ರ ಅವರ ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದರು. ಅಲ್ಲೇ ತಯಾರಿಸಿದ ಊಟ ಸೇವಿಸಿ, ಸಮುದಾಯದೊಂದಿಗೆ ಬೆರೆತು ಸಾಮರಸ್ಯದ ಸಂದೇಶ ಸಾರಲು ಯತ್ನಿಸಿದ್ದರು. ಆದರೆ, ಶಾಸಕರ ಕಣ್ಣಳತೆಯಲ್ಲೇ, ಅವರ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅಮಾನವೀಯವಾದ ‘ಹಣಬು’ ಆಚರಣೆ ನಡೆದಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ ಎಂಬುದೇ ಕೊರಗರ ಒಕ್ಕೂಟದ ಆರೋಪ. ಶಾಸಕರು ಕೇವಲ ಸಾಂಕೇತಿಕ ಗ್ರಾಮ ವಾಸ್ತವ್ಯಕ್ಕೆ ಸೀಮಿತವಾಗದೆ, ಇಂತಹ ಮಾನವ ಹಕ್ಕುಗಳ ಉಲ್ಲಂಘನೆಯತ್ತಲೂ ಗಮನ ಹರಿಸಬೇಕು ಎಂದು ಸುಶೀಲಾ ಆಗ್ರಹಿಸಿದ್ದಾರೆ.

ಈ ಕುರಿತು ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಅವರನ್ನು ಸಂಪರ್ಕಿಸಿದಾಗ, ಅವರು ಕೂಡ ಕೊರಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಅವರು ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಿರತರಾಗಿರುವ ಕಾರಣ ಹೆಚ್ಚಿನ ಸ್ಪಷ್ಟನೆ ನೀಡಲು ಲಭ್ಯವಾಗಲಿಲ್ಲ.

ಸುಶೀಲಾ ನಾಡಾ, ಕರ್ನಾಟಕ ಹಾಗೂ ಕೇರಳದ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷರು

ಬೆದರಿಕೆಯ ತಂತ್ರ?

ಹಬ್ಬದ ನೆಪದಲ್ಲಿ ಊರಿನ ಮುಖಂಡರು ಅಥವಾ ಮೇಲ್ವರ್ಗದವರು ಕೊರಗರನ್ನು ಒತ್ತಾಯಪೂರ್ವಕವಾಗಿ ಕರೆದೊಯ್ದು ಡೋಲು ಬಾರಿಸಲು ಹೇಳುತ್ತಾರೆ. ಒಂದು ವೇಳೆ ಅವರು ಒಪ್ಪದಿದ್ದರೆ, “ದೈವದ ಕೋಪಕ್ಕೆ ಗುರಿಯಾಗುತ್ತೀರಿ, ನಿಮ್ಮ ಮಕ್ಕಳು ಮರಿಗಳಿಗೆ ತೊಂದರೆಯಾಗುತ್ತದೆ,” ಎಂಬ ಭಾವನಾತ್ಮಕ ಬೆದರಿಕೆಯನ್ನೂ ಹಾಕಲಾಗುತ್ತದೆ ಎಂದು ಕುಮಾರದಾಸ್ ಹಾಲಾಡಿ ಆರೋಪಿಸಿದ್ದಾರೆ. ಯುವಜನತೆಯಲ್ಲಿ ಅರಿವು ಮೂಡುತ್ತಿದ್ದರೂ, ಹಿರಿಯ ತಲೆಮಾರು ಈ ಭಯದಿಂದಾಗಿ ಅಜಲು ಪದ್ಧತಿಗೆ ತಲೆಬಾಗುತ್ತಿದೆ ಎಂದು ಸುಶೀಲಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಆಧುನಿಕ ಕಾಲಘಟ್ಟದಲ್ಲೂ ‘ಹಣಬು’ವಿನಂತಹ ಆಚರಣೆಗಳ ಮೂಲಕ ಶೋಷಿತ ಸಮುದಾಯವನ್ನು ಹೀನಾಯವಾಗಿ ನಡೆಸಿಕೊಳ್ಳಬಾರದು. ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಇಲಾಖೆಗಳು ಕೇವಲ ಕಾಯ್ದೆ ಪುಸ್ತಕದಲ್ಲಿರುವ ಕಾನೂನನ್ನು ಜಾರಿಗೊಳಿಸುವುದಲ್ಲದೆ, ಇಂತಹ ಸೂಕ್ಷ್ಮ ದೌರ್ಜನ್ಯಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒಕ್ಕೂಟದ ಸದಸ್ಯರು ಒತ್ತಾಯಿಸಿದ್ದಾರೆ.

ಅಜಲು ಪದ್ಧತಿ ಎಂದರೇನು?

'ಅಜಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೊರಗ ಸಮುದಾಯದ ಮೇಲೆ ಹೇರಲಾದ ಒಂದು ಅಮಾನವೀಯ ಸಾಮಾಜಿಕ ಪದ್ಧತಿ, ಇದರಲ್ಲಿ ಮೇಲ್ವರ್ಗದವರ ಸಮಾರಂಭಗಳು, ಕಂಬಳ ಅಥವಾ ದೈವದ ಕೆಲಸಗಳಲ್ಲಿ ಕೊರಗರು ಚಾಕರಿಯನ್ನು ಮಾಡಬೇಕೆಂಬ ಅಲಿಖಿತ ನಿಯಮವಿತ್ತು. ಈ ಶೋಷಣೆಯನ್ನು ತಡೆಯಲು ಕರ್ನಾಟಕ ಸರ್ಕಾರವು 'ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ಕಾಯಿದೆ- 2000' ಅನ್ನು ಜಾರಿಗೆ ತಂದಿತು. ಈ ಕಾಯಿದೆಯ ಅನ್ವಯ, ಯಾವುದೇ ವ್ಯಕ್ತಿಯು ಕೊರಗ ಸಮುದಾಯದವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಅಥವಾ ಸಂಪ್ರದಾಯದ ಹೆಸರಿನಲ್ಲಿ ಅಜಲು ಆಚರಣೆಗಳಿಗೆ ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ.

ಈ ಕಾಯಿದೆಯಡಿ ಸುಮಾರು 60ಕ್ಕೂ ಹೆಚ್ಚು ಅನಿಷ್ಠ ಪದ್ಧತಿಗಳನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ ಕಂಬಳದ ಗದ್ದೆಯಲ್ಲಿ ರಾತ್ರಿಯಿಡೀ ಕಾವಲು ಕಾಯುವುದು, ಡೋಲು ಬಾರಿಸುವುದು, ಹಬ್ಬ ಅಥವಾ ಜಾತ್ರೆಗಳಲ್ಲಿ 'ಹಣಬು'ವಿನಂತಹ ವೇಷ ಹಾಕಿ ಭಿಕ್ಷೆ ಬೇಡುವುದು, ಮೇಲ್ವರ್ಗದವರ ಮನೆಯಲ್ಲಿ ಸಾವು ಸಂಭವಿಸಿದಾಗ ಸಾವಿನ ಸುದ್ದಿ ಮುಟ್ಟಿಸುವುದು ಹಾಗೂ ರೋಗಿಯ ಕೂದಲು, ಉಗುರು ಬೆರೆಸಿದ ಎಂಜಲು ಊಟವನ್ನು (ಪಂಚಮ ದಾನ) ಬಲವಂತವಾಗಿ ತಿನ್ನಿಸುವುದರಂತಹ ಆಚರಣೆಗಳು ಸೇರಿವೆ. ದೇವಸ್ಥಾನದ ರಥ ಎಳೆಯುವಾಗ ಅಥವಾ ಜಾತ್ರೆಗಳಲ್ಲಿ ಕೀಳು ಕೆಲಸಗಳಿಗೆ ಕೊರಗರನ್ನು ಬಳಸಿಕೊಳ್ಳುವುದನ್ನೂ ಈ ಕಾಯಿದೆ ತಡೆಯುತ್ತದೆ. ನಿಯಮ ಉಲ್ಲಂಘಿಸಿದ ತಪ್ಪಿತಸ್ಥರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.

ಅಳಿವಿನಂಚಿನಲ್ಲಿರುವ ಕೊರಗ ಸಮುದಾಯ

ಕೊರಗ ಸಮುದಾಯವು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಕಂಡುಬರುವ ಒಂದು ಅಳಿವಿನಂಚಿನಲ್ಲಿರುವ ಆದಿವಾಸಿ ಬುಡಕಟ್ಟು ಜನಾಂಗ. ಇವರನ್ನು ಭಾರತ ಸರ್ಕಾರವು 'ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪು' (PVTG - Particularly Vulnerable Tribal Group) ಎಂದು ಗುರುತಿಸಿದೆ. ಇವರು ತುಳುನಾಡು ಪ್ರದೇಶದ ಮೂಲ ನಿವಾಸಿಗಳೆಂದು ನಂಬಲಾಗಿದೆ.

ಕೊರಗರು ತೀವ್ರವಾಗಿ ಶೋಷಣೆಗೆ ಒಳಗಾದ ಮತ್ತು ಸಾಮಾಜಿಕವಾಗಿ ಅತ್ಯಂತ ಕೆಳಸ್ತರದಲ್ಲಿರುವ ಸಮುದಾಯಗಳಲ್ಲಿ ಒಂದು. ಅನಕ್ಷರತೆ, ಅಪೌಷ್ಟಿಕತೆ, ಬಡತನ ಮತ್ತು ಮೂಢನಂಬಿಕೆಗಳು ಇವರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳು. ಹಿಂದೆ ಇವರು ಕಾಡುಗಳಲ್ಲಿ ವಾಸಿಸುತ್ತಾ, ಬಿದಿರು ಮತ್ತು ಬಳ್ಳಿಗಳಿಂದ ಬುಟ್ಟಿ ಹೆಣೆಯುವುದು, ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವುದು ಮತ್ತು ಡೋಲು ಬಾರಿಸುವುದನ್ನು ತಮ್ಮ ಕುಲಕಸುಬಾಗಿ ಮಾಡಿಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಶಿಕ್ಷಣದ ಅರಿವಿನಿಂದಾಗಿ ಯುವಪೀಳಿಗೆಯಲ್ಲಿ ಬದಲಾವಣೆ ಕಂಡುಬರುತ್ತಿದೆ. ಆದರೂ, ಭೂಮಿಯ ಒಡೆತನವಿಲ್ಲದಿರುವುದು ಮತ್ತು ವಸತಿ ಸಮಸ್ಯೆಗಳು ಇವರನ್ನು ಇನ್ನೂ ಕಾಡುತ್ತಿವೆ. ಅವರ ಭಾಷೆಯಾದ 'ಕೊರಗ ಭಾಷೆ' (ತುಳು ಮತ್ತು ಕನ್ನಡದ ಮಿಶ್ರಣದಂತೆ ಇರುವ ಒಂದು ಸ್ವತಂತ್ರ ದ್ರಾವಿಡ ಭಾಷೆ) ಕೂಡ ಲಿಪಿಯಿಲ್ಲದ ಕಾರಣ ಅಳಿವಿನಂಚಿನಲ್ಲಿದೆ.

ಕೊರಗ ಸಮುದಾಯದ ಕುರಿತು 'ದ ಫೆಡರಲ್ ಕರ್ನಾಟಕ' ಪ್ರಕಟಿಸಿರುವ ಹಲವು ವರದಿಗಳನ್ನು ಈ ಕೆಳಗಿನ ಲಿಂಕ್​ ಒತ್ತುವ ಮೂಲಕ ಓದಿ

1. ಶೈಕ್ಷಣಿಕ ಪ್ರಗತಿ ಕಂಡರೂ ಸಿಗದ ಉದ್ಯೋಗ: ಅಸ್ತಿತ್ವಕ್ಕಾಗಿ ಬೀದಿಗಿಳಿದ ಕೊರಗ ಸಮುದಾಯ

2. ಕೊರಗರ ಚಿಗುರಿದ ಕನಸು: ಡಾ. ಸ್ನೇಹಾ ಮೊದಲ ವೈದ್ಯೆ, ಆದರೂ ತಪ್ಪಿಲ್ಲ ಅಸ್ಪೃಶ್ಯತೆಯ ವ್ಯಾಧಿ
3. ಶೈಕ್ಷಣಿಕ ಪ್ರಗತಿ ಕಂಡರೂ ಸಿಗದ ಉದ್ಯೋಗ: ಅಸ್ತಿತ್ವಕ್ಕಾಗಿ ಬೀದಿಗಿಳಿದ ಕೊರಗ ಸಮುದಾಯ


Read More
Next Story